ಚನ್ನಪಟ್ಟಣ, ಸಂಡೂರು, ಶಿಗ್ಗಾಂವಿ ಉಪಚುನಾವಣೆ: ಯಾರಿಗೆ ಒಲಿಯಲಿವೆ ಮೂರು ಕ್ಷೇತ್ರಗಳು?

Date:

Advertisements

ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್ ಅಶೋಕ್, ಮಾಜಿ ಪ್ರಧಾನಿ ದೇವೇಗೌಡ, ಡಿಸಿಎಂ ಡಿ ಕೆ ಶಿವಕುಮಾರ್, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಸಂತೋಷ್ ಲಾಡ್, ಜನಾರ್ದನ ರೆಡ್ಡಿ – ಹೀಗೆ ಹಲವು ರಾಜಕಾರಣಿಗಳಿಗೆ ಚನ್ನಪಟ್ಟಣ, ಸಂಡೂರು, ಶಿಗ್ಗಾಂವಿಯು ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಇವರ‍್ಯಾರೂ ಅಭ್ಯರ್ಥಿಗಳಲ್ಲದಿದ್ದರೂ ಕೂಡಾ ಅವರ ಪ್ರತಿಷ್ಠೆ ಅಡಗಿರುವುದು ಈ ಮೂರು ಕ್ಷೇತ್ರದ ಉಪಚುನಾವಣೆಯ ಫಲಿತಾಂಶದ ಮೇಲೆ.

ಕಮಲ ಚೆಲ್ಲಿ ಕೈ ಹಿಡಿದ ಸಿ.ಪಿ. ಯೋಗೇಶ್ವರ್ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಎಚ್‌ಡಿಕೆ ಪುತ್ರ ನಿಖಿಲ್ ಕುಮಾರಸ್ವಾಮಿ ಬಿಜೆಪಿ- ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಮೂರನೇ ಬಾರಿಗೆ ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಇತ್ತ ಸಂಡೂರಿನಲ್ಲಿ ಸರಳ ನಡೆ, ನುಡಿಯಿಂದಲೇ ಖ್ಯಾತಿ ಪಡೆದಿರುವ ತುಕಾರಾಂ ಅವರ ಪತ್ನಿ ಅನ್ನಪೂರ್ಣ ತುಕಾರಾಂ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಗಣಿ ಕುಳ ಜನಾರ್ದನ ರೆಡ್ಡಿ ತಮಗೆ ಬೇಕಾದ ಅಭ್ಯರ್ಥಿ ಬಂಗಾರು ಹನುಮಂತು ಅವರನ್ನು ಚುನಾವಣಾ ರಂಗಕ್ಕೆ ಇಳಿಸುವುದರಲ್ಲಿ ಬಿಜೆಪಿಯ ಇತರೆ ನಾಯಕರೊಂದಿಗಿನ ಸೆಣಸಾಟದಲ್ಲಿ ಜಯಿಸಿದ್ದಾರೆ. ಮುಸ್ಲಿಂ ಜನಸಂಖ್ಯೆ ಅಧಿಕವಾಗಿರುವ ಶಿಗ್ಗಾಂವಿಯಲ್ಲಿ ಬಂಡಾಯದ ನಡುವೆಯೂ ಕಾಂಗ್ರೆಸ್ ಯಾಸೀರ್ ಅಹ್ಮದ್ ಖಾನ್ ಪಠಾಣರನ್ನು ಸ್ಪರ್ಧೆಗಿಳಿಸಿದೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತನ್ನ ಪುತ್ರ ಭರತ್ ಬೊಮ್ಮಾಯಿಗೆ ಟಿಕೆಟ್‌ ಗಿಟ್ಟಿಸಿಕೊಟ್ಟಿದ್ದಾರೆ. ಈ ಮೂರು ಕ್ಷೇತ್ರಗಳು ಯಾರಿಗೆ ಒಲಿಯಲಿವೆ ಎಂಬುದು ನವೆಂಬರ್ 23ರಂದು ಸ್ಪಷ್ಟವಾಗಲಿದೆ.

ಇದನ್ನು ಓದಿದ್ದೀರಾ? ಚನ್ನಪಟ್ಟಣ ಉಪಚುನಾವಣೆ; ಚರ್ಚೆ, ಸಂವಾದ, ಸಮೀಕ್ಷೆಗಳಿಗೆ ನಿರ್ಬಂಧ

Advertisements

ಚನ್ನಪಟ್ಟಣ: ಎಚ್‌ಡಿಕೆ- ಡಿಕೆಶಿ ವಾರ್

ಗೊಂಬೆಗಳ ನಾಡಾದ ಚನ್ನಪಟ್ಟಣದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್‌ನ ಗೊಂಬೆಗಳಾಗಿ ಕಣದಲ್ಲಿರುವ ನಿಖಿಲ್ ಕುಮಾರಸ್ವಾಮಿ ಮತ್ತು ಸಿ ಪಿ ಯೋಗೇಶ್ವರ ಮತ ಬೇಟೆಯಲ್ಲಿದ್ದಾರೆ. ಆದರೆ ಇಲ್ಲಿ ನಿಜವಾಗಿ ಚುನಾವಣಾ ಕದನ ನಡೆಯುತ್ತಿರುವುದು ನಿಖಿಲ್ ತಂದೆ, ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವೆ. ಚುನಾವಣಾ ಕಣದಲ್ಲಿ ಸ್ಪರ್ಧೆಗಿಳಿಯಲೆಂದೇ ಬಿಜೆಪಿ ತೊರೆದು ಕಾಂಗ್ರೆಸ್ ತೆಕ್ಕೆಯಲ್ಲಿರುವ ಯೋಗೇಶ್ವರ್ ಜನಮನ್ನಣೆ ಪಡೆದಿರುವವರು. 2013ರಲ್ಲಿ ರಾಜ್ಯದಲ್ಲಿ ಅಷ್ಟೊಂದು ಹೆಸರುವಾಸಿಯಾಗಿಲ್ಲದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ನಿಂತರೂ ಗೆದ್ದವರು. ಆದರೆ ಅದಾದ ಬಳಿಕ ಕುಮಾರಸ್ವಾಮಿ ಎದುರು ಎರಡು ಬಾರಿ ಸೋತವರು. ಈಗ ಅವರ ಪುತ್ರನ ಎದುರು ಗೆಲ್ಲುವ ಭರವಸೆಯನ್ನು ಹೊಂದಿದ್ದಾರೆ. ಇನ್ನೊಂದೆಡೆ ಯೋಗೇಶ್ವರ್‌ನಂತೆಯೇ ಸಿನಿಮಾ ಕೈಹಿಡಿಯದೆ ರಾಜಕೀಯದತ್ತ ಮುಖ ಮಾಡಿದ ನಿಖಿಲ್ ಕುಮಾರಸ್ವಾಮಿಗೆ ಇದು ಮೂರನೇ ಸೋಲಾಗುವ ಭಯವೂ ಇದೆ. ಜನರು ಮರೆತಿಲ್ಲದಿದ್ದರೆ ನೂರಾರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ಪ್ರಜ್ವಲ್ ಪ್ರಕರಣದಲ್ಲಿ ಎಚ್‌ಡಿಕೆ ಕುಟುಂಬದ ಎಡಬಿಡಂಗಿ ಹೇಳಿಕೆಗಳು ನಿಖಿಲ್ ಸೋಲಿಗೆ ಪುಷ್ಟಿ ನೀಡಬಹುದು. ಆದರೆ ಎಂದಿನಂತೆ ಎಚ್‌ಡಿಕೆ ಕುಟುಂಬ ಕಣ್ಣೀರಿನ ಗಾಳ ಹಿಡಿದು ಮತವೆಂಬ ಮೀನು ಹಿಡಿಯುವ ಪ್ರಯತ್ನ ಮಾಡಿಮುಗಿಸಿದೆ.

ತುಕಾರಾಂ ಪತ್ನಿಗೆ ಒಲಿಯುತ್ತಾ ಶಾಸಕಗಿರಿ?

ಸಂಡೂರು ವಿಧಾನಸಭೆ ಕ್ಷೇತ್ರದಲ್ಲಿ ಗಣಿದೊರೆಗಳ ಹಣ ಬಲವಿದ್ದರೂ ಜನರೊಂದಿಗೆ ಬೆರೆತು ಜೀವಿಸುವ ತುಕಾರಾಂ ಪತ್ನಿ ಅನ್ನಪೂರ್ಣ ಅವರನ್ನು ಜನರು ತಮ್ಮ ಶಾಸಕಿ ಎಂದು ಕರೆಯಲು ಸಿದ್ಧತೆ ನಡೆಸುತ್ತಿರುವಂತಿದೆ. ಆದರೆ ಕಾಂಗ್ರೆಸ್ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿರುವ ಅಸಮಾಧಾನವೂ ಕಾಂಗ್ರೆಸ್ ನಾಯಕರುಗಳಲ್ಲಿದೆ. ಅವೆಲ್ಲವನ್ನೂ ದಾಟಿ ತುಕಾರಾಂ ಅವರ ಸರಳ ನಡೆನುಡಿ, ಅನ್ನಪೂರ್ಣ ಅವರಿಗೆ ಜನರೊಂದಿಗೆ ಇರುವ ಒಡನಾಟವು ಬಿಜೆಪಿಯ ಅಭ್ಯರ್ಥಿ ಬಂಗಾರು ಹನುಮಂತು ಅವರನ್ನು ಪರಾಜಯಗೊಳಿಸಬಹುದು. ಏನೇ ಆದರೂ ಇಲ್ಲಿ ಜನಾರ್ದನ ರೆಡ್ಡಿ ಮತ್ತು ಸಂತೋ‍ಷ್ ಲಾಡ್ ವರ್ಚಸ್ಸಿನ ಪ್ರಶ್ನೆ ಈ ಕ್ಷೇತ್ರ.

ಇದನ್ನು ಓದಿದ್ದೀರಾ? ರಾಯಚೂರು | ಪದವೀಧರರು ಈಶಾನ್ಯ ಪದವೀಧರ ಮತದಾರರ ಪಟ್ಟಿಯಲ್ಲಿ‌ ಹೆಸರು ನೋಂದಾಯಿಸಿ : ಜಿ.ಪಂ. ಸಿಇಒ ರಾಹುಲ್‌ ತುಕಾರಾಂ

ಶಿಗ್ಗಾಂವಿಯಲ್ಲಿದೆ ಭರತ್ ಬೊಮ್ಮಾಯಿ ಭವಿಷ್ಯ

ಸಂಡೂರು, ಚನ್ನಪಟ್ಟಣದಂತೆ ಶಿಗ್ಗಾಂವಿಯಲ್ಲಿಯೂ ನವೆಂಬರ್ 13ರಂದು ಚುನಾವಣೆ ನಡೆಯಲಿದೆ. ಆರಂಭದಲ್ಲಿ ಕಾಂಗ್ರೆಸ್‌ ಟಿಕೆಟ್ ಲಭಿಸದ ಕಾರಣ ಬಂಡಾಯವೆದ್ದು ಸ್ವತಂತ್ರ ಅಭ್ಯರ್ಥಿಯಾಗಿ ಅಜ್ಜಂ ಪೀರ್ ಖಾದ್ರಿ ನಾಮಪತ್ರ ಸಲ್ಲಿಸಿದಾಗ ಮತ್ತೆ ಇಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂಬ ಅಭಿಪ್ರಾಯವಿತ್ತು. ಆದರೆ ಸಚಿವ ಜಮೀರ್ ಅಹಮದ್ ಮನವೊಲಿಕೆಯು ಫಲಶ್ರುತಿ ನೀಡಿತು. ಖಾದ್ರಿ ನಾಮಪತ್ರ ಹಿಂಪಡೆದರು. ಸದ್ಯ ಎಲ್ಲಾ ವೈಮನಸ್ಸು ಕೊಂಚ ಬದಿಗೊತ್ತಿ ಕಾಂಗ್ರೆಸ್‌ಗಾಗಿ ಯಾಸೀರ್ ಅಹ್ಮದ್ ಖಾನ್ ಪಠಾಣ ಪರ ಪ್ರಚಾರದಲ್ಲಿ ತೊಡಗಿದ್ದಾರೆ. ಮುಸ್ಲಿಮರ ಪ್ರಾಬಲ್ಯದ ಈ ಕ್ಷೇತ್ರದಲ್ಲಿ ಹಿಂದೂಗಳ ಓಟಿಗೆ ಖಾದ್ರಿ ನೇತೃತ್ವದ ತಂಡ ಬಲೆ ಹಾಕಿದೆ. ಇನ್ನೊಂದೆಡೆ ಜಮೀರ್ ಅಹಮದ್ ತಂಡ ಮುಸ್ಲಿಮರ ಮತವನ್ನು ಕಾಂಗ್ರೆಸ್‌ನತ್ತ ಸೆಳೆಯುತ್ತಿದೆ. ಇವೆಲ್ಲವುದರ ಸಂಪೂರ್ಣ ಉಸ್ತುವಾರಿ ಸತೀಶ್ ಜಾರಕಿಹೊಳಿ ಹೆಗಲ ಮೇಲಿದೆ.

ಇತ್ತ ದಶಕಗಳಿಂದ ಬಿಜೆಪಿಯ ಭದ್ರಕೋಟೆಯಾಗಿರುವ ಶಿಗ್ಗಾಂವಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ಕಣದಲ್ಲಿದ್ದಾರೆ. ಎಂದಿನಂತೆ ಬಿಜೆಪಿ ಪರ ಜನ ನಿಲ್ಲುತ್ತಾರೆ ಎಂಬ ಭರವಸೆ ಬೊಮ್ಮಾಯಿಗಿದೆ. ಇನ್ನೊಂದೆಡೆ ತನಗೆ ಟಿಕೆಟ್‌ ಗಿಟ್ಟಿಸಿಕೊಡುವುದಾಗಿ ಹೇಳಿ ತನ್ನ ಮಗನಿಗೆ ಮಣೆ ಹಾಕಿದ ಬೊಮ್ಮಾಯಿ ಬಗ್ಗೆ ಉದ್ಯಮಿ ಶ್ರೀಕಾಂತ್ ದುಂಡಿಗೌಡರ್ ಅವರಿಗೆ ಅಸಮಾಧಾನವಿದೆ. ಭರತ್ ಬೊಮ್ಮಾಯಿ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ ಎಂಬ ಸುದ್ದಿಗಳಿತ್ತು. ಆದರೆ ತನಗೆ ಯಾವ ಉಸಾಬರಿಯೂ ಬೇಡ ಎಂದು ರಾಜಕೀಯದಿಂದಲೇ ಹಿಂದೆ ಸರಿದಿದ್ದಾರೆ ಶ್ರೀಕಾಂತ್ ದುಂಡಿಗೌಡರ್. ಬಿಜೆಪಿಯ ಪ್ರಭಾವ, ಕಾಂಗ್ರೆಸ್‌ನ ಪ್ರಚಾರ ಎಲ್ಲವನ್ನೂ ತಾಳೆ ಹಾಕಿದಾಗ ಎಂದಿನಂತೆ ಶಿಗ್ಗಾಂವಿಯಲ್ಲಿ ಬಿಜೆಪಿಯ ಕಡೆ ಒಲವು ಹೆಚ್ಚಾಗಿದೆ.

ಗ್ಯಾರಂಟಿಗಳನ್ನು ಹಿಡಿದು ವಿಧಾನಸಭೆ ಚುನಾವಣೆಯನ್ನು ಗೆದ್ದ ಕಾಂಗ್ರೆಸ್‌ಗೆ ಲೋಕಸಭೆ ಚುನಾವಣೆಯಲ್ಲಿ ಸ್ಥಳೀಯ ರಾಜಕಾರಣ, ಅತಿಯಾದ ಆತ್ಮವಿಶ್ವಾಸ ಕೈಕೊಟ್ಟಿತು. ಹಾಗಾಗಿ ಈ ಮೂರು ಕ್ಷೇತ್ರದ ವಿಧಾನಸಭೆ ಉಪಚುನಾವಣೆಯು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಇನ್ನೊಂದೆಡೆ ಎಚ್‌ಡಿ ಕುಮಾರಸ್ವಾಮಿ, ಬೊಮ್ಮಾಯಿ ಮೊದಲಾದವರ ಘನತೆಗೆ ಸವಾಲಾಗಿದೆ.

Mayuri
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025ಕ್ಕೆ ವಿಧಾನ ಪರಿಷತ್ತಿನಲ್ಲೂ ಅಂಗೀಕಾರ

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025 ಕ್ಕೆ ವಿಧಾನ ಪರಿಷತ್ತಿನಲ್ಲಿ...

Download Eedina App Android / iOS

X