ಸಂಡೂರು ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿರುವ ಬಂಗಾರು ಹನುಮಂತು ಮತ್ತು ಕಾಂಗ್ರೆಸ್ಸಿನಿಂದ ಕಣದಲ್ಲಿರುವ ಅನ್ನಪೂರ್ಣ ತುಕಾರಾಂ- ಹೆಸರಿಗಷ್ಟೇ ಅಭ್ಯರ್ಥಿಗಳು. ಆದರೆ ನಿಜವಾದ ಕಾಳಗವಿರುವುದು ಜನಾರ್ದನ ರೆಡ್ಡಿ ಮತ್ತು ಸಂತೋಷ್ ಲಾಡ್‌ಗಳ ನಡುವೆ. ಹಾಗಾಗಿ ಗೆಲುವು ಇವರಿಬ್ಬರಿಗೂ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಆ ಮೂಲಕ ಗಣಿ ಜಿಲ್ಲೆ ಬಳ್ಳಾರಿಯನ್ನು ಹಿಡಿತಕ್ಕೆ ತೆಗೆದುಕೊಳ್ಳಬೇಕೆಂಬ ಹಪಾಹಪಿ ಇದೆ.
ಸಂಡೂರಿನಲ್ಲಿ ಈಗ ಉಪಚುನಾವಣೆಯ ಗದ್ದಲ. ರಾಜಕಾರಣಿಗಳ ವಾಕ್ಸಮರ. ಆರೋಪ-ಪ್ರತ್ಯಾರೋಪಗಳ ಪರಾಕ್ರಮ. ವಾಹನಗಳ ಸರಬರ ಓಡಾಟ. ಧೂಳಿನಿಂದ ಆವೃತವಾದ ರಸ್ತೆಗಳು. ಈ ಜನ, ಗದ್ದಲ, ಗಲಾಟೆ, ಓಡಾಟ ಸಂಡೂರಿನ ಜನಕ್ಕೆ 2002ರ ಗಣಿ ಗದ್ದಲವನ್ನು ನೆನಪಿಸುತ್ತಿದೆ. ಆದಷ್ಟು ಬೇಗ ಉಪ ಚುನಾವಣೆ ಮುಗಿದುಹೋದರೆ ಸಾಕೆನಿಸಿದೆ. ಏಕೆಂದರೆ ಸಂಡೂರಿನ ಜನ ಶಾಂತಿಪ್ರಿಯರು.
ಸಂಡೂರು ಹೇಳಿಕೇಳಿ ಗಣಿಗಾರಿಕೆಯ ಊರು. ಕ್ಷೇತ್ರದಲ್ಲಿರುವ ಕಬ್ಬಿಣ ಮತ್ತು ಮ್ಯಾಂಗನೀಸ್ ಗಣಿಗಳ ಮೇಲೆ ಎಲ್ಲರ ಕಣ್ಣಿದೆ. ಅದಿರು ಅಗೆದಷ್ಟು ದುಡ್ಡಿದೆ. ಗಣಿ ಹಣ ರಾಜಕೀಯ ರಂಗವನ್ನು ರಾಢಿ ಎಬ್ಬಿಸಿದೆ. ಸರ್ಕಾರಗಳನ್ನು ಬದಲು ಮಾಡಿದೆ. ದೇಶದಾದ್ಯಂತ ಸುದ್ದಿಯಾಗಿದೆ. 2002ರಲ್ಲಿ ಗಣಿಗಾರಿಕೆ ಇಲ್ಲಿ ಉತ್ತುಂಗದಲ್ಲಿತ್ತು. ಇಲ್ಲಿನ ಅದಿರು ಚೈನಾಗೆ ರಫ್ತಾಗುತ್ತಿತ್ತು. ನೂರಾರು ಅಧಿಕೃತ ಕಂಪನಿಗಳ ಜೊತೆಗೆ ಅಷ್ಟೇ ಸಂಖ್ಯೆಯ ಅನಧಿಕೃತ ಗಣಿ ಕಂಪನಿಗಳು ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದವು. ದಿನಕ್ಕೆ 3600 ಲಾರಿಗಳು, ಟ್ರಕ್‌ಗಳು ಅದಿರು ತುಂಬಿಕೊಂಡು ಸಂಡೂರಿನಿಂದ ಬೇಲೆಕೇರಿಯತ್ತ ಇರುವೆ ಸಾಲಿನಂತೆ ಸಾಗುತ್ತಿದ್ದವು. ದಿನದ ಇಪ್ಪತ್ನಾಲ್ಕು ಗಂಟೆಯೂ ರಸ್ತೆಗಳ ಮೇಲೆ ಚಕ್ರಗಳು ಹರಿದಾಡುತ್ತಿದ್ದವು. ಗಣಿಗಾರಿಕೆಯನ್ನು ಅವಲಂಬಿಸಿದ್ದ ಕಾರ್ಮಿಕ ವರ್ಗ, ಮಾಲೀಕರು, ಅಧಿಕಾರಿಗಳು, ರಾಜಕಾರಣಿಗಳು, ಅದರ ಸುತ್ತಲಿನ ಕೋಟಿಗಟ್ಟಲೆ ವ್ಯಾಪಾರ-ವಹಿವಾಟು ಎಲ್ಲವೂ ಸಂಡೂರನ್ನು ಗದ್ದಲದ ಗಟಾರವಾಗಿಸಿತ್ತು. ಅದು ಅತಿಯಾದಾಗ ಸ್ಥಳೀಯರಿಗೆ ರೇಜಿಗೆ ಹುಟ್ಟಿಸಿತ್ತು. ಶಾಂತಿ ನೆಮ್ಮದಿ ಬಯಸಿತ್ತು.
2004ರಲ್ಲಿ ಘೋರ್ಪಡೆಯವರ ಕಚೇರಿಯಲ್ಲಿ ನೌಕರನಾಗಿದ್ದ ಸಂತೋಷ್ ಲಾಡ್ ಎಂಬ ಹುಡುಗ, ಮಹಾರಾಜರ ವಿರುದ್ಧ ಸೆಟೆದುನಿಂತರು. ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾಗುವ ಮೂಲಕ ಅವರ ಕೋಟೆಯನ್ನು ಭೇದಿಸಿದರು. ಸಮಾಜ ಸೇವಕನಾಗಿ, ಶಾಸಕನಾಗಿ, ಗಣಿ ಕುಳವಾಗಿ ಸಂತೋಷ್ ಲಾಡ್ ಸಾಮ್ರಾಜ್ಯ ವಿಸ್ತರಿಸುತ್ತಿದ್ದ ಸಂದರ್ಭದಲ್ಲಿ, ಅವರ ವ್ಯಾಪಾರ ವಹಿವಾಟು ನೋಡಿಕೊಳ್ಳುವ ನೌಕರನಾಗಿದ್ದ ತುಕಾರಾಂ, 2008ರಲ್ಲಿ ನಡೆದ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಯಾಗಿದ್ದರು. 2008ರಲ್ಲಿ ಸಂಡೂರು ಎಸ್‌ಟಿ ಮೀಸಲು ಕ್ಷೇತ್ರವಾದ ಕಾರಣ, ಸಂತೋಷ್ ಲಾಡ್ ಕಲಘಟಗಿಯತ್ತ ಹೆಜ್ಜೆ ಹಾಕಿ, ಸಂಡೂರಿಗೆ ತಮ್ಮ ನೌಕರ ತುಕಾರಾಂ ಅವರನ್ನೇ ಅಭ್ಯರ್ಥಿ ಮಾಡಿ, ಗೆಲ್ಲಿಸಿಕೊಂಡಿದ್ದರು.
ಅಲ್ಲಿಂದ ಇಲ್ಲಿಯವರೆಗೆ, ಬಳ್ಳಾರಿ ಜಿಲ್ಲೆಯಲ್ಲಿ ಬಿಜೆಪಿಯ ಗದ್ದಲ ಮತ್ತು ರೆಡ್ಡಿ ಸಹೋದರರ ಹಣಬಲದ ನಡುವೆಯೂ, ಕಾಂಗ್ರೆಸ್ ಪಕ್ಷದಿಂದ ನಾಲ್ಕು ಸಲ ಶಾಸಕರಾಗಿ ಗೆದ್ದಿರುವ ತುಕಾರಾಂ, ಕ್ಷೇತ್ರವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಅದಕ್ಕೆ ಮತ್ತೊಂದು ಗರಿ ಎಂಬಂತೆ ಬಳ್ಳಾರಿ ಸಂಸದರಾಗಿಯೂ ಆಯ್ಕೆಯಾಗಿದ್ದಾರೆ. ತುಕಾರಾಂ ಹೀಗೆ ಗೆಲುವಿನ ಮೇಲೆ ಗೆಲುವು ಸಾಧಿಸಲು ಕಾರಣ ಅವರ ಸರಳ ನಡೆ ಮತ್ತು ನುಡಿ. ಚಟಗಳಿಲ್ಲ. ಗನ್ ಮ್ಯಾನ್ ಇಲ್ಲ. ಅಧಿಕಾರಿಗಳಿಗೆ ಕಿರುಕುಳ ಕೊಡುವುದಿಲ್ಲ. ಜನಸಾಮಾನ್ಯರಿಗೆ ಸುಲಭವಾಗಿ ಸಿಗುವುದು ಮತ್ತು ಜನರೊಂದಿಗೆ ಬೆರೆತು ಕೆಲಸ ಮಾಡುವುದು ಅವರ ಶೈಲಿ.
ಇದನ್ನು ಓದಿದ್ದೀರಾ?: ವಾಲ್ಮೀಕಿ ಪಾಲಿಟಿಕ್ಸ್ | ಗಣಿ ನಾಡಲ್ಲಿ ಮಂಕಾದ ಶ್ರೀರಾಮುಲು, ಪುಟಿದೆದ್ದ ತುಕಾರಾಮ್
ಇಂತಹ ಜನನಾಯಕ ತುಕಾರಾಂ, ಈಗ ಬಳ್ಳಾರಿ ಸಂಸದರಾಗಿರುವ ಕಾರಣದಿಂದಾಗಿ ಸಂಡೂರು ಉಪಚುನಾವಣೆ ಎದುರಿಸುವಂತಾಗಿದೆ. ನಿರೀಕ್ಷೆಯಂತೆ ಕಾಂಗ್ರೆಸ್ ಪಕ್ಷ ತುಕಾರಾಂ ಅವರ ಪತ್ನಿ ಅನ್ನಪೂರ್ಣ ತುಕಾರಾಂ ಅವರಿಗೆ ಟಿಕೆಟ್ ನೀಡಿದೆ. ಕಾಂಗ್ರೆಸ್ ಕುಟುಂಬ ರಾಜಕಾರಣಕ್ಕೇ ಮತ್ತೆ ಮಣೆ ಹಾಕಿದ್ದು, ಕೆಲವರಲ್ಲಿ ಬೇಸರ ತರಿಸಿದೆ. ಆದರೆ, ಕ್ಷೇತ್ರದ ಜನರ ಬೇಡಿಕೆಗಳಿಗೆ ತಕ್ಷಣ ಸ್ಪಂದಿಸುವ ತುಕಾರಾಂ ಅವರ ಕಾರ್ಯಶೈಲಿಯನ್ನು ಅಚ್ಚುಕಟ್ಟಾಗಿ ಕಾರ್ಯರೂಪಕ್ಕೆ ಇಳಿಸುವವರು- ಪತ್ನಿ ಅನ್ನಪೂರ್ಣ. ಹೀಗಾಗಿ ಅನ್ನಪೂರ್ಣ ಕ್ಷೇತ್ರದ ಜನತೆಗೆ ಹೊಸಬರಲ್ಲ. ಗೊತ್ತಿಲ್ಲದವರೂ ಅಲ್ಲ. ಹಾಗೆ ನೋಡಿದರೆ, ತುಕಾರಾಂ ಅವರಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ, ಕ್ಷೇತ್ರದ ಜನರೊಂದಿಗೆ ಒಡನಾಟವಿಟ್ಟುಕೊಂಡವರು.
ಆದರೆ, ಇದೇ ಮಾತುಗಳನ್ನು ಬಿಜೆಪಿಯಿಂದ ಸ್ಪರ್ಧಿಸಿರುವ ಬಂಗಾರು ಹನುಮಂತು ಅವರಿಗೆ ಹೇಳಲಾಗುವುದಿಲ್ಲ. ಏಕೆಂದರೆ, ಬಳ್ಳಾರಿ ಜಿಲ್ಲೆಯನ್ನು ಹಿಡಿತದಲ್ಲಿಟ್ಟುಕೊಳ್ಳಬೇಕೆಂಬ ಹಪಾಹಪಿಗೆ ಬಿದ್ದ ಬಿಜೆಪಿಯ ರಾಜ್ಯ ನಾಯಕರು, ಅಭ್ಯರ್ಥಿ ಆಯ್ಕೆಯಲ್ಲಿ ಎಡವಿದ್ದಾರೆ. ಬಳ್ಳಾರಿ ಬಿಟ್ಟು ಹೋಗಿದ್ದ ಗಣಿ ಕುಳ ಜನಾರ್ದನ ರೆಡ್ಡಿ, ಚುನಾವಣೆಯ ನೆಪದಲ್ಲಿ ಮತ್ತೆ ಬಳ್ಳಾರಿಗೆ ಬಂದಿದ್ದಾರೆ. ಬಂದದ್ದಷ್ಟೇ ಅಲ್ಲ, ತಮ್ಮದೇ ಅಭ್ಯರ್ಥಿಯನ್ನು ಪ್ರತಿಷ್ಠಾಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದು ಅಲ್ಲಿನ ಸ್ಥಳೀಯ ಬಿಜೆಪಿ ನಾಯಕರಾದ ಶ್ರೀರಾಮುಲು, ಆನಂದ್ ಸಿಂಗ್‌ರನ್ನು ಕೆರಳಿಸಿದೆ. ಸೋತು ಕೂತಿರುವ ಶ್ರೀರಾಮುಲು, ಅಭ್ಯರ್ಥಿಯಾಗಬೇಕೆಂದು ಬಯಸಿದ್ದರು. ಯಡಿಯೂರಪ್ಪನವರ ಗುಂಪಿನಲ್ಲಿ ಗುರುತಿಸಿಕೊಂಡಿದ್ದು, ಬೇಕಾದ ತಯಾರಿಯನ್ನೂ ಮಾಡಿಕೊಂಡಿದ್ದರು. ಆದರೆ, ಅಂಜನಾದ್ರಿ ಬೆಟ್ಟದ ಅಭಿವೃದ್ಧಿಯ ನೆಪದಲ್ಲಿ, ಸಂಘಪರಿವಾರಕ್ಕೆ ಹತ್ತಿರವಾದರು. ಹಣ ಹರಿಸುವ ಕಾರಣ ಮುಂದೊಡ್ಡಿ ಜನಾರ್ದನ ರೆಡ್ಡಿ ಬಳ್ಳಾರಿಗೆ ಬಂದರು. ಅವರ ಬೆನ್ನಿಗೆ ಬಿ.ಎಲ್. ಸಂತೋಷ್ ನಿಂತರು. ಅಭ್ಯರ್ಥಿ ಆಯ್ಕೆಯಲ್ಲಿ ಇವರಿಬ್ಬರ ಕೈ ಮೇಲಾಯಿತು. ಇದು ಸಹಜವಾಗಿಯೇ ಯಡಿಯೂರಪ್ಪ, ವಿಜಯೇಂದ್ರ ಹಾಗೂ ಶ್ರೀರಾಮುಲು ಗುಂಪಿಗೆ ಮುಜುಗರ ತಂದಿತು. ಹಾಗಾಗಿ ಶ್ರೀರಾಮುಲು ಮನಸ್ಸಿಲ್ಲದ ಮನಸ್ಸಿನಿಂದ ಚುನಾವಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಮತ್ತೊಬ್ಬ ನಾಯಕ ಆನಂದ್ ಸಿಂಗ್‌ರಂತೂ ಕ್ಷೇತ್ರದಿಂದಲೇ ಕಣ್ಮರೆಯಾಗಿದ್ದಾರೆ. ಅಷ್ಟೇ ಅಲ್ಲ, ಎಸ್‌ಟಿ ಸಮುದಾಯದ ನಾಯಕ, ಶಾಸಕ ರಮೇಶ್ ಜಾರಕಿಹೊಳಿ ಪ್ರಚಾರ ಮಾಡುವುದಿಲ್ಲ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ. ಇದು ಬಿಜೆಪಿಗೆ ಬರಿ ಮುಜಗರವಲ್ಲ, ಸೋಲಿನ ಸೂಚನೆಯನ್ನೂ ಕೊಟ್ಟಿದೆ.
ಸಂಡೂರು ಕ್ಷೇತ್ರದಲ್ಲಿ ಒಟ್ಟು 2,36,047 ಮತದಾರರಿದ್ದಾರೆ. ದಲಿತರು, ಮುಸ್ಲಿಮರು ಮತ್ತು ಕುರುಬರು 1,49,000 ಮತದಾರರಿದ್ದು, ಇವರೇ ಇಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಸಂಡೂರು ಕ್ಷೇತ್ರದಲ್ಲಿ ಮ್ಯಾಸ ಬೇಡರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅದೇ ಜಾತಿಗೆ ಸೇರಿದ ತುಕಾರಾಂಗೆ ಲಾಡ್ ಸಹೋದರರ ಬೆಂಬಲವಿದೆ. ಸಂತೋಷ್ ಲಾಡ್‌ಗೆ ಕ್ಷೇತ್ರದ ಮೇಲೆ ಸಂಪೂರ್ಣ ಹಿಡಿತವಿದೆ. ಇನ್ನು 30 ಸಾವಿರ ಮತದಾರರಿರುವ ಲಿಂಗಾಯತರು, ಲಾಡ್ ಪರವಾಗಿದ್ದಾರೆ. ಕುತೂಹಲಕರ ಸಂಗತಿ ಎಂದರೆ, ಕ್ಷೇತ್ರದ ಎಲ್ಲ ಜಾತಿ ಜನಾಂಗಗಳಲ್ಲಿ, ಒಂದು ಮನೆಯಲ್ಲಿ 10 ಮತಗಳಿದ್ದರೆ, ಅದರಲ್ಲಿ 5 ಮತಗಳು ಕಡ್ಡಾಯವಾಗಿ ಲಾಡ್ ಹೇಳಿದವರ ಖಾತೆಗೆ ಜಮೆಯಾಗುತ್ತವೆ ಎಂಬ ಮಾತಿದೆ.
ಜೊತೆಗೆ, ಸಂಡೂರು ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆ ಎನ್ನಲು ತುಕಾರಾಂ ಸತತ ನಾಲ್ಕು ಬಾರಿ ಆಯ್ಕೆಯಾಗಿರುವುದು, ಸಾಕ್ಷಿ ಒದಗಿಸುತ್ತಿದೆ. ಅಷ್ಟೇ ಅಲ್ಲ, ತಾಲೂಕು ಮತ್ತು ಜಿಲ್ಲಾ ಪಂಚಾಯತ್‌ನ ಬಹುತೇಕ ಸದಸ್ಯರು ಕಾಂಗ್ರೆಸ್‌ನಿಂದ ಆರಿಸಿ ಬಂದಿದ್ದಾರೆ. ಗ್ರಾಮ ಪಂಚಾಯತ್‌ಗಳಲ್ಲೂ ಕೈ ಆಡಳಿತವೇ ವಿಜೃಂಭಿಸುತ್ತಿದೆ. ಅಷ್ಟರಮಟ್ಟಿಗೆ ಸಂತೋಷ್ ಲಾಡ್ ಮತ್ತು ತುಕಾರಾಂ ಕ್ಷೇತ್ರವನ್ನು ಪ್ರಭಾವಿಸಿದ್ದಾರೆ, ಆವರಿಸಿಕೊಂಡಿದ್ದಾರೆ.
ಸಂಡೂರು ಕ್ಷೇತ್ರದ ಮತ್ತೊಂದು ಮಹತ್ವದ ಸಂಗತಿ ಎಂದರೆ, ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷದ ಆಡಳಿತ ವಿರೋಧಿ ಅಲೆಯಾಗಲಿ, ಇತ್ತೀಚಿನ ಮುಡಾ ಮತ್ತು ವಾಲ್ಮೀಕಿ ಹಗರಣಗಳಾಗಲಿ ಇಲ್ಲಿನ ಮತದಾರರ ಮೇಲೆ ಪರಿಣಾಮ ಬೀರಿಲ್ಲ. ಏಕೆಂದರೆ, ರೆಡ್ಡಿ ಸಹೋದರರ ಗಣಿ ಗದ್ದಲದಿಂದ ಇಲ್ಲಿಯ ಜನ ಬೇಸತ್ತುಹೋಗಿದ್ದಾರೆ. ಗಲಾಟೆ-ಗೌಜುಗಳಿಂದ ದೂರವಿರಬೇಕೆಂದು ಬಯಸಿದ್ದಾರೆ. ಶಾಂತಿ ಮತ್ತು ನೆಮ್ಮದಿಯ ಬದುಕಿಗಾಗಿ ಅವರು ತುಕಾರಾಂ ಅವರತ್ತ ನೋಡುತ್ತಿದ್ದಾರೆ. ಅವರೂ ಕೂಡ ನಾಲ್ಕು ಬಾರಿ ಶಾಸಕರಾಗಿ ಗೆದ್ದು, ಸಂಡೂರು ಶಾಂತವಾಗಿರುವಂತೆ ನೋಡಿಕೊಂಡಿದ್ದಾರೆ.

ಇದರ ನಡುವೆಯೇ ಬಿಜೆಪಿ ಈ ಬಾರಿ ಚೊಚ್ಚಲ ಗೆಲುವು ದಾಖಲಿಸಲು ಪ್ರಯತ್ನ ನಡೆಸುತ್ತಿದೆ. ಕಾಂಗ್ರೆಸ್ ಸರ್ಕಾರದ ವಾಲ್ಮೀಕಿ ಹಗರಣ, ವಕ್ಫ್ ಆಸ್ತಿ ವಿವಾದ, ಮುಡಾ ಹಗರಣಗಳನ್ನು ಪ್ರಸ್ತಾಪಿಸುತ್ತಾ ಮತದಾರರನ್ನು ಓಲೈಸಲು ಹವಣಿಸುತ್ತಿದೆ. ಬಿ.ವೈ. ವಿಜಯೇಂದ್ರ ಗೆಲುವಿಗಾಗಿ ಪ್ರಯತ್ನ ನಡೆಸಿದ್ದಾರೆ. ಆದರೆ ಗಣಿ ಕುಳ ಜನಾರ್ದನ ರೆಡ್ಡಿಯೇ ಬಿಜೆಪಿಗೆ ಮೈನಸ್ ಪಾಯಿಂಟ್ ಆಗಿದ್ದಾರೆ. ಅವರು ಗಣಿ ಹಣವನ್ನು ಮಣ್ಣಿನಂತೆ ಚೆಲ್ಲಿದರೂ, ಗೆಲ್ಲುವುದು ಕಷ್ಟ ಎನ್ನುತ್ತಿದ್ದಾರೆ ಸಂಡೂರಿನ ಜನ.
ಸಂಡೂರು ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿರುವ ಬಂಗಾರು ಹನುಮಂತು ಮತ್ತು ಕಾಂಗ್ರೆಸ್ಸಿನಿಂದ ಕಣದಲ್ಲಿರುವ ಅನ್ನಪೂರ್ಣ ತುಕಾರಾಂ- ಹೆಸರಿಗಷ್ಟೇ ಅಭ್ಯರ್ಥಿಗಳು. ಆದರೆ ನಿಜವಾದ ಕಾಳಗವಿರುವುದು ಜನಾರ್ದನ ರೆಡ್ಡಿ ಮತ್ತು ಸಂತೋಷ್ ಲಾಡ್‌ಗಳ ನಡುವೆ. ಹಾಗಾಗಿ ಗೆಲುವು ಇವರಿಬ್ಬರಿಗೂ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಅದರ ಹಿಂದೆ ಗಣಿ ಜಿಲ್ಲೆ ಬಳ್ಳಾರಿಯನ್ನು ಹಿಡಿತಕ್ಕೆ ತೆಗೆದುಕೊಳ್ಳಬೇಕೆಂಬ ಹಪಾಹಪಿ ಇದೆ.

ಲೇಖಕ, ಪತ್ರಕರ್ತ