ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದ ಗೌಡ ನಿನ್ನೆ ಹಾಸನದಲ್ಲಿ ರಾಜಕೀಯ ನಿವೃತ್ತಿ ಘೋಷಿಸಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ಬಿ ಎಸ್ ಯಡಿಯೂರಪ್ಪ, ಹೈಕಮಾಂಡ್ ಸೂಚನೆಯ ಮೇರೆಗೆ ಸದಾನಂದ ಗೌಡರು ತಮ್ಮ ಮುಂದಿನ ರಾಜಕೀಯ ನಿರ್ಧಾರ ಪ್ರಕಟಿಸಿದ್ದಾರೆ ಎಂದು ತಿಳಿಸಿದ್ದಾರೆ.
2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಟಿಕೆಟ್ ಸಿಗಲಾರದು ಎನ್ನುವ ಕಾರಣಕ್ಕೆ ಅವರು ಚುನಾವಣಾ ರಾಜಕೀಯದಿಂದ ದೂರ ಸರಿಯವ ನಿರ್ಧಾರ ಮಾಡಿದರೇ ಎಂದು ಬೆಂಗಳೂರು ನಗರದಲ್ಲಿ ಇಂದು ‘ಸಿಟಿ ರೌಂಡ್ಸ್’ ವೇಳೆ ಮಾಧ್ಯಮ ಪ್ರತಿನಿಧಿಗಳು ಯಡಿಯೂರಪ್ಪನವರನ್ನು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಬಿಎಸ್ವೈ, ಸದಾನಂದ ಗೌಡರು ಚುನಾವಣಾ ರಾಜಕೀಯ ಮಾತ್ರ ತೊರೆಯಲಿದ್ದಾರೆ. ಅದು ಹೈಕಮಾಂಡ್ ಕೂಡ ಸೂಚಿಸಿತ್ತು. ಆದರೆ, ಪಕ್ಷದ ಚಟುವಟಿಕೆಗಳಲ್ಲಿ ಅವರು ಇನ್ನು ಮುಂದೆ ಸಕ್ರಿಯವಾಗಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.
ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವುದು ಬೇಡ ಅಂತ ನೇರವಾಗಿ ಹೈಕಮಾಂಡ್ ವರಿಷ್ಠರು ಸದಾನಂದ ಗೌಡರಿಗೆ ಹೇಳಿದ್ದಾರೆ; ಆದರೆ ಪಕ್ಷದ ಬೇರೆಲ್ಲ ಚಟುವಟಿಕೆಗಳಲ್ಲಿ ಅವರು ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಲಿದ್ದಾರೆ ಎಂದರು.
ಬಿಜೆಪಿ ನಾಯಕ ಸದಾನಂದ ಗೌಡರು ಪ್ರಸ್ತುತ ಲೋಕಸಭೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. 2024ರ ಚುನಾವಣೆಯಲ್ಲಿ ಪಕ್ಷವು ಅವರನ್ನು ಕಣಕ್ಕಿಳಿಸುವುದಿಲ್ಲ, ಅವರಿಗೆ ಟಿಕೆಟ್ ನೀಡುವುದಿಲ್ಲ ಎಂಬ ವದಂತಿಗಳ ನಡುವೆಯೇ ನಿನ್ನೆ(ನ.8 ಬುಧವಾರ) ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ರಾಜಕೀಯ ನಿವೃತ್ತಿಯನ್ನು ಘೋಷಿಸಿದ್ದರು.
ಇದನ್ನು ಓದಿದ್ದೀರಾ? ರಾಜಕೀಯ ನಿವೃತ್ತಿ ಘೋಷಿಸಿದ ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದ ಗೌಡ
ಘೋಷಣೆಯ ವೇಳೆ, ‘ಮೂವತ್ತು ವರ್ಷ ನನ್ನ ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ. ಯಡಿಯೂರಪ್ಪ ಬಿಟ್ಟರೆ ನಮ್ಮ ಪಕ್ಷದಲ್ಲಿ ನಾನೇ ನಂಬರ್ ಒನ್ ಫಲಾನುಭವಿ. 10 ವರ್ಷ ಶಾಸಕ, 20 ವರ್ಷ ಸಂಸದ, 1 ವರ್ಷ ಮುಖ್ಯಮಂತ್ರಿ, ಒಂದೂವರೆ ವರ್ಷ ವಿರೋಧ ಪಕ್ಷದ ನಾಯಕ, ಐದು ವರ್ಷ ವಿಧಾನಸಭೆಯಲ್ಲಿ ವಿರೋಧ ಪಕ್ಷದ ಉಪನಾಯಕ, ನಾಲ್ಕೂವರೆ ವರ್ಷ ಪಕ್ಷದ ರಾಜ್ಯಾಧ್ಯಕ್ಷ, ಕೇಂದ್ರದಲ್ಲಿ ಏಳು ವರ್ಷ ನರೇಂದ್ರ ಮೋದಿ ಜೊತೆ ಕ್ಯಾಬಿನೆಟ್ ಮಂತ್ರಿಯಾಗಿದ್ದಾನೆ. ಇಷ್ಟು ಸಿಕ್ಕಿಯೂ ಕೂಡ ಸಂತೋಷ ಪಡದ ರಾಜಕಾರಣಿ, ಅವನು ರಾಜಕಾರಣಿ ಅಲ್ಲ. ಅವನನ್ನು ಸ್ವಾರ್ಥಿ ಎಂದು ತಿಳಿದುಕೊಳ್ಳುತ್ತೇನೆ’ ಎಂದು ಸದಾನಂದ ಗೌಡ ತಿಳಿಸಿದ್ದರು.