ಹೊಸ ಪುಸ್ತಕ | ಹೊಸತಲೆಮಾರಿನ ತರುಣ ತರುಣಿಯರು ಓದಬೇಕಾದ ‘ಗುರುತಿನ ಬಾಣಗಳು’ : ರಹಮತ್ ತರೀಕೆರೆ

Date:

‘ಗುರುತಿನ ಬಾಣಗಳು’ ಕೃತಿಯ ಲೇಖನಗಳನ್ನು ಕರ್ನಾಟಕದ ಹೊಸತಲೆಮಾರಿನ ತರುಣ ತರುಣಿಯರು, ವಿದ್ಯಾರ್ಥಿಗಳು ಓದಬೇಕು. ನಮ್ಮ ಸಂವಿಧಾನ ಹೇಳುವ ಪ್ರಜಾಪ್ರಭುತ್ವ, ಜಾತ್ಯತೀತತೆ, ಸ್ವಾತಂತ್ರ್ಯ, ಸಮಾನತೆ, ಸಹಬಾಳುವೆಗಳಂತಹ ಆದರ್ಶ ಮೌಲ್ಯಗಳು ಇಲ್ಲಿ ಪ್ರತಿಪಾದಿತವಾಗಿವೆ. ಇಲ್ಲೊಂದು ರೋಗಗ್ರಸ್ತ ಅವಸ್ಥೆಯಿಂದ ಮುಕ್ತಿ ಪಡೆದು ಹೊಸ ಆರೋಗ್ಯಕರ ಸಮಾಜ ಕಟ್ಟುವ ಒಂದು ಕನಸಿದೆ.

ಈಚೆಗೆ ಹೊಸತಲೆಮಾರಿನ ಕೆಲವು ಲೇಖಕರನ್ನು ನಾನು ಇಷ್ಟಪಟ್ಟು ಓದುತ್ತಿರುತ್ತೇನೆ. ಅವರ ಚಿಂತನೆಗಳಿಂದ ಕಲಿಯುತ್ತಿರುತ್ತೇನೆ. ಅಂತಹವರಲ್ಲಿ ಹರೀಶ್ ಗಂಗಾಧರ್ ಒಬ್ಬರು. ಹೊಸತಲೆಮಾರಿನ ಈ ಲೇಖಕರಲ್ಲಿ ತಾತ್ವಿಕವಾದ ತೀಕ್ಷ್ಣತೆಯಿದೆ. ಜಗತ್ತಿನ ಬೇರೆಬೇರೆ ಲೇಖಕರ ಮತ್ತ ಚಿಂತಕರ ಅನುಸಂಧಾನವಿದೆ. ಇವರು ಸಮಾಜ ಮತ್ತು ರಾಜಕಾರಣದ ಬಗ್ಗೆ ಬರೆದರೂ ಸಾಹಿತ್ಯದಷ್ಟೆ ಸಿನಿಮಾ, ಸಂಗೀತಗಳ ಪ್ರಸ್ತಾಪ ಇರುತ್ತದೆ. ಇವರಲ್ಲಿ ಚರಿತ್ರೆಯ ಪ್ರಜ್ಞೆಯು ವರ್ತಮಾನವನ್ನು ಲಗತ್ತಿಸುತ್ತದೆ ಮತ್ತು ನಾಳಿನ ಭಾರತದ ಒಂದು ಪರಿಕಲ್ಪನೆಯನ್ನು ಮಂಡಿಸುತ್ತಿರುತ್ತದೆ.

ಹರೀಶರ ಬರಹಗಳಲ್ಲಿ ಎರಡು ಮಾದರಿಗಳಿವೆ; ಮೊದಲನೆಯವು ಆತ್ಮಕಥನಾತ್ಮಕ ಬರಹಗಳು. ಇವು ಹೆಚ್ಚಾಗಿ ಅಪ್ಪನಿಗೆ ಸಂಬಂಧಪಟ್ಟಿವೆ. ಬಹಳ ಆಪ್ತವಾಗಿವೆ. ವ್ಯಕ್ತಿಚಿತ್ರದಂತಿದ್ದರೂ ಆಳದಲ್ಲಿ ಬಾಳಿನ ಅರ್ಥವನ್ನು ಶೋಧಿಸುತ್ತವೆ. ಇಲ್ಲೊಂದು ಬಗೆಯ ಪಿತೃಹತ್ಯೆಯ ಗುಣವೂ, ಹತ್ಯೆಯ ಬಳಿಕ ಜ್ಞಾನೋದಯದ ನೆಲೆಯಲ್ಲಿ ಮರಳಿ ಪಿತೃವಿನ ಆವಾಹನೆಯು ಇದೆ. ಇದು ಕನ್ನಡದ ಬಹುತೇಕ ಆತ್ಮಚರಿತ್ರೆಗಳ ಅಥವಾ ಆತ್ಮಚರಿತ್ರಾತ್ಮಕ ಬರಹಗಳ ವಿಶಿಷ್ಟತೆ. ಎರಡನೆಯ ಮಾದರಿಯವು ಲೋಕ ವಿಶ್ಲೇಷಣೆಯನ್ನು ಕುರಿತವು. ತಾನು ಓದಿದ ಕೃತಿಗಳ, ಕಂಡ ವಿದ್ಯಮಾನಗಳ ವಿಶ್ಲೇಷಣೆ ಮಾಡುವಂತಹವು. ತಾನಿರುವ ಸಮಾಜಕ್ಕೆ ಬೇಕಾದ ಯಾವುದೊ ತತ್ವಸಂದೇಶವನ್ನು ಹುಡುಕುವಂತಹವು. ಜಾತೀಯತೆ, ಲಿಂಗತಾರತಮ್ಯ, ಮೂಲಭೂತವಾದ, ಕೋಮುವಾದ, ಸರ್ವಾಧಿಕಾರಗಳನ್ನು ಅವುಗಳಲ್ಲಿರುವ ಹಿಂಸೆಯ ಅಂಶವನ್ನು ವಿಶ್ಲೇಷಿಸಿ, ಅವುಗಳನ್ನು ಗುಣಪಡಿಸಲು ಬೇಕಾದ ಮದ್ದನ್ನು ಶೋಧಿಸುವಂತಹವು. ಇಲ್ಲಿನ ಬರೆಹಗಳನ್ನು, ಅನುವಾದಗಳು, ಬೇರೆ ಬರೆಹಗಳಿಂದ ಪ್ರೇರಿತವಾಗಿ ಹುಟ್ಟಿದವು, ಸ್ವಂತ ಚಿಂತನೆಗಳು ಎಂದು ವಿಂಗಡಿಸಬಹುದು. ಆದರೆ ಮೂರೂ ಸ್ತರಗಳು ವ್ಯತ್ಯಾಸ ಮಾಡಲಾಗದಂತೆ ಬೆರೆತುಹೋಗಿವೆ. ಹರೀಶರ ಬರೆಹಗಳ ಐದು ವಿಶಿಷ್ಟತೆಗಳನ್ನು ಹೀಗೆ ಗುರುತಿಸಬಹುದು.

ಇದನ್ನು ಓದಿದ್ದೀರಾ?: ʼಗೋದಿ ಮೀಡಿಯಾʼ ಅಂದ್ರೇನು? ಇಲ್ಲಿದೆ ನೋಡಿ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಚಾರಿತ್ರಿಕ ಪ್ರಜ್ಞೆಯ ಸಮಕಾಲೀನೀಕರಣ. ಚಾರಿತ್ರಿಕವಾಗಿ ಜಗತ್ತಿನ ವಿದ್ಯಮಾನ ಮತ್ತು ಚಿಂತನೆಗಳನ್ನು ವಿಶ್ಲೇಷಿಸುತ್ತ ಒಂದು ತಾತ್ವಿಕ ಭಿತ್ತಿಯನ್ನು ಕಟ್ಟಿಕೊಡುವುದು. ಈ ಚಾರಿತ್ರಿಕ ಭಿತ್ತಿಗೆ ಅಥವಾ ಪ್ರಜ್ಞೆಗೆ ಭಾರತದ ಸಮಾಜ ಧರ್ಮ ಶಿಕ್ಷಣ ರಾಜಕಾರಣಗಳನ್ನು ಲಗತ್ತಿಸುವುದು. ನಾಳಿನ ಸಮಾಜದ ದೇಶದ ಕಲ್ಪನೆಯನ್ನು ಮುಂದಿಡುವುದು. ಭಾರತದಲ್ಲಿ ಇಂತಹುದೇ ಚಿಂತನೆ ಮತ್ತು ಚಳುವಳಿ ಮಾಡುತ್ತಿರುವ ಹೋರಾಟಗಾರರ ಜತೆ ಸಮೀಕರಿಸುವುದು. ಜರ್ಮನಿಯ ನಾಜಿಗಳ ಬಗ್ಗೆ ಬರೆದಾಗ ಭಾರತದ ಮೂಲಭೂತವಾದಿಗಳನ್ನು, ಮ್ಯಾಲ್ಕಂ ಎಕ್ಸ್ ಕುರಿತು ಬರೆದಾಗ ಅಂಬೇಡ್ಕರ್ ಅವರನ್ನು, ಅಬ್ರಾಹಂ ಲಿಂಕನ್ ಬಗ್ಗೆ ಬರೆದಾಗ ಗಾಂಧಿಯನ್ನು ಅವರು ಸ್ಮರಿಸುತ್ತಾರೆ. ಇಲ್ಲಿ ಮತ್ತೆ ಮತ್ತೆ ಅಂಬೇಡ್ಕರ್ ಅವರ ಉಲ್ಲೇಖವಿದೆ. ಈ ಅರ್ಥದಲ್ಲಿ ಈ ಪುಸ್ತಕವನ್ನು ಜಗತ್ತಿನ ಹೋರಾಟಗಾರರ ಮಾನವತಾವಾದಿಗಳ ವ್ಯಕ್ತಿಚಿತ್ರಗಳ ಸಂಪುಟವಾಗಿ ಓದಬಹುದು.

ಇಲ್ಲಿನ ಲೇಖನಗಳಲ್ಲಿ ನೂರಾರು ಹೊಸ ಹೊಸ ಲೇಖಕರ ಮತ್ತು ಕೃತಿಗಳ ಉಲ್ಲೇಖವಿದೆ. ಇದು ಲೇಖಕರ ಅಪಾರವಾದ ಮತ್ತು ವಿಶಿಷ್ಟವಾದ ಓದಿನ ಪ್ರಮಾಣವಾಗಿದೆ. ಸಾಹಿತ್ಯದ ವಿದ್ಯಾರ್ಥಿಯಾದ ನನಗೆ ಅವರು ಜಗತ್ತಿನ ಬೇರೆಬೇರೆ ಕವಿತೆಗಳನ್ನು ಪರಸ್ಪರ ಕನೆಕ್ಟ್ ಮಾಡಿ ವಿಶ್ಲೇಷಣೆ ಮಾಡುವುದು ಇಷ್ಟವಾಯಿತು. ಇಂತಹ ಲೇಖನಗಳನ್ನು ಅವರು ಮತ್ತಷ್ಟು ಹೆಚ್ಚು ಬರೆಯಬೇಕೆಂದು ಅನಿಸುತ್ತದೆ. ಕನ್ನಡದ ಓದುಗರಿಗೆ ಹೊಸ ಹೊಸ ಲೇಖಕರನ್ನು ಪುಸ್ತಕಗಳನ್ನು ಓದಲು ಪ್ರಚೋದಿಸುವ ಕೃತಿಯಿದು.

ಕನ್ನಡ ವೈಚಾರಿಕ ಚಿಂತನೆಯು ಸಮಾಜ ರಾಜಕಾರಣ ಧರ್ಮವನ್ನು ಕುರಿತು ಮಥಿಸಿದರೂ, ಅದು ಹೆಚ್ಚಾಗಿ ಅಕ್ಷರಕೇಂದ್ರಿತ ಆಕರಗಳಿಗೇ ಹೋಗುತ್ತದೆ. ಅದಕ್ಕೆ ನಾದಕೇಂದ್ರಿತ ಸಂಗೀತ, ದೃಶ್ಯಕೇಂದ್ರಿತ ಚಿತ್ರಕಲೆ, ಶಿಲ್ಪ, ಫೋಟೊ, ವಾಸ್ತು, ಸಿನಿಮಾ, ರಂಗಭೂಮಿಗಳ ನೆನಪು ಕಡಿಮೆ. ನಾಟಕ ಸಿನಿಮಾಗಳಂತಹ ದೃಶ್ಯ ಆಕರಗಳಿಂದ ಬರೆಯುವ ಪ್ರಯೋಗ ಮಾಡಿದವರು ಅನಕೃ ಅವರು. ನವ್ಯ ಸಾಹಿತ್ಯ ಕಾಲದಲ್ಲಿ ಈ ಬಹುಮಾಧ್ಯಮೀಯ ಪರಂಪರೆ ನಶಿಸಿಹೋಯಿತು. ಈ ಹಿನ್ನೆಲೆಯಲ್ಲಿ ಹರೀಶರ ಲೇಖನಗಳು ಸಿನಿಮಾ ಮತ್ತು ಕ್ರೀಡೆಗಳನ್ನು ವಿಶ್ಲೇಷಿಸುವುದು ಮಹತ್ವದ ಸಂಗತಿಯಾಗಿದೆ.

ಈ ಕೃತಿಯಲ್ಲಿ ಜಗತ್ತಿನ ಬೇರೆಬೇರೆ ಪ್ರದೇಶಗಳಲ್ಲಿ ದಮನಕ್ಕೆ ಒಳಗಾದ ಸಮುದಾಯಗಳ ಬಗ್ಗೆ ಕಾಳಜಿಯಿರುವ ಲೇಖನಗಳಿವೆ. ನಾಜಿಗಳ ಕಾಲದ ಯಹೂದಿಗಳು, ಇಸ್ರೇಲಿನ ಜಿಯೊನಿಸ್ಟ್ ದಮನಕ್ಕೆ ಒಳಗಾದ ಪ್ಯಾಲೆಸ್ತೇನಿಯರು, ಅಮೆರಿಕದ ಬಿಳಿಯರ ಕೈಯಲ್ಲಿ ನಲುಗಿದ ಕರಿಯರು, ಭಾರತದ ಜಾತಿ ವ್ಯವಸ್ಥೆಯಲ್ಲಿ ದಲಿತರು, ಕೋಮುವಾದಕ್ಕೆ ಮುಸ್ಲಿಮರು ಹೀಗೆ. ಇಲ್ಲೆಲ್ಲ ಸಮುದಾಯಗಳನ್ನು ಕುರಿತ ಏಕರೂಪಿ ಗ್ರಹಿಕೆಗಳನ್ನು ಭಂಜನಕ್ಕೆ ಒಳಪಡಿಸಲಾಗಿದೆ. ಲೇಖನಗಳಲ್ಲಿ ಅತಿ ಹೆಚ್ಚು ಉಲ್ಲೇಖಗಳಿರುವುವು ಕಪ್ಪು ಚಳುವಳಿ ಮತ್ತು ಕಪ್ಪು ಸಾಹಿತ್ಯ ಕುರಿತು. ಇಲ್ಲಿ ಚಿನಿವಾ ಅಚಿಬೆ, ಮ್ಯಾಲ್ಕಂ ಎಕ್ಸ್, ಬೆಲ್‌ಹುಕ್ಸ್ ಮೊದಲಾಗಿ ಹಲವಾರು ಕಪ್ಪು ಲೇಖಕರು, ಸಿದ್ಧಾಂತಿಗಳ ಮತ್ತು ಚಳುವಳಿಗಾರರ ಚರ್ಚೆಯಿದೆ. ಹೇಗೆ ಜನಾಂಗವಾದವು ಕ್ರೀಡೆ, ಸಾಹಿತ್ಯ, ಸಂಗೀತ, ಸಿನಿಮಾಗಳನ್ನು ದಮನದ ಭಾಗವಾಗಿ ಬಳಸಿತು ಮತ್ತು ಇವೇ ಕಲೆಗಳನ್ನು ದಮನಿತರು ತಮ್ಮ ಪ್ರತಿರೋಧದ ಭಾಗವಾಗಿ ಮರುಹುಟ್ಟಿಸಿದರು ಎಂಬ ವಿಶ್ಲೇಷಣೆಯಿದೆ. ಇದು ಈ ಕೃತಿಯನ್ನು ದಮನಿತರ ಪರವಾದ ಕೈಪಿಡಿಯನ್ನಾಗಿ ಮಾಡಿದೆ.

ಇದನ್ನು ಓದಿದ್ದೀರಾ?: ನೂರರ ನೆನಪು | ಕಾವಾಡಿಗರ ಹಟ್ಟಿಯಿಂದ ಹಾಲಿವುಡ್ ಅಂಗಳಕ್ಕೆ ಜಿಗಿದ ಮೈಸೂರ್ ಸಾಬು

ಹರೀಶ್ ವೃತ್ತಿಯಿಂದ ಕಾಲೇಜು ಅಧ್ಯಾಪಕರು. ಅಧ್ಯಾಪನವು ಸಮಾಜ ನಿರ್ಮಾಣದ ಒಂದು ಉಪಕರಣ ಎಂದು ಭಾವಿಸಿದವರು. ಇಲ್ಲಿನ ಲೇಖನಗಳಲ್ಲಿರುವ ಚರ್ಚೆಯನ್ನು ಪಠ್ಯಕ್ರಮ ಪಠ್ಯವಸ್ತು ಕಲಿಕೆ ಕಲಿಸುವ ವಿಧಾನಗಳಿಗೆ ಅವರು ಲಗತ್ತಿಸುತ್ತಾರೆ. ಈ ಕಾರಣದಿಂದ ಲೇಖನಗಳು ಶಿಕ್ಷಣ ಚಿಂತನೆಗಳಾಗಿವೆ. ನಮ್ಮ ಕಾಲೇಜುಗಳಲ್ಲಿ ಹರೀಶ ಅವರಂತಹ ಜ್ಞಾನಿಗಳು ಮಾನವೀಯ ಮಿಡಿತವಿರುವ ಅಧ್ಯಾಪಕರೂ ಇರುವುದು, ವಿದ್ಯಾರ್ಥಿಗಳ ಭಾಗ್ಯವೆಂದು ಭಾವಿಸುತ್ತೇನೆ.

ಆಂಗ್ಲ ಅಧ್ಯಾಪಕರು ಕನ್ನಡ ಲೇಖಕರಾಗಿರುವುದಕ್ಕೆ ಬಿಎಂಶ್ರೀಯವರಿಂದ ಹಿಡಿದು ನಟರಾಜ ಹುಳಿಯಾರ್ ತನಕ ದೊಡ್ಡ ಪರಂಪರೆಯಿದೆ. ಇವರ ಬರೆಹಗಳಲ್ಲಿ ವಿಶ್ವಸಾಹಿತ್ಯದಿಂದ ಪಡೆದ ತಿಳಿವಳಿಕೆಯನ್ನು ಕನ್ನಡ ಸಾಹಿತ್ಯ ಮತ್ತು ಕರ್ನಾಟಕದ ವಿದ್ಯಮಾನಗಳಿಗೆ ಲಗತ್ತಿಸಿ ಹೊಸ ಚಿಂತನೆಯನ್ನು ಹುಟ್ಟಿಸುವ ಗುಣವಿದೆ. ಇವರಿಗೆ ಹೋಲಿಸಿದರೆ ಹರೀಶರಲ್ಲಿ ಕನ್ನಡ ಮತ್ತು ಕರ್ನಾಟಕದ ಉಲ್ಲೇಖಗಳು ಕಡಿಮೆ. ವರದಿಗಾರಿಕೆಯೂ ಚಿಂತನಶೀಲತೆಯೂ ವಿದ್ಯಮಾನವೊಂದರ ವಿಶ್ಲೇಷಣೆಯೂ ಬೆರೆತಿರುವ ವಿಶಿಷ್ಟ ವಿನ್ಯಾಸದಲ್ಲಿ ಈ ಲೇಖನಗಳಿವೆ. ಹರೀಶ ಒಳ್ಳೆಯ ಸ್ಟೋರಿಟೆಲರ್. ಇಲ್ಲಿ ಕನ್ನಡವು ಲವಲವಿಕೆಯಿಂದ ಕೂಡಿದ್ದು ಸರಾಗವಾಗಿ ಓದಿಸಿಕೊಳ್ಳುತ್ತದೆ. ಆದರೆ ತುಸು ವಾಚಾಳಿಯೂ ಆಗಿವೆ. ಲಂಕೇಶರಂತೆ ವಿವರಣಾತ್ಮಕ ಗದ್ಯವನ್ನೂ ಕವಿತೆಯಂತೆ ಸಂಕ್ಷಿಪ್ತವಾಗಿ ಧ್ವನಿಪೂರ್ಣವಾಗಿ ಕಟ್ಟುವುದು ನಮ್ಮೆಲ್ಲರ ಎದುರಿರುವ ಸವಾಲು.

ಇಲ್ಲಿನ ಲೇಖನಗಳು ಭಾರತದಲ್ಲಿ ಕಳೆದ ಎರಡು ಮೂರು ದಶಕಗಳ ವಿದ್ಯಮಾನಗಳಿಂದ ಕಂಗೆಟ್ಟ ಯಾವುದೇ ಸಂವೇದನಶೀಲ ಬರೆಹಗಾರರು ಬರೆಯುವಂತಹವು. ಇವನ್ನು ಕರ್ನಾಟಕದ ಹೊಸತಲೆಮಾರಿನ ತರುಣ ತರುಣಿಯರು, ವಿದ್ಯಾರ್ಥಿಗಳು ಓದಬೇಕು. ನಮ್ಮ ಸಂವಿಧಾನ ಹೇಳುವ ಪ್ರಜಾಪ್ರಭುತ್ವ, ಜಾತ್ಯತೀತತೆ, ಸ್ವಾತಂತ್ರ್ಯ, ಸಮಾನತೆ, ಸಹಬಾಳುವೆಗಳಂತಹ ಆದರ್ಶ ಮೌಲ್ಯಗಳು ಇಲ್ಲಿ ಪ್ರತಿಪಾದಿತವಾಗಿವೆ. ಇಲ್ಲೊಂದು ರೋಗಗ್ರಸ್ತ ಅವಸ್ಥೆಯಿಂದ ಮುಕ್ತಿ ಪಡೆದು ಹೊಸ ಆರೋಗ್ಯಕರ ಸಮಾಜ ಕಟ್ಟುವ ಒಂದು ಕನಸಿದೆ.

(ಗುರುತಿನ ಬಾಣಗಳು, ಲೇ: ಹರೀಶ್ ಗಂಗಾಧರ್, ಪುಟಗಳು 378, ಬೆಲೆ :400, ಪ್ರಕಾಶಕರು: ಸಂಕಥನ, ಮಂಡ್ಯ. ಪುಸ್ತಕಕ್ಕಾಗಿ- 9886133949, 9535603795, 9900925284) 

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿತ್ರದುರ್ಗ | ನೀತಿ ಸಂಹಿತೆ ನೆಪದಲ್ಲಿ ನೀಲಿ ಬಾವುಟ ತೆರವು; ಕೇಸರಿ ಬಿಟ್ಟಿದ್ದೇಕೆ ಎಂದಾಗ ರಾತ್ರೋರಾತ್ರಿ ಮರುಸ್ಥಾಪನೆ

ಆರಂಭದಲ್ಲಿ ನೆಪ ಹೇಳುತ್ತಿದ್ದ ಪಿಡಿಓಗೆ, ಜನರ ಜೈಭೀಮ್ ಘೋಷಣೆಗಳು ಅಪ್ಪಳಿಸಿದವು... ಡಾ.ಬಿ.ಆರ್‌.ಅಂಬೇಡ್ಕರ್ ಜಯಂತಿಯಂದು...

ಅಂಬೇಡ್ಕರರ ಪ್ರಬುದ್ಧ ಭಾರತ ಮತ್ತು ಮೋದಿಯವರ ವಿಕಸಿತ ಭಾರತ

ರಾಜಕೀಯ ಸ್ವಾತಂತ್ರ್ಯಕ್ಕಿಂತ ಸ್ವತಂತ್ರ ಭಾರತದಲ್ಲಿ ಸಾಮಾಜಿಕ ಪ್ರಜಾಸತ್ತೆ ಮತ್ತು ಆರ್ಥಿಕ ಪ್ರಜಾಸತ್ತೆಗಳನ್ನು...

ಹಿಂದುತ್ವಕ್ಕೆ ಬಲಿಯಾದ ಕುಲಾಲ ಮತ್ತು ಸಣ್ಣ ಸಮುದಾಯಗಳ ಪ್ರಾತಿನಿಧ್ಯ!

ಬಿಜೆಪಿ ಮತ್ತು ಸಂಘಪರಿವಾರದಲ್ಲಿ ಕುಂಬಾರ/ಕುಲಾಲ್/ಮೂಲ್ಯ ಸಮುದಾಯಗಳ ಯುವಕರು ಇದ್ದರೂ ಅವರಿಗೆ ರಾಜಕೀಯ...

ಅಂಬೇಡ್ಕರ್ ವಿಶೇಷ | ಭಾರತೀಯರೆಲ್ಲರೂ ಗೌರವಿಸಲೇಬೇಕಾದ ಮೇರುವ್ಯಕ್ತಿತ್ವ- ಬಾಬಾ ಸಾಹೇಬ್ ಅಂಬೇಡ್ಕರ್

ಬಾಬಾ ಸಾಹೇಬ್ ಅವರಲ್ಲದೆ ಬೇರೆಯವರು ನಮ್ಮ ಸಂವಿಧಾನ ರಚಿಸಿದ್ದರೆ ಭಾರತ ಹೇಗಿರುತ್ತಿತ್ತು...