ಶಿವಸೇನೆಯ ಏಕನಾಥ್ ಶಿಂಧೆ ಬಣದ ಕಲ್ಯಾಣ್ ನಗರ ಅಧ್ಯಕ್ಷ ಮಹೇಶ್ ಗಾಯಕ್ವಾಡ್ ಮೇಲೆ ಪೊಲೀಸ್ ಠಾಣೆಯಲ್ಲಿಯೇ ಗುಂಡಿನ ದಾಳಿ ನಡೆದಿದೆ. ಪ್ರಕರಣದಲ್ಲಿ ಕಲ್ಯಾಣ್ ಪಶ್ಚಿಮ ಕ್ಷೇತ್ರದ ಬಿಜೆಪಿ ಶಾಸಕ ಗಣಪತ್ ಗಾಯಕ್ವಾಡ್ ಮತ್ತು ಅವರ ಇಬ್ಬರು ಸಹಚರರನ್ನು ಥಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಉಲ್ಲಾಸನಗರದಲ್ಲಿ ಶುಕ್ರವಾರ ರಾತ್ರಿ ಘಟನೆ ನಡೆದಿದೆ. ಆಸ್ತಿ ವಿವಾದವೇ ಘಟನೆಗೆ ಕಾರಣ ಎಂದು ಮೇಲ್ನೋಟಕ್ಕೆ ಕಂಡುಬಂದಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಶಾಸಕ ಗಣಪತ್ ಮತ್ತು ಮಹೇಶ್ ಹಿಲ್ ಲೈನ್ ಠಾಣೆಗೆ ಬಂದಿದ್ದರು. ಇಬ್ಬರ ನಡುವೆ ವಾಗ್ವಾದ ನಡೆದಿತ್ತು. ಅವರನ್ನು ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಕೊಠಡಿಯಲ್ಲಿ ಕೂರಿಸಲಾಗಿತ್ತು. ಅಲ್ಲಿಯೂ ವಾಗ್ವಾದ ಮಾಡಿಕೊಂಡಿದ್ದು, ಮಹೇಶ್ ಮತ್ತು ರಾಹುಲ್ ಮೇಲೆ ಗಣಪತ್ ಮತ್ತು ಹರ್ಷಲ್ ನಾನಾ ಕೇನ್ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಜೆಪಿ ಶಾಸಕ ಮತ್ತು ಆತನ ಸಹಚರನ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ. ಆರೋಪಿಗಳಿಗೆ ಸಹಾಯ ಮಾಡಿದ ಆರೋಪದ ಮೇಲೆ ಸಂದೀಪ್ ಅನಂತ್ ಸರ್ವಾಂಕರ್ ಮತ್ತು ಇತರರ ಮೇಲೂ ಪ್ರಕರಣ ದಾಖಲಿಸಲಾಗಿದೆ. ಗಣಪತ್, ಹರ್ಷಲ್ ಹಾಗೂ ಅನಂತ್‌ನನ್ನು ಬಂಧಿಸಲಾಗಿದೆ. ಇನ್ನೂ ಮೂವರು ಆರೋಪಿಗಳಿಗಾಗಿ ಹುಡುಕುತ್ತಿದ್ದೇವೆ ಎಂದು ಉಪ ಪೊಲೀಸ್ ಆಯುಕ್ತ (ವಲಯ 4-ಥಾಣೆ) ಸುಧಾಕರ ಪತ್ತಾರೆ ಹೇಳಿದ್ದಾರೆ.
ಘಟನೆಯಲ್ಲಿ ಗಾಯಗೊಂಡಿರುವ ಮಹೇಶ್ ಮತ್ತು ರಾಹುಲ್ ಪಾಟೀಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜಕೀಯ ವೈಷಮ್ಯದಿಂದ ಜಗಳ ನಡೆದಿದೆಯೇ ಅಥವಾ ಯಾವುದಾದರೂ ವೈಯಕ್ತಿಕ ಕಾರಣಗಳಿವೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.