- ಸತ್ಯಾಗ್ರಹ ನಡೆಸುವುದಾಗಿ ಘೋಷಿಸಿರುವ ಸಚಿನ್ ಪೈಲಟ್
- ಪಕ್ಷ ವಿರೋಧಿ ಚಟುವಟಿಕೆ ಎಂದು ಪರಿಗಣಿಸುವ ಎಚ್ಚರಿಕೆ
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಮುನಿಸಿಕೊಂಡು ಮಂಗಳವಾರ (ಏಪ್ರಿಲ್ 11) ದಿನವಿಡೀ ಉಪವಾಸ ಸತ್ಯಾಗ್ರಹ ಘೋಷಿಸಿರುವ ಸಚಿನ್ ಪೈಲಟ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಎಚ್ಚರಿಕೆ ನೀಡಿದೆ.
ಗೆಹ್ಲೋಟ್ ಅವರ ಈ ಹಿಂದಿನ ವಸುಂಧರಾ ರಾಜೆ ಅವರ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಬೇಕು ಎಂದು ಸಚಿನ್ ಪೈಲಟ್ ದಿನವಿಡೀ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಿದ್ದಾರೆ.
ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಈ ಬಿಕ್ಕಟ್ಟು ತಲೆದೋರಿರುವುದಕ್ಕೆ ಕಾಂಗ್ರೆಸ್ ಹೈಕಮಾಂಡ್ ಬೇಸರ ವ್ಯಕ್ತಪಡಿಸಿದೆ. ಈ ಕುರಿತು ಸಚಿನ್ ಪೈಲಟ್ ಅವರಿಗೆ ಸೋಮವಾರ (ಏಪ್ರಿಲ್ 10) ರಾತ್ರಿ ಪತ್ರವೊಂದನ್ನು ಬರೆದು ಎಚ್ಚರಿಸಿದೆ. “ಸಚಿನ್ ಪೈಲಟ್ ಅವರ ನಿರ್ಧಾರವು ಪಕ್ಷದ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ. ಇದನ್ನು ಪಕ್ಷ ವಿರೋಧಿ ಚಟುವಟಿಕೆ ಎಂದು ಪರಿಗಣಿಸಲಾಗುವುದು” ಎಂದು ಕಾಂಗ್ರೆಸ್ ವರಿಷ್ಠರು ಸ್ಪಷ್ಟಪಡಿಸಿದ್ದಾರೆ.
ಪ್ರತಿಭಟನೆ ಕೈಗೊಂಡರೆ ಪೈಲಟ್ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಕಾಂಗ್ರೆಸ್ ನಾಯಕತ್ವ ಸ್ಪಷ್ಟಪಡಿಸಿದೆ.
ಕಾಂಗ್ರೆಸ್ ನಾಯಕ ಹಾಗೂ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಈ ಹಿಂದಿನ ವಸುಂಧರಾ ರಾಜೆ ಸರ್ಕಾರದ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ. ಇದರ ವಿರುದ್ಧ ತನಿಖೆ ನಡೆಸಲು ಒತ್ತಾಯಿಸಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಸಚಿನ್ ಪೈಲಟ್ ಭಾನುವಾರ (ಏಪ್ರಿಲ್ 9) ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದರು.
ಸಚಿನ್ ಪೈಲಟ್ ಅವರ ಪ್ರತಿಭಟನೆ ಘೋಷಣೆ ಬಗ್ಗೆ ರಾಜಸ್ಥಾನ ಕಾಂಗ್ರೆಸ್ ಉಸ್ತುವಾರಿ ಸುಖ್‌ಜಿಂದರ್ ಸಿಂಗ್ ರಾಂಧವ ಸೋಮವಾರ ರಾತ್ರಿ ಎಚ್ಚರಿಕೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಜ್ಯೋತಿಬಾ ಜನ್ಮದಿನ | ಬ್ರಾಹ್ಮಣಶಾಹಿ ವಿರುದ್ಧ ಹೋರಾಟ ನಡೆಸಿದವರು ಮಹಾತ್ಮ ಫುಲೆ
“ಪೈಲಟ್ ಅವರ ಸತ್ಯಾಗ್ರಹ ಪಕ್ಷ ವಿರೋಧಿ ಚಟುವಟಿಕೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಸಮಸ್ಯೆಗಳಲ್ಲಿದ್ದಲ್ಲಿ ಪಕ್ಷದೊಳಗೇ ಇತ್ಯರ್ಥಪಡಿಸಿಕೊಳ್ಳಬೇಕು. ಅದನ್ನು ಮಾಧ್ಯಮ ಮತ್ತು ಸಾರ್ವಜನಿಕಗೊಳಿಸಬಾರದು” ಎಂದು ಸುಖ್‌ಜಿಂದರ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಸಚಿನ್ ಪೈಲಟ್ ಅವರ ಪ್ರತಿಭಟನೆಯಲ್ಲಿ ಭಾಗವಹಿಸಲು ಯೋಜಿಸುತ್ತಿರುವ ಅವರ ನಿಷ್ಠರಿಗೂ ಕಾಂಗ್ರೆಸ್ ಹೈಕಮಾಂಡ್ ಸೋಮವಾರ ನೀಡಿದ ಸಂದೇಶ ಎಚ್ಚರಿಕೆಯ ಗಂಟೆಯಾಗಿದೆ.