ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ರಾಜ್ಯಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿಯವರ ರೋಡ್ ಶೋ ಕಾರ್ಯಕ್ರಮ ಭಾನುವಾರವೂ ಮುಂದುವರೆದಿದೆ. ಶನಿವಾರ ರಾಜಧಾನಿ ಬೆಂಗಳೂರಿನಲ್ಲಿ ಮತಯಾಚಿಸಿದ್ದ ಪ್ರಧಾನಿ ಇಂದು ಮೈಸೂರಿಗೆ ಆಗಮಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಮೈಸೂರಿನಲ್ಲಿ ನಡೆಸಿದ ರೋಡ್ ಶೋ ವೇಳೆ ಭದ್ರತಾ ಲೋಪ ಉಂಟಾಗಿದ್ದು, ಅಪರಿಚಿತ ವ್ಯಕ್ತಿಯೊಬ್ಬರು ಪ್ರಧಾನಿಯವರಿದ್ದ ವಾಹನಕ್ಕೆ ಮೊಬೈಲ್ ಎಸೆದ ಘಟನೆ ನಡೆದಿದೆ.
ಮೈಸೂರಿನ ವಿದ್ಯಾಪೀಠದಿಂದ ಹೈವೇ ವೃತ್ತದ ಬಳಿ ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ಸಂಜೆ ರೋಡ್ ಶೋ ನಡೆಸಿ ಬಿಜೆಪಿ ಪರ ಮತಯಾಚಿಸಿದರು. ಪ್ರಚಾರ ಕಾರ್ಯದ ವೇಳೆ ರಸ್ತೆ ಬದಿ ಜನಸ್ತೋಮವೇ ಕಂಡು ಬಂತು. ಎಲ್ಲರೂ ಮೋದಿ ಮೋದಿ ಎಂದು ಜೈ ಕಾರ ಕೂಗುತ್ತಿದ್ದರು. ಈ ವೇಳೆ ಅಪರಿಚಿತ ವ್ಯಕ್ತಿಯೊಬ್ಬರು ಹೂವು ಎಸೆಯುವ ಬದಲು ಮೊಬೈಲ್ ಎಸೆದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಮೊಬೈಲ್ ಎಸೆದ ವ್ಯಕ್ತಿ ಯಾರು ಸೇರಿದಂತೆ ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಹೊರ ಬರಬೇಕಿದೆ.