ಉತ್ತರಾಖಂಡದಲ್ಲಿ ಜಾರಿಯಾದ ‘ಏಕರೂಪ ನಾಗರಿಕ ಸಂಹಿತೆ’ (ಯುಸಿಸಿ) ಬಗ್ಗೆ ಪ್ರತಿಕ್ರಿಯಿಸಿರುವ ನಟ, ಟಿಎಂಸಿ ಸಂಸದ ಶತ್ರುಘ್ನ ಸಿನ್ಹಾ ಅವರು ‘ದೇಶಾದ್ಯಂತ ಮಾಂಸಾಹಾರವನ್ನು ನಿಷೇಧ ಮಾಡಿ’ ಎಂದು ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಉತ್ತರಾಖಂಡದಲ್ಲಿ ಯುಸಿಸಿ ಜಾರಿಗೆ ಬಂದಿರುವುದು ಖುಚಿಯ ವಿಚಾರ. ಯುಸಿಸಿಯನ್ನು ದೇಶಾದ್ಯಂತ ಜಾರಿಗೆ ತರಬೇಕು ಎಂಬುದು ನನ್ನ ಒತ್ತಾಯ. ಯುಸಿಸಿಯಲ್ಲಿ ಹಲವು ಸೂಕ್ಷ್ಮ ವಿಚಾರ ಮತ್ತು ಲೋಪದೋಷಗಳಿವೆ. ಕೇವಲ ಗೋಮಾಂಸವಲ್ಲ, ಒಟ್ಟಾರೆಯಾಗಿ ಮಾಂಸಾಹಾರವನ್ನೇ ದೇಶದಲ್ಲಿ ನಿಷೇಧಿಸಬೇಕು” ಎಂದಿದ್ದಾರೆ.
ಆದಾಗ್ಯೂ, “ಯುಸಿಸಿ ಮೂಲಕ ಉತ್ತರ ಭಾರತದಲ್ಲಿ ಕೆಲವು ನಿಯಮಗಳನ್ನು ಹೇರಬಹುದು. ಆದರೆ, ಆ ನಿಯಮಗಳನ್ನು ಈಶಾನ್ಯ ಭಾರತದಲ್ಲಿ ಹೇರಲು ಸಾಧ್ಯವಿಲ್ಲ. ಯುಸಿಸಿ ನಿಬಂಧನೆಗಳನ್ನು ರೂಪಿಸುವುದಕ್ಕೂ ಮೊದಲು ಸರ್ವಪಕ್ಷ ಸಭೆ ನಡೆಸಿ, ಸಲಹೆ, ಅಭಿಪ್ರಾಯಗಳನ್ನು ಪಡೆಯಬೇಕು” ಎಂದು ಹೇಳಿದ್ದಾರೆ.
ಸಿನ್ಹಾ ಹೇಳಿಕೆಗೆ ವ್ಯಾಪಕ ಟೀಕೆ, ಆಕ್ರೋಶ ವ್ಯಕ್ತವಾಗಿದೆ. “ಹೀಗೆ ಮಾತನಾಡುವವರನ್ನು ಸಂಘಿಗಳು ಎಂದು ಹೇಳಲಾಗುತ್ತದೆ. ಆದರೆ, ಸಿನ್ಹಾ ಟಿಎಂಸಿಯಲ್ಲಿದ್ದಾರೆ” ಎಂದು ಕೆಲವರು ಕಿಡಿಕಾರಿದ್ದಾರೆ.
“ಏಕರೂಪ ನಾಗರಿಕ ಸಂಹಿತೆಯಲ್ಲಿ ಯಾವ ಆಹಾರ ತಿನ್ನಬೇಕು. ಯಾವ ಆಹಾರ ತಿನ್ನಬಾರದು ಎಂಬುದರ ಬಗ್ಗೆಯೂ ಹೇಳಲಾಗಿದೆ” ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.