ದರೋಡೆ ಮಾಡಿ ಕೊಡುಗೆ ನೀಡುವ ಮಾಡರ್ನ್ ರಾಬಿನ್ ಹುಡ್- ಮೋದಿ!

Date:

Advertisements
ಇಂಗ್ಲೆಂಡಿನ ಜನಪದ ಕಳ್ಳ ರಾಬಿನ್ ಹುಡ್ ಶ್ರೀಮಂತರ ಬಂಗಲೆಗಳನ್ನು ದರೋಡೆ ಮಾಡಿ ಬಡವರಿಗೆ ಹಂಚಿದರೆ; ನಮ್ಮ ಪ್ರಧಾನಿ ಮೋದಿಯವರು ಜಿಎಸ್‌ಟಿ ಮೂಲಕ ಬಡವರನ್ನು ಸುಲಿದು ಶ್ರೀಮಂತ ಕಾರ್ಪೊರೇಟ್ ಕುಳಗಳಿಗೆ ಲಾಭ ಮಾಡಿಕೊಟ್ಟಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ, ‘ಜಿಎಸ್‌ಟಿ ಸುಧಾರಣೆಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ಈ ಕ್ರಮ ಜನಸಾಮಾನ್ಯರ ಮೇಲಿನ ತೆರಿಗೆ ಹೊರೆಯನ್ನು ಸಾಕಷ್ಟು ಕಡಿಮೆ ಮಾಡಲಿದೆ. ಇದು ಜನಸಾಮಾನ್ಯರಿಗೆ ಕೇಂದ್ರದಿಂದ ನೀಡುವ ದೀಪಾವಳಿ ಕೊಡುಗೆಯಾಗಿದೆ’ ಎಂದು ಹೇಳಿದ್ದಾರೆ.

ಪ್ರಧಾನಿಗಳ ಸ್ವಾತಂತ್ರ್ಯೋತ್ಸವದ ಜಿಎಸ್‌ಟಿ ಕುರಿತ ಭಾಷಣವನ್ನು ದೇಶದ ಸುದ್ದಿಮಾಧ್ಯಮಗಳು ಮುಕ್ತಕಂಠದಿಂದ ಹೊಗಳಿವೆ. ಇದನ್ನು ಪ್ರಧಾನಿ ಮೋದಿಯವರ ಕೊಡುಗೆ ಎಂದು ಕರೆದಿವೆ. ತೆರಿಗೆ ಹೊರೆ ಇಳಿಸಿ ಉಡುಗೊರೆ ನೀಡಿದ ಪ್ರಧಾನಿ ಎಂದು ಕೊಂಡಾಡಿವೆ.

ಇದೇ ಪ್ರಧಾನಿ ಮೋದಿಯವರು, 2017ರಲ್ಲಿ ದೇಶದ ಜನತೆಯ ಮೇಲೆ ಜಿಎಸ್‌ಟಿ(ಸರಕು ಮತ್ತು ಸೇವಾ ತೆರಿಗೆ) ಜಾರಿಗೆ ತರುವಾಗ, ‘ಭಾರತದ ಆರ್ಥಿಕತೆಯಲ್ಲಿ ಒಂದು ಐತಿಹಾಸಿಕ ಮತ್ತು ಮಹತ್ವದ ಸುಧಾರಣೆ. ಇದು ತೆರಿಗೆಗಳ ಸಂಖ್ಯೆ ಮತ್ತು ಜನಸಾಮಾನ್ಯರ ಮೇಲಿನ ಒಟ್ಟಾರೆ ತೆರಿಗೆ ಹೊರೆಯನ್ನು ಕಡಿಮೆ ಮಾಡಿದೆ. ಒಂದು ದೇಶ, ಒಂದು ತೆರಿಗೆ (One Nation, One Tax) ಎಂಬ ಧ್ಯೇಯದೊಂದಿಗೆ ಜಾರಿಗೆ ತರಲಾಗಿದೆ. ಗುಡ್ ಅಂಡ್ ಸಿಂಪಲ್ ಟ್ಯಾಕ್ಸ್ (Good and Simple Tax)’ ಎಂದು ಹೇಳಿದ್ದರು.

Advertisements

ಬಿಜೆಪಿಪ್ರಣೀತ ಆರ್ಥಿಕತಜ್ಞರು, ಜಿಎಸ್‌ಟಿ ಎನ್ನುವುದು ದೇಶದ ಆರ್ಥಿಕತೆಗೆ ಒಂದು ಟರ್ನಿಂಗ್ ಪಾಯಿಂಟ್. ಇದು ಭಾರತವನ್ನು ಏಕೈಕ ಮಾರುಕಟ್ಟೆಯಾಗಿ ರೂಪಿಸಿ, ವ್ಯಾಪಾರ ಸುಗಮಗೊಳಿಸುತ್ತದೆ ಮತ್ತು ಆರ್ಥಿಕ ಪ್ರಗತಿಯ ಹೊಸ ಮನ್ವಂತರಕ್ಕೆ ಮುನ್ನುಡಿ ಬರೆಯುತ್ತದೆ ಎಂದು ಬಣ್ಣಿಸಿದ್ದರು.

ಜಿಎಸ್‌ಟಿಯಿಂದ ಜನರು ಪಾವತಿಸಬೇಕಾದ ತೆರಿಗೆ ದರವನ್ನು ಕಡಿಮೆ ಮಾಡಲಾಗಿದೆ ಎಂದು ಹೇಳಿದ್ದರು. ಆರ್‌ಎನ್‌ಆರ್ ಸಮಿತಿಯ ಶಿಫಾರಸಿನಂತೆ ಆದಾಯ ತಟಸ್ಥ ದರ ಶೇ. 15.3 ಇದ್ದರೆ, ಜಿಎಸ್‌ಟಿಯ ಪ್ರಸ್ತುತ ದರ ಶೇ. 11.6ಕ್ಕೆ ಇಳಿಕೆಯಾಗಿದೆ ಎಂದು ಉಲ್ಲೇಖಿಸಿದ್ದರು. ಇದು ದೇಶದ ಆರ್ಥಿಕ ವೃದ್ಧಿ ದರವನ್ನು ಕನಿಷ್ಠ ಶೇ. 0.5ರಷ್ಟು ಹೆಚ್ಚಿಸಲಿದೆ ಮತ್ತು ವರಮಾನ ಸಂಗ್ರಹ ವ್ಯಾಪ್ತಿಯನ್ನು ವಿಸ್ತರಿಸಲಿದೆ ಎಂದು ತಿಳಿಸಿದ್ದರು.

ಇದನ್ನು ಓದಿದ್ದೀರಾ?: ಚುನಾವಣಾ ಆಯೋಗ ವಿಶ್ವಾಸಾರ್ಹವೆ? ಏಕೆ ಈ ಆತಂಕ?

ಆಗಲೂ ಸುದ್ದಿ ಮಾಧ್ಯಮಗಳು ಪ್ರಧಾನಿ ಮೋದಿಯವರನ್ನು ಮುಕ್ತಕಂಠದಿಂದ ಹೊಗಳಿದ್ದವು. ದೇಶವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯುವ, ದೂರದೃಷ್ಟಿಯುಳ್ಳ ಪ್ರಧಾನಿ ಎಂದು ಕೊಂಡಾಡಿದ್ದವು. ಅಷ್ಟೇ ಅಲ್ಲ, ಜಿಎಸ್‌ಟಿಯ ಜಾರಿಗೆ 18 ಸಭೆಗಳು ನಡೆದಾಗ, ಅದನ್ನು ಭಗವದ್ಗೀತೆಯ 18 ಅಧ್ಯಾಯಗಳಿಗೆ ಹೋಲಿಸಿ, ಅನಗತ್ಯವಾಗಿ ಧರ್ಮವನ್ನು ಎಳೆದು ತಂದು, ಇದೊಂದು ಐತಿಹಾಸಿಕ ಕ್ಷಣ ಎಂದು ಬಣ್ಣಿಸಿ ಬರೆದಿದ್ದರು, ಬಿಂಬಿಸಿದ್ದರು.

ಅಂದರೆ ದೇಶದ ಜನತೆಯ ಮೇಲೆ ತೆರಿಗೆ ಹಾಕುವಾಗ ಗುಡ್ ಅಂಡ್ ಸಿಂಪಲ್ ಟ್ಯಾಕ್ಸ್ ಎಂದು ಹೊಗಳಿದ್ದ ಸುದ್ದಿ ಮಾಧ್ಯಮಗಳು; ಈಗ, 8 ವ‍ರ್ಷಗಳ ನಂತರ ತೆರಿಗೆ ಇಳಿಸುವ ಮಾತನಾಡುತ್ತಿರುವಾಗ ಉಡುಗೊರೆ, ಕೊಡುಗೆ ಎಂದು ಹೊಗಳುತ್ತಿವೆ.

ಜಿಎಸ್‌ಟಿ ಎನ್ನುವುದು ಗುಡ್ ಅಂಡ್ ಸಿಂಪಲ್ ಟ್ಯಾಕ್ಸ್ ಆಗಿದ್ದರೆ, ಈಗ ಇಳಿಸುವ ಅಗತ್ಯವೇನಿತ್ತು? ಇಳಿಸುವ ಮೂಲಕ, ತೆರಿಗೆ ಎನ್ನುವುದು ಹೊರೆ ಎಂದು ಅವರೇ ಹೇಳುತ್ತಿದ್ದಾರೆ. ಇಳಿಸುವುದನ್ನು ದೀಪಾವಳಿಯ ಕೊಡುಗೆ ಎನ್ನುತ್ತಿದ್ದಾರೆ. ಅಂದರೆ, 8 ವರ್ಷಗಳಿಂದ ಜಿಎಸ್‌ಟಿ ನೆಪದಲ್ಲಿ ದೇಶದ ಜನರ ಜೇಬಿಗೆ ಕತ್ತರಿ ಹಾಕಿ ಕಿತ್ತುಕೊಂಡದ್ದು ಏನು? ಅದು ದರೋಡೆಯಲ್ಲವೇ? ಇದನ್ನು ಜನರ ಜೀವ ಹಿಂಡುವ ತೆರಿಗೆ, ಲೂಟಿ, ದರೋಡೆ ಎಂದು ಏಕೆ ಸುದ್ದಿ ಮಾಧ್ಯಮಗಳು ಬಣ್ಣಿಸುತ್ತಿಲ್ಲ?

ಕುತೂಹಲಕರ ಸಂಗತಿ ಎಂದರೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಅಂದೇ, 2017ರಂದೇ, ಜಿಎಸ್‌ಟಿಯನ್ನು ಆರ್ಥಿಕ ಅನ್ಯಾಯದ ಕ್ರೂರ ಸಾಧನ ಎಂದಿದ್ದರು. ಕಾರ್ಪೊರೇಟ್ ಕ್ರೋನಿಯಿಸಂ ಎಂದು ಬಣ್ಣಿಸಿದ್ದರು. ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದು ಕರೆದಿದ್ದರು. ಇದು ಬಡವರನ್ನು ಶಿಕ್ಷಿಸಲು, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು (MSMEs) ನಾಶಪಡಿಸಲು, ರಾಜ್ಯಗಳನ್ನು ದುರ್ಬಲಗೊಳಿಸಲು ಮತ್ತು ಪ್ರಧಾನಮಂತ್ರಿಯ ಕೆಲವು ಶ್ರೀಮಂತ ಸ್ನೇಹಿತರಿಗೆ ಲಾಭ ಮಾಡಿಕೊಡಲು ವಿನ್ಯಾಸಗೊಳಿಸಲಾಗಿರುವ ತೆರಿಗೆ ಎಂದು ಗಂಭೀರ ಆರೋಪ ಮಾಡಿದ್ದರು.

ಅದು ಬರೀ ಆರೋಪವಲ್ಲ, ದೇಶದ ಆರ್ಥಿಕ ಸ್ಥಿತಿಗತಿ ಅರಿತ ಅಪ್ಪಟ ಅರ್ಥಶಾಸ್ತ್ರಜ್ಞನೊಬ್ಬನ ತರ್ಕಬದ್ಧ ಮಂಡನೆಯಾಗಿತ್ತು. ದೇಶದ ಜನತೆಯ ಮೇಲೆ ಬಲವಂತವಾಗಿ ಹೇರುವ ಸೇವಾ ತೆರಿಗೆಯಿಂದ ಜನರ ಜೀವನ ಅಸ್ತವ್ಯಸ್ತವಾಗುತ್ತದೆ ಎಂದಿದ್ದು- ದೂರದೃಷ್ಟಿಯುಳ್ಳ ನಾಯಕನ ಕಾಳಜಿಯಾಗಿತ್ತು.

gst 3

ರಾಹುಲ್ ಗಾಂಧಿ ಹೇಳಿದಂತೆಯೇ, ದೊಡ್ಡ ದೊಡ್ಡ ಕಾರ್ಪೊರೇಟ್‌ ಕುಳಗಳು ತಮ್ಮ ಆಡಿಟರ್‍‌ಗಳ ನೆರವಿನಿಂದ ಜಿಎಸ್‌ಟಿಯ ನಿಯಮಗಳಿಗೇ ಸೆಡ್ಡು ಹೊಡೆದು, ಲಾಭದಾಯಕ ಮಾರ್ಗಗಳನ್ನು ಕಂಡುಕೊಂಡರು. ಆದರೆ ಈ ಅನುಕೂಲವಿಲ್ಲದ ಸಣ್ಣ ವ್ಯಾಪಾರಿಗಳು, ಉದ್ದಿಮೆದಾರರು, ಗುಡಿ ಕೈಗಾರಿಕೆಗಳು ತೆರಿಗೆಯ ಯಂತ್ರಕ್ಕೆ ಸಿಕ್ಕು ತರಗೆಲೆಯಾದರು. ಅದರಲ್ಲೂ ಕೋವಿಡ್ ಕಾಲದಲ್ಲಿ ಬಡ, ಮಧ್ಯಮವರ್ಗದ ವ್ಯಾಪಾರಿಗಳು ಮತ್ತು ಉದ್ದಿಮೆದಾರರು ನೆಲಕಚ್ಚಿದರು. ಪೆಟ್ರೋಲ್ ಮತ್ತು ಡೀಸೆಲ್‌ನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಉದ್ದೇಶಪೂರ್ವಕವಾಗಿ ಹೊರಗಿಟ್ಟು; ರೈತರು, ಸರಕು ಸಾಗಾಣಿಕೆದಾರರು ಮತ್ತು ಗ್ರಾಹಕರ ತಲೆಮೇಲೆ ಅನಗತ್ಯ ತೆರಿಗೆ ಹೊರೆ ಹೊರಿಸಿ ಅಕ್ಷರಶಃ ಲೂಟಿ ಮಾಡಿದರು.

ಬಿಜೆಪಿ ಆಡಳಿತವಿಲ್ಲದ ರಾಜ್ಯಗಳನ್ನು ಶಿಕ್ಷಿಸಲು ಕೇಂದ್ರ ಸರ್ಕಾರ ಜಿಎಸ್‌ಟಿ ಬಾಕಿಗಳನ್ನು ಅಸ್ತ್ರವನ್ನಾಗಿ ಬಳಸಿತು. ಇದು ಮೋದಿ ಸರ್ಕಾರದ ಒಕ್ಕೂಟವಿರೋಧಿ ಧೋರಣೆ ಎನ್ನುವುದನ್ನು ಸ್ಪಷ್ಟಪಡಿಸಿತು.

ಕಳೆದ 8 ವರ್ಷಗಳಲ್ಲಿ ಜಿಎಸ್‌ಟಿಯಿಂದಾಗಿ 18 ಲಕ್ಷಕ್ಕೂ ಹೆಚ್ಚು ಸಣ್ಣಉದ್ಯಮಗಳು ಮುಚ್ಚಲ್ಪಟ್ಟಿವೆ. ಸಣ್ಣ ವ್ಯಾಪಾರಿ ವಲಯ ದಿಕ್ಕಾಪಾಲಾಗಿದೆ. ದೇಶದ ಸಾಮಾನ್ಯಜನ ಚಹಾದಿಂದ ಹಿಡಿದು ಆರೋಗ್ಯ ವಿಮೆಯವರೆಗೆ ಎಲ್ಲದಕ್ಕೂ ಜಿಎಸ್‌ಟಿ ಪಾವತಿಸುತ್ತಿದ್ದಾರೆ. ಆದರೆ ಕಾರ್ಪೊರೇಟ್‌ ಕುಳಗಳು ವಾರ್ಷಿಕವಾಗಿ 1 ಲಕ್ಷ ಕೋಟಿಗಿಂತಲೂ ಹೆಚ್ಚಿನ ತೆರಿಗೆ ರಿಯಾಯಿತಿಗಳನ್ನು ಪಡೆಯುತ್ತಿದ್ದಾರೆ. ಇದು ತಾರತಮ್ಯ ತೆರಿಗೆನೀತಿಯಲ್ಲವೇ? ಹೇಳಿದ್ದೊಂದು ಮಾಡಿದ್ದೊಂದು ಅಲ್ಲವೇ?

ಹಾಗೆಯೇ, ಮೋದಿಯವರ ಕೇಂದ್ರ ಸರ್ಕಾರ ಜಿಎಸ್‌ಟಿ ನೆಪದಲ್ಲಿ ಕಳೆದ ಎಂಟು ವರ್ಷಗಳಲ್ಲಿ ಜನರ ಜೀವ ಹಿಂಡಿ, ವಸೂಲಿ ಮಾಡಿದ ತೆರಿಗೆಯ ಮೊತ್ತವೆಷ್ಟು ಗೊತ್ತೇ? ಜಿಎಸ್‌ಟಿ ಸಂಗ್ರಹವು ಕೇಂದ್ರ (CGST), ರಾಜ್ಯ (SGST) ಮತ್ತು ಸಂಯೋಜಿತ (IGST) ತೆರಿಗೆಗಳನ್ನು ಒಳಗೊಂಡಿದೆ. ಜೊತೆಗೆ ಸೆಸ್ ಸೇರಿದೆ. ಕೇಂದ್ರ ಹಣಕಾಸು ಸಚಿವಾಲಯದ ಅಧಿಕೃತ ವರದಿಗಳ ಪ್ರಕಾರವೇ ಡಿಸೆಂಬರ್ 2024ಕ್ಕೆ 107 ಲಕ್ಷ ಕೋಟಿ ಸಂಗ್ರಹವಾಗಿದೆ.

ದೇಶದ ಆದಾಯದ ಮುಖ್ಯ ಮೂಲ ತೆರಿಗೆ. ದೇಶದ ಆರ್ಥಿಕ ಚಕ್ರ ಚಲಿಸುವಿಕೆಗೆ ತೆರಿಗೆ ಅಗತ್ಯ ಎನ್ನುವುದನ್ನೂ ಒಪ್ಪೋಣ. ಆದರೆ, ಅಭಿವೃದ್ಧಿ ಹೊಂದುತ್ತಿರುವ ಭಾರತದಂತಹ ದೇಶದಲ್ಲಿ ಅದು ಯಾರ ಮೇಲೆ ಎಷ್ಟು ಎನ್ನುವ ವಿವೇಚನೆಯಿಂದ ಬಳಸಬೇಕಲ್ಲವೇ? ಕಾರ್ಪೊರೇಟ್ ಕುಳಗಳಿಗೆ ರಿಯಾಯಿತಿ, ಬಡ-ಮಧ್ಯಮವರ್ಗದವರಿಗೆ ಬರೆ ಎಂದಾಗಬಾರದಲ್ಲವೇ?

ಹಾಗೆಯೇ ಜನರಿಂದ ವಸೂಲಿ ಮಾಡಿದ ತೆರಿಗೆಯ ಹಣವನ್ನು ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೂ ಸಮಾನವಾಗಿ ಹಂಚಿಕೆ ಮಾಡಿದೆಯೇ? ಜನರ ಬೆವರಿನ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಸಮರ್ಪಕವಾಗಿ ವಿನಿಯೋಗಿಸಲಾಗಿದೆಯೇ? ಇದು ಪಾರದರ್ಶಕವಾಗಿದೆಯೇ? ಪಾಕದರ್ಶಕವಾಗಿದ್ದರೆ, ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರ, ತೆಲಂಗಾಣ ರಾಜ್ಯದ ಮುಖ್ಯಮಂತ್ರಿಗಳು ಏಕೆ ತೆರಿಗೆ ಹಂಚಿಕೆಯ ತಾರತಮ್ಯ ಕುರಿತು ಅಪಸ್ವರ ಎತ್ತುತ್ತಿದ್ದಾರೆ?

ಇದನ್ನು ಓದಿದ್ದೀರಾ?: ಧರ್ಮಸ್ಥಳ ವಿವಾದದ ಸುತ್ತಮುತ್ತ

ಈ ಸಂದರ್ಭದಲ್ಲಿ ಇಂಗ್ಲೆಂಡಿನ ಜನಪದ ನಾಯಕ-ದರೋಡೆಕೋರ ರಾಬಿನ್ ಹುಡ್ ನೆನಪಾಗುತ್ತಿದ್ದಾನೆ. ಇಂಗ್ಲಿಷ್ ಜಾನಪದ ಲೋಕದಲ್ಲಿ ಈತನ ಮೇಲೆ ಹಲವು ದಂತಕತೆಗಳಿವೆ. ಈತ ಶೆರ್ವುಡ್ ಅಡವಿಯಲ್ಲಿ ವಾಸಿಸುತ್ತಿದ್ದು, ಶ್ರೀಮಂತರ ಮನೆಗಳಿಗೆ ನುಗ್ಗಿ ಲೂಟಿ ಮಾಡಿ ತಂದ ಹಣವನ್ನು ಬಡವರಿಗೆ ಹಂಚುತ್ತಿದ್ದ ಎಂಬ ಕತೆಗಳು ಚಾಲ್ತಿಯಲ್ಲಿವೆ. ಇದನ್ನು ಆಧುನಿಕ ಕಾಲದಲ್ಲಿ, ಲೂಟಿ ಮಾಡಿ ಬಡವರಿಗೆ ಹಣ ಹಂಚುವವರನ್ನು ಕಂಡಾಗ ‘ರಾಬಿನ್ ಹುಡ್ ಸಿಂಡ್ರೋಮ್’ ಎಂದು ವ್ಯಾಖ್ಯಾನಿಸಲಾಗುತ್ತದೆ.

ಜಿಎಸ್‌ಟಿ ಏರಿಸಿ, ಇಳಿಸುತ್ತಿರುವ ನಮ್ಮ ಪ್ರಧಾನಿ ಮೋದಿಯವರು ಒಂದು ರೀತಿಯಲ್ಲಿ ರಾಬಿನ್ ಹುಡ್ ರೀತಿಯೇ. ಇಂಗ್ಲೆಂಡಿನ ಜನಪದ ಕಳ್ಳ ರಾಬಿನ್ ಹುಡ್ ಶ್ರೀಮಂತರ ಬಂಗಲೆಗಳನ್ನು ದರೋಡೆ ಮಾಡಿ ಬಡವರಿಗೆ ಹಂಚಿದರೆ; ನಮ್ಮ ಪ್ರಧಾನಿ ಮೋದಿಯವರು ಜಿಎಸ್‌ಟಿ ಮೂಲಕ ಬಡವರನ್ನು ಸುಲಿದು ಶ್ರೀಮಂತ ಕಾರ್ಪೊರೇಟ್ ಕುಳಗಳಿಗೆ ಲಾಭ ಮಾಡಿಕೊಟ್ಟಿದ್ದಾರೆ. ಎಂಟು ವರ್ಷಗಳ ಕಾಲ ಜೀವ ಹಿಂಡಿ, ಅರೆಜೀವವಾಗಿರುವ ಜನಕ್ಕೆ ಈಗ ಇಳಿಸುವ ಮೂಲಕ ದೀಪಾವಳಿ ಕೊಡುಗೆಯ ಮಾತುಗಳನ್ನಾಡುತ್ತಿದ್ದಾರೆ.

ಹಾಗಾಗಿ ಇವರು ಈ ಕಾಲದ ರಾಬಿನ್ ಹುಡ್, ಮಾಡರ್ನ್ ರಾಬಿನ್ ಹುಡ್!  

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

1 COMMENT

  1. ಮೋದಿ ಸರ್ಕಾರದ ಹತ್ತಲವು ಲೂಟಿಕೋರ ದುರಾಡಳಿತಗಳ ಪೈಕಿ ಜಿಎಸ್ಟಿ ದಂಧೆಯ ಬಗ್ಗೆ ಅತ್ಯುತ್ತಮ ಲೇಖನ ಬರೆದು ಜನರ ಕಣ್ಣು ತೆರೆಸಿದ್ದೀರಿ.
    ಅಭಿನಂದನೆಗಳು ಸರ್ 💐

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗದಗ | ಮುಶಿಗೇರಿ ವಸತಿ ನಿಲಯಕ್ಕೆ ಮೂಲ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಗೋಳು ಕೇಳೋರ್ಯಾರು?

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಸತಿ...

ಉಪರಾಷ್ಟ್ರಪತಿ ಚುನಾವಣೆ | ಜಾತ್ಯತೀತ ಹೋರಾಟದ ಹಿನ್ನೆಲೆಯ ಅಭ್ಯರ್ಥಿಗೆ RSS ಕಟ್ಟಾಳು ಎದುರಾಳಿ

2025ರ ಉಪರಾಷ್ಟ್ರಪತಿ ಚುನಾವಣೆಯು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ; ಅದು...

ಪಟ್ಟಣ ಪಂಚಾಯತ್ ಚುನಾವಣೆ: ಮೂರರಲ್ಲಿ ಕಾಂಗ್ರೆಸ್‌ಗೆ ಮೇಲುಗೈ; ಎರಡರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜಯ

ಕರ್ನಾಟಕದಲ್ಲಿ ಐದು ಪ್ರದೇಶಗಳು ತಾಲೂಕು ಸ್ಥಾನಕ್ಕೇರಿದ ಬಳಿಕ ರಚನೆಯಾದ ಪಟ್ಟಣ ಪಂಚಾಯಿತಿಗೆ...

Download Eedina App Android / iOS

X