‘ಬಗರ್ ಹುಕುಂನಲ್ಲಿ ಅರ್ಜಿ ಹಾಕಿರೋ ಸಾಬ್ರಿಗೆ (ಮುಸ್ಲಿಂ ಸಮುದಾಯದವರಿಗೆ) ಖಾತೆ ಮಾಡಬೇಡಿ. ಸರ್ಕಾರಿ ಜಮೀನು ಸರ್ಕಾರದ್ದಾಗಿಯೇ ಇರಬೇಕು. ಯಾರಾದರೂ ಅದನ್ನು ಸಾಬ್ರು ಹೆಸರಿನಲ್ಲಿ ಪರಭಾರೆ ಮಾಡಿದರೆ, ನೇಣಿಗೆ ಹಾಕುವುದು ಗ್ಯಾರಂಟಿ’ ಎಂದು ಶ್ರೀರಂಗಪಟ್ಟಣದ ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅಧಿಕಾರಿಗಳಿಗೆ ಧಮ್ಕಿ ಹಾಕಿದ್ದಲ್ಲದೇ, ಮುಸ್ಲಿಮರ ವಿರುದ್ಧ ದ್ವೇಷ ಹರಡಿರುವ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಸರ್ಕಾರಿ ಜಮೀನಿನ ಮೇಲಿನ ಪರಭಾರೆ ವಿವಾದದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರು ಮಹದೇವಪುರದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಅಧಿಕಾರಿಗಳಿಗೆ ಧಮ್ಕಿ ಹಾಕಿರುವುದಾಗಿ ತಿಳಿದು ಬಂದಿದೆ.
ಮುಸ್ಲಿಮರು ಬಗರ್ ಹುಕುಂ ಯೋಜನೆಯಡಿ ಅರ್ಜಿ ಸಲ್ಲಿಸಿ ತಮ್ಮ ಹೆಸರಿಗೆ ಜಮೀನು ನೋಂದಣಿ ಮಾಡುವಂತೆ ಕೋರಿದ್ದರು.
ಮಹದೇವಪುರದಲ್ಲಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರ ಜೊತೆ ನಡೆದ ಸಭೆಯಲ್ಲಿ ಮುಸ್ಲಿಮರಿಗೆ ಕಂದಾಯ ಇಲಾಖೆ ಅಧಿಕಾರಿಗಳು ಅಕ್ರಮವಾಗಿ ಖಾತೆ ಮಾಡಿಕೊಡುತ್ತಿದ್ದಾರೆ ಎಂದು ಕೆಲ ರೈತರು ದೂರು ನೀಡಿದ್ದಾರೆ ಎನ್ನಲಾಗಿದೆ.
‘ಜಮೀನು ಉಳುವವರು ನನ್ನ ಬಳಿ ಬಂದಿದ್ದರು. ನಾನು ದರ್ಖಾಸ್ತು ಮುಂದಕ್ಕೆ ನೋಡುವ, ಸದ್ಯಕ್ಕೆ ಏನೂ ಮಾಡುವುದಕ್ಕೆ ಆಗಲ್ಲ ಎಂದು ಹೇಳಿದ್ದೇನೆ. ಸರಕಾರಿ ಭೂಮಿಯನ್ನು ಸಾಬರ(ಮುಸ್ಲಿಮರ) ಹೆಸರಿಗೆ ಮಾಡಿದ್ರೆ, ಅಂತಹವರನ್ನು ನೇಣಿಗೆ ಹಾಕುವುದು ಗ್ಯಾರಂಟಿ” ಎಂದು ಶಾಸಕ ರಮೇಶ್ ಬಂಡಿಸಿದ್ದೇಗೌಡ ಬೆದರಿಕೆ ಹಾಕಿದ್ದಾರೆ.
ಕಾಂಗ್ರೆಸ್ ಶಾಸಕ ಅಧಿಕಾರಿಗಳಿಗೆ ಬೆದರಿಕೆ ಹಾಕುವ ವೀಡಿಯೊ ಸದ್ಯ ವೈರಲ್ ಆಗಿದೆ. ಇದರ ಬೆನ್ನಲ್ಲೇ ಶಾಸಕನ ವಿರುದ್ಧ ವ್ಯಾಪಕವಾದ ಟೀಕೆ ವ್ಯಕ್ತವಾಗಿದೆ. ಅಲ್ಪಸಂಖ್ಯಾತ ಸಮುದಾಯದ ಮತವನ್ನೇ ನೆಚ್ಚಿಕೊಂಡಿರುವ ಕಾಂಗ್ರೆಸ್ ಪಕ್ಷವು, ತನ್ನ ಶಾಸಕನ ಈ ಹೇಳಿಕೆಯ ಬಗ್ಗೆ ಏನು ಕ್ರಮ ಕೈಗೊಳ್ಳಲಿದೆ ಎಂದು ಕಾದು ನೋಡಬೇಕಿದೆ.
