ಚುನಾವಣೆಯ ವಸ್ತಿಲಿನಲ್ಲಿರುವ ಬಿಹಾರದಲ್ಲಿ ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ನಡೆಸಿದೆ. ಒಂದು ತಿಂಗಳ ಕಾಲ ನಡೆದ ಎಸ್‌ಐಆರ್ ಪ್ರಕ್ರಿಯೆಯ ಬಳಿಕ ಆಯೋಗವು ಮತದಾರರ ಕರಡು ಪಟ್ಟಿಯನ್ನು ಪ್ರಕಟಿಸಿದೆ.
ಆಯೋಗವು ಮತದಾರರ ಪಟ್ಟಿಯ ಯಾವುದೇ ಸಂಯೋಜಿತ ಪಟ್ಟಿಯನ್ನು ಒದಗಿಸಿಲ್ಲ. ಆದರೆ, ಮತದಾರರು ತಮ್ಮ ಹೆಸರನ್ನು ಆಯೋಗದ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು ಎಂದು ತಿಳಿಸಿದೆ.
ಜೂನ್ 25ರಂದು ಆರ್‌ಐಆರ್ ಪ್ರಕ್ರಿಯೆ ಆರಂಭವಾಗುವುದಕ್ಕೂ ಮೊದಲು, ಬಿಹಾರದಲ್ಲಿ 7.93 ಕೋಟಿ ನೋಂದಾಯಿತ ಮತದಾರರಿದ್ದರು. ಆದರೆ, ಈಗ ಬಿಡಗಡೆಯಾದ ಕರಡು ಪಟ್ಟಿಯಲ್ಲಿ ಸಂಯೋಜಿತ ಸಂಖ್ಯೆಯನ್ನು ಆಯೋಗ ತಿಳಿಸಿದ ಕಾರಣ, ಕಟ್ಟಿಯಲ್ಲಿ ಎಷ್ಟು ಮತದಾರರಿದ್ದಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಆದರೆ, ಪ್ರಸ್ತುತ ಸುಮಾರು 65 ಲಕ್ಷ ಮತದಾರರ ಹೆಸರನ್ನು ಕರಡು ಪ್ರತಿಯಲ್ಲಿ ಕೈಬಿಡಲಾಗಿದೆ ಎಂದು ಅಂದಾಜಿಸಲಾಗಿದೆ.
ಕರಡು ಪಟ್ಟಿಗೆ ಸಂಬಂಧಿಸಿದಂತೆ ಮತದಾರರು ‘ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಸೆಪ್ಟೆಂಬರ್ 1ರ ಅವಕಾಶವಿದೆ. ಮತದಾರರು ಯಾವುದೇ ಆಕ್ಷೇಪಣೆಗಳಿದ್ದಲ್ಲಿ, ಅರ್ಜಿ ಸಲ್ಲಿಸಬಹುದು ಎಂದು ಆಯೋಗ ಹೇಳಿದೆ.
ಎಸ್‌ಐಆರ್ ಪ್ರಕ್ರಿಯೆಯ ವಿರುದ್ಧ ವಿಪಕ್ಷಗಳು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದವು. ಅರ್ಜಿ ಆಲಿಸಿದ ನ್ಯಾಯಾಲಯವು ಪೌರತ್ವವನ್ನು ಪ್ರಶ್ನಿಸುವ ಹಕ್ಕು ಚುನಾವಣಾ ಆಯೋಗಕ್ಕಿಲ್ಲ. ಪುರಾವೆಗಳಾಗಿ ಆಧಾರ್ ಕಾರ್ಡ್‌ಅನ್ನೂ ಆಯೋಗ ಪರಿಗಣಿಸಬೇಕು ಎಂದು ಸೂಚಿಸಿತ್ತು.
ಈ ಲೇಖನ ಓದಿದ್ದೀರಾ?: ಯುಗಧರ್ಮ | ಬಿಹಾರದಲ್ಲಿ ಬಾಂಗ್ಲಾದೇಶದ ಮತದಾರರ ವಂಚನೆ
ಎಸ್‌ಐಆರ್ ಪ್ರಕ್ರಿಯೆಯಲ್ಲಿ; ಬಿಹಾರದಲ್ಲಿನ ನಿವಾಸಿಗಳಲ್ಲಿ, 1987ಕ್ಕಿಂತ ಮೊದಲು ಜನಿಸಿದವರು ತಮ್ಮ ಜನ್ಮದಿನಾಂಕ ಅಥವಾ ಜನ್ಮಸ್ಥಳವನ್ನು ಸಾಬೀತುಪಡಿಸಬೇಕು. 1987ರ ಜುಲೈ 1 ಮತ್ತು 2004ರ ಡಿಸೆಂಬರ್ 2ರ ನಡುವೆ ಜನಿಸಿದವರು ತಮ್ಮ ಜನ್ಮದಿನಾಂಕ ಮತ್ತು ತಮ್ಮ ಒಬ್ಬ ಪೋಷಕರ ಜನ್ಮದಿನಾಂಕ/ಸ್ಥಳವನ್ನು ಸಾಬೀತುಪಡಿಸಬೇಕು. 2004ರ ಡಿಸೆಂಬರ್ 2ರ ನಂತರ ಜನಿಸಿದವರು ತಮ್ಮ ಜನ್ಮದಿನಾಂಕ/ಸ್ಥಳ ಮತ್ತು ತಮ್ಮ ಇಬ್ಬರು ಪೋಷಕರ ಜನ್ಮದಿನಾಂಕ/ಸ್ಥಳವನ್ನು ಸಾಬೀತುಪಡಿಸಬೇಕು. ಅದಕ್ಕೆ ಪೂರಕವಾದ ದಾಖಲೆಗಳನ್ನು ಸಲ್ಲಿಸಬೇಕು.
ಈ ಕ್ರಮವು ಪಾರದರ್ಶಕ ಮತ್ತು ನಿಷ್ಪಕ್ಷಪಾತ ಚುನಾವಣೆಗೆ ದಾರಿಮಾಡಿಕೊಡುತ್ತದೆ ಎಂದು ಆಯೋಗ ಹೇಳಿಕೊಂಡಿದೆ. ಆದರೆ, ಈ ಪ್ರಕ್ರಿಯೆಯಲ್ಲಿ ಮತದಾರರು ತಮ್ಮ ಪೌರತ್ವವನ್ನು ಕಡ್ಡಾಯವಾಗಿ ಸಾಬೀತು ಮಾಡಬೇಕಾದ ಅನಿವಾರ್ಯತೆ ಇದೆ. ಅದಕ್ಕಾಗಿ, ಜನರು ತಮ್ಮ ಪೌರತ್ವವನ್ನು ಸೂಚಿಸುವ ಜನನ ಪ್ರಮಾಣಪತ್ರ, ಶಾಲಾ ದಾಖಲೆಗಳನ್ನು ಸಲ್ಲಿಸಬೇಕಾಗಿದೆ. ಆದರೆ, ಈ ಅಗತ್ಯ ದಾಖಲೆಗಳೇ ಗ್ರಾಮೀಣ ಜನರಿಗೆ ಸವಾಲಾಗಿ ಪರಿಣಮಿಸಿವೆ.