ಸಂಸ್ಕೃತ ಎಲ್ಲಾ ಭಾರತೀಯ ಭಾಷೆಗಳ ತಾಯಿ. ಸಂಸ್ಕೃತ ಭಾರತದ ಪ್ರತಿಯೊಂದು ಮನೆಗೂ ತಲುಪಬೇಕು ಮತ್ತು ದೈನಂದಿನ ಸಂವಹನದ ಭಾಷೆಯಾಗಬೇಕು ಎಂದು ಶುಕ್ರವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ(ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ನಾಗ್ಪುರದ ಕವಿ ಕುಲಗುರು ಕಾಳಿದಾಸ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಕಟ್ಟಡದ ಉದ್ಘಾಟನೆ ಬಳಿಕ ಮಾತನಾಡಿದ ಭಾಗವತ್, “ನಮ್ಮ, ಭಾವನೆಗಳನ್ನು ಬೆಳೆಸುವ ಭಾಷೆ ಸಂಸ್ಕೃತ. ಪ್ರತಿಯೊಬ್ಬರೂ ಪ್ರಾಚೀನ ಭಾಷೆಯನ್ನು ತಿಳಿದುಕೊಳ್ಳಬೇಕು. ಸಂಸ್ಕೃತವನ್ನು ಅರ್ಥಮಾಡಿಕೊಳ್ಳುವುದು ಮತ್ತು ಅದೇ ಭಾಷೆಯಲ್ಲಿ ಸಂವಾದ ನಡೆಸುವುದರ ನಡುವೆ ವ್ಯತ್ಯಾಸವಿದೆ” ಎಂದರು.
ಇದನ್ನು ಓದಿದ್ದೀರಾ? ಮಣಿಪುರ ಗಲಭೆಗೆ ‘ಸಾಂಸ್ಕೃತಿಕ ಮಾರ್ಕ್ಸ್‌ವಾದಿಗಳು’ ಕಾರಣ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
ದೇಶದಲ್ಲಿ ಕೇಂದ್ರ ಸರ್ಕಾರ ಹಿಂದಿ ಹೇರಿಕೆ ಮಾಡುತ್ತಿದೆ ಎಂಬ ಆರೋಪಗಳ ನಡುವೆ ಆರ್‌ಎಸ್‌ಎಸ್ ನಾಯಕರ ಹೇಳಿಕೆ ಬಂದಿದೆ. ಸಂಸ್ಕೃತ ದೈನಂದಿನ ಸಂವಹನ ಭಾಷೆಯಾಗಬೇಕು, ಎಲ್ಲರೂ ಕಲಿಯಬೇಕು ಎಂಬುದು ಕೂಡಾ ಭಾಷಾ ಹೇಳಿಕೆಯಲ್ಲವೇ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಬಿಜೆಪಿ-ಆರ್‌ಎಸ್‌ಎಸ್ ಹಿಂದಿ-ಸಂಸ್ಕೃತವನ್ನು ಬೆಳೆಸಿ ಉಳಿದ ಸ್ಥಳೀಯ ಭಾಷೆಗಳ ಅವನತಿಗೆ ಅವಕಾಶ ನೀಡುತ್ತಿದೆ ಎಂಬ ಆರೋಪವೂ ಇದೆ.
“ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಸರ್ಕಾರ ಪ್ರೋತ್ಸಾಹ ನೀಡುತ್ತದೆ. ಆದರೆ ಜನರ ಬೆಂಬಲವೂ ಅಗತ್ಯ. ಸಂಸ್ಕೃತ ಭಾರತದ ಎಲ್ಲಾ ಭಾಷೆಗಳ ತಾಯಿ. ಅದನ್ನು ದೈನಂದಿನ ಜೀವನದಲ್ಲಿ ಬಳಸಬೇಕು. ನಾನು ಭಾಷೆಯನ್ನು ಕಲಿತಿದ್ದೇನೆ. ಆದರೆ ನಿರರ್ಗಳವಾಗಿ ಮಾತನಾಡಲು ಸಾಧ್ಯವಾಗುತ್ತಿಲ್ಲ. ನಾವು ಸಂಸ್ಕೃತವನ್ನು ತಿಳಿದುಕೊಳ್ಳುವುದು ದೇಶವನ್ನು ಅರ್ಥಮಾಡಿಕೊಂಡಂತೆ” ಎಂದು ಭಾಗವತ್ ಹೇಳಿದರು.
ಈಗಾಗಲೇ ಕೇಂದ್ರ ಸರ್ಕಾರ ಒಂದು ದೇಶ, ಒಂದು ಚುನಾವಣೆ ಬಳಿಕ ಒಂದು ಭಾಷೆ ಜಾರಿಗೆ ಮುಂದಾಗುತ್ತಿದೆ ಎಂಬ ಆರೋಪಗಳಿವೆ. ಹಿಂದಿ ಕಡ್ಡಾಯಗೊಳಿಸುವುದರ ವಿರುದ್ಧ ಪ್ರಮುಖ ದಕ್ಷಿಣ ಭಾರತದ ರಾಜ್ಯಗಳಲ್ಲಿ ವಿರೋಧಕ್ಕೆ ಕಾರಣವಾಗಿದೆ. ಮಹಾರಾಷ್ಟ್ರದಲ್ಲೂ ತೀವ್ರ ವಿರೋಧ ವ್ಯಕ್ತವಾಗಿದೆ. ಇವೆಲ್ಲವುದರ ನಡುವೆ ಆರ್‌ಎಸ್‌ಎಸ್ ನಾಯಕರು ಸಂಸ್ಕೃತ ದೈನಂದಿನ ಸಂವಹನದ ಭಾಷೆಯಾಗಬೇಕು ಎಂದು ಹೇಳಿರುವುದು ಚರ್ಚೆಗೆ ಗ್ರಾಸವಾಗುತ್ತಿದೆ.
