- ಎಲ್ಲ ಬೆಳವಣಿಗೆಗಳಿಗೆ ಬ್ರೇಕ್ ಹಾಕಲು ಸಿದ್ದರಾಮಯ್ಯ ಪ್ರಯತ್ನ
- ಲೋಕಸಭೆ ಚುನಾವಣೆಗೆ ಫೋಕಸ್ ಆಗಲು ಸಿಎಂ, ಡಿಸಿಎಂ ಸೂಚನೆ
ಮುಖ್ಯಮಂತ್ರಿಗಳ ನಿವಾಸ ಕಾವೇರಿಯಲ್ಲಿ ನೂತನ ಮೀಟಿಂಗ್ ಹಾಲ್ ಉದ್ಘಾಟನೆ ನೆಪದಲ್ಲಿ ಸಿದ್ದರಾಮಯ್ಯ ಅವರು ಸಚಿವರನ್ನು ಉಪಾಹಾರಕೂಟಕ್ಕೆ ಆಹ್ವಾನಿಸಿ ಮಹತ್ವದ ಸಭೆ ನಡೆಸಿದ್ದಾರೆ.
ಸಿಎಂ ಬದಲಾವಣೆ ವಿಚಾರವಾಗಿ ಕಾಂಗ್ರೆಸ್ ನಾಯಕರು ಮತ್ತು ಸಚಿವರು ನೀಡುತ್ತಿರುವ ಹೇಳಿಕೆಗಳಿಗೆ ಪೂರ್ಣವಿರಾಮ ಹಾಕುವ ಪ್ರಯತ್ನ ಶನಿವಾರದ ಸಭೆಯಲ್ಲಿ ನಡೆದಿದೆ.
ಅಧಿಕಾರ ಹಂಚಿಕೆ ಬಗ್ಗೆ ಸಿಎಂ ಹಾಗೂ ಡಿಸಿಎಂ ಬಣ ನಡುವೆ ಪರಸ್ಪರ ಹೇಳಿಕೆಗಳು ವ್ಯಕ್ತವಾಗಿದ್ದವು. ಈ ಎಲ್ಲ ಬೆಳವಣಿಗೆಗಳಿಗೆ ಬ್ರೇಕ್ ಹಾಕಲು ಖುದ್ದು ಹೈಕಮಾಂಡ್ ನಾಯಕರು ಬೆಂಗಳೂರು ದೌಡಾಯಿಸಿ ಸಿಎಂ ಸಿದ್ದರಾಮಯ್ಯ, ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಜತೆ ಮಹತ್ವದ ಸಭೆ ಮಾಡಿ, ಸೂಚನೆಗಳನ್ನು ನೀಡಿದ್ದರು.
ಈ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರು ಜಿಲ್ಲಾ ಪ್ರವಾಸದ ವೇಳೆ, “ನಮ್ಮ ಸರ್ಕಾರ ಸುಭ್ರದ್ರವಾಗಿದೆ. ಐದು ವರ್ಷ ನಾನೇ ಸಿಎಂ” ಎಂಬ ಹೇಳಿಕೆ ನೀಡಿದ್ದರು. ಸಿಎಂ ಹೇಳಿಕೆ ಬೆನ್ನಲ್ಲೇ ಕೆಲವು ಸಚಿವರು ಪರ ವಿರೋಧವಾಗಿ ಹೇಳಿಕೆ ಕೊಡಲು ಆರಂಭಿಸಿದ್ದರು.
ಈ ಹಿನ್ನೆಲೆಯಲ್ಲಿ ಅದರ ಮುಂದುವರೆದ ಭಾಗವಾಗಿ ಸಿಎಂ ಮತ್ತು ಡಿಸಿಎಂ ಸೇರಿಕೊಂಡು ಉಪಾಹಾರಕೂಟ ನೆಪದಲ್ಲಿ ಸಚಿವರ ಜೊತೆ ಮಹತ್ವದ ಸಭೆ ಮಾಡಿ, ಸಿದ್ದರಾಮಯ್ಯ ಅವರೇ ಸಲಹೆ ಸೂಚನೆಗಳನ್ನು ನೀಡಿದ್ದಾರೆ.
“ನಾನೇ ಐದು ವರ್ಷ ಸಿಎಂ ಆಗಿ ಮುಂದುವರೆಯುತ್ತೇನೆ” ಎಂದಿರುವ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿರುವ ಅವರು, “ಸಿಎಂ ಗಾದಿಯನ್ನ ಬಿಗಿಯಾಗಿ ಹಿಡಿದಿಟ್ಟುಕೊಂಡಿದ್ದೇನೆ ಎಂಬಂತೆ ನಾನು ಹೇಳಿಲ್ಲ. ಹಾಲಿ ಸಿಎಂ ಇದ್ದೇನೆ, ನಾನು ಮುಂದುವರಿಯುತ್ತೇನೆ ಎಂದಿದ್ದೇನಷ್ಟೇ. ಆದರೆ, ಈ ಮಾಧ್ಯಮಗಳು ಅದಕ್ಕೆಲ್ಲ ಬಣ್ಣ ಕೊಡುವ ಪ್ರಯತ್ನ ಮಾಡಿವೆ. ಮುಂದೆ ಹೈಕಮಾಂಡ್ ಬೇರೆ ವಿಚಾರ ಪ್ರಸ್ತಾಪಿಸಿದರೆ ಅದಕ್ಕೆ ಬದ್ಧ” ಎಂದು ಪಕ್ಕದಲ್ಲೇ ಕೂತಿದ್ದ ಡಿ ಕೆ ಶಿವಕುಮಾರ್ ಉದ್ದೇಶಿಸಿ ಸಿದ್ದರಾಮಯ್ಯ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕಾಂತರಾಜ್ ವರದಿಗೆ ಬಲಿಷ್ಠರ ವಿರೋಧ ಸಾಮಾಜಿಕ ನ್ಯಾಯದ ವಿರೋಧ
ಮುಂದುವರಿದು, “ಏನಪ್ಪ ಶಿವಕುಮಾರ್, ನೀನು ಸಿಎಂ ಆಗ್ತೀಯಾ?” ಎಂದು ನಗುತ್ತಲೇ ಸಿದ್ದರಾಮಯ್ಯ ಕೇಳಿದರು. “ಏಯ್.. ಅದೆಲ್ಲ ಏಕೆ.. ಮುಂದೆ ನೋಡೋಣ ಸರ್.. ಇಲ್ಲಿ ಈಗ ಏಕೆ” ಎಂದಷ್ಟೇ ಡಿಕೆ ಶಿವಕುಮಾರ್ ಪ್ರತ್ಯುತ್ತರಿಸಿದ್ದಾರೆ.
“ನನ್ನ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಯಾವುದೇ ಅಸಮಾಧಾನ ಇಲ್ಲ. ನಾನೇನೋ ಹೇಳಿಕೆ ನೀಡಿಬಿಟ್ಟೆ. ನೀವು ಸಹ ಸಾಲು ಸಾಲಾಗಿ ಹೇಳಿಕೆ ನೀಡುವುದು ಸರಿ ಅಲ್ಲ. ನೀವು ಈ ರೀತಿ ಹೇಳಿಕೆ ನೀಡಿದರೆ ಪಕ್ಷ ಹಾಗೂ ಸರ್ಕಾರದ ಮೇಲೆ ಪ್ರಭಾವ ಬೀರುತ್ತದೆ. ನಾವು ನಮ್ಮ ರಾಜಕೀಯವನ್ನ ನೇರವಾಗಿ ಬಿಜೆಪಿ ವಿರುದ್ದ ಮಾಡಬೇಕು. ಆದರೆ ನಾವು ನಾವೇ ರಾಜಕೀಯ ಮಾಡಿಕೊಂಡರೆ ಅದು ಖಂಡಿತ ಸರಿ ಅಲ್ಲ ಎಂದು ಸಿದ್ದರಾಮಯ್ಯ ಕಿವಿಮಾತು ಹೇಳಿದ್ದಾರೆ” ಎನ್ನಲಾಗಿದೆ.
“ಬಿಜೆಪಿಯಲ್ಲಿ ಈಗ ನಾಯಕತ್ವ ಎನ್ನುವುದೇ ಇಲ್ಲ. ನಾವು ಅಗ್ರೆಸೀವ್ ಆಗಿ ಹೋಗಬೇಕು. ನೀವು ಏನೇ ಮಾತನಾಡಿದರೂ ಅದು ನಿಮ್ಮ ಇಲಾಖೆ ಬಗ್ಗೆ ಮಾತನಾಡಿ. ನಾವು ಉತ್ತಮ ಆಡಳಿತ ನೀಡುವ ಮೂಲಕ ಜನರನ್ನ ತಲುಪಬೇಕು. ಅನಗತ್ಯ ಹೇಳಿಕೆಗಳನ್ನು ಇನ್ಮುಂದೆ ನೀಡಬೇಡಿ. ಲೋಕಸಭೆ ಚುನಾವಣೆ ಗೆಲ್ಲುವತ್ತ ನಾವು ಒಟ್ಟಾಗಿ ಕೆಲಸ ಮಾಡುವ ಅವಶ್ಯಕತೆ ಇದೆ” ಎಂದು ಮನವರಿಕೆ ಮಾಡಿಕೊಟ್ಟರು ಎಂದು ಬಲ್ಲ ಮೂಲಗಳು ತಿಳಿಸಿವೆ.
ಡಿಕೆ ಶಿವಕುಮಾರ್ ಕೂಡ ಸಭೆಯಲ್ಲಿ ಮಾತನಾಡಿ, “ಪ್ರತಿ ಕ್ಷೇತ್ರದಿಂದ 3ರಿಂದ 5 ಅಭ್ಯರ್ಥಿಗಳ ಪಟ್ಟಿ ಕೊಡುವಂತೆ ವೀಕ್ಷಕ ಜವಾಬ್ದಾರಿ ಹೊಂದಿರುವ ಸಚಿವರುಗಳಿಗೆ ಹೈಕಮಾಂಡ್ ಸೂಚನೆ ನೀಡಿದೆ. ಕ್ಷೇತ್ರಗಳ ಜವಾಬ್ದಾರಿ ಹೊತ್ತುಕೊಂಡಿರುವ ಸಚಿವರಿಗೆ ಕೆಲ ಖಡಕ್ ಸೂಚನೆ ಈಗಾಗಲೇ ನೀಡಲಾಗಿದೆ. ಈ ವರೆಗೆ 8-10 ಕ್ಷೇತ್ರಗಳಿಂದ ಮಾತ್ರ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದೆ. ಉಳಿದವು ನಿಧಾನಗತಿಯಲ್ಲಿರುವುದಕ್ಕೆ ಕಾಂಗ್ರೆಸ್ ಹೈಕಮಾಂಡ್ ಅಸಮಾಧಾನ ವ್ಯಕ್ತಪಡಿಸಿದೆ. ಕೂಡಲೇ ಪಟ್ಟಿ ಸಿದ್ಧಪಡಿಸಿ” ಎಂದು ತಿಳಿಸಿದ್ದಾರೆ.