“ನನ್ನ ಹಾಗೂ ಸಿಎಂ ಸಿದ್ದರಾಮಯ್ಯ ವಿರುದ್ಧ ಕೇರಳದ ದೇವಸ್ಥಾನವೊಂದರಲ್ಲಿ ಶತ್ರು ಭೈರವಿ(ಶತ್ರು ಸಂಹಾರ) ಯಾಗ ನಡೆಯುತ್ತಿದೆ. ಯಾರು ಮಾಡುತ್ತಿದ್ದಾರೆ, ಯಾರು ಮಾಡಿಸುತ್ತಿದ್ದಾರೆ ಎಂಬ ಬಗ್ಗೆಯೂ ನನಗೆ ಮಾಹಿತಿ ಇದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಜತೆ ಗುರುವಾರ ಮಾತನಾಡಿದ ಅವರು, “ಕೇರಳದ ರಾಜರಾಜೇಶ್ವರಿ ದೇವಸ್ಥಾನದ ಆಸುಪಾಸಿನಲ್ಲಿ ನನ್ನನ್ನು ಸೇರಿಸಿ ಸಿಎಂ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ಶತ್ರು ಭೈರವಿ ಯಾಗ ನಡೆಯುತ್ತಿದೆ. ಅಂದರೆ ಇದು ಶತ್ರು ಸಂಹಾರ ಯಾಗ. ರಾಜಕೀಯ ಮುಖಂಡರೊಬ್ಬರು ಮಾಡುತ್ತಿದ್ದಾರೆ. ಅದರಲ್ಲಿ ಪಾಲ್ಗೊಂಡವರಿಂದ ನಮಗೆ ಮಾಹಿತಿ ಬಂದಿದೆ. ಅವರ ಯಾಗಕ್ಕಿಂತ ನಮ್ಮ ನಂಬಿಕೆ, ದೇವರ ಕೃಪೆ ಹಾಗೂ ಜನರ ಆಶೀರ್ವಾದ ನಮ್ಮನ್ನು ಕಾಪಾಡಲಿದೆ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಮೈಸೂರು | ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದ ಕುವೆಂಪುನಗರ ಎಸ್‌ಐ
“ಕರ್ನಾಟಕದ ಪ್ರಬಲ ರಾಜಕೀಯ ನಾಯಕರೊಬ್ಬರು ಅಘೋರಿಗಳ ಮೂಲಕ ಕೇರಳದ ದೇವಸ್ಥಾನದಲ್ಲಿ 21 ಮೇಕೆ, ಕಪ್ಪುಬಣ್ಣದ 21 ಕುರಿ, 5 ಹಂದಿ, 3 ಎಮ್ಮೆಗಳನ್ನು ಬಲಿ ನೀಡುವ ಮೂಲಕ ನನ್ನ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಶತ್ರು ಸಂಹಾರ ಯಾಗ ಮಾಡಿದ್ದಾರೆ. ಅವರು ನಮ್ಮ ಸರ್ಕಾರ ಪತನವಾಗಬೇಕೆಂದು ಬಯಸುತ್ತಿದ್ದಾರೆ. ಇದರಲ್ಲಿ ಯಾರು ಪಾಲ್ಗೊಂಡಿದ್ದರೋ ಅವರು ನಮಗೆ ಮಾಹಿತಿ ನೀಡಿದ್ದಾರೆ” ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
“A powerful Karnataka political leader has performed Shatru Samhara Yagna (slaying of enemy) against me and Chief Minister Siddaramaiah by sacrificing 21 black sheep, 5 pigs, chicken and 10 buffalo at a Kerala temple. He wants our government to collapse” Karnataka Deputy Chief…
— DP SATISH (@dp_satish) May 30, 2024
“ಅವರ ಪ್ರಯತ್ನ ಅವರು ಮಾಡಲಿ, ಆ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಅವರವರ ನಂಬಿಕೆ ಅವರದು. ಹೀಗಾಗಿ ಇಂತಹ ಪ್ರಯತ್ನ ಮಾಡುತ್ತಾರೆ. ಅವರು ನಮ್ಮ ಮೇಲೆ ಏನೇ ಪ್ರಯೋಗ ಮಾಡಿದರೂ ನಾನು ನಂಬಿರುವ ಶಕ್ತಿ ನಮ್ಮನ್ನು ಕಾಪಾಡಲಿದೆ. ನಾನು ಪ್ರತಿನಿತ್ಯ ಮನೆಯಿಂದ ಹೊರಡುವ ಮುನ್ನ ದೇವರಿಗೆ ಒಂದು ನಿಮಿಷ ಕೈಮುಗಿದು ಪ್ರಾರ್ಥಿಸುತ್ತೇನೆ” ಎಂದು ತಿಳಿಸಿದರು.
ಬಿಜೆಪಿಯವರೋ ಜೆಡಿಎಸ್‌ನವರೋ ಎಂದು ಪತ್ರಕರ್ತರು ಪ್ರಶ್ನಿಸಿದಾಗ, “ಯಾರು ಮಾಡುತ್ತಿದ್ದಾರೆ, ಯಾರು ಮಾಡಿಸುತ್ತಿದ್ದಾರೆ ಎಂಬ ಬಗ್ಗೆಯೂ ನನಗೆ ಮಾಹಿತಿ ಇದೆ. ಈ ಬಗ್ಗೆ ನಾನು ಮಾತನಾಡುವುದಿಲ್ಲ” ಎಂದಷ್ಟೇ ಹೇಳಿದರು.
“ನಿಂಬೆ ಹಣ್ಣು ನಿಪುಣರು” ಇದನ್ನು ಮಾಡಿಸುತ್ತಿದ್ದಾರೆಯೇ ಎಂದು ಮಾಧ್ಯಮದವರು ಕೇಳಿದಾಗ, “ನನ್ನ ಬಾಯಿಂದ ಹೇಳಿಸುವುದರ ಬದಲು, ನೀವೇ ಈ ಬಗ್ಗೆ ತನಿಖಾ ವರದಿ ಮಾಡಿ” ಎಂದು ಡಿ ಕೆ ಶಿವಕುಮಾರ್ ತಿಳಿಸಿದರು.
ನಿಮ್ಮನ್ನೇ ಏಕೆ ಗುರಿ ಮಾಡುತ್ತಾರೆ, ನಿಮ್ಮ ರಕ್ಷಣೆಗಾಗಿ ನೀವೂ ವಾಪಾಸ್ ಏನಾದರೂ ಮಾಡುತ್ತಿರಾ ಎಂದು ಕೇಳಿದಾಗ, “ಯಾವಾಗಲೂ ರಾಜಕೀಯವಾಗಿ ಚಟುವಟಿಕೆಯಿಂದ ಇರುವವರು ವಿರೋಧಿಗಳ ಕೆಂಗಣ್ಣಿಗೆ ಗುರಿ ಆಗುತ್ತಾರೆ. ಅವರು ಮಾಡೋದು ಮಾಡಲಿ, ನನ್ನ ಶಕ್ತಿ ನನ್ನ ರಕ್ಷಣೆಗೆ ಇದೆ. ನಾನು ಅಂತಹ ಯಾವುದೇ ಚಟುವಟಿಕೆ ಮಾಡುವುದಿಲ್ಲ. ದೇವರನ್ನು ಮಾತ್ರ ನಂಬಿದ್ದೇನೆ” ಎಂದರು.
