ನೂತನ ಸಂಸತ್ ಭವನದ ಉದ್ಘಾಟನಾ ದಿನದಂದು ಉಭಯ ಸದನಗಳ ಸಂಸದರಿಗೆ ನೀಡಿದ ಸಂವಿಧಾನದ ಪ್ರತಿಗಳಲ್ಲಿನ ಪ್ರಸ್ತಾವನೆಯಲ್ಲಿ ‘ಜಾತ್ಯತೀತ’ ಮತ್ತು ‘ಸಮಾಜವಾದಿ’ ಪದಗಳು ಕಣ್ಮರೆಯಾಗಿವೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಆರೋಪಿಸಿದ್ದಾರೆ.
ಆದಾಗ್ಯೂ, ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಈ ಬಗ್ಗೆ ಮಾತನಾಡಿ, ಸಂವಿಧಾನದ ಪ್ರಸ್ತಾವನೆಯು ಮೂಲ ಆವೃತ್ತಿಯನ್ನು ಹೊಂದಿದ್ದು, ಸಂವಿಧಾನಾತ್ಮಕ ತಿದ್ದುಪಡಿಗಳ ನಂತರ ಈ ಉಲ್ಲೇಖಿತ ನಿರ್ದಿಷ್ಟ ಪದಗಳನ್ನು ಸೇರಿಸಲಾಯಿತು. ತಿದ್ದುಪಡಿ ಪ್ರಕ್ರಿಯೆಯ ಮೂಲಕ ಸಂವಿಧಾನದ ಪ್ರಸ್ತಾವನೆಗೆ ಸೇರಿಸಲಾದ ಹೆಚ್ಚುವರಿ ಪದಗಳನ್ನು ಈ ಪ್ರತಿಗಳು ಒಳಗೊಂಡಿಲ್ಲ ಎಂದು ಹೇಳಿದರು.
‘ಇದು ಸಂವಿಧಾನದ ಮೂಲ ಪ್ರಸ್ತಾವನೆಯ ಪ್ರಕಾರವಾಗಿದೆ. ತಿದ್ದುಪಡಿಗಳನ್ನು ನಂತರ ಮಾಡಲಾಗಿದೆ’ ಎಂದು ಅವರು ತಿಳಿಸಿದ್ದಾರೆ.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಅಧೀರ್ ರಂಜನ್ ಚೌಧರಿ, ಈ ಪದಗಳನ್ನು ‘ಜಾಣತನದಿಂದ ತೆಗೆದುಹಾಕಲಾಗಿದೆ’ ಎಂದು ದೂರಿದ ಅವರು, ಬಿಜೆಪಿ ಸರ್ಕಾರದ ಉದ್ದೇಶಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.
‘ನಾವು ಹೊಸ ಸಂಸತ್ ಕಟ್ಟಡಕ್ಕೆ ಕೊಂಡೊಯ್ದ ಸಂವಿಧಾನದ ಪ್ರಸ್ತಾವನೆಯ ಪ್ರತಿಯಲ್ಲಿ ಜಾತ್ಯತೀತ ಮತ್ತು ಸಮಾಜವಾದಿ ಎನ್ನುವ ಪದಗಳಿಲ್ಲ. ಅವುಗಳನ್ನು ಜಾಣತನದಿಂದ ತೆಗೆದುಹಾಕಲಾಗಿದೆ. ಇದು ಗಂಭೀರ ವಿಷಯ ಮತ್ತು ನಾವು ಸದನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸುತ್ತೇವೆ. ಈ ಪದಗಳನ್ನು 1976ರಲ್ಲಿ ಸಂವಿಧಾನಕ್ಕೆ ಸೇರಿಸಲಾಯಿತು ಎಂಬುದು ನನಗೆ ತಿಳಿದಿದೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ತೆಲಂಗಾಣದ ಬಗ್ಗೆ ಮೋದಿ ಅವಹೇಳನ: ರಾಹುಲ್ ಗಾಂಧಿ ಆಕ್ರೋಶ
‘ಇದು ಗಂಭೀರ ಸಮಸ್ಯೆಯಾಗಿದೆ. ಅವರ ಹೃದಯದಲ್ಲಿ ಈ ಬಗ್ಗೆ ಸ್ಪಷ್ಟತೆಯಿಲ್ಲದ ಕಾರಣ ನಾನು ಅವರ ಉದ್ದೇಶಗಳ ಬಗ್ಗೆ ಅನುಮಾನಿಸುತ್ತೇನೆ. ಯಾರಿಗಾದರೂ ಸಂವಿಧಾನದ ಪ್ರತಿಯನ್ನು ನೀಡುವುದೇ ಆದರೆ, ಅದನ್ನು ಇಂದಿನ ಆವೃತ್ತಿಯಲ್ಲಿರುವಂತೆಯೇ ನೀಡಬೇಕು’ ಎಂದು ಹೇಳಿದರು.
ಸಿಪಿಎಂನ ಬಿನೋಯ್ ವಿಶ್ವಂ ಅವರು ಸಂವಿಧಾನದ ಪ್ರಸ್ತಾವನೆಯಿಂದ ಈ ಪದಗಳನ್ನು ತೆಗೆದುಹಾಕುವುದು ‘ಅಪರಾಧ’ ಎಂದು ತಿಳಿಸಿದ್ದಾರೆ.
ಎಡಪಕ್ಷಗಳು ಮತ್ತು ಇತರ ಪಕ್ಷಗಳು ಸೇರಿದಂತೆ ಹಲವಾರು ವಿರೋಧ ಪಕ್ಷದ ಸಂಸದರು ಸದನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸುವ ಸಾಧ್ಯತೆಯಿದೆ.