- ಮೂವರು ನೂತನ ಸಚಿವರಿಗೆ ಶಕ್ತಿಕೇಂದ್ರದಲ್ಲಿ ಕೊಠಡಿ ಹಂಚಿಕೆ
- ಮುಖ್ಯಮಂತ್ರಿ ಪರಿಹಾರ ನಿಧಿಗೆ ನೂತನ ಜಂಟಿ ಕಾರ್ಯದರ್ಶಿ ನೇಮಕ
ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ಶಕ್ತಿಕೇಂದ್ರ ವಿಧಾನಸೌಧ ಕಾರ್ಯಾರಂಭಕ್ಕೆ ತಯಾರಿಯಾಗುತ್ತಿದೆ. ಹೀಗಾಗಿ ಆಡಳಿತ ವರ್ಗದಲ್ಲಿ ಬದಲಾವಣೆ ಮತ್ತು ನೂತನ ಸಚಿವರಿಗೆ ಕೊಠಡಿ ಹಂಚಿಕೆ ಕಾರ್ಯಗಳು ಆರಂಭವಾಗಿವೆ.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟ ಸಹೋದ್ಯೋಗಿಗಳಾದ ಕೆಜೆ ಜಾರ್ಜ್, ಎಂಬಿ ಪಾಟೀಲ್ ಹಾಗೂ ಜಮೀರ್ ಅಹ್ಮದ್ ಅವರುಗಳಿಗೆ ವಿಧಾನಸೌಧ ಹಾಗೂ ವಿಕಾಸಸೌಧದಲ್ಲಿ ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ.
ಹಿರಿಯ ಸಚಿವ ಕೆಜೆ ಜಾರ್ಜ್ ಅವರಿಗೆ ವಿಧಾನಸೌಧದ ಮೂರನೇ ಮಹಡಿಯಲ್ಲಿನ ಕೊಠಡಿ ಸಂಖ್ಯೆ 317 ಮತ್ತು 317 ಎ, ಎಂಬಿ ಪಾಟೀಲ್ ಅವರಿಗೆ ವಿಧಾನಸೌಧದ ಮೂರನೇ ಮಹಡಿಯಲ್ಲಿನ ಕೊಠಡಿ ಸಂಖ್ಯೆ 344 ಮತ್ತು 344 ಎ ಹಾಗೂ ಬಿ ಜೆಡ್ ಜಮೀರ್ ಅಹ್ಮದ್‌ಖಾನ್ ಅವರಿಗೆ ವಿಕಾಸಸೌಧದ ಮೊದಲನೇ ಮಹಡಿಯಲ್ಲಿನ ಕೊಠಡಿ ಸಂಖ್ಯೆ 143 ಮತ್ತು 146 ಹಂಚಿಕೆ ಮಾಡಿದೆ.
ಸಿಎಂ ಪರಿಹಾರ ನಿಧಿ ಹಾಗೂ ಸಿಎಂ ವಿಶೇಷ ಕರ್ತವ್ಯಾಧಿಕಾರಿಗಳ ನೇಮಕ
ಇದರ ಜೊತೆಜೊತೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯ ಜಂಟಿ ಕಾರ್ಯದರ್ಶಿ ಹುದ್ದೆಗೆ ಪಿಎ ಗೋಪಾಲ್ ಅವರನ್ನು ಗುತ್ತಿಗೆ ಆಧಾರದಲ್ಲಿ ಸರ್ಕಾರ ನೇಮಿಸಿದೆ.
ಈ ಸುದ್ದಿ ಓದಿದ್ದೀರಾ?:ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಕ್ಕೆ ಪರೋಕ್ಷ ಚಾಲನೆ ನೀಡಿದ ರಾಜ್ಯ ಸರ್ಕಾರ
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿವೃತ್ತ ಜಂಟಿ ಕಾರ್ಯದರ್ಶಿಯಾಗಿದ್ದ ಗೋಪಾಲ್, ಸಿದ್ದರಾಮಯ್ಯ, ಎಚ್ ಡಿ ಕುಮಾರಸ್ವಾಮಿ, ಬಿಎಸ್ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ, ಸರ್ಕಾರದಲ್ಲಿಯೂ ಇದೇ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದರು.
ಇನ್ನು ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿಯಾಗಿ ಪೌರಾಡಳಿತ ಇಲಾಖೆಯಲ್ಲಿದ್ದ ಡಾ. ಕೆ ವೈಷ್ಣವಿ ಅವರನ್ನು ನಿಯೋಜನೆಯ ಮೇರೆಗೆ ನೇಮಕ ಮಾಡಲಾಗಿದೆ. ಇವರ ಜೊತೆಗೆ ಗುತ್ತಿಗೆ ಆಧಾರದಲ್ಲಿ ಕೆಎನ್ ವಿಜಯ ಅವರನ್ನೂ ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿಯನ್ನಾಗಿ ನೇಮಿಸಲಾಗಿದೆ.