ಉಪಚುನಾವಣೆ | ಸಂಡೂರಿನ ರಾಜಕೀಯ ಇತಿಹಾಸ; ಗೆಲುವು ಯಾರ ತೆಕ್ಕೆಗೆ?

Date:

Advertisements

ಬಹು ನಿರೀಕ್ಷಿತ ಬಳ್ಳಾರಿ ಜಿಲ್ಲೆಯ ಸಂಡೂರು ವಿಧಾನಸಭಾ ಉಪಚುನಾವಣೆ ಘೋಷಣೆಯಾಗಿದೆ. ಈ ವಿಧಾನಸಭಾ ಕ್ಷೇತ್ರದ ಶಾಸಕರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಈ ಹಿನ್ನೆಲೆ ತೆರವಾಗಿದ್ದ ಕ್ಷೇತ್ರಗಳಿಗೆ ಕೇಂದ್ರ ಚುನಾವಣಾ ಆಯೋಗವು ಮಂಗಳವಾರ ಉಪಚುನಾವಣೆ ಘೋಷಣೆ ಮಾಡಿ ದಿನಾಂಕ ಪ್ರಕಟ ಮಾಡಿದೆ.

ನವೆಂಬರ್‌ 13ಕ್ಕೆ ಮತದಾನ ನಡೆಯಲಿದ್ದು ನವೆಂಬರ್‌ 23ರಂದು ಫಲಿತಾಂಶ ಹೊರ ಬೀಳಲಿದೆ. ಸಂಡೂರಿನ ಉಪಚುನಾವಣೆಯ ಆಗು ಹೋಗುಗಳ ಬಗ್ಗೆ, ಸಂಡೂರಿನ ರಾಜಕೀಯ ಇತಿಹಾಸದ ಬಗ್ಗೆ, ಯಾರು ಗೆಲ್ಲಬಹುದು ಮತ್ತು ಯಾಕೆ ಗೆಲ್ಲಬಹುದು ಎಂಬ ಬಗ್ಗೆ ನಾವಿಲ್ಲಿ ವಿವರಿಸಿದ್ದೇವೆ.

ಚುನಾವಣಾ ಅಖಾಡಕ್ಕೆ ಸಿದ್ಧವಾದ ಪಕ್ಷಗಳು!

Advertisements

ಉಪಚುನಾವಣೆಯಲ್ಲಿ ಒಂದು ಕಡೆ ಜಾತಿ ಲೆಕ್ಕಾಚಾರ, ಮತ್ತೊಂದೆಡೆ ವ್ಯಕ್ತಿ ಪ್ರಭಾವನ್ನು ನೋಡಿ ಈ ಬಾರಿ ಟಿಕೆಟ್ ಹಂಚಿಕೆ ನಡೆಯುತ್ತಿದೆ. ಈ ಉಪಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಎದುರು ಕಣಕ್ಕಿಳಿಯಲಿದೆ. ಕಾಂಗ್ರೆಸ್‌ನ ಇ ತುಕಾರಾಮ್ ಅವರು ಬಳ್ಳಾರಿ ಲೋಕಸಭೆಯಲ್ಲಿ ಗೆದ್ದ ಬಳಿಕ ಸಂಡೂರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಇದನ್ನು ಓದಿದ್ದೀರಾ? ಸಂಡೂರು ಉಪಚುನಾವಣೆಯಲ್ಲಿ ಬಿಜೆಪಿ ಸೋಲಿಸಿ, ಪಾಠ ಕಲಿಸಿ: ಸಿಎಂ ಸಿದ್ದರಾಮಯ್ಯ

ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಮಾಡಿಕೊಂಡಿತ್ತು. ಹಾಗೆಯೇ ವಿಧಾನಸಭೆ ಉಪಚುನಾವಣೆಯಲ್ಲಿಯೂ ಮೈತ್ರಿ ಮಾಡಿಕೊಂಡಿದೆ. ಈ ಬಗ್ಗೆ ಎರಡೂ ಪಕ್ಷದ ಹಿರಿಯ ನಾಯಕರು ಹಲವು ಭಾರೀ ಹೇಳಿಕೆಗಳನ್ನು ನೀಡಿದ್ದಾರೆ. ಮೈತ್ರಿ ಅಭ್ಯರ್ಥಿಗಳೇ ಮೂರು ಕ್ಷೇತ್ರಗಳಲ್ಲಿ ಕಣಕ್ಕೆ ಇಳಿಯಲಿದ್ದಾರೆ ಎಂದು ತಿಳಿಸಿದ್ದಾರೆ.

ಈ ನಡುವೆ ಟಿಕೆಟ್‌ಗಾಗಿ ಲಾಬಿಗಳು ಕೂಡಾ ನಡೆಯುತ್ತಿದೆ. ಅಕ್ಟೋಬರ್ 18ರಿಂದ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಅಕ್ಟೋಬರ್ 25ರಂದು ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದೆ. ಅಕ್ಟೋಬರ್ 28ರಂದು ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆಯಾಗಲಿದೆ. ಅಕ್ಟೋಬರ್ 30ರಂದು ನಾಮಪತ್ರ ಹಿಂಪಡೆಯಲು ಕೊನೆ ದಿನ ಆಗಿದೆ. ನವೆಂಬರ್ 13ಕ್ಕೆ ಚುನಾವಣೆ ನಡೆದು, ನವೆಂಬರ್ 23ಕ್ಕೆ ಮತ ಎಣಿಕೆ ನಡೆಯಲಿದೆ.

ಸಂಡೂರು ವಿಧಾನಸಭೆಯ ಇತಿಹಾಸ

ಸಂಡೂರು, ಮಧ್ಯ ಕರ್ನಾಟಕ ಪ್ರದೇಶದಲ್ಲಿ ಮತ್ತು ಕರ್ನಾಟಕದ ಬಳ್ಳಾರಿ ಜಿಲ್ಲೆಯ ವಿಧಾನಸಭಾ ಕ್ಷೇತ್ರವಾಗಿದೆ. ಇದು ಆಂಧ್ರಪ್ರದೇಶದ ಅನಂತಪುರಮ್‌ ಜಿಲ್ಲೆಯ ಜೊತೆ ಅಂತರರಾಜ್ಯ ಗಡಿಯನ್ನು ಹಂಚಿಕೊಂಡಿದೆ. ಸಂಡೂರಿನ ವಿಶೇಷತೆ ಬೇರೆ ರೀತಿಯಲ್ಲೇ ಇದೆ. ಸಚಿವರೊಬ್ಬರ ಕಚೇರಿಯ ನೌಕರನನ್ನೇ ಸಚಿವನನ್ನಾಗಿಸಿದ್ದು ಸಂಡೂರು ವಿಧಾನಸಭಾ ಕ್ಷೇತ್ರದ ವಿಶೇಷ.

ಇದನ್ನು ಓದಿದ್ದೀರಾ? ಉಪ ಚುನಾವಣೆ | ಮೂರು ಕ್ಷೇತ್ರ, ಮೂವರಿಗೂ ಪ್ರತಿಷ್ಠೆ, ಮೇಲುಗೈ ಯಾರದು?

ರಾಜವಂಶಸ್ಥ ಘೋರ್ಪಡೆಯವರ ಕಚೇರಿಯಲ್ಲಿ ಕೆಲಸಕ್ಕಿದ್ದ ಸಂತೋಷ್‌ ಲಾಡ್‌ ರಾಜರನ್ನು ಸೋಲಿಸಿ ಶಾಸಕರಾಗಿದ್ದರು. ಅದಕ್ಕಿಂತಲೂ ವಿಶೇಷ ಅಂದರೆ, ಲಾಡ್‌ ಕಚೇರಿಯಲ್ಲಿ ನೌಕರರಾಗಿದ್ದ ತುಕಾರಾಂ ಇಲ್ಲಿನ ಶಾಸಕರಾಗಿದ್ದು. 2008ರ ಬಳಿಕ ಇದು ಎಸ್‌ಟಿ ಮೀಸಲು ಕ್ಷೇತ್ರವಾಗಿತ್ತು. ಈ ಕ್ಷೇತ್ರದಿಂದ ಆಯ್ಕೆಯಾಗಿದ ಘೋರ್ಪಡೆ, ಸಂತೋಷ್‌ ಲಾಡ್‌ ಹಾಗೂ ತುಕಾರಾಂ ಸಚಿವರುಗಳಾಗಿದ್ದರು ಅನ್ನೋದು ಗಮನಾರ್ಹ.

ಬಳ್ಳಾರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರ ಸಂಡೂರು. 2008ರಲ್ಲಿ ಕ್ಷೇತ್ರ ಮರುವಿಂಗಡಣೆ ಆಗುವವರೆಗೆ ಸಾಮಾನ್ಯ ಕ್ಷೇತ್ರವಾಗಿದ್ದ ಇದು, ಬಳಿಕ ಎಸ್‌ಟಿ ಮೀಸಲು ಕ್ಷೇತ್ರವಾಗಿ ಬದಲಾಯಿತು. 1952 ಕಮ್ಯುನಿಸ್ಟ್‌ ಪಾರ್ಟಿಯ ವಿ ನಂದಗೋಪಾಲ ಇಲ್ಲಿನ ಮೊದಲ ಶಾಸಕರಾದರು. ಕಾಂಗ್ರೆಸ್‌ನ ಎಮ್‌ ಆರ್‌ ಕೃಷ್ಣಾಸ್ವಾಮಿ ರೆಡ್ಡಿ ಅವರನ್ನು ಅವರು ಪರಾಭವಗೊಳಿಸಿದ್ದರು.

2004ರಲ್ಲಿ ಸಂಡೂರು ಜೆಡಿಎಸ್‌ ಪಾಲಾಯಿತು. ಇಲ್ಲಿಂದ ಕಣಕ್ಕಿಳಿದಿದ್ದ ಸಂತೋಷ್ ಎಸ್ ಲಾಡ್ 65,600 ಮತಗಳನ್ನು ಪಡೆದು ಕಾಂಗ್ರೆಸ್‌ ದಿಗ್ಗಜರೆನಿಸಿಕೊಂಡಿದ್ದ ರಾಜಮನೆತನದ ವೆಂಕಟರಾವ್ ಘೋರ್ಪಡೆಯವರಿಗೆ ಸೋಲುಣಿಸಿದ್ದರು. ಈ ಹಣಾಹಣಿಯಲ್ಲಿ 30,056 ಮತ ಪಡೆದಿದ್ದ ಘೋರ್ಪಡೆ 35,544 ವೋಟುಗಳಿಂದ ಸೋತಿದ್ದರು. ಈ ಚುನಾವಣೆ ಸಂಡೂರಿನಲ್ಲಿ ಹೊಸ ಇತಿಹಾಸ ಸೃಷ್ಟಿಸಿತ್ತು. ಘೋರ್ಪಡೆಯವರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಲಾಡ್‌ ತಮ್ಮ ಧಣಿಯ ವಿರುದ್ದವೇ ಗೆದ್ದು ಹೊಸ ಸಾಧನೆ ಮಾಡಿದ್ದರು. ಈ ಸಾಧನೆಗೈದಾಗ ಸಂತೋಷ್‌ ಲಾಡ್‌ ಅವರಿಗೆ ಕೇವಲ 29 ವರ್ಷ ವಯಸ್ಸು.

ಇದನ್ನು ಓದಿದ್ದೀರಾ? ಮುಸ್ಲಿಂ ಪ್ರಾಬಲ್ಯದ ಶಿಗ್ಗಾವಿ ಗೆಲ್ಲುತ್ತಾ ಕಾಂಗ್ರೆಸ್?

2008ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸಂಡೂರ್ ಕ್ಷೇತ್ರದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಟಿಕೆಟ್‌ನಲ್ಲಿ ಗೆದ್ದ ನಂತರ ತುಕಾರಾಮ್‌ ಅವರು ಮೊದಲು ಶಾಸಕರಾಗಿ ಆಯ್ಕೆಯಾದರು. ಇನ್ನು 2013ರಲ್ಲಿ ಈ ಕ್ಷೇತ್ರದಲ್ಲಿ ಐಎನ್‌ಸಿಯ ಇ ತುಕಾರಾಂ ಅವರು ಜೆಡಿಎಸ್‌ನ ಧನಂಜಯ.ಆರ್ ಅವರನ್ನು 34631 ಮತಗಳ ಅಂತರದಿಂದ ಸೋಲಿಸಿದ್ದರು. ಈ ಕ್ಷೇತ್ರದಲ್ಲಿ ಚಲಾವಣೆಯಾದ ಒಟ್ಟು ಮತಗಳ ಪ್ರಮಾಣ 26.97% ಆಗಿದೆ.

2013ರಲ್ಲಿ ಐಎನ್‌ಸಿ 48.48% ಮತ ಪಾಲನ್ನು ಹೊಂದಿತ್ತು. 2018ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ, ಈ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ತುಕಾರಾಂ ಅವರು ಬಿಜೆಪಿಯ ಡಿ ರಾಘವೇಂದ್ರ ಅವರನ್ನು 14010 ಮತಗಳ ಅಂತರದಿಂದ ಸೋಲಿಸಿದ್ದರು. ಇದು ಕ್ಷೇತ್ರದಲ್ಲಿ ಪಡೆದ ಒಟ್ಟು ಮತಗಳ 8.88% ಆಗಿತ್ತು. 2018ರಲ್ಲಿ ಐಎನ್‌ಸಿ 49.53% ಮತ ಹಂಚಿಕೆಯನ್ನು ಹೊಂದಿತ್ತು. ನಂತರ ತುಕಾರಾಮ್ ಅವರು 2023 ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅನ್ನು ಪ್ರತಿನಿಧಿಸುವ ಸಂಡೂರು ವಿಧಾನಸಭಾ ಕ್ಷೇತ್ರದಿಂದ ಮತ್ತೆ ಗೆದ್ದಿದ್ದಾರೆ. 85,223 ಮತಗಳನ್ನು ಪಡೆದು, ತಮ್ಮ ಪ್ರತಿಸ್ಪರ್ಧಿ ಭಾರತೀಯ ಜನತಾ ಪಕ್ಷದ ಶಿಲ್ಪಾ ರಾಘವೇಂದ್ರ ಅವರನ್ನು 35,532 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು.

ಸಂಡೂರು ಕ್ಷೇತ್ರದಿಂದ ಸತತ ನಾಲ್ಕು ಬಾರಿ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದ ತುಕಾರಾಮ್ ಅವರು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಶ್ರೀರಾಮುಲು ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ್ದರು. ಶ್ರೀರಾಮುಲು ವಿರುದ್ಧ 98,992 ಮತಗಳಿಂದ ತುಕಾರಾಮ್ ಜಯಭೇರಿ ಭಾರಿಸಿದ್ದರು. ಕಾಂಗ್ರೆಸ್‌ನ ಇ. ತುಕಾರಾಮ್‌ ಅವರು 7,30,845 ಮತಗಳು ಪಡೆದಿದ್ದರೆ, ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರಿಗೆ 6,31,853 ಮತಗಳು ಬಂದಿದ್ದವು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೆದ್ದು ಸಂಸತ್‌ಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ತುಕಾರಾಮ್‌ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ಸಂಡೂರಲ್ಲಿ ಜಾತಿ ಲೆಕ್ಕಾಚಾರ

ಸಂಡೂರು ವಿಧಾನಸಭಾ ಕ್ಷೇತ್ರವು ಕರ್ನಾಟಕ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ. ಇದು ಎಸ್‌ಟಿ ವರ್ಗದ ವಿಧಾನಸಭಾ ಕ್ಷೇತ್ರವಾಗಿದ್ದು, ಬಳ್ಳಾರಿ 8 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ. ಇನ್ನು ಈ ಕ್ಷೇತ್ರದಲ್ಲಿ ಒಟ್ಟು 221753 ಮತದಾರರು ಇದ್ದು, ಈ ಪೈಕಿ 1,11,109 ಪುರುಷರು, 1,10,618 ಮಹಿಳಾ ಮತದಾರರು ಇದ್ದಾರೆ. ಇನ್ನು ಇತರರು 32 ಮಂದಿ.

ಇದನ್ನು ಓದಿದ್ದೀರಾ? ಚನ್ನಪಟ್ಟಣ ಉಪಚುನಾವಣೆ | ಟಿಕೆಟ್ ಯಾರಿಗೆ? ಸಂದಿಗ್ಧದಲ್ಲಿ ‘ಸೈನಿಕ’

ಪರಿಶಿಷ್ಟ ಪಂಗಡದ ಪ್ರಾಬಲ್ಯ ಹೊಂದಿರುವ ಕ್ಷೇತ್ರ ಇದಾಗಿದೆ. ಇನ್ನು ಜಾತಿವಾರು ಮತದಾರರ ಲೆಕ್ಕಾಚಾರ ನೋಡುವುದಾರೆ, ಸಂಡೂರು ವಿಧಾನಸಭೆಯಲ್ಲಿ ಎಸ್‌ಸಿ ಮತದಾರರು ಸರಿಸುಮಾರು 39,890 ಆಗಿದ್ದು, ಶೇಕಡ 18.23ರಷ್ಟಿದೆ. ಎಸ್‌ಟಿ ಮತದಾರರು ಸರಿಸುಮಾರು 54,747 ಅಂದರೆ 25.02% ಆಗಿದೆ. ಮುಸ್ಲಿಂ ಮತದಾರರು ಸರಿಸುಮಾರು 25,163, ಇದು ಮತದಾರರ ಪಟ್ಟಿ ವಿಶ್ಲೇಷಣೆಯ ಪ್ರಕಾರ ಸುಮಾರು 11.5% ಆಗಿದೆ.

ಗ್ರಾಮೀಣ ಮತದಾರರು ಸರಿಸುಮಾರು 158,486 ಆಗಿದ್ದು, 2011ರ ಜನಗಣತಿಯ ಪ್ರಕಾರ 72.43% ರಷ್ಟಿದೆ. ನಗರ ಮತದಾರರು ಸರಿಸುಮಾರು 60,327 ಆಗಿದೆ, ಇದು 2011ರ ಜನಗಣತಿಯ ಪ್ರಕಾರ 27.57% ಆಗಿದೆ. ಇತರೆ : 40,000 ಅಂದ್ರೆ ಬ್ರಾಹ್ಮಣ, ಶೆಟ್ಟಿ, ಕಮ್ಮ, ಬಲಿಜ, ಗಾಣಿಗ ಸಣ್ಣಪುಟ್ಟ ಜಾತಿಗಳು ಇದೆ.

ಸಂಡೂರಲ್ಲಿ ಪತ್ನಿಗೋ ಪುತ್ರಿಗೋ?

ಇನ್ನು ಈ ಹಿಂದೆ ಬಳ್ಳಾರಿ ಲೋಕಸಭಾ ಚುನಾವಣೆ ವೇಳೆ ತುಕಾರಾಮ್‌ ಅವರು ತಮ್ಮ ಪುತ್ರಿ ಸೌಪರ್ಣಿಕಾ ತುಕಾರಾಂ ಅವರಿಗೆ ಟಿಕೆಟ್ ನೀಡುವಂತೆ ಕಾಂಗ್ರೆಸ್ ನಾಯಕರಿಗೆ ಕೇಳಿದ್ದರು. ಆಗ ಪಕ್ಷದ ನಾಯಕರು, “ಈಗ ನೀವೇ ಚುನಾವಣೆಗೆ ಸ್ಪರ್ಧಿಸಿ, ಮುಂದೆ ನಿಮ್ಮ ಮಗಳಿಗೆ ಉಪಚುನಾವಣೆಯಲ್ಲಿ ಅವಕಾಶ ನೀಡೋಣ” ಎಂಬ ಭರವಸೆ ನೀಡಿದ್ದರು. ಹಾಗಾಗಿ 4 ಬಾರಿ ಸಂಡೂರಿನಿಂದ ಶಾಸಕರಾಗಿ ಆಯ್ಕೆಯಾಗಿದ್ದ ತುಕಾರಾಮ್ ಬಳ್ಳಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದರು. ಈ ಹಿನ್ನೆಲೆಯಲ್ಲಿ ಈಗ ಉಪಚುನಾವಣೆಗೆ ಅವರ ಮಗಳ ಹೆಸರೇ ಮುಂಚೂಣಿಯಲ್ಲಿದೆ.

ಇದರ ಜೊತೆಗೆ ತುಕಾರಾಮ್ ಅವರ ಪತ್ನಿ ಅನ್ನಪೂರ್ಣ, ಬಳ್ಳಾರಿ ಜಿ.ಪಂ. ಮಾಜಿ ಸದಸ್ಯ ಲಕ್ಷ್ಮಣ್ ಅವರ ಹೆಸರೂ ಚಾಲ್ತಿಯಲ್ಲಿದೆ. ಈ ಮೂರರಲ್ಲಿ ತುಕಾರಾಂ ಯಾವ ಹೆಸರು ಸೂಚಿಸುತ್ತಾರೋ ಅವರೇ ಅಂತಿಮ ಅಂತ ಪಕ್ಷದ ಮೂಲಗಳು ತಿಳಿಸಿವೆ. ಇನ್ನು ಸಂಡೂರು ಕ್ಷೇತ್ರವನ್ನು ಗೆಲ್ಲಿಸಿಕೊಡುವ ಜವಾಬ್ದಾರಿಯನ್ನು ಕಾಂಗ್ರೆಸ್ ಜಮೀರ್ ಅಹ್ಮದ್ ಅವರಿಗೆ ವಹಿಸಿದೆ. ಸಂಡೂರು ಎಸ್‌ಟಿ ಮೀಸಲು ಕ್ಷೇತ್ರ ಅಹಿಂದ ಮತಗಳೇ ಕ್ಷೇತ್ರದಲ್ಲಿ ನಿರ್ಣಾಯಕವಾಗಿದ್ದು, ಕಾಂಗ್ರೆಸ್‌ನ ಭದ್ರಕೋಟೆಯಾಗಿದೆ. ಆದರೆ ಮೈತ್ರಿ ಅಭ್ಯರ್ಥಿ ಯಾರು ಎಂಬುದನ್ನು ಬಿಜೆಪಿ ಆಗಲಿ ಅಥವಾ ಜೆಡಿಎಸ್‌ ಆಗಲಿ ಬಿಟ್ಟುಕೊಟ್ಟಿಲ್ಲ.

ಕಾಂಗ್ರೆಸ್‌ಗೆ ಕೈ ಜಾರಬಹುದಾ ಸಂಡೂರು?

ಇಷ್ಟು ವರ್ಷ ಕಾಂಗ್ರೆಸ್‌ ತೆಕ್ಕೆಯಲ್ಲಿದ್ದ ಸಂಡೂರು ಈ ಬಾರಿ ಬಿಜೆಪಿ ಜೆಡಿಎಸ್‌ ಮೈತ್ರಿಯ ಪಾಲಾಗಬಹುದು ಎಂಬ ಅಭಿಪ್ರಾಯಗಳಿದೆ. ಈ ಮಾತು ಬರುವುದಕ್ಕೆ ಎರಡು ಕಾರಣ ಇದೆ. ಒಂದು ಒಳ ಮೀಸಲಾತಿ ಇನ್ನೊಂದು ಮುಡಾ ಪ್ರಕರಣ. ಹೌದು, ಸುಪ್ರೀಂ ಕೋರ್ಟ್‌ ಈಗಾಗಲೇ ಒಳ ಮೀಸಲಾತಿ ಜಾರಿ ಮಾಡುವ ಅಧಿಕಾರವನ್ನು ಕಾಂಗ್ರೆಸ್‌ಗೆ ನೀಡಿದೆ. ಅಧಿಕಾರ ನೀಡಿ 2 ತಿಂಗಳು ಕಳೆದರೂ ಕೂಡಾ ಒಳ ಮೀಸಲಾತಿ ಜಾರಿಯಾಗಿಲ್ಲ ಎಂಬುದು ಅಲ್ಲಿನ ಮಾದಿಗ ಸಮುದಾಯದ ಕೋಪಕ್ಕೆ ಕಾರಣವಾಗಿದೆ. ಈ ಕೋಪವನ್ನು ಉಪಚುನಾವಣೆಯಲ್ಲಿ ಜನರು ತೋರಿಸುತ್ತಾರಾ ಎಂಬ ಅನುಮಾನವಿದೆ.

ಇದನ್ನು ಓದಿದ್ದೀರಾ? ಮೂರು ಕ್ಷೇತ್ರಗಳ ಬೈ-ಎಲೆಕ್ಷನ್ | ಕುಟುಂಬ ರಾಜಕಾರಣಕ್ಕೆ ಮಣೆ ಮತ್ತು ಮನ್ನಣೆ

ಇನ್ನೊಂದು ಮುಡಾ ಪ್ರಕರಣ. ಮುಡಾ ಪ್ರಕರಣದಲ್ಲಿ ಸಿಎಂ ಪಾತ್ರ ಏನಿದೆ? ಎಲ್ಲೂ ಸಿಎಂ ಪಾತ್ರ ಕಾಣಿಸುತ್ತಿಲ್ಲಾ ಅಂತ ನ್ಯಾಯಾಧೀಶರೇ ಹೇಳಿದ್ದರೂ ಕೂಡ ಬಿಜೆಪಿ ಜೆಡಿಎಸ್‌ ಮಾತ್ರ ಮುಡಾದಲ್ಲಿ ಸಿದ್ದರಾಮಯ್ಯ ಅಕ್ರಮ ಮಾಡಿದ್ದಾರೆ ಎಂಬ ಮಾತನ್ನು ಪ್ರಚಾರ ಮಾಡಿದೆ. ಇದು ಕಾಂಗ್ರೆಸ್‌ಗೆ ಮುಳುವಾಗುವ ಸಾಧ್ಯತೆಯಿದೆ.

ಒಂದು ವೇಳೆ ಇಲ್ಲಿ ಕಾಂಗ್ರೆಸ್ ಸೋತರೆ ಸಿದ್ದರಾಮಯ್ಯ ಪ್ರತಿಷ್ಠೆಗೆ ಧಕ್ಕೆಯಾಗುತ್ತದೆ. ಅಹಿಂದ ಮತಗಳು ‘ಕೈ’ನಿಂದ ದೂರವಾಗಿವೆ ಎನ್ನುವ ಸಂದೇಶ ರವಾನೆಯಾದಂತಾಗುತ್ತದೆ. ಹಾಗಾಗಿ ಈ ಕ್ಷೇತ್ರದ ಗೆಲವು ಸಿದ್ದರಾಮಯ್ಯ ಅವರಿಗೆ ಅನಿವಾರ್ಯವಾಗಿದೆ. ಇನ್ನೂ ಸಂಡೂರಿನಲ್ಲಿ ಗೆಲ್ಲಲು ಬಿಜೆಪಿ ರಣತಂತ್ರ ಹೆಣೆಯುತ್ತಿದೆ. ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳಗಾವಿ : ಗಾಂಜಾ ಮಾರಾಟ ಮಾಫಿಯಾ 9 ಮಂದಿ ಅರೆಸ್ಟ್ : ರೂ 30 ಲಕ್ಷ ಮೌಲ್ಯದ ಗಾಂಜಾ ವಶ

ಬೆಳಗಾವಿ ನಗರದಲ್ಲಿ ಗಾಂಜಾ ಮಾರಾಟ ಜಾಲ ಬಯಲಾಗಿದ್ದು, ಬೆಳಗಾವಿ ಪೊಲೀಸರು ದೊಡ್ಡ...

ಪ್ರಧಾನಿ, ಮುಖ್ಯಮಂತ್ರಿ, ಸಚಿವರನ್ನು ವಜಾ ಮಾಡುವ ಮಸೂದೆ: ಪ್ರಜಾಪ್ರಭುತ್ವದ ಮೇಲಿನ ದಾಳಿಯೇ?

ಪದಚ್ಯುತಿ ಮಸೂದೆಯು ಭ್ರಷ್ಟಾಚಾರ ನಿಗ್ರಹದ ನೆಪದಲ್ಲಿ ರಾಜಕೀಯ ಪಿತೂರಿಯನ್ನು ಹುಟ್ಟುಹಾಕುತ್ತದೆ. ಬಿಜೆಪಿ...

ಬಾಗಲಕೋಟೆ | ಬಿಜೆಪಿ ಮತಗಳ್ಳತನ ವಿರುದ್ಧ ವ್ಯಾಪಕ ಹೋರಾಟ: ಮಾಜಿ ಸಚಿವ ವಿನಿಯಕುಮಾರ್

ಬಿಜೆಪಿ ಮತಗಳ್ಳತನ ನಡೆಸಿ ಚುನಾವಣೆ ಅಕ್ರಮ ಎಸಗಿರುವ ಬಗ್ಗೆ ವ್ಯಾಪಕವಾಗಿ ಹೋರಾಟ...

ಶಿವಮೊಗ್ಗ | KSRTC ನಗರ ಸಾರಿಗೆ ಬಸ್ ಮಲವಗೊಪ್ಪದ, ಚೆನ್ನಬಸವೇಶ್ವರ ದೇವಸ್ಥಾನ ಬಳಿ ಕಡ್ಡಾಯ ನಿಲುಗಡೆಗೆ ಆದೇಶ

ಶಿವಮೊಗ್ಗ, ಸಾರ್ವಜಕನಿಕ ಪ್ರಯಾಣಿಕರು/ಶಾಲಾ-ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಿವಮೊಗ್ಗ-ಭದ್ರಾವತಿ ಮಾರ್ಗದಲ್ಲಿ ಕಾರ್ಯಾಚರಣೆಯಾಗುವ ನಗರ...

Download Eedina App Android / iOS

X