ಭಾರತೀಯ ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿ, ಗುಜರಾತ್‌ನ ಉತ್ತರ ಜಾಮ್‌ನಗರ ಕ್ಷೇತ್ರದ ಬಿಜೆಪಿ ಶಾಸಕಿ ರಿವಾಬಾ ಜಡೇಜಾ ತಮ್ಮದೆ ಪಕ್ಷದ ಸಂಸದೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಮಾತಿನ ಚಕಮಕಿ ನಡೆಸಿದ ಘಟನೆ ಈಗ ಎಲ್ಲಡೆ ವೈರಲ್ ಆಗಿದೆ.
ಜಾಮ್‌ನಗರದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಶಾಸಕಿ ರಿವಾಬಾ ಜಡೇಜಾ ತಮ್ಮದೆ ಪಕ್ಷದ ಸಹದ್ಯೋಗಿಗಳೊಂದಿಗೆ ವಾಗ್ವಾದ ನಡೆಸಿದರು.
ಜಾಮ್‌ನಗರ ಪುರಸಭೆಯ ಮೇಯರ್ ಬೀನಾ ಕೊಠಾರಿ ಮತ್ತು ಸಂಸದೆ ಪೂನಾಂಬೆನ್ ಮಾದಮ್ ಅವರೊಂದಿಗೆ ಮಾತಿನ ಚಕಮಕಿ ನಡೆಸುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸ್ವಾತಂತ್ರ್ಯ ದಿನಾಚರಣೆಯಂದು ಹುತಾತ್ಮರಾದ ಸೈನಿಕರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮದಲ್ಲಿ ಮೊದಲು ಬಿಜೆಪಿ ಸಂಸದೆ ಪೂನಾಂಬೆನ್ ಮಾದಮ್ ಪಾದರಕ್ಷೆಯೊಂದಿಗೆ ನಮನ ಸಲ್ಲಿಸಿದರು. ನಂತರ ಆಗಮಿಸಿದ ರಿವಾಬಾ ಜಡೇಜಾ ಪಾದರಕ್ಷೆ ಕಳಚಿ ಗೌರವ ಸಲ್ಲಿಸಿದರು. ಶಾಸಕಿ ಪಾದರಕ್ಷೆ ಕಳಚುವುದನ್ನು ನೋಡಿದ ಸಂಸದೆ ಪೂನಂಬೆನ್ ಮಾದಮ್, ರಿವಾಬಾರನ್ನು ‘ಓವರ್ ಸ್ಮಾರ್ಟ್’ ಎಂದು ಸಂಬೋಧಿಸಿದ್ದಾರೆ.
ಈ ವಿಷಯದ ಸಲುವಾಗಿಯೇ ಸಂಸದೆ ಹಾಗೂ ಶಾಸಕಿಯ ನಡುವೆ ಮಾತಿನ ಚಕಮಕಿ ಶುರುವಾಗಿದೆ. ಇಬ್ಬರು ಜನಪ್ರತಿನಿಧಿಗಳು ಕೆಲಕಾಲ ಬೈದಾಡಿಕೊಂಡಿದ್ದಾರೆ. ಸಂಸದೆ ಪರವಾಗಿ ಮಾತನಾಡಿದ ಪುರಸಭೆಯ ಮೇಯರ್ ಬೀನಾ ಕೊಠಾರಿ ಅವರನ್ನು ರಿವಾಬಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಿಲ್ಕಿಸ್ ಬಾನು ಪ್ರಕರಣ | ಆಯ್ದ ವ್ಯಕ್ತಿಗಳಿಗೆ ಮಾತ್ರ ಏಕೆ ಕ್ಷಮಾದಾನ?; ಗುಜರಾತ್, ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ
“ಮೊದಲನೆಯದಾಗಿ, ಸಂಸದ ಪೂನಂಬೆನ್ ಅವರು ತಮ್ಮ ಶೂಗಳನ್ನು ಧರಿಸಿ ಹುತಾತ್ಮರಾದ ಸೈನಿಕರಿಗೆ ಗೌರವ ಸಲ್ಲಿಸಿದರು. ನಂತರ, ನಾನು ನನ್ನ ಪಾದರಕ್ಷೆಗಳನ್ನು ಕಳಚಿ ನಮನ ಸಲ್ಲಿಸಿದೆ. ಇತರ ನಾಯಕರು ನನ್ನನ್ನು ಅನುಸರಿಸಿದರು. ಪ್ರಧಾನಿ ಮತ್ತು ರಾಷ್ಟ್ರಪತಿಗಳು ಸಹ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗ ತಮ್ಮ ಪಾದರಕ್ಷೆಗಳನ್ನು ತೆಗೆಯುವುದಿಲ್ಲ. ಆದರೆ ಕೆಲವರು ಅತೀ ಬುದ್ಧಿವಂತಿಕೆಯಿಂದ(ಓವರ್ ಸ್ಮಾರ್ಟ್) ವರ್ತಿಸುತ್ತಾರೆ ಎಂದು ಪೂನಂಬೆನ್ ಹೇಳುವುದನ್ನು ನಾನು ಕೇಳಿದೆ. ನನ್ನ ಆತ್ಮಗೌರವವನ್ನು ರಕ್ಷಿಸಿಕೊಳ್ಳಲು ಮಾತ್ರ ನಾನು ಮಾತನಾಡಿದ್ದೇನೆ” ಎಂದು ಘಟನೆಯ ರಿವಾಬಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಜಾಮ್‌ನಗರ ಪುರಸಭೆಯ ಮೇಯರ್ ಬೀನಾ ಕೊಠಾರಿ, ಈ ವಿಷಯವು “ತಮ್ಮ ಪಕ್ಷದ ಆಂತರಿಕ ವಿಷಯ. ಯಾವುದೇ ಭಿನ್ನಾಭಿಪ್ರಾಯವಿಲ್ಲ” ಎಂದು ಹೇಳಿ ವಿವಾದದ ಬಗ್ಗೆ ಹೆಚ್ಚು ಮಾತನಾಡಲು ನಿರಾಕರಿಸಿದರು.