ಯುವಕನೋರ್ವನಿಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪದ ಮೇಲೆ ಜೆಡಿಎಸ್ ಮುಖಂಡ, ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಸಂತ್ರಸ್ತ ಯುವಕ ನೀಡಿದ ದೂರನ್ನು ಆಧರಿಸಿ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಾಯ್ದೆ ಸಂಖ್ಯೆ 1860ರ ಅಡಿಯಲ್ಲಿರುವ ಸೆಕ್ಷನ್ 377 (ಅಸ್ವಾಭಾವಿಕ ಅಪರಾಧ), 342 (ತಪ್ಪಾದ ಬಂಧನಕ್ಕೆ ಶಿಕ್ಷೆ ) ಹಾಗೂ 506 (ಬೆದರಿಕೆ) ಯಡಿ ಪ್ರಕರಣ ದಾಖಲು ಮಾಡಲಾಗಿದೆ.
#PrajwalRevanna‘s brother Suraj Revanna accused of sexually assaulting a man!
Youth named Chetan says he visited #SurajRevanna seeking a job, who then forced him into homosexual acts at a farmhouse in Gannikada on June 16#Chetan files a complaint at the DG office in… pic.twitter.com/97EKXzozyA
— Nabila Jamal (@nabilajamal_) June 22, 2024
ಸಂತ್ರಸ್ತ ಯುವಕ ಶುಕ್ರವಾರ ಡಿಜಿ ಕಛೇರಿಯಲ್ಲಿ ದೂರು ನೀಡಿದ್ದ. ಅಲ್ಲದೇ, ಹಾಸನ ಎಸ್ಪಿಗೂ ದೂರಿನ ಪ್ರತಿ ಇ-ಮೇಲ್ ಮೂಲಕ ಕಳಿಸಿದ್ದ. ಇದೀಗ ಈ ದೂರನ್ನು ಆಧರಿಸಿ ಸಂತ್ರಸ್ತನನ್ನ ಕರೆಸಿ ಮಾಹಿತಿ ಪಡೆದಿರುವ ಪೊಲೀಸರು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಿನ್ನೆ ಸೂರಜ್ ರೇವಣ್ಣ ಅವರ ಆಪ್ತ ಶಿವಕುಮಾರ್ ನೀಡಿದ ದೂರು ಆಧರಿಸಿ, ಹೊಳೆನರಸೀಪುರ ನಗರ ಠಾಣೆಯಲ್ಲಿ ಸಂತ್ರಸ್ತ ಯುವಕನ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
ಸಂತ್ರಸ್ತ ನೀಡಿದ ದೂರಿನಲ್ಲೇನಿದೆ?
ಸೂರಜ್ ರೇವಣ್ಣ ನನಗೆ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪರಿಚಯವಾಗಿದ್ದರು. ನಾನು ಅವರ ತಮ್ಮ ಪ್ರಜ್ವಲ್ ರೇವಣ್ಣ ಪರ ಕೆಲಸ ಮಾಡಿದ್ದೇನೆ. ಆ ಸಂದರ್ಭ ನನ್ನ ನಂಬರ್ ಅನ್ನು ಸೂರಜ್ ರೇವಣ್ಣ ಪಡೆದುಕೊಂಡಿದ್ದರಿಂದ ಸಂಪರ್ಕವಾಗಿತ್ತು. ಜೂ.14 ರಂದು ಸೂರಜ್ ನನಗೆ ಮೆಸೇಜ್ ಮಾಡಿದ್ದರು. ಮೆಸೇಜ್ನಲ್ಲಿ ನನ್ನ ಬಗ್ಗೆ ಎಲ್ಲಾ ಮಾಹಿತಿ ಪಡೆದಿದ್ದರು. ನಂತರ ಜೂ.16 ರಂದು ಹೊಳೆನರಸೀಪುರ ತಾಲೂಕಿನ, ಗನ್ನಿಕಡ ತೋಟಕ್ಕೆ ಸಂಜೆ ಬರಲು ಹೇಳಿದ್ದರು. ನಾನು ಹೋದ ಸಂದರ್ಭ ಮನೆಯಲ್ಲಿ ಒಬ್ಬರೇ ಇದ್ದರು. ನನಗೆ ಇಷ್ಟವಿಲ್ಲದಿದ್ದರೂ, ಲೈಂಗಿಕ ಕಿರುಕುಳ ನೀಡಿದ್ದಾರೆ. ಆ ಸಂದರ್ಭ ನನಗೆ ಪುರುಷರನ್ನು ಕಂಡರೆ ಆಸಕ್ತಿ ಮಹಿಳೆಯರನ್ನು ಕಂಡರೆ ಆಸಕ್ತಿ ಇಲ್ಲ ಎಂದು ಹೇಳಿ ನನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆ. ನಾನು ಕಾಲಿಗೆ ಬಿದ್ದು ಬೇಡಿಕೊಂಡರೂ ಕೂಡ ನನ್ನನ್ನು ಬಿಡಲಿಲ್ಲ. ನನಗೆ ಈ ಘಟನೆಯಿಂದ ಆಘಾತಕ್ಕೊಳಗಾಗಿದ್ದೇನೆ ಎಂದು ಯುವಕ ದೂರಿನಲ್ಲಿ ಉಲ್ಲೇಖಿಸಿದ್ದಾನೆ.
ಇದನ್ನು ಓದಿದ್ದೀರಾ? ಸೂರಜ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ: ಸಂತ್ರಸ್ತನ ವಿರುದ್ಧವೇ FIR ದಾಖಲು
“ಈಗ ನನಗೆ ಆಗಿರುವ ದೌರ್ಜನ್ಯದ ಬಗ್ಗೆ ಕುಟುಂಬದವರಿಗೂ ತಿಳಿಸಿದ್ದರಿಂದ ಸೂರಜ್ ರೇವಣ್ಣನವರ ಕಡೆಯಿಂದ ನನಗೆ ಕೊಲೆ ಬೆದರಿಕೆ ಇದೆ. ನನಗೆ ಹಾಗೂ ನನ್ನ ಕುಟುಂಬಕ್ಕೆ ಸೂಕ್ತ ನ್ಯಾಯ ಒದಗಿಸುವುದರೊಂದಿಗೆ ರಕ್ಷಣೆ ನೀಡಬೇಕು. ನನ್ನಲ್ಲಿರುವ ಎಲ್ಲ ದಾಖಲೆಗಳನ್ನು ತನಿಖೆಯ ಸಂದರ್ಭದಲ್ಲಿ ನೀಡಲು ಬದ್ಧನಿದ್ದೇನೆ ಎಂದು ಸಂತ್ರಸ್ತ ಯುವಕ ದೂರಿನಲ್ಲಿ ತಿಳಿಸಿದ್ದಾರೆ.
