ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಮಹಾಯುತಿ ಒಕ್ಕೂಟದಲ್ಲಿ ಆಂತರಿಕ ಕಲಹ ಆರಂಭವಾಗಿದ್ದು, ಲೋಕಸಭೆ ಚುನಾವಣೆ ಹಿನ್ನಡೆಗೆ ಬಿಜೆಪಿ, ಎನ್‌ಸಿಪಿಯನ್ನು ಏಕನಾಥ್ ಶಿಂದೆ ಬಣದ ನಾಯಕ ದೂಷಿಸಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭೆ ಚುನಾವಣೆಯಲ್ಲಿ ನಿರಾಶಾದಾಯಕ ಪ್ರದರ್ಶನವನ್ನು ಮಹಾಯುತಿ ಒಕ್ಕೂಟ ನೀಡಿದೆ. ಇದಾದ ಬಳಿಕ ಪರಸ್ಪರ ಆರೋಪಗಳನ್ನು ಹೊರಿಸುವುದು ಒಳಗೊಳಗೆ ಆರಂಭವಾಗಿದೆ.
ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಪ್ರಮುಖ ನಾಯಕ ರಾಮದಾಸ್ ಕದಮ್ ಅವರು ಮಹಾಯುತಿಯ ಕಳಪೆ ಪ್ರದರ್ಶನಕ್ಕೆ ಸಮ್ಮಿಶ್ರ ಮಿತ್ರಪಕ್ಷಗಳಾದ ಬಿಜೆಪಿ ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಯೇ ಕಾರಣ ಎಂದು ಸಾರ್ವಜನಿಕವಾಗಿ ದೂಷಿಸಿದ್ದಾರೆ.
ಸೀಟು ಹಂಚಿಕೆ ಮತ್ತು ಅಭ್ಯರ್ಥಿಗಳ ಆಯ್ಕೆಯಲ್ಲಿ ಬಿಜೆಪಿ ಮಧ್ಯಪ್ರವೇಶಿಸುತ್ತಿದೆ. ಇದು ಪ್ರಮುಖ ಕ್ಷೇತ್ರಗಳಲ್ಲಿ ಶಿಂದೆ ಬಣದ ಸೋಲಿಗೆ ಕಾರಣವಾಗಿದೆ ಎಂದು ಕದಮ್ ಆರೋಪಿಸಿದ್ದಾರೆ.
“ಬಿಜೆಪಿಯ ಹಸ್ತಕ್ಷೇಪದಿಂದಾಗಿ ನಾಸಿಕ್, ಹಿಂಗೋಲಿ ಮತ್ತು ವಾಸಿಂ ಲೋಕಸಭಾ ಕ್ಷೇತ್ರಗಳನ್ನು ಕಳೆದುಕೊಂಡಿದ್ದೇವೆ. ಇಲ್ಲದಿದ್ದರೆ ಹೇಮಂತ್ ಗೋಡ್ಸೆ, ಹೇಮಂತ್ ಪಾಟೀಲ್ ಮತ್ತು ಭಾವನಾ ಗವಾಲಿ ಅವರು ಲೋಕಸಭೆಯ ಸಂಸದರಾಗಿ ಮರು ಆಯ್ಕೆಯಾಗುತ್ತಿದ್ದರು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿಯೂಬಿಜೆಪಿ ಅದೇ ತಪ್ಪು ಮಾಡದು ಎಂದು ನಾವು ಭಾವಿಸುತ್ತೇವೆ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಮೋದಿ ಸಂಪುಟದಲ್ಲಿ ಶಿಂದೆ, ಅಜಿತ್ ಬಣಕ್ಕಿಲ್ಲ ಸ್ಥಾನ; ಶಿವಸೇನೆ ಸಂಸದ ಅಸಮಾಧಾನ
“ರಾಜ್ಯ ಚುನಾವಣೆಯಲ್ಲಿ ಶಿವಸೇನೆಯ ಜೊತೆ ಬಿಜೆಪಿ ನ್ಯಾಯಯುತವಾಗಿ ನಡೆದುಕೊಳ್ಳಲು ಮುಖ್ಯಮಂತ್ರಿ ಏಕನಾಥ್ ಶಿಂದೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮಾತನಾಡಬೇಕು. ಬಳಿಕ ತಮ್ಮ ನಿಲುವನ್ನು ತೆಗೆದುಕೊಳ್ಳಬೇಕು” ಎಂದು ರಾಮದಾಸ್ ಕದಮ್ ಆಗ್ರಹಿಸಿದರು.
“ಲೋಕಸಭಾ ಚುನಾವಣೆಯಲ್ಲಿ, ನಾವು ನಮ್ಮ ಸಾಂಪ್ರದಾಯಿಕ ಮತ್ತು ಹಾಲಿ ಲೋಕಸಭಾ ಸಂಸದರ ಸ್ಥಾನಗಳನ್ನು ಪಡೆಯಲು ನಿರ್ಧರಿಸಿದಾಗ, ಬಿಜೆಪಿ ಈ ಸ್ಥಾನಗಳ ಮೇಲೆ ಹಕ್ಕು ಸಾಧಿಸಲು ಪ್ರಾರಂಭಿಸಿತು. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿಕೂಟವು ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕಾದರೆ ಈ ರೀತಿ ಆಗಬಾರದು” ಎಂದು ಹೇಳಿದರು.
“ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮಹಾಯುತಿಯಲ್ಲಿ 100 ಸ್ಥಾನಗಳನ್ನು ನಮಗೆ ನೀಡಿ. ನಾವು 100ರಲ್ಲಿ 90 ಸ್ಥಾನಗಳನ್ನು ಖಂಡಿತವಾಗಿ ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ” ಎಂದು ಶಿಂದೆ ಬಣದ ನಾಯಕ ಪ್ರತಿಪಾದಿಸಿದರು.
ಇದನ್ನು ಓದಿದ್ದೀರಾ? ಮಹಾರಾಷ್ಟ್ರದಲ್ಲಿ ಬಿಜೆಪಿ ತಂತ್ರಕ್ಕೆ ಆಹುತಿಯಾಗುತ್ತಾ ಮಹಾಯುತಿ
ಎನ್‌ಸಿಪಿ ನಾಯಕ ಅಜಿತ್ ಪವಾರ್ ಮಹಾಯುತಿಗೆ ಸೇರ್ಪಡೆಯಾಗಿರುವುದು ನಮ್ಮ ಬಣಕಕ್ಕೆ ನಕಾರಾತ್ಮಕವಾಗಿ ಪರಿಣಾಮ ಬೀರಿದೆ ಎಂದೂ ಹೇಳಿದರು. ಕದಮ್ ಹೇಳಿಕೆಯನ್ನು ಎನ್‌ಸಿಪಿ ವಕ್ತಾರ ಅಮೋಲ್ ಮಿಟ್ಕರಿ ಟೀಕಿಸಿದ್ದಾರೆ.
रामदास कदमजी आपण जोरात बोललात
“मागुन आलेले अजित दादा थोडे उशिरा आले असते तर बरं झालं असतं”
माहितीसाठी सांगतो ते वेळेत आले म्हणून तुमची लंगोट तरी वाचली उशिरा आले असते तर हिमालयात जप करायला जावं लागलं असतं
दादांची कृपा म्हणून तुम्ही वाचलात हे विसरू नका..— आ. अमोल गोदावरी रामकृष्ण मिटकरी (@amolmitkari22) June 20, 2024
“ರಾಮದಾಸ್ ಕದಮ್ ಅವರೇ ನೀವು ಅಜಿತ್ ಪವಾರ್ ಸ್ವಲ್ಪ ತಡವಾಗಿ ಬಂದಿದ್ದರೆ ಚೆನ್ನಾಗಿತ್ತು ಎಂದು ಹೇಳಿದ್ದೀರಿ. ನಿಮ್ಮ ಮಾಹಿತಿಗಾಗಿ ಅಜಿತ್ ಸಮಯಕ್ಕೆ ಬಂದಿದ್ದಾರೆ ಎಂದು ನಿಮಗೆ ತಿಳಿಸಲು ಬಯಸುತ್ತೇನೆ. ಅಜಿತ್ ಪವಾರ್ ಅವರ ಕೃಪೆಯಿಂದ ನಿಮ್ಮ ರಕ್ಷಿಸಲಾಗಿದೆ ಎಂಬುವುದನ್ನು ಮರೆಯಬೇಡಿ” ಎಂದು ಎಕ್ಸ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಈ ಹಿಂದೆ ಆರ್‌ಎಸ್‌ಎಸ್ ಮುಖವಾಣಿ ‘ಆರ್ಗನೈಸರ್’ ಕೂಡ ಮಹಾಯುತಿಯ ಚುನಾವಣಾ ಅವನತಿಗೆ ಅಜಿತ್ ಪವಾರ್ ಮತ್ತು ಅವರ ಪಕ್ಷವನ್ನು ದೂಷಿಸಿತ್ತು. ಈ ನಡುವೆ ಮಹಾರಾಷ್ಟ್ರ ರಾಜ್ಯ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಎನ್‌ಸಿಪಿಯ ಅಜಿತ್ ಬಣವನ್ನು ಬಿಜೆಪಿ ನಾಯಕತ್ವವು ಮೈತ್ರಿ ಕೂಟದಿಂದ ಹೊರಗಿಡಲಿದೆ ಎಂಬ ಊಹಾಪೋಹಗಳು ಕೂಡಾ ಇದೆ.