- ಮುಖ್ಯಮಂತ್ರಿಗಳಿಂದ ಪ.ಮಲ್ಲೇಶ್‌ರ ಬುದ್ಧ ನಾಗಾರ್ಜುನರ ‘ಶೂನ್ಯಯಾನ’ ಪುಸ್ತಕ ಲೋಕಾರ್ಪಣೆ
- ಪ. ಮಲ್ಲೇಶ್ ಅವರು ಅಪ್ಪಟ ಸಮಾಜವಾದಿಯಾಗಿದ್ದರು: ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣನೆ
ಪ. ಮಲ್ಲೇಶ್ ಅವರು ಅಪ್ಪಟ ಸಮಾಜವಾದಿಯಾಗಿದ್ದರು. ನನಗೆ ರಾಜಕೀಯದ ಗೀಳು ಬರಬೇಕಾದರೆ ಪ್ರೊ. ನಂಜುಂಡಸ್ವಾಮಿ ಹಾಗೂ ಮಲ್ಲೇಶ್ ಕಾರಣ. ಅವರು ನನ್ನಂಥ ಯುವಕರಿಗೆ ಮಾರ್ಗದರ್ಶಕರಾಗಿದ್ದರು ಹಾಗೂ ನಮ್ಮ ಏಳಿಗೆಯನ್ನು ಬಯಸುತ್ತಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮೈಸೂರಿನಲ್ಲಿ ಅವರು ಇಂದು ಪ.ಮಲ್ಲೇಶ್ ರಚಿಸಿರುವ ಬುದ್ಧ ನಾಗಾರ್ಜುನರ ‘ಶೂನ್ಯಯಾನ’ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿ, “ಬದ್ಧತೆಯ ಪ್ರಾಮಾಣಿಕ ರಾಜಕಾರಣ ಮಾಡಬೇಕು ಎಂದು ಪ್ರೊ. ನಂಜುಂಡಸ್ವಾಮಿ ಹಾಗೂ ಮಲ್ಲೇಶ್ ತಿಳಿಸುತ್ತಿದ್ದರು. ರಾಜಕೀಯವಾಗಿ ನಮ್ಮ ನಡುವೆ ಆತ್ಮೀಯ ಸ್ನೇಹವಿತ್ತು. ತಪ್ಪು ಮಾಡಿದ್ದನ್ನು ಹೇಳುವ ಎದೆಗಾರಿಕೆ ಅವರಿಗೆ ಇತ್ತು” ಎಂದರು.
“ಒಮ್ಮೆ ಮಲ್ಲೇಶ್ ಅವರು ಊಟಕ್ಕೆ ಕರೆದಿದ್ದ ಸಂದರ್ಭದಲ್ಲಿ ಜೋರು ಜಗಳ ನಡೆದರೂ ಭಂಡತನದಿಂದ ಊಟ ಮುಗಿಸಿಯೇ ಹೊರಬಂದೆ” ಎಂದು ಮುಖ್ಯಮಂತ್ರಿಗಳು ಸ್ವಾರಸ್ಯಕರ ಘಟನೆಯನ್ನು ಮೆಲುಕು ಹಾಕಿದರು. ”ಮರುದಿನವೇ ತಮ್ಮನ್ನು ಕರೆದು ಮಾತನಾಡಿಸುತ್ತಿದ್ದ ನಿರ್ಮಲ ಹೃದಯದ ಮಲ್ಲೇಶ್ ಅವರು ಮನಸ್ಸಿನಲ್ಲಿ ಯಾವುದೇ ದ್ವೇಷ ಅಸೂಯೆ ಇಟ್ಟುಕೊಳ್ಳುತ್ತಿರಲಿಲ್ಲ. ಭಾರತದ ಸಮಾಜದಲ್ಲಿ ಯಾರೂ ಅನ್ಯಾಯಕ್ಕೆ ಒಳಗಾಗಬಾರದು. ಯಾರೇ ಅನ್ಯಾಯಕ್ಕೊಳಗಾದರೂ ಅದರ ವಿರುದ್ಧ ಹೋರಾಟ ಮಾಡುವವರ ಪೈಕಿ ಮಲ್ಲೇಶ್ ಮುಂಚೂಣಿಯಲ್ಲಿರುತ್ತಿದ್ದರು” ಎಂದು ಬಣ್ಣಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಬಲ ಜಾತಿಗಳ ಜೋಡೆತ್ತುಗಳು, ಬಿಜೆಪಿಗರಿಗೇ ಬೇಡವಾಗಿದ್ದೇಕೆ?
1971 ರಲ್ಲಿ ಮಲ್ಲೇಶ್ ಅವರ ಪರಿಚಯವಾಗಿದ್ದನ್ನು ಸ್ಮರಿಸಿದ ಸಿದ್ದರಾಮಯ್ಯ ಅವರು ಮಲ್ಲೇಶ್ ಅವರೊಂದಿಗಿನ ತಮ್ಮ ಒಡನಾಟವನ್ನು ಮೆಲಕುಹಾಕಿದರು. ಪ್ರತಿ ಸೋಮವಾರ ಮಹಾರಾಜ ಕಾಲೇಜಿನ ಕ್ಯಾಂಟೀನಿನಲ್ಲಿ ನಡೆಯುತ್ತಿದ್ದ ಸ್ಟಡಿ ಸರ್ಕಲ್ ಗೆ ತೇಜಸ್ವಿ, ಅನಂತಮೂರ್ತಿ, ಟಿ.ಎನ್. ನಾಗರಾಜ್, ಮಲ್ಲೇಶ್ ಸೇರಿದಂತೆ ಇತರ ಪ್ರಮುಖ ಸಾಹಿತಿಗಳು ಭೇಟಿ ನೀಡುತ್ತಿದ್ದರು ಎಂದು ನೆನೆಸಿಕೊಂಡರು.
“ದೇಶ ಒಟ್ಟಾಗಿ ಉಳಿಯಬೇಕಾದರೆ, ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ನೆಲೆಯೂರಬೇಕಾದರೆ, ದ್ವೇಷದ ರಾಜಕಾರಣ ಹೋಗಬೇಕಾದರೆ ಸಿದ್ದರಾಮಯ್ಯನವಂತವರೇ ಪುನಃ ಮುಖ್ಯಮಂತ್ರಿಗಳಾಗಬೇಕೆಂದು ರಾಹುಲ್ ಗಾಂಧೀ ಸೇರಿದಂತೆ ಮಲ್ಲೇಶ್ ಕೂಡ ಬಯಸಿದ್ದರು. ಖಡಕ್ ಆಗಿ ಮಾತನಾಡುತ್ತಿದ್ದ ಮಲ್ಲೇಶ್, ಸಮಾಜದಲ್ಲಿ ಬದಲಾವಣೆಗೆ ಸಂಪೂರ್ಣ ಕ್ರಾಂತಿಯಾಗಬೇಕೆಂದು ಜೆಪಿ ಹೇಳಿದಂತೆ ಸಂಪೂರ್ಣ ಕ್ರಾಂತಿ ಬಗ್ಗೆ ತುಡಿತವಿತ್ತು. ಎಷ್ಟೇ ತೊಂದರೆಯಿದ್ದರೂ ಹೋರಾಟ ನಿಲ್ಲಿಸುತ್ತಿರಲಿಲ್ಲ. ರಾಜಕೀಯವಾಗಿ ಮೇಲೆ ಬರುವವರಿಗೆ ಪ್ರೋತ್ಸಾಹ ಮಾಡುತ್ತಿದ್ದರು. ಹೇಳಿದಂತೆ ನಡೆದುಕೊಳ್ಳುವ ಪ್ರಾಮಾಣಿಕ ವ್ಯಕ್ತಿ” ಎಂದು ವಿವರಿಸಿದರು.
ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ.ಮಹದೇವಪ್ಪ, ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ, ವಿಧಾನಪರಿಷತ್ ಸದಸ್ಯ ತಿಮ್ಮಯ್ಯ ಪತ್ರಕರ್ತ ಜಿ.ಪಿ.ಬಸವರಾಜು, ಸವಿತಾ ಮಲ್ಲೇಶ್, ಉಗ್ರನರಸಿಂಹೇಗೌಡ, ಅಭಿರುಚಿ ಗಣೇಶ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.