ದರ್ಶನ್ ಪ್ರಕರಣ | ಮೊಬೈಲ್‌ಗಾಗಿ ಪೌರಕಾರ್ಮಿಕರನ್ನು ರಾಜಕಾಲುವೆಗೆ ಇಳಿಸಿದ ಪೊಲೀಸರು; ದಸಂಸ ಖಂಡನೆ

0
275

ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಾಕ್ಷನಾಶದ ಸಲುವಾಗಿ ಮೃತ ವ್ಯಕ್ತಿ ಬಳಕೆ ಮಾಡುತ್ತಿದ್ದ ಮೊಬೈಲ್‌ ಅನ್ನು ನಟ ದರ್ಶನ್ ಮತ್ತು ಆರೋಪಿಗಳ ತಂಡ ರಾಜಕಾಲುವೆಗೆ ಎಸೆದಿತ್ತು. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಆ ಮೊಬೈಲ್‌ಗಾಗಿ ಮಲಮೂತ್ರ ತುಂಬಿದ ರಾಜಕಾಲುವೆಗೆ ಪೌರಕಾರ್ಮಿಕರನ್ನು ಇಳಿಸಿದ್ದಾರೆ. ಪೊಲೀಸರ ನಡೆಯನ್ನು ದಸಂಸ ಖಂಡಿಸಿದೆ.

ಈ ಬಗ್ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿ ದೂರು ನೀಡಿವೆ. ಮಲಮೂತ್ರದೊಂದಿಗೆ ತುಂಬಿದ ಕೊಳಚೆ ರಾಜಕಾಲುವೆಗೆ ಅಮಾಯಕ, ಅವಿದ್ಯಾವಂತ ಪರಿಶಿಷ್ಟ ಜಾತಿಯ ಪೌರಕಾರ್ಮಿಕರನ್ನು ಯಾವುದೇ ಸುರಕ್ಷಿತ ವಿಧಾನಗಳನ್ನು ಅಳವಡಿಸಿಕೊಳ್ಳದೇ ಕೊಲೆ ಪ್ರಕರಣದ ತನಿಖೆಯಲ್ಲಿ ಬಳಕೆ ಮಾಡಿಕೊಂಡಿರುವುದು ಕಾನೂನು ಉಲ್ಲಂಘನೆಯಾಗಿದೆ. ಈ ಬಗ್ಗೆ ಸಂಬಂಧಪಟ್ಟ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿವೆ.

ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಎಂಬಾತನನ್ನು ಕೊಲೆ ಮಾಡಿ ಸುಮನಹಳ್ಳಿ, ಸುಂಕದಕಟ್ಟೆ ರಾಜಕಾಲುವೆ ಬಳಿ ಮೃತದೇಹವನ್ನು ಎಸೆಯಲಾಗಿತ್ತು. ಮಾತ್ರವಲ್ಲದೆ, ಸಾಕ್ಷನಾಶದ ಸಲುವಾಗಿ ಆತನ ಮೊಬೈಲ್‌ಅನ್ನು ಅದೇ ರಾಜಕಾಲುವೆಗೆ ಆರೋಪಿಗಳು ಎಸೆದಿದ್ದರು. ಪ್ರಕರಣದ ತನಿಖೆಗಾಗಿ ಪೊಲೀಸರು ಮೊಬೈಲ್‌ನ್ನು ರಾಜಕಾಲುವೆಯಲ್ಲಿ ಹುಡುಕಾಟ ನಡೆಸಿದ್ದಾರೆ. ಮೊಬೈಲ್‌ಗಾಗಿ ರಾಜಕಾಲುವೆಯಲ್ಲಿ ಹುಡುಕಲು ಬಿಬಿಎಂಪಿ ಸಹಾಯದೊಂದಿಗೆ ಪೌರಕಾರ್ಮಿಕರನ್ನು ಬಳಕೆ ಮಾಡಿಕೊಂಡಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ರಾಜಕಾಲುವೆಯಲ್ಲಿ ನಡೆದ ಕಾರ್ಯಾಚರಣೆಗೆ ಕಾರ್ಮಿಕರನ್ನು ಬಳಸಿಕೊಂಡಿರುವುದು ನಿಯಮಾವಳಿ ಉಲ್ಲಂಘನೆಯಾಗಿದೆ. ಈ ಬಗ್ಗೆ ಸಂಬಂಧಪಟ್ಟವರ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು ಎಂದು ದಸಂಸ ಒತ್ತಾಯಿಸಿದೆ.

ಈ ಸುದ್ದಿ ಓದಿದ್ದೀರಾ? ಕೆಎಸ್‌ಆರ್‌ಟಿಸಿ | ಟಿಕೆಟ್ ರಹಿತ ಪ್ರಯಾಣ; ಒಂದೇ ತಿಂಗಳಲ್ಲಿ ₹6.54 ಲಕ್ಷ ದಂಡ ಸಂಗ್ರಹ

ಮಲಮೂತ್ರದೊಂದಿಗೆ ತುಂಬಿದ ರಾಜಕಾಲುವೆಗೆ ಪೌರಕಾರ್ಮಿಕರನ್ನು ಇಳಿಸಲಾಗಿದ್ದು, ಬರಿಗೈ ಹಾಗೂ ಬರಿಗಾಲಲ್ಲಿ ಕೊಚ್ಚೆ ನೀರಿನಲ್ಲಿ ತಡಕಾಡುವಂತೆ ಮಾಡಲಾಗಿದೆ. ಘಟನೆಯಲ್ಲಿ ಪೌರಕಾರ್ಮಿಕರ ಹಕ್ಕುಗಳು ವಿಧಿವಿಧಾನಗಳನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ. ಪ್ರಕರಣದಲ್ಲಿ ಸಂಬಂಧಪಟ್ಟ ಬಿಬಿಎಂಪಿ, ಪೊಲೀಸ್ ಇಲಾಖೆ ಹಾಗೂ ಇತರೆ ಇಲಾಖೆಗಳು ಪಾಲಿಕೆ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು.

ಪೌರಕಾರ್ಮಿಕರನ್ನು ಸುರಕ್ಷತಾ ಕ್ರಮಗಳಿಲ್ಲದೆ ರಾಜಕಾಲುವೆಗೆ ಇಳಿಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಪ್ರಕರಣವನ್ನು ಕೂಲಂಕಷವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಪರಿಶಿಷ್ಟ ಜಾತಿ / ವರ್ಗದ ದೌರ್ಜನ್ಯ ತಡೆ ಅಧಿನಿಯಮ 1989, ಮ್ಯಾನುವೆಲ್ ಸ್ಕ್ಯಾವೆಂಜರ್ಸ್ ವೃತ್ತಿ / ಕೆಲಸ ನಿಷೇಧ ಮತ್ತು ಪುನರ್ವಸತಿ ಕಾಯ್ದೆ 2013 ಮತ್ತು ಇತರೆ ಲಭ್ಯವಿರುವ ಕಾನೂನಿನ ನಿಯಮಾವಳಿಗಳಡಿ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದೆ.

LEAVE A REPLY

Please enter your comment!
Please enter your name here