ಎಸ್.ಎಂ ಕೃಷ್ಣ: ನಾಡು ಕಂಡ ವರ್ಣರಂಜಿತ ರಾಜಕಾರಣಿಯ ಯುಗಾಂತ್ಯ

Date:

Advertisements
1962ರಿಂದ 2012ರವರೆಗೆ, ಸಾಮಾನ್ಯ ಕಾರ್ಯಕರ್ತನಿಂದ ಹಿಡಿದು ವರ್ಚಸ್ವಿ ನಾಯಕನವರೆಗೆ ಹಂತ ಹಂತವಾಗಿ ಬೆಳೆದ ಎಂ.ಎಸ್. ಕೃಷ್ಣರು, ಕಾಂಗ್ರೆಸ್‌ನಲ್ಲಿ ಅಲಂಕರಿಸದೆ ಬಿಟ್ಟ ಹುದ್ದೆಗಳಿಲ್ಲ. ತಮಗೆ ದೊರೆತ ಅಧಿಕಾರದ ಸ್ಥಾನಗಳನ್ನು ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವಲ್ಲಿ ವಿನಿಯೋಗಿಸಿದ ಕೃಷ್ಣರು, ಆಳವಾದ ಓದು, ಅಧ್ಯಯನಗಳಿಂದ ಅತ್ಯುತ್ತಮ ಸಂಸದೀಯಪಟು ಎನಿಸಿಕೊಂಡಿದ್ದರು. ಮುಖ್ಯಮಂತ್ರಿಯಾಗಿ ಅವರು ಜಾರಿಗೆ ತಂದ ಹತ್ತು ಹಲವು ಕಾರ್ಯಕ್ರಮಗಳು, ಯೋಜನೆಗಳು ಒಂದು ಸರ್ಕಾರ ಹೊಂದಿರಬೇಕಾದ ಅಭಿವೃದ್ಧಿಯ ಮುನ್ನೋಟಕ್ಕೆ ಮಾದರಿಯಾಗಿದ್ದವು...

ಏಪ್ರಿಲ್ 21ರಂದು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಎಸ್.ಎಂ. ಕೃಷ್ಣರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿಂದ ಗುಣಮುಖರಾಗಿ ಮನೆಗೆ ಬಂದವರು ಮತ್ತೆ ಏ. 29ಕ್ಕೆ ಶ್ವಾಸಕೋಶದ ಸಮಸ್ಯೆಯಿಂದಾಗಿ ಸಣ್ಣ ಸರ್ಜರಿಗೊಳಗಾಗಿ, ಮಣಿಪಾಲ್ ಆಸ್ಪತ್ರೆಯಲ್ಲಿಯೇ ದಿನ ಕಳೆಯುವಂತಾಯಿತು. ನಾಲ್ಕು ತಿಂಗಳ ನಂತರ, ಆ. 28ರಂದು ಮನೆಗೆ ಮರಳಿದ್ದರು.

ನಾಲ್ಕು ತಿಂಗಳ ಮಣಿಪಾಲ್ ಆಸ್ಪತ್ರೆವಾಸ ಮುಗಿಸಿ, ಮನೆಗೆ ಬಂದಿದ್ದರು. ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಹೊರತುಪಡಿಸಿದರೆ, ಆರಾಮಾಗಿದ್ದ 92ರ ಹರೆಯದ ವರ್ಣರಂಜಿತ ರಾಜಕಾರಣಿ ಎಸ್.ಎಂ. ಕೃಷ್ಣ ಇಂದು ಬೆಳಗ್ಗೆ 2.30ರ ಸುಮಾರಿಗೆ ನಿಧನರಾಗಿದ್ದಾರೆ.

ಕೃಷ್ಣ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಎರಡನೇ ದಿನಕ್ಕೆ ಅವರು ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಅನಾರೋಗ್ಯ ಮತ್ತು ಜನ್ಮದಿನ- ಎರಡರ ನೆಪದಲ್ಲಿ ಅವರ ಆಪ್ತರು, ಅಭಿಮಾನಿಗಳು, ಹಿತೈಷಿಗಳು ಆಸ್ಪತ್ರೆಗೆ ಭೇಟಿ ಕೊಡುವುದು ಸಾಮಾನ್ಯವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಕೃಷ್ಣರ ಸಾವಿನ ಸುದ್ದಿ ಕೂಡ ಕೇಳಿ ಬರುತ್ತಿತ್ತು. ಅದನ್ನು ಮಣಿಪಾಲ್ ಆಸ್ಪತ್ರೆಯ ವೈದ್ಯರು ಅಲ್ಲಗಳೆಯುತ್ತಲೇ ಇದ್ದರು.

Advertisements

ಎರಡು ವರ್ಷಗಳ ಹಿಂದೆ, ಎಸ್.ಎಂ. ಕೃಷ್ಣರು 90 ವರ್ಷ ಪೂರೈಸಿದಾಗ, ಜನ್ಮದಿನಕ್ಕೆ ಹಾರೈಸುವ ನೆಪದಲ್ಲಿ ಕೆಲ ಪತ್ರಕರ್ತರು, ‘ಬಿಜೆಪಿ ನಿಮ್ಮನ್ನು ನಿರ್ಲಕ್ಷಿಸಿದೆಯೇ’ ಎಂದು ಪ್ರಶ್ನಿಸಿದ್ದರು. ನಗುತ್ತಲೇ ಉತ್ತರಿಸಿದ ಕೃಷ್ಣರು, ‘ನನಗೀಗ 90 ವರ್ಷ, ಇದರ ಅರಿವು ನನಗಿದೆ. 90 ವರ್ಷದ ನಾನು 50 ವರ್ಷದವನಂತೆ ನಟಿಸಲು ಸಾಧ್ಯವಿಲ್ಲ. ಆದ್ದರಿಂದ ಸಾರ್ವಜನಿಕ ಜೀವನದಿಂದ ಹಿಂದಕ್ಕೆ ಸರಿಯುತ್ತಿದ್ದೇನೆ. ನಾನಾಗಿಯೇ ರಾಜಕೀಯದಿಂದ ಹಿಂದಕ್ಕೆ ಸರಿಯುತ್ತಿರುವುದರಿಂದ ನನ್ನನ್ನು ಪಕ್ಷ ನಿರ್ಲಕ್ಷಿಸುತ್ತಿದೆ ಎನ್ನುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದಿದ್ದರು.

ಎಸ್‌ ಎಂ ಕೃಷ್ಣ

ಹೌದು, ಆ ಸಂದರ್ಭದಲ್ಲಿ, ಎಸ್.ಎಂ.ಕೃಷ್ಣರಿಗೆ ಏನೂ ಆಗಬೇಕಾಗಿರಲಿಲ್ಲ. ಹಾಗೆಯೇ ರಾಜಕೀಯ ಪಕ್ಷಗಳಿಗೆ ಕೃಷ್ಣ ಅವರ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಅನುಕೂಲವಾಗಲಿ ಹಾಗೂ ನಿರ್ಲಕ್ಷಿಸುವುದರಿಂದ ಹಾನಿಯಾಗಲಿ ಆಗುವಂಥದ್ದಿರಲಿಲ್ಲ. ಹಾಗೆ ನೋಡಿದರೆ, 2012ರಲ್ಲಿ ಕೇಂದ್ರ ವಿದೇಶಾಂಗ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕರ್ನಾಟಕಕ್ಕೆ ಮರಳಿದಾಗಲೇ ನಿವೃತ್ತಿ ಘೋಷಿಸಿದ್ದರೆ, ದೇಶದ ಧೀಮಂತ ರಾಜಕೀಯ ನಾಯಕರ ಸಾಲಿಗೆ ಕೃಷ್ಣ ಕೂಡ ಸೇರುತ್ತಿದ್ದರು. ಅಂತಹ ಒಂದು ಅಪೂರ್ವ ಅವಕಾಶವನ್ನು ಅವರಾಗಿಯೇ ಕಳೆದುಕೊಂಡದ್ದು- ಸಾರ್ವಜನಿಕ ಬದುಕು ಕಲ್ಪಿಸುವ ಅವಕಾಶಕ್ಕೆ, ಅಧಿಕಾರಕ್ಕೆ, ಅವಘಡಕ್ಕೆ ಬಹುದೊಡ್ಡ ಉದಾಹರಣೆಯಾಗಿ ನಿಲ್ಲುತ್ತದೆ.

ಉಪನ್ಯಾಸಕರಾದ ಕೃಷ್ಣ

ಮೇ 1, 1932ರಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಯ ಮಲ್ಲಯ್ಯರ ಮಗನಾಗಿ ಜನಿಸಿದ ಕೃಷ್ಣ, ತಮ್ಮ 92 ವರ್ಷಗಳ ಬದುಕಿನಲ್ಲಿ, 50 ವರ್ಷಗಳನ್ನು ರಾಜಕೀಯ ರಂಗದಲ್ಲಿ ಕಳೆದಿದ್ದಾರೆ. ತಮ್ಮ ಬದುಕಿನ ಮುಕ್ಕಾಲು ಭಾಗವನ್ನು ಅವರು ಸಾರ್ವಜನಿಕ ಬದುಕಿಗೆ ಮೀಸಲಿಟ್ಟಿದ್ದಾರೆ. ಅರವತ್ತರ ದಶಕದಲ್ಲಿಯೇ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಅಮೆರಿಕಾಕ್ಕೆ ತೆರಳಿದ ಕೃಷ್ಣ ಅವರು ಫುಲ್ ಬ್ರೈಟ್ ಸ್ಕಾಲರ್‌ಶಿಪ್ ಪಡೆದು ಟೆಕ್ಸಾಸ್‌ ಮತ್ತು ವಾಷಿಂಗ್ಟನ್‌ ವಿವಿಯಲ್ಲಿ ಅಂತಾರಾಷ್ಟ್ರೀಯ ಕಾನೂನು ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಭಾರತಕ್ಕೆ ಮರಳಿದ ಮೇಲೆ ಬೆಂಗಳೂರಿನ ರೇಣುಕಾಚಾರ್ಯ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿದರು.

ಮಂಡ್ಯದ ಪ್ರತಿಷ್ಠಿತ ಕುಟುಂಬದ ಜೊತೆಗೆ ಬಹುಸಂಖ್ಯಾತ ಮತ್ತು ಬಲಾಢ್ಯ ಒಕ್ಕಲಿಗ ಸಮುದಾಯಕ್ಕೆ ಸೇರಿದ ಕೃಷ್ಣ ಅವರು, ಅರವತ್ತರ ದಶಕದಲ್ಲಿಯೇ ‘ಫಾರಿನ್ ರಿಟರ್ನ್ಡ್’ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಸಹಜವಾಗಿಯೇ ಸಾರ್ವಜನಿಕ ಸೇವಾಕ್ಷೇತ್ರವಾದ ರಾಜಕೀಯದತ್ತ ಆಕರ್ಷಿತರಾದರು. 1962ರಲ್ಲಿ ಮೊದಲ ಬಾರಿಗೆ ಮದ್ದೂರು ವಿಧಾನಸಭಾ ಕ್ಷೇತ್ರದಿಂದ, ಪ್ರಜಾ ಸೋಷಲಿಸ್ಟ್ ಪಾರ್ಟಿಯ(ಪಿಎಸ್‌ಪಿ) ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿ, ಆ ಕಾಲಕ್ಕೇ ಹೆಸರು ಗಳಿಸಿದ್ದ, ಮಂಡ್ಯದ ಹಿರಿಯ ರಾಜಕಾರಣಿ ಎನಿಸಿದ್ದ ಎಚ್.ಕೆ. ವೀರಣ್ಣಗೌಡರ ವಿರುದ್ಧ ಗೆದ್ದು ‘ಜಯಂಟ್ ಕಿಲ್ಲರ್’ ಎನಿಸಿಕೊಂಡರು. ಮೂವತ್ತನೆ ವಯಸ್ಸಿಗೇ ವಿಧಾನಸೌಧ ಪ್ರವೇಶಿಸಿದರು.

ಎಸ್‌ ಎಂ ಕೃಷ್ಣ

ಆಗ ಕಾಂಗ್ರೆಸ್ಸಿನ ನಿಜಲಿಂಗಪ್ಪನವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ಆ ಕಾಲದ ರಾಜಕೀಯ ನಾಯಕರಾದ ಕೆಂಗಲ್ ಹನುಮಂತಯ್ಯ, ವೀರೇಂದ್ರ ಪಾಟೀಲ್, ದೇವರಾಜ ಅರಸು, ಕೆ.ಎಚ್.ಪಾಟೀಲ್, ಎಚ್.ಡಿ. ದೇವೇಗೌಡ, ರಾಮಕೃಷ್ಣ ಹೆಗಡೆಗಳಂತಹ ಘಟಾನುಘಟಿಗಳ ಸಹವಾಸದಲ್ಲಿ ಸಾರ್ವಜನಿಕ ಬದುಕಿನ ಪಾಠಗಳನ್ನು ಕಲಿತರು. ರಾಜಕಾರಣದ ಒಳ-ಹೊರಗನ್ನು ಅರಗಿಸಿಕೊಂಡರು. ಆನಂತರ 1967ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸೋತರೂ, 1968ರಲ್ಲಿ ಲೋಕಸಭೆಗೆ ಸ್ಪರ್ಧಿಸಿ ಗೆದ್ದರು. 1971ರಲ್ಲಿ‌ ಸಾಹುಕಾರ್‌ ಚೆನ್ನಯ್ಯ, ಸಿದ್ದವೀರಪ್ಪ, ಹುಚ್ಚಮಾಸ್ತಿಗೌಡರಂತಹ ಹಿರಿಯರೊಂದಿಗೆ ಇಂದಿರಾ ಗಾಂಧಿಯವರ ಕಾಂಗ್ರೆಸ್ ಪಕ್ಷ ಸೇರಿದರು. ಅದೇ ವರ್ಷ ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಕಾಂಗ್ರೆಸ್(ಓ) ಅಭ್ಯರ್ಥಿ ಚೌಡಯ್ಯರ ವಿರುದ್ಧ ಗೆದ್ದು ಇಂದಿರಾ ಗಾಂಧಿಯವರ ಕೃಪಾಕಟಾಕ್ಷಕ್ಕೆ ಒಳಗಾದರು.

ಅರಸು ಸಂಪುಟದಲ್ಲಿ ಸಚಿವ

1972ರಲ್ಲಿ, ರಾಜ್ಯದಲ್ಲಿ ಇಂದಿರಾ ಕಾಂಗ್ರೆಸ್ ಜಯಭೇರಿ ಬಾರಿಸಿತು. ಸರ್ಕಾರ ರಚನೆಯಾಗಿ ದೇವರಾಜ ಅರಸು ಮುಖ್ಯಮಂತ್ರಿಯಾದರು. ಅರಸು, ತಮ್ಮ ಸಂಪುಟದಲ್ಲಿ ವಿದ್ಯಾವಂತ ಯುವಕರಿರಬೇಕು ಎಂಬ ಕಾರಣಕ್ಕಾಗಿ, ಇಂದಿರಾ ಗಾಂಧಿಯವರೊಂದಿಗೆ ಮಾತಾಡಿ, ಕೃಷ್ಣರಿಂದ ಸಂಸತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ, ರಾಜ್ಯಕ್ಕೆ ಕರೆಸಿಕೊಂಡರು. ಕೈಗಾರಿಕಾ ಖಾತೆ ಸಚಿವರನ್ನಾಗಿ ಮಾಡಿದರು. ಆ ನಂತರ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿಸಿದರು. ಆದರೆ ಐದು ವರ್ಷದೊಳಗೆ ಅರಸು ಮತ್ತು ಕೃಷ್ಣರ ನಡುವಿನ ಸಂಬಂಧ ಹಳಸಿಕೊಂಡಿತು. ಕಾಲಕ್ಕಾಗಿ ಕಾಯುತ್ತಿದ್ದ ಕೃಷ್ಣ, ಅದನ್ನೆಂದೂ ಬಹಿರಂಗವಾಗಿ ತೋರ್ಪಡಿಸಿಕೊಳ್ಳಲಿಲ್ಲ. ಮೌನವಾಗಿದ್ದುಕೊಂಡೇ ಇಂದಿರಾ ಮತ್ತು ಅರಸು ಕಾಂಗ್ರೆಸ್ ತೊರೆದು, ಹೊಸದಾಗಿ ಜನ್ಮ ತಳೆದಿದ್ದ ರೆಡ್ಡಿ ಕಾಂಗ್ರೆಸ್‌ನತ್ತ ಒಲವು ತೋರತೊಡಗಿದರು. ಅದೇ ಸಮಯಕ್ಕೆ ಸರಿಯಾಗಿ, 1977ರಲ್ಲಿ ಆಳುವ ಸರ್ಕಾರದ ವಿರುದ್ಧ ಮಂಡ್ಯದ ಜನ ಸಿಡಿದು ನಿಂತಿದ್ದರು. ವರುಣಾ ನಾಲೆ ಹೋರಾಟ ಮುಗಿಲು ಮುಟ್ಟಿತ್ತು. ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಕೃಷ್ಣರು, ರೈತರೊಂದಿಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡು ‘ಮಂಡ್ಯನ್’ ಆಗಲು ಹವಣಿಸಿದರು. ನಂತರ ರೆಡ್ಡಿ ಕಾಂಗ್ರೆಸ್ ಸೇರಿದರು.

ಎಸ್‌ ಎಂ ಕೃಷ್ಣ

1978ರ ವಿಧಾನಸಭಾ ಚುನಾವಣೆಯಲ್ಲಿ ರೆಡ್ಡಿ ಕಾಂಗ್ರೆಸ್ ಮುಗ್ಗರಿಸಿದಾಗ, ಮತ್ತೆ ಇಂದಿರಾ ಕಾಂಗ್ರೆಸ್ ಕಡೆ ಕೃಷ್ಣ ಮುಖ ಮಾಡಿದರು. 1980ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದ ಅಭ್ಯರ್ಥಿಯಾಗಿ ಗೆದ್ದರು. ಇಂದಿರಾ ಗಾಂಧಿಯವರ ಸಂಪುಟದಲ್ಲಿ ಕೇಂದ್ರ ಸಚಿವರಾದರು. ಆದರೆ 1984ರ ಚುನಾವಣೆಯಲ್ಲಿ ಸೋತರು. ಆದರೂ, ಅವರು ರಾಜೀವ್ ಗಾಂಧಿ ಸಂಪುಟದಲ್ಲಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದರು. ನಂತರ ರಾಜ್ಯ ರಾಜಕಾರಣದತ್ತ ವಾಲಿದ ಕೃಷ್ಣರು 1989ರಲ್ಲಿ ಮದ್ದೂರಿನಿಂದ ಶಾಸಕರಾಗಿ ಆಯ್ಕೆಯಾದರು. ನಾಲ್ಕು ವರ್ಷ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸಿ, ಆ ಸ್ಥಾನಕ್ಕೆ ಘನತೆ ತಂದರು. 1993ರಿಂದ 1994ರವರೆಗೆ, ವೀರಪ್ಪ ಮೊಯ್ಲಿಯವರು ಮುಖ್ಯಮಂತ್ರಿಯಾದಾಗ, ಅಸಮಾಧಾನವಿದ್ದರೂ ತೋರ್ಪಡಿಸಿಕೊಳ್ಳದ ಕೃಷ್ಣ, ಉಪಮುಖ್ಯಮಂತ್ರಿಯಾದರು. 1996ರಲ್ಲಿ ರಾಜ್ಯಸಭಾ ಎಂಪಿಯಾಗಿ ಆಯ್ಕೆಯಾದರು.

ಮುಖ್ಯಮಂತ್ರಿಯಾಗಿ ಕೃಷ್ಣ

1999ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ನೇಮಕಗೊಂಡ ಎಸ್.ಎಂ. ಕೃಷ್ಣ, ತಮ್ಮ ನಾಯಕತ್ವದಲ್ಲಿ ಪಾಂಚಜನ್ಯ ಮೊಳಗಿಸಿ ಪಕ್ಷವನ್ನು ಗೆಲ್ಲಿಸಿದರು, ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾದರು. ಆಳವಾದ ಅಧ್ಯಯನ ಮತ್ತು ಅನುಭವವಿದ್ದ ಕೃಷ್ಣ, ಆ ಕಾಲಕ್ಕೆ ಬೇಕಾದ ಐಟಿ-ಬಿಟಿ ಕ್ಷೇತ್ರದತ್ತ ಒಲವು ತೋರಿ, ಅದಕ್ಕೆ ಹೆಚ್ಚು ಒತ್ತು ನೀಡಿದರು. ಹಾಗೆಯೇ ಸಂಪತ್ತಿನ ಕ್ರೋಡೀಕರಣಕ್ಕೆ ಗಣಿಗಾರಿಕೆ ಮತ್ತು ರಿಯಲ್ ಎಸ್ಟೇಟ್ ಲಾಬಿಗಳಿಗೆ ಮಣೆ ಹಾಕಿದರು. ಭೂಮಿಗೆ ಚಿನ್ನಕ್ಕಿಂತ ಹೆಚ್ಚಿನ ಬೆಲೆ ಬಂದಾಗ, ಬೆಂಗಳೂರನ್ನು ಸಿಂಗಾಪೂರ್ ಮಾಡುತ್ತೇನೆಂದರು. ಪಾರಿನ್ ರಿಟನ್ಡ್ ಮತ್ತು ಎಲೀಟ್ ಸಂಸ್ಕೃತಿಗೆ ಮಾರುಹೋಗಿದ್ದ ಪತ್ರಕರ್ತರಿಗೆ ಬಿಡಿಎ ‘ಜಿ’ ಕ್ಯಾಟಗರಿ ಸೈಟ್ ಕೊಟ್ಟು, ಆಡಳಿತದ ಹಳವಂಡಗಳನ್ನು, ಅಧ್ವಾನಗಳನ್ನು ಮುಚ್ಚಿಕೊಂಡರು.

ಡಿ.ಕೆ. ಶಿವಕುಮಾರ್, ಆರ್.ವಿ. ದೇಶಪಾಂಡೆ ಮತ್ತು ಅಳಿಯ ಸಿದ್ಧಾರ್ಥರಂತಹವರನ್ನು ಅಗತ್ಯಕ್ಕಿಂತ ಹೆಚ್ಚು ಪೋಷಿಸಿದರು, ಪೊರೆದರು. ಅದೆಲ್ಲಕ್ಕಿಂತ ಹೆಚ್ಚಾಗಿ ತಮ್ಮದೇ ಪಕ್ಷದೊಳಗಿನ ತಮ್ಮ ನಾಯಕತ್ವಕ್ಕೆ ಸೆಡ್ಡು ಹೊಡೆಯಬಹುದಾದ ಲಿಂಗಾಯತ ನಾಯಕರಾದ ಎಚ್.ಕೆ. ಪಾಟೀಲ್, ಶ್ಯಾಮನೂರು ಶಿವಶಂಕರಪ್ಪ, ದಲಿತ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಮುಸ್ಲಿಂ ನಾಯಕರಾದ ಜಾಫರ್ ಶರೀಫ್, ಹಿಂದುಳಿದ ನಾಯಕರಾದ ಜನಾರ್ದನ ಪೂಜಾರಿ, ಆಸ್ಕರ್ ಫರ್ನಾಂಡಿಸ್, ಮಾರ್ಗರೆಟ್ ಆಳ್ವ, ವೀರಪ್ಪ ಮೊಯ್ಲಿಯವರನ್ನು ಅಧಿಕಾರದ ಗದ್ದುಗೆಯಿಂದ ದೂರವೇ ಇಟ್ಟಿದ್ದರು.

ಎಸ್‌ ಎಂ ಕೃಷ್ಣ

ಹಾಗೆಯೇ ಜನತಾ ದಳದ ಮುಖಂಡ, ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಬಹಿರಂಗವಾಗಿ ಸಮರ ಸಾರದ ಕೃಷ್ಣ, ಅವರು ಬಿಡದಿ ಬಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಬೇಕೆಂದಿದ್ದ ಮಹದಾಸೆಗೆ ಕಲ್ಲು ಹಾಕಿದರು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬಿಡದಿಯಿಂದ ದೇವನಹಳ್ಳಿಗೆ ವರ್ಗಾಯಿಸಿದರು. ದೇವೇಗೌಡರ ಕೆಂಗಣ್ಣಿಗೂ ಗುರಿಯಾದರು. ಕೃಷ್ಣ ಮತ್ತು ಗೌಡ- ಇಬ್ಬರೂ ಒಕ್ಕಲಿಗ ನಾಯಕರಾದರೂ, ಕೃಷಿ ಕುಟುಂಬದಿಂದ ಬಂದಿದ್ದರೂ, ಇಬ್ಬರಿಗೂ ಬೇಕಾಗಿದ್ದು ವಿಮಾನ ನಿಲ್ದಾಣವಲ್ಲ. ಅಭಿವೃದ್ಧಿ ಯೋಜನೆಯ ನೆಪದಲ್ಲಿ ಭೂ ಸ್ವಾಧೀನ, ಪರಿಹಾರ ಮತ್ತು ಕಾಮಗಾರಿಯಾಗಿತ್ತು. ರಿಯಲ್ ಎಸ್ಟೇಟ್ ವ್ಯವಹಾರ ಮುಖ್ಯವಾಗಿತ್ತು.   

ಇನ್ನು ಮಂಡ್ಯದ ಸ್ಥಳೀಯ ಮಟ್ಟದ ರಾಜಕಾರಣದಲ್ಲಿ ಎಸ್.ಎಂ.ಕೃಷ್ಣರು, ಆರಂಭದಿಂದಲೂ, ತಮ್ಮದೇ ಆದ ಗುಂಪನ್ನು ಕಟ್ಟಿಕೊಳ್ಳಲಿಲ್ಲ. ಆಗಲೂ ಇಲ್ಲ. ಅದರಲ್ಲೂ ಮಂಡ್ಯದ ಒಕ್ಕಲಿಗ ನಾಯಕರಾದ ಕೆ.ವಿ. ಶಂಕರಗೌಡ, ಜಿ. ಮಾದೇಗೌಡ ಮತ್ತು ಎಚ್.ಡಿ. ಚೌಡಯ್ಯನವರ ವಿರೋಧಿ ಪಾಳೆಯದಲ್ಲಿ ಗುರುತಿಸಿಕೊಂಡಿದ್ದರು. ನಟ ಅಂಬರೀಷ್ ಕೂಡ ಕೃಷ್ಣರ ವಿರುದ್ಧವಿದ್ದರು. ಆತ್ಮಾನಂದ ಮತ್ತು ನಟಿ ರಮ್ಯಾ ಮಾತ್ರ ಕೃಷ್ಣರ ಆಪ್ತರಲ್ಲಿ ಪ್ರಮುಖರು. ರಮ್ಯಾ ಒಂದು ಬಾರಿ ಸಂಸದೆಯಾಗಿದ್ದು ಬಿಟ್ಟರೆ, ಮಂಡ್ಯ ರಾಜಕಾರಣದತ್ತ ಮತ್ತೆ ತಲೆ ಹಾಕಲಿಲ್ಲ. ಹಾಗಾಗಿ ಮೊದಲಿನಿಂದಲೂ ಮಂಡ್ಯಕ್ಕೆ ಕೃಷ್ಣರು ಬರುತ್ತಾರೆಂದರೆ, ಅಲ್ಲಿ ಆತ್ಮಾನಂದರೊಬ್ಬರೇ ಕಾಣುತ್ತಿದ್ದುದು- ಅವರ ಎಲೀಟ್ ಗುಣವನ್ನು ಸಾರುತ್ತಿತ್ತು.  

ಈ ವರದಿ ಓದಿದ್ದೀರಾ?: ಬಾಬ್ರಿ ಮಸೀದಿ ಧ್ವಂಸಕ್ಕೆ 32 ವರ್ಷ: ಹಣವಿಲ್ಲದೆ ಸೊರಗುತ್ತಿದೆ ಹೊಸ ಮಸೀದಿ ಯೋಜನೆ

ಏತನ್ಮಧ್ಯೆ, ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕೆಂಬ ದುರಾಸೆಗೆ ಬಿದ್ದ ಕೃಷ್ಣರು, 2004ರಲ್ಲಿ, ಸರ್ಕಾರಕ್ಕೆ ಇನ್ನೂ ಆರು ತಿಂಗಳು ಇರುವಾಗಲೇ, ಅವಧಿಗೆ ಮುನ್ನವೇ ಚುನಾವಣೆಗೆ ಹೋದರು. ಕೇಂದ್ರದಲ್ಲಿ ವಾಜಪೇಯಿ ‘ಇಂಡಿಯಾ ಶೈನಿಂಗ್’ ಎಂದರೆ, ಕೃಷ್ಣರು ‘ಕರ್ನಾಟಕ ಕಂಗೊಳಿಸುತ್ತಿದೆ’ ಎಂದರು. ಮತ್ತೊಮ್ಮೆ ಪಾಂಚಜನ್ಯ ಮೊಳಗಿಸಿದರು. ಆದರೆ, ಪಕ್ಷದೊಳಗಿನ ಹಿರಿಯರನ್ನು ಹಿಂದಕ್ಕೆ ತಳ್ಳಿದ್ದು, ತೊಡಕಾಗಿ ಪರಿಣಮಿಸಿ ಹೀನಾಯವಾಗಿ ಸೋತರು. ಆದರೆ ಕೃಷ್ಣರ ಅದೃಷ್ಟ ಹೇಗಿತ್ತೆಂದರೆ, ಪಕ್ಷವನ್ನು ಸೋಲಿಸಿದರೂ ಅವರನ್ನು ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಗೆಲ್ಲಿಸಲಾಯಿತು. ಅಷ್ಟೇ ಅಲ್ಲ, ಕಾಂಗ್ರೆಸ್ ಪಕ್ಷ 2004ರಲ್ಲಿ ಮಹಾರಾಷ್ಟ್ರದ ರಾಜ್ಯಪಾಲರನ್ನಾಗಿ ನೇಮಕ ಮಾಡಿತು. ಕೃಷ್ಣರು ಅದನ್ನು ಪಕ್ಷನಿಷ್ಠೆಗೆ ಸಂದ ಸನ್ಮಾನ ಎಂದರು. ಸೋನಿಯಾ ಗಾಂಧಿಯವರ ಆಪ್ತಕೂಟದಲ್ಲಿ ಒಬ್ಬರಾದರು. ಆ ನಂತರ ಪ್ರಧಾನಿ ಮನಮೋಹನ್ ಸಿಂಗ್ ಕ್ಯಾಬಿನೆಟ್ ನಲ್ಲಿ, 2009ರಿಂದ 2012ರವರೆಗೆ ವಿದೇಶಾಂಗ ಖಾತೆ ಸಚಿವರಾಗಿಯೂ ಸೇವೆ ಸಲ್ಲಿಸಿದರು.

ಇಂಗ್ಲಿಷ್ ಗೌಡ

1962ರಿಂದ 2012ರವರೆಗೆ, ಸಾಮಾನ್ಯ ಕಾರ್ಯಕರ್ತನಿಂದ ಹಿಡಿದು ವರ್ಚಸ್ವಿ ನಾಯಕನವರೆಗೆ ಹಂತ ಹಂತವಾಗಿ ಬೆಳೆದ ಮಂಡ್ಯದ ಇಂಗ್ಲಿಷ್ ಗೌಡ ಎಂದೇ ಹೆಸರಾದ ಎಂ.ಎಸ್. ಕೃಷ್ಣರು, ಮಹತ್ವದ ಹುದ್ದೆಗಳಾದ ರಾಜ್ಯ ಸಚಿವ, ಕೇಂದ್ರ ಸಚಿವ, ವಿಧಾನಸಭಾ ಸ್ಪೀಕರ್, ಉಪಮುಖ್ಯಮಂತ್ರಿ, ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನ, ಕರ್ನಾಟಕದ ಮುಖ್ಯಮಂತ್ರಿ, ಮಹಾರಾಷ್ಟ್ರದ ರಾಜ್ಯಪಾಲ, ಕೇಂದ್ರದ ಕ್ಯಾಬಿನೆಟ್‌ನಲ್ಲಿ ವಿದೇಶಾಂಗ ಖಾತೆ ಸಚಿವ ಸ್ಥಾನ- ಹೀಗೆ ಹತ್ತು ಹಲವಾರು ಹುದ್ದೆಗಳನ್ನು ಅಲಂಕರಿಸಿ, ಆ ಸ್ಥಾನಗಳಿಗೆ ಗೌರವ ತಂದರು. ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದರು. ಕಾಂಗ್ರೆಸ್ ನಲ್ಲಿ ಇವರಷ್ಟು ಹುದ್ದೆಗಳನ್ನು ಪಡೆದವರು ಮತ್ತೊಬ್ಬ ಅದೃಷ್ಟಶಾಲಿ ಇಲ್ಲ ಎಂಬುದಕ್ಕೆ ಪಾತ್ರರಾದರು.

ಎಸ್‌ ಎಂ ಕೃಷ್ಣ

ಕಲೆ-ಕ್ರೀಡೆ-ಸಂಗೀತ-ಸಾಹಿತ್ಯಾಭಿರುಚಿಗಳ ಜೊತೆಗೆ ವಿದ್ವತ್ತು, ಹಿರಿತನ, ಅನುಭವ, ಪ್ರಭಾವವನ್ನು ಹೊಂದಿದ್ದ ಎಸ್.ಎಂ.ಕೃಷ್ಣ, ಸುಸಂಸ್ಕೃತ ರಾಜಕಾರಣಿ. ಭ್ರಷ್ಟಾಚಾರದ ಆರೋಪ, ವಿವಾದ, ರಾಜಕೀಯ ಏರಿಳಿತಕ್ಕೆ ತುತ್ತಾದರೂ ಧೃತಿಗೆಡದ ಸ್ಥಿತಪ್ರಜ್ಞ. ಅವರ ‘ಭಿನ್ನ ವ್ಯಕ್ತಿತ್ವ’ ಸಹಜವಾಗಿಯೇ ಸುದ್ದಿ ಮಾಧ್ಯಮಗಳು ಮತ್ತು ಜನರನ್ನು ಸೆಳೆಯುವಂಥಾದ್ದು. ಇಂತಹ ಕೃಷ್ಣರಿಗೆ ಕಾಂಗ್ರೆಸ್ ಕಲ್ಚರ್ ಗೊತ್ತಿತ್ತು. ಪೊಲಿಟಿಕಲ್ ಡಿಪ್ಲಮೆಸಿ ಅರಿವಿತ್ತು. ಅದು ಗೊತ್ತಿದ್ದರಿಂದಲೇ ಹೈಕಮಾಂಡ್ ಹೇಳಿದ ತಕ್ಷಣ, 2012ರಲ್ಲಿ ವಿದೇಶಾಂಗ ಖಾತೆಗೆ ರಾಜೀನಾಮೆ ಕೊಟ್ಟು ಕರ್ನಾಟಕಕ್ಕೆ ಬಂದರು. ರಾಜ್ಯಸಭೆಗೆ ಪಕ್ಷ ಟಿಕೆಟ್ ಕೊಡದಿದ್ದಾಗ, ‘ಟಿಕೆಟ್ ನಿರಾಕರಿಸಿದ್ದಕ್ಕೆ ಬೇಸರವಿದೆ, ಆದರೆ ಪಕ್ಷದ ತೀರ್ಮಾನಕ್ಕೆ ಬದ್ಧ’ ಎಂದು ಪ್ರಬುದ್ಧತೆ ಮೆರೆದರು.

ಎಲ್ಲ ಹಂತದ ಹುದ್ದೆಗಳನ್ನು ಅತ್ಯಂತ ಜವಾಬ್ದಾರಿಯಿಂದ ನಿಭಾಯಿಸಿದ, ಅನುಭವಿಸಿದ ಕೃಷ್ಣರೇನೋ ಪ್ರಬುದ್ಧತೆ ಮೆರೆದು ಮೌನವಾದರು. ಆದರೆ ಆ ಮೌನ ಕೃಷ್ಣರ ಪೊಲಿಟಿಕಲ್ ಕೆರಿಯರ್ ಮುಗಿಯಿತೆ, ಇವತ್ತಿನ ರಾಜಕಾರಣಕ್ಕೆ ಬೇಡವಾದರೆ, ಆರೋಗ್ಯ ಕೈ ಕೊಟ್ಟಿತೆ, ಕುಟುಂಬದ ಕಾಳಜಿಗೆ ಮಣಿದರೆ, ಕಾಂಗ್ರೆಸ್ ಪಕ್ಷದೊಳಗಿನ ವಿರೋಧಿಗಳ ಕೈ ಮೇಲಾಯಿತೆ ಎಂಬ ಪ್ರಶ್ನೆಗಳನ್ನೂ ಹುಟ್ಟುಹಾಕಿತು. ಹೌದು, ಈ ಎಲ್ಲ ಕಾರಣಗಳು ಕೃಷ್ಣರನ್ನು ರಾಜಕೀಯ ನಿವೃತ್ತಿಯ ಅಂಚಿಗೆ ತಂದು ನಿಲ್ಲಿಸಿದ್ದವು. ಜೊತೆಗೆ ಗುಪ್ತಚರ ವರದಿಗಳೂ ಕೃಷ್ಣರ ರಾಜಕೀಯ ವರ್ಚಸ್ಸನ್ನು ತೂಗಿನೋಡಿ, ನಿವೃತ್ತಿಗೆ ಸೂಚಿಸಿದ್ದವು.

ಬಿಜೆಪಿ ಸೇರಿ ಶಾಕ್ ನೀಡಿದ ಕೃಷ್ಣ

2012ರಿಂದ 2017ರವರೆಗೆ ಕಾಂಗ್ರೆಸ್ ಪಕ್ಷದಲ್ಲಿದ್ದೂ, ಇಲ್ಲದಂತಿದ್ದ ಎಸ್.ಎಂ.ಕೃಷ್ಣರು ಮೌನಕ್ಕೆ ಶರಣಾಗಿದ್ದರು. ಸಕ್ರಿಯ ರಾಜಕಾರಣದಿಂದ ದೂರ ಸರಿದಿದ್ದರೂ, ಬದುಕಿನುದ್ದಕ್ಕೂ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದ ಕೃಷ್ಣ ಅವರು, ಬಹುತ್ವ ಭಾರತದ ವೈವಿಧ್ಯತೆಯನ್ನು ಮೈಗೂಡಿಸಿಕೊಂಡವರು. ತಮಗೆ ದೊರೆತ ಅಧಿಕಾರದ ಸ್ಥಾನಗಳನ್ನು ಜಾತ್ಯತೀತತೆ, ಸಹೋದರತೆ, ಸಹಬಾಳ್ವೆಗಳನ್ನು ಗಟ್ಟಿಗೊಳಿಸುವಲ್ಲಿ ವಿನಿಯೋಗಿಸಿದವರು. ಅದೆಲ್ಲಕ್ಕಿಂತ ಹೆಚ್ಚಾಗಿ ಆಳವಾದ ಓದು, ಅಧ್ಯಯನಗಳಿಂದ ಅತ್ಯುತ್ತಮ ಸಂಸದೀಯಪಟು ಎನಿಸಿಕೊಂಡಿದ್ದವರು. ಸೋಮನಹಳ್ಳಿಯಿಂದ ಬಂದಿದ್ದರೂ, ಮಂಡ್ಯದ ಮಣ್ಣಿನ ಗುಣವನ್ನು ಅಳವಡಿಸಿಕೊಂಡವರಲ್ಲ. ಮಂಡ್ಯದ ಒಕ್ಕಲಿಗರು ಕೂಡ ಕೃಷ್ಣರನ್ನು ನಮ್ಮವರು ಎಂದು ಅಪ್ಪಿಕೊಳ್ಳಲಿಲ್ಲ. ಹಾಗಾಗಿಯೇ ಕೃಷ್ಣರು ಜಾತಿಯ ನಾಯಕರಾಗಿ ಗುರುತಿಸಿಕೊಳ್ಳಲಿಲ್ಲ. ಟೆಕ್ಸಾಸ್ ಕೃಷ್ಣ- ಮಾಡರೇಟ್ ಕೃಷ್ಣ- ಎಲೀಟ್ ಕೃಷ್ಣ ಎನ್ನುವುದು ಅವರ ನಡೆ-ನುಡಿಯಲ್ಲಿ ಎದ್ದುಕಾಣುತ್ತಿದ್ದುದರಿಂದ, ಅವರೂ ಕೂಡ ಜಾತಿಗೆ ಅಂಟಿ ಕೂರಲಿಲ್ಲ.

ಎಸ್‌ ಎಂ ಕೃಷ್ಣ

ಇಂತಹ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದ ಎಸ್.ಎಂ.ಕೃಷ್ಣರು, 84ನೇ ವಯಸ್ಸಿನಲ್ಲಿ, 2017ರಲ್ಲಿ ಇದ್ದಕ್ಕಿದ್ದಂತೆ ಬಿಜೆಪಿ ಸೇರಿ, ದೇಶದ ಪ್ರಜ್ಞಾವಂತ ನಾಗರಿಕರಿಗೆ ಶಾಕ್ ನೀಡಿದರು. ತಮ್ಮ ಹಿಂಬಾಲಕರನ್ನು, ಅಭಿಮಾನಿಗಳನ್ನು ಗೊಂದಲಗೊಳಿಸಿದರು. ಒಂದು ಧರ್ಮ ಒಂದು ದೇಶ ಎನ್ನುತ್ತಾ ಅಧಿಕಾರ ಹಿಡಿದು, ದೇಶದ ಬಹುತ್ವಕ್ಕೆ, ಸಹಬಾಳ್ವೆಗೆ, ನೆಮ್ಮದಿಯ ಬದುಕಿಗೆ ಬೆಂಕಿ ಇಟ್ಟಿದ್ದ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ರಾಜಕೀಯ ವಿಶ್ಲೇಷಕರನ್ನು ಆಘಾತಗೊಳಿಸಿತ್ತು. ‘ವೆಂಕಟಗಿರಿಗೌಡ, ಎಚ್.ಎನ್.ನಂಜೇಗೌಡ, ಡಿ.ಬಿ.ಚಂದ್ರೇಗೌಡರಂತಹ ಮುತ್ಸದ್ದಿಗಳನ್ನು ಮುಗಿಸಿದ ಬಿಜೆಪಿ, ಈಗ ಈ ಇಳಿ ವಯಸ್ಸಿನಲ್ಲಿ ಇವರಿಗೇಕೆ ಬೇಕಾಗಿತ್ತು?’ ಎನ್ನುವುದು ಸಾರ್ವಜನಿಕ ವಲಯದಿಂದ ಎದ್ದುಬಂದ ಪ್ರಶ್ನೆಯಾಗಿತ್ತು. ಹಾಗೆಯೇ, ‘ಕುಟುಂಬದ ಪ್ರೆಷರ್ ಇತ್ತು’ ಎನ್ನುವುದು ಅವರ ಆಪ್ತವಲಯದ ಮಾತಾಗಿತ್ತು. ಎಸ್.ಎಂ.ಕೃಷ್ಣರು ಬಿಜೆಪಿ ಸೇರಲು ಈ ಎಲ್ಲ ಕಾರಣಗಳು ಮುಖ್ಯವಾಗಿರಬಹುದು, ಇಲ್ಲದೆಯೂ ಇರಬಹುದು. ಎಲ್ಲವನ್ನು ಬಹಿರಂಗಪಡಿಸುವ ಅಗತ್ಯವಿಲ್ಲದಿರಲೂಬಹುದು. ಆದರೆ ಎರಡೇ ವರ್ಷಗಳ ಅಂತರದಲ್ಲಿ, 2019ರಲ್ಲಿ ಅವರ ಕುಟುಂಬದಲ್ಲಾದ ದುರಂತ ಘಟನೆಯೊಂದು- ಅಳಿಯ, ಕಾಫಿಡೇ ಮಾಲೀಕ ಸಿದ್ಧಾರ್ಥ ಹೆಗಡೆ ಆತ್ಮಹತ್ಯೆ- ಸಾರ್ವಜನಿಕ ವಲಯದ ಅನುಮಾನಗಳಿಗೆ ಉತ್ತರ ನೀಡಿತ್ತು.

ನಿವೃತ್ತ ಬದುಕು

ಕುಟುಂಬದಲ್ಲಾದ ದುರಂತ ಸಾವಿನಿಂದ ಜರ್ಜರಿತಗೊಂಡ ಎಸ್.ಎಂ. ಕೃಷ್ಣರು, 2023ರಲ್ಲಿ ರಾಜಕೀಯ ಬದುಕಿಗೆ ನಿವೃತ್ತಿ ಘೋಷಿಸಿದರು. ಅವರ ನಿರ್ಧಾರದ ಹಿನ್ನೆಲೆಯಲ್ಲಿ ಎರಡು ಮುಖ್ಯ ವಿಷಯಗಳನ್ನು ಚರ್ಚಿಸಬಹುದು. ಒಂದು ಕೃಷ್ಣರಂತಹ ಮುತ್ಸದ್ದಿ ರಾಜಕಾರಣಿಯನ್ನು ಬಿಜೆಪಿ ಹೇಗೆ ‘ದಾಳಿ’ ಎಂಬ ಇಕ್ಕಳಕ್ಕೆ ಸಿಕ್ಕಿಸಿಕೊಂಡು ವ್ಯಕ್ತಿತ್ವಹರಣ ಮಾಡಿತು ಎನ್ನುವುದು. ಮತ್ತೊಂದು ಕೃಷ್ಣರಂತಹ ಬಲಾಢ್ಯ ಮತ್ತು ಬಹುಸಂಖ್ಯಾತ ಕೋಮಿನ ನಾಯಕನನ್ನೂ ಹೇಗೆ ನಗಣ್ಯ ಮಾಡಿತು ಎನ್ನುವುದು. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಿಯಲ್ ಎಸ್ಟೇಟ್, ಗಣಿಗಾರಿಕೆಯನ್ನು ಪ್ರೋತ್ಸಾಹಿಸಿದರು, ಪತ್ರಕರ್ತರಿಗೆ ಆಮಿಷವೊಡ್ಡಿ ದಾರಿತಪ್ಪಿಸಿದರು, ಡಿಕೆ ಶಿವಕುಮಾರ್ ಥರದ ರಾಜಕಾರಣಿಗಳನ್ನು ಬೆಳೆಸಿದರು ಎಂಬ ಅಪವಾದಗಳಿದ್ದರೂ; ಅವರು ಜಾರಿಗೆ ತಂದ ಹತ್ತು ಹಲವು ಕಾರ್ಯಕ್ರಮಗಳು, ಯೋಜನೆಗಳು ಒಂದು ಸರ್ಕಾರ ಹೊಂದಿರಬೇಕಾದ ಅಭಿವೃದ್ಧಿಯ ಮುನ್ನೋಟಕ್ಕೆ ಮಾದರಿಯಾಗಿದ್ದವು ಎನ್ನುವುದರಲ್ಲಿ ಎರಡು ಮಾತಿಲ್ಲ.

ಇಂತಹ ವಿಶಿಷ್ಟ ಒಳನೋಟಗಳುಳ್ಳ ರಾಜಕಾರಣಿಯನ್ನು ಬಿಜೆಪಿ ಸಮರ್ಪಕವಾಗಿ ಬಳಸಿಕೊಳ್ಳಲಿಲ್ಲ ಎನ್ನುವ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬಂದದ್ದೂ ಇದೆ. ಹಾಗೆಯೇ ಕೃಷ್ಣರೂ ಕೂಡ ಬಿಜೆಪಿಯನ್ನು ಮನಪೂರ್ವಕವಾಗಿ ಒಪ್ಪಿಕೊಳ್ಳದೆ, ಅಪ್ಪಿಕೊಳ್ಳದೆ ‘ಅಂತರ’ ಕಾಯ್ದುಕೊಂಡದ್ದೂ ಇದೆ. ಇದನ್ನು ರಾಜಕಾರಣದ ಅವಕಾಶವಾದಿತನ ಎನ್ನಬೇಕೋ, ಇವತ್ತಿನ ರಾಜಕಾರಣವನ್ನು ನೋಡುವ ನೋಟವನ್ನೇ ಬದಲಿಸಿಕೊಳ್ಳಬೇಕೋ, ಅರ್ಥವಾಗುತ್ತಿಲ್ಲ.

ಒಂದಂತೂ ಸತ್ಯ, ಅಧಿಕಾರ ಎನ್ನುವುದು ಕೆಲವರಿಗೆ ಉತ್ತರದಾಯಿ ಎಂಬ ಎಚ್ಚರವಾದರೆ; ಹಲವರಿಗೆ ಜನಪ್ರಿಯತೆ, ಸುಖ, ಸಂಪತ್ತು, ವೈಭೋಗವನ್ನೆಲ್ಲ ದಯಪಾಲಿಸುವ ಸುಲಭದ ಹಾದಿಯಾಗಿದೆ. ಅಂತವರಿಗೆ ನಿರೀಕ್ಷೆಗೂ ಮೀರಿದ ಆಘಾತಗಳನ್ನು ತಂದೊಡ್ಡುತ್ತದೆ. ಕೃಷ್ಣರ ರಾಜಕೀಯ ನಡೆ ಅಂತಹವರಿಗೆ ಒಂದು ಪಾಠ, ಅಲ್ಲವೇ?

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಟ್ಟಣ ಪಂಚಾಯತ್ ಚುನಾವಣೆ: ಮೂರರಲ್ಲಿ ಕಾಂಗ್ರೆಸ್‌ಗೆ ಮೇಲುಗೈ; ಎರಡರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜಯ

ಕರ್ನಾಟಕದಲ್ಲಿ ಐದು ಪ್ರದೇಶಗಳು ತಾಲೂಕು ಸ್ಥಾನಕ್ಕೇರಿದ ಬಳಿಕ ರಚನೆಯಾದ ಪಟ್ಟಣ ಪಂಚಾಯಿತಿಗೆ...

ಅಲೆಮಾರಿಗಳಿಗೆ ಅನ್ಯಾಯ; ಸರ್ಕಾರದ ವಿರುದ್ಧ ಭುಗಿಲೆದ್ದ ಜನಾಕ್ರೋಶ

ಮೀಸಲು ಹಂಚಿಕೆಯ ವಿವರಗಳು ಸ್ಪಷ್ಟವಾಗುತ್ತಿದ್ದಂತೆ ಸಂಭ್ರಮದ ಮನೆಯಲ್ಲಿ ಸಾವಿನ ಸೂತಕ ಆವರಿಸತೊಡಗಿತು....

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

Download Eedina App Android / iOS

X