ಸಾಮಾಜಿಕ ನ್ಯಾಯ | ಜಾತಿಗಣತಿ ವರದಿ ಜಾರಿಗೆ ಕಾಂಗ್ರೆಸ್‌ ಸರ್ಕಾರದ ಮೀನಾಮೇಷ ಯಾಕೆ?

Date:

ಭಾರತ್ ಜೋಡೋ ನ್ಯಾಯ್ ಯಾತ್ರೆಯ ಸಮಯದಿಂದಲೂ ಕಾಂಗ್ರೆಸ್‌ ನೀಡುತ್ತಿರುವ ಪ್ರಮುಖ ಭರವಸೆಗಳಲ್ಲಿ ಜಾತಿಗಣತಿಯೂ ಒಂದು. ಲೋಕಸಭಾ ಚುನಾವಣೆಯಲ್ಲಿಯೂ ‘ಸಾಮಾಜಿಕ ನ್ಯಾಯ’ ಭರವಸೆಯಡಿ ಜಾತಿಗಣತಿ ನಡೆಸುವುದಾಗಿ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡಿತ್ತು. ಎಲ್ಲ ಸಮುದಾಯಗಳಿಗೂ ಜನಸಂಖ್ಯೆ ಆಧಾರದಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಅವಕಾಶಗಳು ದೊರೆಯಬೇಕು. ಸಮಾನತೆಯ ನ್ಯಾಯ ಸಿಗಬೇಕೆಂದು ಕಾಂಗ್ರೆಸ್‌ ಹೇಳುತ್ತಲೇ ಇದೆ. ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹಿಂದೆ (2013-18) ಮುಖ್ಯಮಂತ್ರಿಯಾಗಿದ್ದಾಗಲೇ ಜಾತಿಗಣತಿ ನಡೆಸಿದ್ದಾರೆ. ಈಗ 2ನೇ ಬಾರಿಗೆ ಅವರು ಮುಖ್ಯಮಂತ್ರಿಯಾಗಿದ್ದಾರೆ. ಅವರ ಮುಂದೆ, ತಾವೇ ನಡೆಸಿದ್ದ ಜಾತಿ ಗಣತಿಯ ವರದಿ ಇದೆ.

ಕಾಂತರಾಜ ಅವರ ನೇತೃತ್ವದ ಸಮಿತಿ ರಾಜ್ಯಾದ್ಯಂತ ಜಾತಿ ಗಣತಿ ನಡೆಸಿದೆ. ಅದರ ವರದಿಯನ್ನು ಶಾಶ್ವತ ಹಿಂದುಳಿದ ಆಯೋಗದ ಅಧ್ಯಕ್ಷರಾದ ಕೆ ಜಯಪ್ರಕಾಶ್ ಹೆಗ್ಡೆ ಅವರು ಫೆಬ್ರವರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ್ದಾರೆ. ರಾಜ್ಯದ ಪ್ರಬಲ ಸಮುದಾಯಗಳೆಂದು ಗುರುತಿಸಿಕೊಂಡಿರುವ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳು ವರದಿಯನ್ನು ವಿರೋಧಿಸುತ್ತಿದ್ದರೂ, ಉಳಿದೆಲ್ಲ ಸಮುದಾಯಗಳು ವರದಿಯ ಜಾರಿಗೆ ಒತ್ತಾಯಿಸುತ್ತಿವೆ. ಅದರಲ್ಲೂ ಹಿರಿಯ ಕಾಂಗ್ರೆಸ್ ಮುಖಂಡ ಬಿ.ಕೆ ಹರಿಪ್ರಸಾದ್ ಅವರು, ‘ಸರ್ಕಾರ ಬಿದ್ದರೂ ಪರವಾಗಿಲ್ಲ, ಜಾತಿಗಣತಿ ವರದಿ ಜಾರಿಗೊಳಿಸಲೇಬೇಕು’ ಎಂದು ಹೇಳಿದ್ದಾರೆ. ಆದರೆ, ಜಾತಿಗಣತಿಗೆ ಒಕ್ಕಲಿಗ ಸಮುದಾಯದವರೇ ಆದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ, ಹಲವರಲ್ಲಿ ವಿರೋಧವಿದೆ. ಆದರೂ, ಕಾಂಗ್ರೆಸ್‌ ಹೈಕಮಾಂಡ್ ನಿರ್ಧಾರಕ್ಕೆ ತಲೆಬಾಗಿ ವರದಿಗೆ ಡಿ.ಕೆ ಶಿವಕುಮಾರ್ ಸಹಿ ಹಾಕಿದ್ದಾರೆ. ಸಮ್ಮತಿ ಸೂಚಿಸಿದ್ದಾರೆ.

ಅಂದಹಾಗೆ, ಭಾರತವು ಬಹುತ್ವದ ರಾಷ್ಟ್ರ. ಅಂತೆಯೇ ಜಾತಿ ತಾರತಮ್ಯದಿಂದ ಬಳಲುತ್ತಿರುವ ರಾಷ್ಟ್ರವೂ ಹೌದು. ಭಾರತದಲ್ಲಿ ಸುಮಾರು 4,000 ಜಾತಿಗಳಿವೆ. ಕರ್ನಾಟಕದಲ್ಲಿ ಸುಮಾರು 1,800 ಜಾತಿಗಳಿವೆ. ಈ ಪೈಕಿ, ಸ್ವತಂತ್ರ ಭಾರತದಲ್ಲಿ ಮೀಸಲಾತಿಯ ಹೊರತಾಗಿಯೂ ಕೆಲವೇ ಕೆಲವು ಸಮುದಾಯಗಳು ಹೆಚ್ಚಿನ ಅವಕಾಶಗಳನ್ನು ದೋಚಿಕೊಳ್ಳುತ್ತಿವೆ. ಪರಿಣಾಮ, ಅಸಮಾನತೆ, ಅಸ್ಪೃಶ್ಯತೆ, ತಾರತಮ್ಯ ಮುಂದುವರೆದೇ ಇದೆ. ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಎಲ್ಲ ಸಮುದಾಯಗಳು ಮುನ್ನೆಲೆಗೆ ಬರಲು ಒಳಮೀಸಲಾತಿ, ಜಾತಿಗಣತಿ ಅತ್ಯಗತ್ಯ. ಹೀಗಾಗಿ, ಅಹಿಂದ ನಾಯಕರಾಗಿ ಗುರುತಿಸಿಕೊಂಡಿರುವ ಸಿದ್ದರಾಮಯ್ಯ ಮತ್ತು ಸರ್ವರಿಗೂ ಸಮಪಾಲು ಸಿಗಬೇಕು ಎನ್ನುತ್ತಿರುವ ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರು ಜಾತಿಗಣತಿ ಬಗ್ಗೆ ಮಾತನಾಡುತ್ತಿದ್ದಾರೆ. ಜಾತಿ ಆಧಾರದಲ್ಲಿ ಸವಲತ್ತು, ಅನುದಾನ, ಮೀಸಲಾತಿ, ಸರ್ಕಾರಿ ಕಾರ್ಯಕ್ರಮಗಳು ರೂಪುಗೊಳ್ಳಬೇಕು ಮತ್ತು ಹಂಚಿಕೆಯಾಗಬೇಕು ಎಂದು ಹೇಳುತ್ತಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ

ನೆನಪಿಟ್ಟುಕೊಳ್ಳಬೇಕಾದ ವಿಚಾರವೆಂದರೆ, ಸ್ವಾತಂತ್ರ್ಯಪೂರ್ವದಿಂದಲೂ ಜಾತಿ ಆಧಾರಿತ ಸಮೀಕ್ಷೆಗಳು ನಡೆದಿವೆ. 1891ರಲ್ಲಿ ಮೊದಲ ಬಾರಿಗೆ ಬ್ರಿಟಿಷರು ಭಾರತದಲ್ಲಿ ಜಾತಿವಾರು ಸಮೀಕ್ಷೆ ನಡೆಸಿದ್ದರು. 1931ರವರೆಗೂ ಈ ಸಮೀಕ್ಷೆಗಳು ಪ್ರತಿ 10 ವರ್ಷಕ್ಕೊಮ್ಮೆ ನಡೆದವು. ಆದರೆ, ಸ್ವಾತಂತ್ರ್ಯಾನಂತರದಲ್ಲಿ, ಸಂವಿಧಾನದಲ್ಲಿ ಜಾತಿಗಣತಿ ನಡೆಸಬೇಕು ಎಂದಿದ್ದರೂ ಕೂಡ, ಜಾತಿಗಣತಿ ನಡೆದಿಲ್ಲ. ದೇಶದಲ್ಲಿರುವ ಅಸಮಾನತೆಯನ್ನು ತೊಡೆದು ಹಾಕಲು ಪ್ರತಿ 10 ವರ್ಷಕ್ಕೊಮ್ಮೆ ಜಾತಿಗಣತಿ ನಡೆಸಬೇಕೆಂದು ಸಂವಿಧಾನದಲ್ಲಿ ಬರೆಯಲಾಗಿದೆ. ಆದರೆ, ಅದು ಸಂವಿಧಾನದಲ್ಲೇ ಉಳಿದುಹೋಗಿದೆ.

ಇಂದಿನಂತೆಯೇ, ಸಂವಿಧಾನ ರಚನಾ ಸಮಿತಿಯ ಸಭೆಗಳಲ್ಲಿಯೂ ಮೀಸಲಾತಿ ಮತ್ತು ಜಾತಿಗಣತಿ ವಿಚಾರಕ್ಕೆ ಭಾರೀ ವಿರೋಧಗಳು ವ್ಯಕ್ತವಾಗಿದ್ದವು. ಆ ಎಲ್ಲ ವಿರೋಧಗಳಾಚೆಗೂ ಸಂವಿಧಾನವು ಜಾತಿಗಣತಿ ನಡೆಯಬೇಕು ಎಂಬುದನ್ನು ಅಳವಡಿಸಿಕೊಂಡಿದೆ. ಅದರಂತೆ, ಈಗ  ಕರ್ನಾಟಕದಲ್ಲಿ ಜಾತಿಗಣತಿ ವರದಿ ಸಿದ್ದವಾಗಿದೆ. ಸಲ್ಲಿಕೆಯಾಗಿದೆ.

ಗಮನಾರ್ಹವಾಗಿ, ಕರ್ನಾಟಕದಲ್ಲಿರುವ 1,800 ಜಾತಿಗಳಲ್ಲಿ ಬಹುತೇಕ ಸಮುದಾಯಗಳು ಮೀಸಲಾತಿ ಪಡೆದಿವೆ. ಆದರೆ, ಅವುಗಳಲ್ಲಿ 100ಕ್ಕೂ ಕಡಿಮೆ ಸಮುದಾಯಗಳು ಮಾತ್ರವೇ ಮೀಸಲಾತಿಯ ಹೆಚ್ಚು ಲಾಭ ಪಡೆಯುತ್ತಿವೆ. ಈ ಅಸಮಾನತೆಯನ್ನು ಹೋಗಲಾಡಿಸಲು ಜಾತಿಗಣತಿ ಅತ್ಯಗತ್ಯ. ಆ ವರದಿ ಆಧಾರ ಮೇಲೆ ಒಳಮೀಸಲಾತಿ ಜಾರಿಗೊಳಿಸಬೇಕಾದ್ದು, ರಾಜ್ಯ ಸರ್ಕಾರದ ಆದ್ಯ ಕರ್ತವ್ಯ.

ಆದರೆ, ಕರ್ನಾಟಕದಲ್ಲಿ ತಮ್ಮದೇ ಪಾರುಪತ್ಯವೆಂದು ಮೆರೆಯುತ್ತಿರುವ ಲಿಂಗಾಯತರು ಮತ್ತು ಒಕ್ಕಲಿಗರು ಜಾತಿಗಣತಿಯ ವಿರುದ್ಧ ನಿಂತಿದ್ದಾರೆ. ಈ ಎರಡೂ ಸಮುದಾಯಗಳ ವಿರೋಧಗಳಿಂದಲೇ ವರದಿ ಜಾರಿಗೆ ಬರುತ್ತಿಲ್ಲ. ಉತ್ತರ ಮತ್ತು ದಕ್ಷಿಣ ಕರ್ನಾಟಕದಲ್ಲಿ ಬಲಿಷ್ಠ ಸಮುದಾಯಗಳಾದ ಲಿಂಗಾಯತರು ಮತ್ತು ಒಕ್ಕಲಿಗರು ಕರ್ನಾಟಕ ರಾಜಕಾರಣವನ್ನೂ ತಮ್ಮ ತೆಕ್ಕೆಯಲ್ಲಿಯೇ ಇಟ್ಟುಕೊಂಡಿದ್ದಾರೆ. ನೀತಿ, ನಿರೂಪಣೆ, ಅಧಿಕಾರ, ಸರ್ಕಾರ – ಎಲ್ಲವನ್ನೂ ನಿರ್ಧರಿಸುವವರು ತಾವೇ ಎಂಬ ಅಹಂ ಈ ಎರಡೂ ಸಮುದಾಯಗಳಲ್ಲಿ ಬೇರೂರಿದೆ. ಅಂತಹ ಅಹಂಗೆ ಎಚ್‌.ಡಿ ದೇವೇಗೌಡ, ಎಸ್‌.ಎಂ ಕೃಷ್ಣ, ಡಿ.ಕೆ ಶಿವಕುಮಾರ್, ಎಚ್‌.ಡಿ ಕುಮಾರಸ್ವಾಮಿ, ಬಿ.ಎಸ್ ಯಡಿಯೂರಪ್ಪ, ಶ್ಯಾಮನೂರು ಶಿವಶಂಕರಪ್ಪ, ಎಂ.ಬಿ ಪಾಟೀಲ್, ಈಶ್ವರ ಖಂಡ್ರೆ ನೀರೆರೆದಿದ್ದಾರೆ. ಈಗ ಆ ಅಹಂ ಹೆಮ್ಮರವಾಗಿ ಬೆಳೆದಿದೆ.

ತಮ್ಮ ಜಾತಿ ಅಹಂನಿಂದಲೇ ಜಾತಿಗಣತಿ ವರದಿ ಜಾರಿಯಾಗದಂತೆ ಅಡ್ಡಿಪಡಿಸುತ್ತಿದ್ದಾರೆ. ವರದಿ ಜಾರಿಯಾದರೆ, ಹಿಂದುಳಿದ, ಪರಿಶಿಷ್ಟ ಹಾಗೂ ಅಲ್ಪಸಂಖ್ಯಾತರ ಸಮುದಾಯಗಳು ಹೆಚ್ಚಿನ ಸಂಖ್ಯೆಯಲ್ಲಿವೆ ಮತ್ತು ಹೆಚ್ಚಿನ ಜನರೂ ಇದೇ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂಬುದು ಬಹಿರಂಗವಾಗುತ್ತದೆ ಎಂಬ ಆತಂಕ ಈ ಎರಡೂ ಸಮುದಾಯಗಳಲ್ಲಿದೆ. ಅಹಿಂದ ಸಮುದಾಯವು ಹೆಚ್ಚಿನ ಸಂಖ್ಯೆಯಲ್ಲಿದೆ ಎಂದಾದರೆ, ರಾಜಕೀಯ ವಾತಾವರಣವೂ ಬದಲಾಗುತ್ತದೆ. ರಾಜಕೀಯ ಹಿಡಿತ ತಮ್ಮ ಕೈತಪ್ಪುತ್ತದೆ. ಮಾತ್ರವಲ್ಲದೆ, ಅಹಿಂದ ಸಮುದಾಯಗಳು ಹೆಚ್ಚು ಸವಲತ್ತುಗಳಿಗೆ ಅರ್ಹವಾಗುತ್ತದೆ. ಇದು ರಾಜ್ಯದಲ್ಲಿ ತಮ್ಮ ಪ್ರಾಬಲ್ಯತೆಯನ್ನು ಕಸಿದುಕೊಳ್ಳುತ್ತದೆ ಎಂಬ ಭಯ ಲಿಂಗಾಯತ-ಒಕ್ಕಲಿಗ ಸಮುದಾಯಗಳಲ್ಲಿದೆ.

ವಾಸ್ತವವಾಗಿ, ಒಕ್ಕಲಿಗ ಮತ್ತು ಲಿಂಗಾಯತರಲ್ಲೂ ಕಡುಬಡವರಿದ್ದಾರೆ. ಉಳುಮೆಗಾಗಿ ಸ್ವಂತ ಭೂಮಿ ಇಲ್ಲದವರೂ ಇದ್ದಾರೆ. ಅವರ ಸ್ಥಿತಿಗತಿಗಳೂ ವರದಿಯಲ್ಲಿ ಬಹಿರಂಗವಾಗಲಿದೆ. ಅವರ ಸ್ಥಿತಿಗತಿಗಳ ಮೇಲೂ ಅವರಿಗೆ ಆದ್ಯತೆ ದೊರೆಯುತ್ತದೆ. ಯಾವ ಸಮುದಾಯಗಳಿಗೆ ಅವಕಾಶ ಸಿಕ್ಕಿಲ್ಲವೋ ಅವರನ್ನು ಪ್ರಬಲ ಸಮುದಾಯ ಜೊತೆಗೆ ಕರೆದೊಯ್ಯಲು ಅವಕಾಶವಾಗುತ್ತದೆ.

ಆದರೆ, ಈ ವಾಸ್ತವವನ್ನು ಎರಡೂ ಸಮುದಾಯಗಳ ರಾಜಕೀಯ ನಾಯಕರು ಮರೆಮಾಚುತ್ತಿದ್ದಾರೆ. ತಮ್ಮ ರಾಜಕೀಯ ನೆಲೆಯನ್ನು ಗಟ್ಟಿಯಾಗಿ ಉಳಿಸಿಕೊಳ್ಳಲು ತಮ್ಮದೇ ಸಮುದಾಯಗಳನ್ನು ದಾರಿ ತಪ್ಪಿಸುತ್ತಿದ್ದಾರೆ. ಒಕ್ಕಲಿಗ, ಲಿಂಗಾಯತ ಮಠಗಳ ಪೈಕಿ ಹಲವು ಮಠಗಳು ಜಾತಿಗಣತಿಗೆ ವಿರುದ್ಧವಾಗಿವೆ. ಜಾತೀಯತೆ, ಪಂಕ್ತಿಭೇದ ಆಚರಿಸುವ ಪೇಜಾವರ ಸ್ವಾಮಿ, ಜಾತ್ಯತೀತ ದೇಶದಲ್ಲಿ ಜಾತಿಗಣತಿ ಯಾಕೆಂದು ಪ್ರಶ್ನಿಸುವ ಮುಲಕ ತಮ್ಮೊಳಗಿನ ಕೊಳಕನ್ನು ಬಹಿರಂಗ ಪಡಿಸಿದ್ದಾರೆ.

ಆದಾಗ್ಯೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿಗಣತಿ ವರದಿ ಜಾರಿಗೆ ಮಾಡುತ್ತೇವೆ. ಹೈಕಮಾಂಡ್ ಮತ್ತು ಸಚಿವ ಸಂಪುಟದ ಒಪ್ಪಿಗೆ ಪಡೆದು ಜಾರಿಗೊಳಿಸುತ್ತೇವೆ ಎನ್ನುತ್ತಿದ್ದಾರೆ. ಅವರ ಈ ಮಾತುಗಳು ಕಳೆದ 8 ತಿಂಗಳಿನಿಂದ ಪುನರಾವರ್ತನೆಯಾಗುತ್ತಿವೆ. ಈ ನಡುವೆ, ಉಪಚುನಾವಣೆಯೂ ಎದುರಾಗಿದ್ದು, ವರದಿಯ ಚರ್ಚೆಯನ್ನು ಮತ್ತಷ್ಟು ಮುಂದೂಡಿದ್ದಾರೆ. ತಾವೇ ನೇಮಿಸಿದ್ದ ಸಮಿತಿ ಸಲ್ಲಿಸಿದ ವರದಿಯನ್ನು ತಾವೇ ಜಾರಿಗೆ ತರಲು ಮೀನಾಮೇಷ ಎಣಿಸುತ್ತಿದ್ದಾರೆ.

ಅಂದಹಾಗೆ, ಹರಿಯಾಣ ಚುನಾವಣೆಯಲ್ಲಿ ಜಾತಿಗಣತಿಯನ್ನೇ ತನ್ನ ಪ್ರಧಾನ ಭರವಸೆಯಾಗಿಸಿಕೊಂಡು ಕಾಂಗ್ರೆಸ್‌ ಪ್ರಚಾರ ಮಾಡಿತ್ತು. ಆದರೂ, ಹೀನಾಯ ಸೋಲು ಕಂಡಿತು. ಜಾಟ್ ಸಮುದಾಯವನ್ನು ತನ್ನತ್ತ ಸೆಳೆಯುವ ಭರದಲ್ಲಿ, ಉಳಿದ ಹಿಂದುಳಿದ ಸಮುದಾಯಗಳನ್ನು ಕಾಂಗ್ರೆಸ್‌ ನಿರ್ಲಕ್ಷಿಸಿತು ಎಂಬ ಮಾತುಗಳಿವೆ. ಅದಕ್ಕಾಗಿಯೇ, ಈಗ ಕರ್ನಾಟಕದಲ್ಲಿ ಜಾತಿಗಣತಿ ವರದಿಯನ್ನು ಜಾರಿಗೆ ತಂದರೆ, ನೆರೆಯ ರಾಜ್ಯ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್‌ಗೆ ಹಿನ್ನಡೆಯಾಗಬಹುದು ಎಂಬ ಆತಂಕ ಪಕ್ಷದಲ್ಲಿದೆ. ಹೀಗಾಗಿ, ಚುನಾವಣೆಯ ಬಳಿಕ ವರದಿಯ ಚರ್ಚೆಯನ್ನು ಕೈಗೆತ್ತಿಕೊಳ್ಳಲು ಕಾಂಗ್ರೆಸ್ ನಾಯಕರು ಯೋಜಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ಹೇಳುತ್ತಿವೆ.

ಈ ವರದಿ ಓದಿದ್ದೀರಾ?: ಈ ದಿನ ಸಂಪಾದಕೀಯ | ಬಲಿಷ್ಠರೇ ಜಾತಿಗಣತಿಯನ್ನು ವಿರೋಧಿಸಿದರೆ ಬಾಯಿಲ್ಲದವರ ಪಾಡೇನು?

ಮುಖ್ಯವಾಗಿ, ಕರ್ನಾಟಕದಲ್ಲಿಯೂ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದ್ದು, ಅದರಲ್ಲಿ ಒಂದು ಲಿಂಗಾಯತರ ಪ್ರಾಬಲ್ಯದ ಕ್ಷೇತ್ರವಾಗಿದ್ದರೆ, ಮತ್ತೊಂದರಲ್ಲಿ ಒಕ್ಕಲಿಗರು ಪ್ರಬಲರಾಗಿದ್ದಾರೆ. ಈ ಉಪಚುನಾವಣೆಯನ್ನು ಗೆಲ್ಲುವುದು ಆಡಳಿತಾರೂಢ ಕಾಂಗ್ರೆಸ್‌ಗೆ ಪ್ರತಿಷ್ಠೆಯಾಗಿದೆ. ಹೀಗಾಗಿ, ಒಕ್ಕಲಿಗರು ಮತ್ತು ಲಿಂಗಾಯತರನ್ನು ಎದುರು ಹಾಕಿಕೊಳ್ಳದೆ ಚುನಾವಣೆಯನ್ನು ದಾಟಲು ಕಾಂಗ್ರೆಸ್‌ ನೋಡುತ್ತಿದೆ. ಜಾತಿಗಣತಿ ವರದಿಯನ್ನು ಚರ್ಚೆಯಿಂದ ಹಿಂದೆ ಇಟ್ಟಿದೆ.

ಜಾತಿ ಗಣತಿ ವರದಿ ಬಗ್ಗೆ ಚರ್ಚೆ ಮಾಡುವುದಕ್ಕೂ ಮುನ್ನ ರಾಜ್ಯ ಸರ್ಕಾರ ಒಂದು ವಿಚಾರ ಗಮನದಲ್ಲಿಟ್ಟುಕೊಳ್ಳಬೇಕು. ಈ ಹಿಂದೆ, ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ, ಮೀಸಲಾತಿ ಮತ್ತು ಭೂಸುಧಾರಣೆ ಕಾಯ್ದೆಯನ್ನು ಜಾರಿಗೆ ತಂದಿದ್ದರು. ಆಗಲೂ, ಗಮನಾರ್ಹವಾಗಿ ಇದೇ ಸಮುದಾಯಗಳು ವಿರೋಧ ವ್ಯಕ್ತಪಡಿಸಿದ್ದವು. ವಿರೋಧ, ಟೀಕೆಗಳ ಹೊರತಾಗಿಯೂ ಆ ಕಾಯ್ದೆ ಜಾರಿಯಾದ್ದರಿಂದ ಇಂದು ಹಲವಾರು ಸಮುದಾಯಗಳು ಸ್ವಂತ ಭೂಮಿ ಹೊಂದಲು ಸಾಧ್ಯವಾಗಿದೆ. ವಿರೋಧದ ನಂತರವೂ ಕಾಂಗ್ರೆಸ್‌ ಹಲವು ಬಾರಿ ಅಧಿಕಾರ ಪಡೆದುಕೊಂಡಿದೆ. ಅದರಂತೆಯೇ, ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮಾನತೆಗೆ ಜಾತಿಗಣತಿ ಬಹುಮುಖ್ಯ. ಅದನ್ನು ಜಾರಿಗೊಳಿಸುವುದರಿಂದ ಎಲ್ಲ ಸಮುದಾಯಗಳಿಗೆ ಒಳಿತೇ ಆಗುತ್ತದೆ. ಸರ್ಕಾರಕೂ ಕೂಡ ಎಂಬುದನ್ನು ಸರ್ಕಾರ ಅರಿತುಕೊಳ್ಳಬೇಕು.

ಇನ್ನು, ಮುಡಾ ಪ್ರಕರಣವೂ ಸೇರಿದಂತೆ ಹಗರಣಗಳ ಆರೋಪ-ಪ್ರತ್ಯಾರೋಪಗಳಲ್ಲಿ ಮುಳುಗಿರುವ ಕಾಂಗ್ರೆಸ್‌ ಸರ್ಕಾರವು ತನ್ನ ಆಡಳಿತವನ್ನು ಮರಳಿ ಸರಿದಾರಿಗೆ ತರಲು ಜಾತಿಗಣತಿ ವರದಿ ನೆರವಾಗಲಿದೆ. ಮುಖ್ಯವಾಗಿ, ಸಿದ್ದರಾಮಯ್ಯ ಅವರ ವರ್ಚಸ್ಸಿಗೆ ಮತ್ತಷ್ಟು ಬಲ ತುಂಬಲಿದೆ. ಸಾಮಾಜಿಕ ನ್ಯಾಯಕ್ಕಾಗಿ ಜಾತಿಗಣತಿ ವರದಿ ಮತ್ತು ಒಳಮೀಸಲಾತಿ ಜಾರಿಗೆ ರಾಜ್ಯದ ಕಾಂಗ್ರೆಸ್‌ ಸರ್ಕಾರ ಮುಂದಡಿ ಇಡಬೇಕಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಾಂಗ್ರೆಸ್‌ಗೆ ಯೋಗೇಶ್ವರ್ ಸೇರ್ಪಡೆ; ಕೆಪಿಸಿಸಿ ಕಚೇರಿಯಲ್ಲಿ ಗರಿಗೆದರಿದ ಚಟುವಟಿಕೆಗಳು

ಚನ್ನಪಟ್ಟಣ ಉಪಚುನಾವಣೆಗೆ ಬಿಜೆಪಿ ಟಿಕೆಟ್ ಕೊಡದ ಕಾರಣ ಮಾಜಿ ಸಚಿವ ಸಿ.ಪಿ...

ಇದೇನಾ ಮೋದಿಯ ಡಿಜಿಟಲ್ ಇಂಡಿಯಾ?

ಗುಜರಾತ್ ಮಾಡೆಲ್, ಸಬ್ ಕಾ ಸಾತ್ – ಸಬ್ ಕಾ ವಿಕಾಸ್,...

ಮಕಾಡೆ ಮಲಗುತ್ತಾ ಅಂಬಾನಿಯ ಜಿಯೋ?

5 ಸಾವಿರ ಕೋಟಿ ಖರ್ಚು ಮಾಡಿ ಮಗನ ಮದುವೆ ಮಾಡಿದ್ದ ಮುಖೇಶ್...

545 ಪಿಎಸ್ಐ ಹುದ್ದೆ | ನಮ್ಮ ಹೋರಾಟಕ್ಕೆ ಕೊನೆಗೂ ಜಯ: ಸಚಿವ ಪ್ರಿಯಾಂಕ್‌ ಖರ್ಗೆ

ನಮ್ಮ ಸರ್ಕಾರ ಪ್ರಾಮಾಣಿಕವಾಗಿ ಹಾಗೂ ಪಾರದರ್ಶಕವಾಗಿ ಮರುಪರೀಕ್ಷೆ ನಡೆಸಿ, ಅಂದು ಬಿಜೆಪಿ...