ಬೆಳಗಾವಿಯ ಸುವರ್ಣ ಸೌಧದಲ್ಲಿರುವ ಬಲಪಂಥೀಯ ಸಿದ್ಧಾಂತಿ, ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಬ್ರಿಟೀಷರಲ್ಲಿ ಕ್ಷಮಾಪಣೆ ಕೇಳಿ ಪತ್ರ ಬರೆದಿದ್ದ ಸಾವರ್ಕರ್ ಫೋಟೋ ತೆಗೆಯುವ ವಿಚಾರದಲ್ಲಿ ಸ್ಪೀಕರ್ ಯು.ಟಿ.ಖಾದರ್ ಮೃದು ಧೋರಣೆ ತಾಳಿದ್ದರು. ಈ ನಡೆಯ ವಿರುದ್ಧ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಸಂದೇಶ ಹಾಕಿದ ಆರೋಪದ ಮೇರೆಗೆ ಎಸ್‌ಡಿಪಿಐ ಮುಖಂಡನೋರ್ವನನ್ನು ಬಂಧಿಸಿ, ಬಳಿಕ ಬಿಡುಗಡೆಗೊಳಿಸಿದ ಬೆಳವಣಿಗೆ ಮಂಗಳೂರಿನಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.
ಮಂಗಳೂರು ನಗರದ ಉರ್ವ ಠಾಣೆಯ ಪೊಲೀಸರು ಎಸ್‌ಡಿಪಿಐ ಮುಖಂಡ ರಿಯಾಝ್ ಕಡಂಬು ಅವರನ್ನ ಬಂಧಿಸಿ ವಿಚಾರಣೆ ನಡೆಸಿದ ಬಳಿಕ ತಡರಾತ್ರಿ ಬಿಡುಗಡೆ ಮಾಡಿದ್ದಾರೆ.
ಅವಹೇಳನಕಾರಿ ಸಂದೇಶ ಹಾಕಿದ ಹಿನ್ನೆಲೆಯಲ್ಲಿ ಮಂಗಳೂರು ಸೈಬರ್, ಇಕಾನಾಮಿಕ್ ಹಾಗೂ ನಾರ್ಕೋಟಿಕ್ಸ್ (ಸೆನ್) ಠಾಣೆಯಲ್ಲಿ ಪೊಲೀಸರು ಸ್ವಯಂಪ್ರೇರಿತ ದಾಖಲಿಸಿಕೊಂಡಿದ್ದರು. ರಿಯಾಝ್ ನಗರದ ಫ್ಲ್ಯಾಟ್‌ವೊಂದರಲ್ಲಿ ವಾಸವಾಗಿದ್ದು, ಅಲ್ಲಿಂದ ಉರ್ವ ಪೊಲೀಸರು ಬಂಧಿಸಿದ್ದರು.
ರಾಜ್ಯ ವಿಧಾನಸಭೆಯ ಅಧ್ಯಕ್ಷ, ಉಳ್ಳಾಲದ ಶಾಸಕರೂ ಆಗಿರುವ ಯು.ಟಿ.ಖಾದರ್ ವಿರುದ್ಧ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಸಂದೇಶ ಹಾಕಿದ ಆರೋಪದ ಮೇರೆಗೆ ಮಂಗಳೂರು ಸೆನ್ ಠಾಣೆಯಲ್ಲಿ ಪೊಲೀಸರು ಮಂಗಳವಾರ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು.
ಮುಹಮ್ಮದ್ ರಿಯಾಝ್ ಎಂಬ ಫೇಸ್‌ಬುಕ್‌ನಲ್ಲಿ ಖಾತೆ ಹೊಂದಿರುವ ವ್ಯಕ್ತಿಯು ಡಿ.10ರಂದು ಸ್ಪೀಕರ್ ಯು.ಟಿ.ಖಾದರ್ ಅವರ ಭಾವಚಿತ್ರವನ್ನು ಎಡಿಟ್ ಮಾಡಿ ಸಾವರ್ಕರ್ ಹಾಕಿರುವ ಟೋಪಿಯನ್ನು ಹಾಕಿ “ನಾನು ಸಾವರ್ಕರ್ ಅಭಿಮಾನಿ ಖಾದರ್ಕರ್” ಎಂಬುದಾಗಿ ಹಾಗೂ “ಆತ ಬ್ರಿಟಿಷರೊಂದಿಗೆ ಕ್ಷಮಾಪಣಾ ಪತ್ರ ಬರೆದರೆ ಈತ ಸಂಘಿಗಳೆದುರು ಮಂಡಿಯೂರಿದ ಸಭಾಧ್ಯಕ್ಷ” ಎಂಬುದಾಗಿ ಹಾಕಿದ್ದಾರೆ ಎಂದು ಸ್ವಯಂ ಪ್ರೇರಿತ ದೂರಿನಲ್ಲಿ ತಿಳಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿ, ಬಳಿಕ ವಿಚಾರಣೆ ನಡೆಸಿದ್ದಾರೆ. ಬಿಡುಗಡೆಗೊಂಡ ಬಳಿಕ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿರುವ ಎಸ್‌ಡಿಪಿಐ ಮುಖಂಡ ರಿಯಾಝ್ ಕಡಂಬು, “ಪಕ್ಷದ ನಾಯಕರ ಶ್ರಮ ಮತ್ತು ಕಾರ್ಯಕರ್ತರ, ಹಿತೈಷಿಗಳ ಬೆಂಬಲದ ಕಾರಣದಿಂದ ಬಿಡುಗಡೆಗೊಂಡಿದ್ದೇನೆ. ನನಗಾಗಿ ಧ್ವನಿಯಾದ, ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದ” ಎಂದು ತಿಳಿಸಿದ್ದಾರೆ.
ಆಗಿರುವುದೇನು?
ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೆಳಗಾವಿಯ ಸುವರ್ಣ ಸೌಧದಲ್ಲಿ ಸಾವರ್ಕರ್ ಫೋಟೋ ಹಾಕಲಾಗಿತ್ತು. ಈ ಫೋಟೋ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಮಾಧ್ಯಮದವರು ಸ್ಪೀಕರ್ ಯು ಟಿ ಖಾದರ್ ಅವರನ್ನು ಪ್ರಶ್ನಿಸಿದ್ದರು.
ಫೋಟೋ ತೆರವು ಮಾಡುವ ಬಗ್ಗೆ ಅಭಿಪ್ರಾಯ ತಿಳಿಸಿದ್ದ ಸ್ಪೀಕರ್ ಖಾದರ್, ‘ನನ್ನ ಕೆಲಸ ಜೋಡಿಸುವುದು, ಕಿತ್ತು ಬಿಸಾಕುವುದಲ್ಲ’ ಎಂದಿದ್ದರು.

ಇದಕ್ಕೆ ವಿರುದ್ಧವಾಗಿ ಫೇಸ್‌ಬುಕ್ ನಲ್ಲಿ ಖಾದರ್ ವಿರುದ್ದ ಪೋಸ್ಟ್ ಹಾಕಿದ್ದ ರಿಯಾಝ್ ಕಡಂಬು,” ‘ಇಷ್ಟೇ… ಅದ್ಯಾವ ಪರಿಸರ ಹೇಳಿ, ಚಪ್ಪಲಿ ನೆಕ್ಕಿ ಸಾವರ್ಕರ್‌ನ ಫೋಟೋವನ್ನು ಇಟ್ಟು ಜೋಡಿಸುತ್ತಿದ್ದ ಪರಿಸರ. ಈ ವ್ಯಕ್ತಿಯಿಂದ ಆರ್‌ಎಸ್‌ಎಸ್ ವಿರುದ್ಧ ನಿಲ್ಲಲು ಈ ಆಯಸ್ಸು ಪೂರ್ತಿ ಅಧಿಕಾರದಲ್ಲಿದ್ದರೂ ಸಾಧ್ಯವಿಲ್ಲ. ಚುನಾವಣೆಯಲ್ಲಿ ಕೇಳ್ತಿದ್ರಲ್ಲಾ ಎಸ್‌ಡಿಪಿಐ ಯಾಕೆ ಒಬ್ಬ ಮುಸ್ಲಿಂ ಎಂಎಲ್‌ಎ ವಿರುದ್ಧ ಸ್ಪರ್ಧೆ ಮಾಡುವುದೆಂದು. ದೇಶದ್ರೋಹಿ, ಸಂವಿಧಾನ ವಿರೋಧಿ, ಜಾತ್ಯತೀತ ವಿರೋಧಿ, ಕೋಮುವಾದಿ ಆರ್‌ಎಸ್‌ಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಈ ರೀತಿ ಜೋಡಿಸಲು ಹೊರಟಿದ್ದಾರೆ. ಎಂದಾದರೂ ಒಂದು ದಿನ ಎಸ್‌ಡಿಪಿಐ ಅದರೊಳಗೆ ಲಗ್ಗೆ ಇಟ್ಟರೆ, ಸಾವರ್ಕರ್ ಫೋಟೊ ಕಿತ್ತು ಬಿಸಾಕಲು ಸದನದಲ್ಲಿ ಹೋರಾಟ ಮಾಡುತ್ತೇವೆ. ಅದ್ಯಾವ ವ್ಯಕ್ತಿ ಸಭಾಧ್ಯಕ್ಷ ಆಗಿದ್ದರೂ, ನಾವು ಆ ಕೆಲಸ ಮಾಡುತ್ತೇವೆ. ಈ ಸಭಾಧ್ಯಕ್ಷರಿಗೆ ಚಾಲೆಂಜ್, ಕಿತ್ತು ಬಿಸಾಕಿ, ಟಿಪ್ಪು ಭಾವಚಿತ್ರ ಧಮ್ಮಿದ್ದರೆ ಅಳವಡಿಸಿ” ಎಂದು ಪೋಸ್ಟ್ ಹಾಕಿದ್ದರು.