ಅನಂತ್ ಅಂಬಾನಿಯ ಪಾದಯಾತ್ರೆ ಪ್ರಹಸನಕ್ಕೆ ಸನಾತನ ಧರ್ಮವೇ ಸರಕು!

Date:

Advertisements
ದೇಶದ ಪ್ರಧಾನಿ ಮೋದಿ(Modi) ಹಾಗೂ ದೇಶದ ಅತಿದೊಡ್ಡ ಶ್ರೀಮಂತ ಅಂಬಾನಿ(Ambani)- ಇಬ್ಬರೂ ಸನಾತನ ಧರ್ಮದ ಬಗ್ಗೆಯೇ ಮಾತನಾಡುತ್ತಾರೆ. ಅವರು ರಾಜಕಾರಣಿ, ಇವರು ಉದ್ಯಮಿ. ಇಬ್ಬರಿಗೂ ಅದರಿಂದ ಲಾಭವಿದೆ. ಇಬ್ಬರಿಗೂ ಅದೇ ಅಸ್ತ್ರ ಮತ್ತು ಗುರಾಣಿಯಾಗಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ನಿರ್ದೇಶಕ ಅನಂತ್ ಅಂಬಾನಿಯವರು ಗುಜರಾತಿನ ಜಾಮ್ ನಗರದಿಂದ ದ್ವಾರಕೆಯವರೆಗೆ ಹಮ್ಮಿಕೊಂಡಿದ್ದ 140 ಕಿಲೋಮೀಟರ್ ದೂರದ ಆಧ್ಯಾತ್ಮಿಕ ಪಾದಯಾತ್ರೆಯನ್ನು ಪೂರ್ಣಗೊಳಿಸಿದ್ದಾರೆ.

ಅನಂತ್ ಅಂಬಾನಿ ದೇಶದ ಅತ್ಯಂತ ಶ್ರೀಮಂತ ಉದ್ಯಮಿಗಳಾದ ಮುಖೇಶ್ ಮತ್ತು ನೀತಾ ಅಂಬಾನಿಯವರ ಕಿರಿಯ ಪುತ್ರ. 30 ವರ್ಷಕ್ಕೇ 35 ಸಾವಿರ ಕೋಟಿಯ ಒಡೆಯ. ಇಂತಹ ಅನಂತ್ ಅಂಬಾನಿ, ಕೋಟಿಗಟ್ಟಲೆ ವ್ಯವಹಾರವನ್ನು ಬಿಟ್ಟು, ಆಧ್ಯಾತ್ಮಿಕ ಪಾದಯಾತ್ರೆ ಹಮ್ಮಿಕೊಂಡಿದ್ದು ಏಕೆ ಎಂಬ ಪ್ರಶ್ನೆ ಎದ್ದಿದೆ. ಸನಾತನ ಧರ್ಮದತ್ತ ಒಲವು ತೋರಿದ್ದು ಕುತೂಹಲ ಕೆರಳಿಸಿದೆ.

ಜೊತೆಗೆ ಅನಂತ್ ಅಂಬಾನಿಯವರ ಆಧ್ಯಾತ್ಮಿಕ ಪಾದಯಾತ್ರೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ. ಅದರಲ್ಲೂ ಸೋಷಿಯಲ್ ಮೀಡಿಯಾಗಳಲ್ಲಿ ಟ್ರೆಂಡಿಂಗ್‌ನಲ್ಲಿದೆ. ಹಿಂದುಳಿದ ಭಯಕ್ಕೆ ಬಿದ್ದ ಸುದ್ದಿ ಮಾಧ್ಯಮಗಳು, ಅನಂತ್ ಹೆಜ್ಜೆಗೆ ಹೆಜ್ಜೆ ಹಾಕಿವೆ. ಪ್ರತಿ ನಡೆಯನ್ನು ತೂಕದ ನಡೆಯನ್ನಾಗಿ ಚಿತ್ರಿಸಿವೆ, ಚಿತ್ರವತ್ತಾಗಿ ಬಣ್ಣಿಸಿ ದೇಶದ ಜನತೆಗೆ ಬಡಿಸಿವೆ. ಹಾಗಾಗಿ ಅದು ಅನಂತ್ ಮಾಡಿದ ಪಾದಯಾತ್ರೆಗಿಂತ, ಮಾಧ್ಯಮಗಳು ಮಾಡಿದ ಪಾದಯಾತ್ರೆ ಎಂದು ಮತ್ತೊಂದು ಸುದ್ದಿ ಮಾಡಬೇಕಾಗಿದೆ, ಇರಲಿ.

Advertisements

ಇದನ್ನು ಓದಿದ್ದೀರಾ?: ಶಿಂದೆ ಟೀಕೆ ಪ್ರಕರಣ | ಎಫ್‌ಐಆರ್ ರದ್ದು ಕೋರಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ ಕುನಾಲ್ ಕಾಮ್ರಾ

ಅನಂತ್ ಅಂಬಾನಿಯವರ ಆರೋಗ್ಯ ಸ್ಥಿತಿ ಅಷ್ಟು ಸರಿ ಇಲ್ಲ. 108 ಕೆಜಿ ತೂಗುವ ಅಗಾಧ ದೇಹವನ್ನು ಹೊತ್ತುಕೊಂಡು ನಡೆಯಬೇಕಾದ ಅನಂತ್‌ ಅಂಬಾನಿಗೆ, ಅಪರೂಪದ ಹಾರ್ಮೋನ್ ಅಸ್ವಸ್ಥತೆಯಾದ ಕುಶಿಂಗ್ ಸಿಂಡ್ರೋಮ್ ಇದೆ. ಜೊತೆಗೆ ಭಾರೀ ಬೊಜ್ಜು, ಆಸ್ತಮಾ ಮತ್ತು ತೀವ್ರ ಶ್ವಾಸಕೋಶದ ಕಾಯಿಲೆಯಿಂದಲೂ ನರಳುತ್ತಿದ್ದಾರೆ. ದೇಹ ಮತ್ತು ಆರೋಗ್ಯದ ಸ್ಥಿತಿ ಹೀಗಿರುವಾಗ ಪಾದಯಾತ್ರೆಯ ಅಗತ್ಯವೇನು ಎಂಬುದು ಹಲವರ ಪ್ರಶ್ನೆಯಾಗಿತ್ತು.

ಏಪ್ರಿಲ್ 10ರಂದು ಜನಿಸಿದ ಅನಂತ್, ತಮ್ಮ 30ನೇ ಜನ್ಮದಿನವನ್ನು ದ್ವಾರಕೆಯ ಶ್ರೀ ದ್ವಾರಕಾಧೀಶ ದೇವಸ್ಥಾನಕ್ಕೆ ಪಾದಯಾತ್ರೆಯ ಮೂಲಕ ತೆರಳಿ ಪೂಜೆ ಸಲ್ಲಿಸುವ ಮೂಲಕ ಆಚರಿಸಿಕೊಳ್ಳಬೇಕೆಂಬ ಹಂಬಲವನ್ನು ತಂದೆ ಮುಖೇಶ್, ತಾಯಿ ನೀತಾ ಬಳಿ ವ್ಯಕ್ತಪಡಿಸಿದ್ದರಂತೆ. ಅದಕ್ಕೆ ಅವರು ಅನಂತ್‌ರಿಗೆ ಝೆಡ್ ಸೆಕ್ಯುರಿಟಿಗಳಿಗೆ ಕೇಸರಿ ವಸ್ತ್ರ ತೊಡಿಸಿದ್ದರು. ಅವರ ಹಿಂದೆ ಹೆಜ್ಜೆ ಹಾಕಲು ಆಳುಗಳು, ವೈಭವೋಪೇತ ಕಾರುಗಳು, ಸಕಲ ಸೌಲಭ್ಯಗಳನ್ನು ವ್ಯವಸ್ಥೆ ಮಾಡಿದ್ದರು.

ಶ್ರೀಮಂತ ಉದ್ಯಮಿಯೊಬ್ಬರ ಪುತ್ರ ಸಾಮಾನ್ಯನಂತೆ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರೆ, ಸುಮ್ಮನಿರುವುದುಂಟೇ? ಅವರು ಶ್ರೀಮಂತರು, ಪ್ರಧಾನಿಯ ಹೆಗಲ ಮೇಲೆ ಕೈಹಾಕಿ ಮಾತನಾಡಿಸುವಷ್ಟು ಪ್ರಭಾವಿಗಳು. ಆ ಕಾರಣಕ್ಕೇ ಅವರನ್ನು ಕಾಣಲು, ಕೈ ಮುಗಿಯಲು, ಕಾಲಿಗೆ ಬೀಳಲು, ಫೋಟೋ ಕ್ಲಿಕ್ಕಿಸಲು, ಬೆನ್ನಿಗೆ ನಿಂತು ಬೆಂಬಲಿಸಲು ಜನ ಸಿದ್ಧರಾಗಿದ್ದರು. ಅದರಲ್ಲೂ ಅದು ದೇವರು-ಧರ್ಮಕ್ಕೆ ಸಂಬಂಧಿಸಿದ್ದರಿಂದ, ಅಪಸ್ವರವೆತ್ತುವವರು ಕೂಡ ತಲೆಮರೆಸಿಕೊಂಡಿದ್ದರು.

ಇದನ್ನು ಓದಿದ್ದೀರಾ?: ವಕ್ಫ್‌ ತಿದ್ದುಪಡಿ ಮಸೂದೆ 2025 | ತಾವೇ ಗೊಂದಲ ಸೃಷ್ಟಿಸಿ, ಸಮಸ್ಯೆ ಬಗೆಹರಿಸುತ್ತೇವೆ ಎನ್ನುತ್ತಿದೆ ಮೋದಿ ಸರ್ಕಾರ!

ಪಾದಯಾತ್ರೆ ಮುಗಿಸುವುದನ್ನೇ ಕಾಯುತ್ತಿದ್ದ ಮಾಧ್ಯಮಗಳು, ಅನಂತ್ ಅಂಬಾನಿಗೆ ಮುಗಿಬಿದ್ದಿವು. ಅದಕ್ಕಾಗಿಯೇ ಕಾಯುತ್ತಿದ್ದ ನೂರರ ಗಡಿದಾಟಿದ ಹಿರಿಯನಂತೆ, ‘ನಾನು ನಮ್ಮ ಯುವಜನತೆಗೆ ಹೇಳುವುದೇನೆಂದರೆ, ಸನಾತನ ಧರ್ಮದ ಬಗ್ಗೆ ನಂಬಿಕೆ ಇಡಬೇಕು. ದೇವರನ್ನು ಭಕ್ತಿ-ಗೌರವದಿಂದ ಪೂಜಿಸಬೇಕು. ದೇವರಿರುವಾಗ, ಹೆದರುವ ಅಗತ್ಯವೇ ಇಲ್ಲ’ ಎಂಬ ಅಣಿಮುತ್ತುಗಳನ್ನು ಉದುರಿಸಿದರು.

ಅನಂತ್ ಹುಟ್ಟುವಾಗಲೇ ಚಿನ್ನದ ಚಮಚೆಯನ್ನು ಬಾಯಲ್ಲಿಟ್ಟುಕೊಂಡು ಹುಟ್ಟಿದವರು. 30ನೇ ವಯಸ್ಸಿಗೇ 35 ಸಾವಿರ ಕೋಟಿ ಒಡೆಯರು. ಸಾಲದೆಂದು, ಅವರ ಅಪ್ಪ-ಅಮ್ಮ ಕೂಡ ಅದೆಷ್ಟೋ ಕೋಟಿಗಳ ಒಡೆಯರು. ಕುಬೇರನೇ ಅವರ ಮನೆಯಲ್ಲಿ ಕಾಲು ಮುರಿದುಕೊಂಡು ಬಿದ್ದಿರುವಾಗ; ದೇಶದ ಪ್ರಧಾನಿಯೇ ನಡುಬಗ್ಗಿಸಿ ನಮಸ್ಕರಿಸುವಾಗ ಹೆದರಬೇಕಾದವರು ಯಾರು?

ಇನ್ನು ಅನಂತ್ ಅಂಬಾನಿ ಮಹಾನ್ ದೈವಭಕ್ತರು. ದೇಶದ ಧಾರ್ಮಿಕ ತಾಣಗಳಾದ ಬದ್ರಿನಾಥ, ಕೇದಾರನಾಥ, ಕಾಮಾಕ್ಯ, ನಾಥದ್ವಾರ, ಕಾಳಿಘಾಟ್ ಮತ್ತು ಕುಂಭಮೇಳದಲ್ಲಿ ಮುಳುಗೆದ್ದವರು. ತಮ್ಮ ಪಾದಯಾತ್ರೆಯುದ್ದಕ್ಕೂ ಹನುಮಾನ್ ಚಾಲೀಸಾ, ಸುಂದರಕಾಂಡ ಮತ್ತು ದೇವಿ ಸ್ತೋತ್ರವನ್ನು ಪಠಿಸುತ್ತಿದ್ದರು.

ಅನಂತ್ ಅಂಬಾನಿ ಆಡುವುದನ್ನು-ಮಾಡುವುದನ್ನು ಇಂದು ದೇಶದ ರಾಜಕಾರಣಿಗಳು, ಸನ್ಯಾಸಿಗಳು, ಮಠಾಧೀಶರು ಕೂಡ ಆಡುತ್ತಿದ್ದಾರೆ-ಮಾಡುತ್ತಿದ್ದಾರೆ. ಅದನ್ನು ಪತ್ರಕರ್ತರು ಕೂಡ ಅತಿರಂಜಿತವಾಗಿ ವರ್ಣಿಸುತ್ತಿದ್ದಾರೆ. ಏಕೆಂದರೆ ಸನಾತನ ಧರ್ಮಕ್ಕೆ ಸದ್ಯ ಮಾರ್ಕೆಟ್ ಇದೆ. ಅದನ್ನೇ ಮುಂದಿಟ್ಟು ಮತ್ತೊಂದು ಧರ್ಮದವರನ್ನು ಸದೆಬಡಿಯಬಹುದಾಗಿದೆ. ಅದರ ಬಲದಿಂದ ಅಧಿಕಾರಕ್ಕೆ ಏರಬಹುದಾಗಿದೆ. ಅಧಿಕಾರದ ಬಲದಿಂದ ಏನೆಲ್ಲ ಮಾಡಬಹುದೋ, ಅದೆಲ್ಲವನ್ನು ಮಾಡಲಾಗುತ್ತಿದೆ. ದೇಶದ ಜನತೆ ಸುಮ್ಮನೆ ನೋಡುತ್ತಿದೆ.

ಅನಂತ್ ಅಂಬಾನಿ1 1

ಹಾಗಾಗಿ ದೇಶದ ಪ್ರಧಾನಿಯಾದ ಮೋದಿ ಹಾಗೂ ದೇಶದ ಅತಿದೊಡ್ಡ ಶ್ರೀಮಂತ ಅಂಬಾನಿ- ಇಬ್ಬರೂ ಸನಾತನ ಧರ್ಮದ ಬಗ್ಗೆಯೇ ಮಾತನಾಡುತ್ತಾರೆ. ಸನಾತನ ಧರ್ಮವೇ ಶ್ರೇಷ್ಠ ಎನ್ನುತ್ತಾರೆ. ದೇವರನ್ನು ನಂಬಿ, ಒಳ್ಳೆಯದಾಗುತ್ತದೆ ಎನ್ನುತ್ತಾರೆ. ಆಚರಣೆಯನ್ನು ಆದಷ್ಟು ಸಾರ್ವಜನಿಕಗೊಳಿಸುತ್ತಾರೆ. ಅವರು ರಾಜಕಾರಣಿ, ಇವರು ಉದ್ಯಮಿ. ಇಬ್ಬರಿಗೂ ಅದರಿಂದ ಲಾಭವಿದೆ. ಇಬ್ಬರಿಗೂ ಅದೇ ಅಸ್ತ್ರ ಮತ್ತು ಗುರಾಣಿಯಾಗಿದೆ.

ಇಂತಹ ಸಂದರ್ಭದಲ್ಲಿ, ಬದುಕಲು ಕಲಿಯಿರಿ ಪಠ್ಯ ಅಳವಡಿಸಿಕೊಂಡಿರುವ ಇವತ್ತಿನ ಸುದ್ದಿ ಮಾಧ್ಯಮಗಳು ಪಾದಯಾತ್ರೆ ಮಾಡುವ ಅಂಬಾನಿಯನ್ನು ಹಾಡಿ ಹೊಗಳದೆ, ಧರ್ಮಸ್ಥಳಕ್ಕೆ ಕಾಲ್ನಡಿಗೆಯಲ್ಲಿ ಹೋಗುವ ಬಡ ಬೋರನ ಬಗ್ಗೆ ಬರೆಯುವುದುಂಟೇ? ಗವಿಯಲ್ಲಿ ಕೂತು ಧ್ಯಾನ ಮಾಡುವ ಮೋದಿಯನ್ನು ತೋರಿಸದೆ, ಬರಿಗಾಲಿನಲ್ಲಿ ತಿರುಪತಿ ಬೆಟ್ಟ ಹತ್ತುವ ಹಳ್ಳಿ ಹೈದನನ್ನು ತೋರಿಸುವುದುಂಟೇ?

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರಾಖಂಡ | ಕಪಾಳ ಮೋಕ್ಷ ಮಾಡಿದ ಶಿಕ್ಷಕನಿಗೆ ಗುಂಡು ಹಾರಿಸಿದ ವಿದ್ಯಾರ್ಥಿ

ತರಗತಿಯಲ್ಲಿ ಕಪಾಳ ಮೋಕ್ಷ ಮಾಡಿದ ಕಾರಣಕ್ಕೆ ಕುಪಿತಗೊಂಡ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನ...

ಧರ್ಮಸ್ಥಳ | 20 ವರ್ಷಗಳ ಅಸಹಜ ಸಾವು ಪ್ರಕರಣ; ತನಿಖೆ ತೀವ್ರಗೊಳಿಸಲು ಸಮಾನ ಮನಸ್ಕರ ಆಗ್ರಹ

ಬೆಂಗಳೂರಿನ ಪ್ರಮುಖ ಸಮಾನ ಮನಸ್ಕ ಸಂಘಟನೆಗಳು ಗುರುವಾರ ಸಭೆ ಸೇರಿ ಧರ್ಮಸ್ಥಳ...

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

Download Eedina App Android / iOS

X