ಬಿಜೆಪಿ ಸರ್ಕಾರದ ಕೆ.ಸುಧಾಕರ್, ಮುನಿರತ್ನ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಕೆಂಪಣ್ಣ ವಿರುದ್ಧ ಕೇಸ್ ಹಾಕಿ ಅವರನ್ನು ಜೈಲಿಗೆ ಕಳಿಸಿದ್ದರು. ಸಂತೋಷ್ ಲಾಡ್ 2013ರ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದಾಗ ತಮ್ಮ ವಿರುದ್ಧ ಅಕ್ರಮ ಗಣಿಗಾರಿಕೆ ಆರೋಪ ಮಾಡಿದ್ದ ಎಸ್ ಆರ್ ಹಿರೇಮಠ್ ವಿರುದ್ಧ ಪ್ರತಿದೂರು ದಾಖಲಿಸಿದ್ದರು.
ಕರ್ನಾಟಕದಲ್ಲಿ 2008ನೇ ಇಸವಿಯಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಅದರ ಹಿಂದೆ ಇದ್ದವರು ಬಳ್ಳಾರಿಯ ರೆಡ್ಡಿ ಸಹೋದರರು. ಅಕ್ರಮ ಗಣಿಗಾರಿಕೆಯ ಹಣದಿಂದಲೇ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎನ್ನುವ ಆರೋಪಗಳು ಆಗ ಕೇಳಿಬಂದಿದ್ದವು. ವಿಶೇಷ ಅಂದರೆ, ಅದಕ್ಕೂ ಹಿಂದೆಯೇ, ಅಂದರೆ 2006ರಲ್ಲಿ, ಅಕ್ರಮ ಗಣಿಕಾರಿಕೆಯ ಹಣ ರಾಜ್ಯದಲ್ಲಿ ಸರ್ಕಾರವನ್ನು ಅಸ್ತಿತ್ವಕ್ಕೆ ತರಲು ನೆರವಾಗಿತ್ತು; ಅದು ಬಿಜೆಪಿ-ಜೆಡಿಎಸ್ ಸರ್ಕಾರ. ಅದರ ಹಿಂದೆ ಇದ್ದದ್ದು ಕೂಡ ಬಳ್ಳಾರಿಯ ಗಣಿ ಉದ್ಯಮಿಗಳೇ. ಆದರೆ, ಅವರು ರೆಡ್ಡಿ ಸಹೋದರರಲ್ಲ; ಲಾಡ್ ಸಹೋದರರು.
ಅನಿಲ್ ಮತ್ತು ಸಂತೋಷ್ ಅಣ್ಣತಮ್ಮಂದಿರ ಮಕ್ಕಳು. ಬಳ್ಳಾರಿಯ ಅನಿಲ್ ಲಾಡ್ ಮತ್ತು ಸಂತೋಷ್ ಲಾಡ್, ರೆಡ್ಡಿ ಸಹೋದರರ ನೆರಳಿನಲ್ಲೇ ರಾಜಕೀಯ ಜೀವನ ಆರಂಭಿಸಿದ್ದವರು. ಅನಿಲ್ ಲಾಡ್ 2004ರಲ್ಲಿ ಕೂಡ್ಲಿಗಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆದ್ದು ಮೊದಲ ಬಾರಿಗೆ ಶಾಸಕರಾಗಿದ್ದರು. ಸಂತೋಷ್ ಲಾಡ್, ಸಂಡೂರಿನಿಂದ ಜೆಡಿಎಸ್ ಅಭ್ಯರ್ಥಿಯಾಗಿ ಗೆದ್ದು ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು. ಗಣಿ ಹಣದ ಬಲದಿಂದ ಜೆಡಿಎಸ್ ಬಿಜೆಪಿ ಸಮ್ಮಿಶ್ರ ಸರ್ಕಾರಕ್ಕೆ ಕಾರಣರಾಗಿದ್ದ ಲಾಡ್ ಸಹೋದರರು, ಆಗಿನ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಗೆ ಪರಮಾಪ್ತರಾಗಿದ್ದರು.
ಲಾಡ್ ಕುಟುಂಬದವರು ರೆಡ್ಡಿ ಸಹೋದರರಿಗಿಂತ ಮುಂಚಿನಿಂದಲೇ ಗಣಿಗಾರಿಕೆಯಲ್ಲಿ ತೊಡಗಿದ್ದವರು. ಮಹಾರಾಷ್ಟ್ರದ ಸಾಂಗ್ಲಿಯಿಂದ 1932ರಲ್ಲಿ ಸಂಡೂರಿನ ರಾಜನಾಗಿದ್ದ ಯಶವಂತರಾವ್ ಘೋರ್ಪಡೆಯವರ ಆಹ್ವಾನದ ಮೇರೆಗೆ ಇವರ ತಾತ ವಿ ಎಸ್ ಲಾಡ್ ಸಂಡೂರಿಗೆ ಬಂದು ನೆಲೆಸಿದ್ದರು. ಈ ಕುಟುಂಬ 1956-58ರ ನಡುವೆ ಬಳ್ಳಾರಿ-ಸಂಡೂರಿನ 400 ಎಕರೆ ಪ್ರದೇಶದಲ್ಲಿ ನಾಲ್ಕು ಗಣಿಗಳಿಗೆ ಪರವಾನಗಿ ಪಡೆದಿತ್ತು. ಇಂಥ ಶ್ರೀಮಂತ ಕುಟುಂಬದ ಹಿನ್ನೆಲೆ, ರಾಜಮನೆತನದ ಸಖ್ಯ, ಗಣಿ ಹಣದ ಪ್ರಭಾವದಿಂದ ಅನಿಲ್ ಮತ್ತು ಸಂತೋಷ್ ಲಾಡ್ ರಾಜಕೀಯದಲ್ಲಿ ಬಹುಬೇಗನೇ ಯಶಸ್ಸು ಗಳಿಸಿದರು. ರಾಜ್ಯ ರಾಜಕಾರಣದಲ್ಲಿ ಖಾಸಗಿ ಹೆಲಿಕಾಪ್ಟರ್‌ಗಳನ್ನು ಬಳಸಿ ಮಿಂಚಿದ್ದ ಮೊದಲಿಗರಲ್ಲಿ ಲಾಡ್ ಸಹೋದರರು ಕೂಡ ಸೇರಿದ್ದಾರೆ.
2008ರಲ್ಲಿ ಸಂಡೂರು ಮತ್ತು ಕೂಡ್ಲಿಗಿ ಎಸ್‌ಟಿ ಮೀಸಲು ಕ್ಷೇತ್ರಗಳಾಗಿದ್ದರಿಂದ ಸಂತೋಷ್ ಲಾಡ್ ಮತ್ತು ಅನಿಲ್ ಲಾಡ್ ಕ್ರಮವಾಗಿ ಕಲಘಟಗಿ ಮತ್ತು ಬಳ್ಳಾರಿ ನಗರ ಕ್ಷೇತ್ರಗಳಿಗೆ ವಲಸೆ ಹೋದರು. ಅಷ್ಟೊತ್ತಿಗೆ ಇಬ್ಬರೂ ಕಾಂಗ್ರೆಸ್ ಸೇರಿದ್ದರು. ಬಳ್ಳಾರಿ ಜಿಲ್ಲೆಯಿಂದ ಧಾರವಾಡ ಜಿಲ್ಲೆಗೆ ಬಂದ ಸಂತೋಷ್ ಲಾಡ್, ಕಲಘಟಗಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ 2008 ಮತ್ತು 2013ರ ಚುನಾವಣೆಗಳಲ್ಲೂ ಜಯ ಸಾಧಿಸಿದರು.
2013ರಲ್ಲಿ ಸಿದ್ದರಾಮಯ್ಯ ಸರ್ಕಾರ ರಚನೆಯಾದಾಗ ಸಂತೋಷ್ ಲಾಡ್ ವಾರ್ತಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಸಚಿವರಾಗಿದ್ದರು. ಸಿದ್ದರಾಮಯ್ಯ ಸಂಪುಟದಲ್ಲಿ ಅತ್ಯಂತ ಕಿರಿಯ ಶಾಸಕರಾಗಿದ್ದವರು ಸಂತೋಷ್ ಲಾಡ್. ಮಂತ್ರಿಯಾದ ಆರೇ ತಿಂಗಳಲ್ಲಿ ಬಳ್ಳಾರಿಯ ಅಕ್ರಮ ಗಣಿಗಾರಿಕೆ ಆರೋಪಕ್ಕೆ ಸಂಬಂಧಪಟ್ಟಂತೆ ಸಂತೋಷ್ ಲಾಡ್ ಸಂಪುಟಕ್ಕೆ ರಾಜೀನಾಮೆ ನೀಡಬೇಕಾಗಿ ಬಂದಿತ್ತು.
ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಎಚ್ ಎಸ್ ದೊರೆಸ್ವಾಮಿ ಮತ್ತು ಎಸ್ ಆರ್ ಹಿರೇಮಠ ಅವರ ಹೋರಾಟ, ಲೋಕಾಯುಕ್ತ ನ್ಯಾಯಮೂರ್ತಿಗಳಾಗಿದ್ದ ಸಂತೋಷ್ ಹೆಗ್ಡೆಯವರ ವರದಿ ಸಂತೋಷ್ ಲಾಡ್ ನಿರ್ಗಮನದಲ್ಲಿ ಮುಖ್ಯ ಪಾತ್ರ ವಹಿಸಿದ್ದವು. ಇನ್ನೊಂದೆಡೆ, ಬೇಲೇಕೇರಿ ಅಕ್ರಮ ಅದಿರು ಸಾಗಣೆಯ ಪ್ರಕರಣದ ಆರೋಪಿಯಾಗಿದ್ದ ಅನಿಲ್ ಲಾಡ್, 2015ರಲ್ಲಿ ಸಿಬಿಐನಿಂದ ಬಂಧನಕ್ಕೊಳಗಾಗಿದ್ದರು.
ಅಕ್ರಮ ಗಣಿಗಾರಿಕೆ ವಿರುದ್ಧ ಪಾದಯಾತ್ರೆ ಮಾಡಿ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್, ಸಂತೋಷ್ ಲಾಡ್ ಸಹೋದರರಿಂದ ತೀವ್ರ ಮುಜುಗರ ಅನುಭವಿಸಿತ್ತು. ಆದರೆ, ಸಂತೋಷ್ ಲಾಡ್ ಎಷ್ಟು ಪ್ರಭಾವಿಯಾಗಿದ್ದರೆಂದರೆ, ಕೇವಲ ಒಂದೂವರೆ ವರ್ಷದಲ್ಲಿ ಮತ್ತೆ ಸಿದ್ದರಾಮಯ್ಯ ಸಂಪುಟ ಸೇರಿ ಕಾರ್ಮಿಕ ಸಚಿವರಾಗಿದ್ದರು.
ಈ ಸುದ್ದಿ ಓದಿದ್ದೀರಾ: ನಮ್ಮ ಸಚಿವರು | ಎಚ್ ಕೆ ಪಾಟೀಲ್: ಜಿಲ್ಲೆಗಷ್ಟೇ ಸೀಮಿತವಾದ ಹುಲಕೋಟಿಯ ‘ಮರಿಹುಲಿ’
ಗಣಿಗಾರಿಕೆಯ ಹಣದಿಂದ ರಾಜಕೀಯ ಜೀವನ ಆರಂಭಿಸಿದ್ದ ಸಂತೋಷ್ ಲಾಡ್ ಅವರಿಗೆ ಆಗ ಪ್ರಜಾಪ್ರಭುತ್ವ, ಪ್ರಜೆಗಳ ಆಶಯಗಳು, ಕಷ್ಟಗಳು, ಜನಪ್ರತಿನಿಧಿಯೊಬ್ಬನ ಕರ್ತವ್ಯ ಇತ್ಯಾದಿಗಳೆಲ್ಲ ಅರ್ಥವಿಲ್ಲದ ಪದಗಳಾಗಿದ್ದವು. ಅಧಿಕಾರದ ಮಬ್ಬಿನಲ್ಲಿ ಕ್ಷೇತ್ರವನ್ನೇ ಮರೆತಿದ್ದ ಸಂತೋಷ್ ಲಾಡ್, ಅದರ ಫಲವನ್ನು ಮುಂದಿನ ಚುನಾವಣೆಯಲ್ಲಿ ಅನುಭವಿಸಿದರು. 2018ರ ಚುನಾವಣೆಯಲ್ಲಿ ಸಂತೋಷ್ ಲಾಡ್ ಸೋತುಹೋಗಿದ್ದರು. ಚುನಾವಣೆಯಲ್ಲಿ ಸೋತರೂ ಕೆಪಿಸಿಸಿಯಲ್ಲಿ ಉಪಾಧ್ಯಕ್ಷ ಸೇರಿದಂತೆ ಹಲವು ಹುದ್ದೆಗಳನ್ನು ನಿಭಾಯಿಸುವ ಮೂಲಕ ಚಾಲ್ತಿಯಲ್ಲಿದ್ದರು.
ತಾನೊಬ್ಬ ಶಾಸಕನಾಗುವುದಷ್ಟೇ ಸಂತೋಷ್ ಲಾಡ್‌ಗೆ ಮುಖ್ಯವಲ್ಲ. ಸರ್ಕಾರದಲ್ಲಿ ಮುಖ್ಯ ಪಾತ್ರ ವಹಿಸಬೇಕು ಎನ್ನುವ ಮಹತ್ವಾಕಾಂಕ್ಷೆ; ತನ್ನ ಸುತ್ತಮುತ್ತ ತಾನೇ ನಿರ್ಣಾಯಕ ಶಕ್ತಿಯಾಗಿರಬೇಕು ಎನ್ನುವ ಹಂಬಲ. ಅವರ ಇಂಥ ಆಲೋಚನೆಯ ಫಲವಾಗಿಯೇ ಸಂತೋಷ್ ಲಾಡ್ ಅವರ ಕಚೇರಿಯಲ್ಲಿ ಸಣ್ಣ ಕೆಲಸವೊಂದರಲ್ಲಿದ್ದ ತುಕಾರಾಂ ಸಂಡೂರು ಶಾಸಕರಾದರು. ಆ ಕ್ಷೇತ್ರ ಎಸ್‌ಟಿ ಮೀಸಲು ಕ್ಷೇತ್ರವಾದ ನಂತರ ತುಕಾರಾಂ ಅವರನ್ನು ಶಾಸಕರನ್ನಾಗಿಸುವ ಮೂಲಕ ಕ್ಷೇತ್ರವನ್ನು ತಮ್ಮ ಹಿಡಿತದಲ್ಲೆ ಇರುವಂತೆ ನೋಡಿಕೊಂಡರು.
ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಕಮಿಷನ್ ದಂಧೆ, ದುರಾಡಳಿತದ ವಿರುದ್ಧದ ಜನರ ಸಿಟ್ಟಿನಿಂದಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುವುದರ ಹಿಂದೆ ‘ಎದ್ದೇಳು ಕರ್ನಾಟಕ’ದಂಥ ಸಂಘಟನೆಗಳ, ಕೆಂಪಣ್ಣ ಅವರಂಥ ಭ್ರಷ್ಟಾಚಾರ ವಿರೋಧಿ ಹೋರಾಟಗಾರರ ಅಪಾರ ಶ್ರಮ ಮತ್ತು ರಿಸ್ಕ್ ಇದೆ. ಇಂಥವರಿಂದ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರದಲ್ಲಿ ಅಕ್ರಮ ಗಣಿ ಆರೋಪದ ಸಂತೋಷ್ ಲಾಡ್ ಕಾರ್ಮಿಕ ಸಚಿವರಾಗಿದ್ದಾರೆ. ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ ಕೆಂಪಣ್ಣ ಅವರ ವಿರುದ್ಧ ಬಿಜೆಪಿ ಸರ್ಕಾರದ ಸಚಿವರಾಗಿದ್ದ ಕೆ.ಸುಧಾಕರ್, ಮುನಿರತ್ನ ಕೇಸ್ ಹಾಕಿ ಜೈಲಿಗೆ ಕಳಿಸಿದ್ದರು. ಅದೇ ರೀತಿ ಸಂತೋಷ್ ಲಾಡ್ ಕೂಡ ತಾವು ಅಧಿಕಾರದಲ್ಲಿದ್ದಾಗ ತಮ್ಮ ವಿರುದ್ಧ ದಾಖಲೆಗಳೊಂದಿಗೆ ಭ್ರಷ್ಟಾಚಾರದ ಆರೋಪ ಮಾಡಿದ್ದ ಎಸ್ ಆರ್ ಹಿರೇಮಠ್ ವಿರುದ್ಧ ಪ್ರತಿದೂರು ದಾಖಲಿಸಿದ್ದರು. ಇದೆಲ್ಲ ಈ ರಾಜ್ಯದ ಪ್ರಜ್ಞಾವಂತರು ಇನ್ನೂ ಮರೆತಿಲ್ಲ ಎನ್ನುವುದನ್ನು ಸಂತೋಷ್ ಲಾಡ್ ಮತ್ತು ಕಾಂಗ್ರೆಸ್ ಸರ್ಕಾರ ನೆನಪಿನಲ್ಲಿಟ್ಟುಕೊಳ್ಳಬೇಕಿದೆ.
ಸಂತೋಷ್ ಲಾಡ್ ಸಣ್ಣ ಹಿಡುವಳಿದಾರರಾಗಿ ಕೃಷಿ ಮಾಡುತ್ತಿರುವ, ದರ್ಜಿಗಳಾಗಿ ಬಟ್ಟೆ ಹೊಲೆಯುವ, ಸಣ್ಣಪುಟ್ಟ ಉದ್ಯೋಗಳನ್ನು ಮಾಡಿಕೊಂಡು ಕಾರ್ಮಿಕರಾಗಿ ಜೀವನ ಸಾಗಿಸುವ ಮರಾಠ ಸಮುದಾಯವನ್ನು ಸಂಪುಟದಲ್ಲಿ ಪ್ರತಿನಿಧಿಸುತ್ತಿದ್ದಾರೆ. ತಮ್ಮ ಸಮುದಾಯವೂ ಸೇರಿದಂತೆ ರಾಜ್ಯದ ಲಕ್ಷಾಂತರ ಕಾರ್ಮಿಕರ ಆಶೋತ್ತರಗಳಿಗೆ ಸ್ಪಂದಿಸುವ ಮೂಲಕ ಈ ಬಾರಿಯಾದರೂ ಜಾಗ್ರತೆಯಿಂದ ಆಡಳಿತ ನಡೆಸಬೇಕಾದ ಹೊಣೆಗಾರಿಕೆ ಜವಾಬ್ದಾರಿಯುತ ಸರ್ಕಾರದ ಭಾಗವಾದ ಸಂತೋಷ್ ಲಾಡ್ ಅವರ ಮೇಲಿದೆ.