ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿಯ ಅಂಕಪಟ್ಟಿಗಳನ್ನು ತಿದ್ದುಪಡಿ ಮಾಡಿಸಲು ಬಯಸುವ ವಿದ್ಯಾರ್ಥಿಗಳು 1,600 ರೂ. ಶುಲ್ಕ ಪಾವತಿಸಬೇಕು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಹೇಳಿದೆ. ಈ ಹಿಂದೆ, ಅಂಕಪಟ್ಟಿಗಳಲ್ಲಿ ದೋಷಗಳು ಕಂಡುಬಂದಲ್ಲಿ, ಅಂತಹ ಅಂಕಪಟ್ಟಿಗಳನ್ನು ಉಚಿತವಾಗಿ ತಿದ್ದುಪಡಿ ಮಾಡಿಕೊಡಲಾಗುತ್ತಿತ್ತು. ಆದರೆ, ಈಗ ಬರೋಬ್ಬರಿ 1,600 ರೂ. ಶುಲ್ಕ ನಿಗದಿ ಮಾಡಲಾಗಿದೆ. ಇದು, ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮತ್ತಷ್ಟು ಹೊರೆಯನ್ನು ಹೇರಲಿದೆ.
ವಿದ್ಯಾರ್ಥಿಗಳ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಅಂಕಪಟ್ಟಿಗಳಲ್ಲಿ ಹೆಸರು, ಜನ್ಮ ದಿನಾಂಕ, ಲಿಂಗ, ಭಾವಚಿತ್ರ ಸೇರಿದಂತೆ ಯಾವುದೇ ರೀತಿಯ ದೋಷಗಳು ಕಂಡುಬಂದಿಲ್ಲಿ, ಮಂಡಳಿಗೆ ಅರ್ಜಿ ಸಲ್ಲಿಸಿ ವಿದ್ಯಾರ್ಥಿಗಳು ಉಚಿತವಾಗಿ ತಿದ್ದುಪಡಿ ಪಡೆಯುತ್ತಿದ್ದರು. ಆದರೆ, ಈಗ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಶುಲ್ಕ ನಿಗದಿ ಮಾಡಿದೆ. ಇದರಿಂದ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ ಎಂದು ಆಕ್ಷೇಪಗಳು ವ್ಯಕ್ತವಾಗಿವೆ.
ಕಾಲೇಜುಗಳ ಪ್ರಾಂಶುಪಾಲರಿಗೆ ಮಂಡಳಿಯು ಸುತ್ತೋಲೆಯನ್ನು ಕಳುಹಿಸಿದೆ. ಆದೇಶದಲ್ಲಿ, “ಅಂಕಪಟ್ಟಿಯಲ್ಲಿ ತಿದ್ದುಪಡಿಗೆ ಮಂಡಳಿಯ ಇ-ಕಚೇರಿ ಕಡತದಲ್ಲಿ ಅನುಮೋದಿಸಿರುವಂತೆ ನಿಗದಿತ ಶುಲ್ಕ 1,600 ರೂ.ಗಳನ್ನು ಕೆ-2 ತಂತ್ರಾಂಶದಲ್ಲಿ ಲಾಗಿನ್ ಆಗಿ ಚಲನ್ ಪ್ರತಿ ಪಡೆದು ಬ್ಯಾಂಕ್‌ನಲ್ಲಿ ಹಣ ಪಾವತಿಸಬೇಕು. ಹಣ ಪಾವತಿಸಿದ ಮೂಲ ಕೆ-2 ಚಲನ್ ಪ್ರತಿ, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಯ ದೃಢೀಕೃತ ಪ್ರತಿ ಮತ್ತು ದ್ವಿತೀಯ ಪಿಯುಸಿಯ ಮೂಲ ಅಂಕಪಟ್ಟಿಯನ್ನು ಅರ್ಜಿಯೊಂದಿಗೆ ಲಗತ್ತಿಸಿ ಮಂಡಳಿಗೆ ತಲುಪಿಸಬೇಕು. ಆ ಬಳಿಕ ಮಂಡಳಿಯಿಂದ ಪರಿಷ್ಕೃತ ಅಂಕಪಟ್ಟಿ ನೀಡಲಾಗುತ್ತದೆ” ಎಂದು ಹೇಳಿದೆ.
ಆದರೆ, ಈ ಹಿಂದೆ, ಅಂಕಪಟ್ಟಿ ತಿದ್ದುಪಡಿಗೆ ಯಾವುದೆ ಶುಲ್ಕವಿರಲಿಲ್ಲ. ಅಂಕಪಟ್ಟಿಯ ಉದ್ದೇಶಿತ ತಿದ್ದುಪಡಿಯನ್ನು ಸೂಚಿಸಿ ಕಾಲೇಜುಗಳ ಪ್ರಾಂಶುಪಾಲರು ಪ್ರಸ್ತಾವನೆಗಳನ್ನು ಮಂಡಳಿಯ ಅಂಕಪಟ್ಟಿ ಶಾಖೆಗೆ ಕಳಿಸುತ್ತಿದ್ದರು. ಮೂಲ ಅಂಕಪಟ್ಟಿಯಲ್ಲಿಯೇ ಬೆರಳಚ್ಚು ಯಂತ್ರದ ಮೂಲಕ ತಿದ್ದುಪಡಿ ಮಾಡಿ, ಇಲಾಖೆಯ ಮೊಹರಿನೊಂದಿಗೆ ದೃಢೀಕರಿಸಲಾಗುತ್ತಿತ್ತು.
ಈಗ ತಿದ್ದುಪಡಿಗೂ ಶುಲ್ಕ ವಿಧಿಸಲಾಗಿದೆ. ವಿಧಿಸಲಾಗಿರುವ ಶುಲ್ಕವೂ ದುಬಾರಿಯಾಗಿದ್ದು, ಸಾಮಾನ್ಯ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ 1,600 ರೂ. ಶುಲ್ಕ ಪಾವತಿಸುವುದು ಸವಾಲಿನ ವಿಷಯವಾಗಿದೆ. ಹೀಗಾಗಿ, ಶಿಕ್ಷಣ ತಜ್ಞರು, ಪೋಷಕರು ದುಬಾರಿ ಶುಲ್ಕದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ವರದಿ ಓದಿದ್ದೀರಾ?: ವಲಸೆ ಕಾರ್ಮಿಕರ ಮಕ್ಕಳ ರಕ್ಷಣೆ ಯಾರ ಹೊಣೆ?; ಅವರೂ ನಮ್ಮ ಮಕ್ಕಳಂತೆ ಅಲ್ಲವೇ?
“ಅಂಕಪಟ್ಟಿಗಳಲ್ಲಿನ ಲೋಪಕ್ಕೆ ಶಿಕ್ಷಣ ಇಲಾಖೆ ಮತ್ತು ಪರೀಕ್ಷಾ ಮಂಡಳಿಗಳೇ ಕಾರಣ. ಅವರು ಮಾಡುವ ಯಡವಟ್ಟಿಗೆ ವಿದ್ಯಾರ್ಥಿಗಳ ಮೇಲೆ ಹೊರೆ ಹೇರಬಾರದು. ಅಂಕಪಟ್ಟಿ ತಿದ್ದುಪಡಿಗೆ ಮಂಡಳಿಯು ಸುಲಭ ಮತ್ತು ಖರ್ಚು-ಕಡಿತ ಮಾರ್ಗಗಳನ್ನು ಕಂಡುಕೊಳ್ಳಬೇಕು. ಶಿಕ್ಷಣ ಪ್ರತಿಯೊಬ್ಬರ ಹಕ್ಕಾಗಿದ್ದು, ಇಂತಹ ದುಬಾರಿ ಶುಲ್ಕಗಳನ್ನು ವಿಧಿಸಿ, ಮಕ್ಕಳು ಶಿಕ್ಷಣದಿಂದ ವಂಚಿತರಾಗುವಂತೆ ಮಾಡಬಾರದು. ಈ ಹಿಂದಿನಂತೆ ಉಚಿತವಾಗಿಯೇ ಅಂಕಪಟ್ಟಿ ತಿದ್ದುಪಡಿ ಮಾಡುವುದನ್ನು ಮಂಡಳಿ ಮುಂದುವರೆಸಬೇಕು” ಎಂದು ಪೋಷಕರು ಆಗ್ರಹಿಸಿದ್ದಾರೆ.
ಈದಿನ.ಕಾಮ್ ಜೊತೆ ಮಾತನಾಡಿದ ಹೆಸರು ಹೇಳಲು ಇಚ್ಚಿಸಿದ ಶಿಕ್ಷಕರೊಬ್ಬರು, “ವಿದ್ಯಾರ್ಥಿಗಳು ಶಾಲೆ-ಕಾಲೇಜುಗಳಿಗೆ ಧಾಖಲಾಗುವಾಗದೇ ಸರಿಯಾದ ಮಾಹಿತಿಯನ್ನು ಒದಗಿಸಿರುತ್ತಾರೆ. ಆದರೆ, ಪರೀಕ್ಷೆ ನಡೆದು, ಅಂಕಪಟ್ಟಿ ಸಿದ್ದಪಡಿಸುವಾಗ ಶಿಕ್ಷಣ ಇಲಾಖೆ ಮತ್ತು ಮಂಡಳಿಯ ಸಿಬ್ಬಂದಿಗಳು ಲೋಪ ಎಸಗುತ್ತಾರೆ. ಅವರು ಮಾಡುವ ಲೋಪಕ್ಕೆ ವಿದ್ಯಾರ್ಥಿಗಳು, ಪೋಷಕರು ಶುಲ್ಕ ಪಾವತಿ ಮಾಡಬೇಕು ಎಂಬುದು ಸರಿಯಾದ ನಿರ್ಧಾರವಲ್ಲ. ಮಂಡಳಿಯು ತನ್ನ ಆದೇಶವನ್ನು ಹಿಂಪಡೆಯಬೇಕು” ಎಂದು ಹೇಳಿದ್ದಾರೆ.