ಲೋಕಸಭೆಯಿಂದ ಅಧೀರ್ ರಂಜನ್ ಚೌಧರಿ ಅವರನ್ನು ಅಮಾನತುಗೊಳಿಸಿರುವ ಕುರಿತು ಚರ್ಚಿಸಲು ಕಾಂಗ್ರೆಸ್ ಸಂಸದೀಯ ಪಕ್ಷದ (ಸಿಪಿಪಿ) ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇಂದು(ಆಗಸ್ಟ್ 11) ಬೆಳಿಗ್ಗೆ ಪಕ್ಷದ ಲೋಕಸಭಾ ಸದಸ್ಯರ ಸಭೆಯನ್ನು ಕರೆದಿದ್ದಾರೆ.
ಅವಿಶ್ವಾಸ ಗೊತ್ತುವಳಿ ಚರ್ಚೆಯ ವೇಳೆ ಪ್ರಧಾನಿಯವರ ಬಗ್ಗೆ ಕಾಂಗ್ರೆಸ್ ನಾಯಕರ ಕೆಲವು ಟೀಕೆಗಳು ಸದನದಲ್ಲಿ ಆಕ್ರೋಶಕ್ಕೆ ಕಾರಣವಾದ ನಂತರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಚೌಧರಿ ಅವರ ಅಮಾನತು ನಿರ್ಣಯವನ್ನು ಗುರುವಾರ ಮಂಡಿಸಿದರು. ಇದನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು.
ನಂತರ ಚೌಧರಿ ಅವರು ಸರ್ಕಾರದ ವಿರುದ್ಧ ನೀಡಿದ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ತಾನು ಪ್ರಧಾನಿ ಮೋದಿಯನ್ನು ಅವಮಾನಿಸಿಲ್ಲ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ರಾಜಸ್ಥಾನ | ಕೋಟಾದಲ್ಲಿ 17 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ; ವಾರದಲ್ಲಿ 3ನೇ ಪ್ರಕರಣ
“ಮೋದಿಯವರು ಮಣಿಪುರದ ವಿಷಯದಲ್ಲಿ ‘ನೀರವ್’ ಆಗಿ ಕುಳಿತಿದ್ದಾರೆ. ಅಂದರೆ ಮೌನವಾಗಿ ಕುಳಿತಿದ್ದಾರೆ. ‘ನೀರವ್’ ಎಂದರೆ ಮೌನವಾಗಿರುವುದು. ನನ್ನ ಉದ್ದೇಶ ಪ್ರಧಾನಿ ಮೋದಿಯನ್ನು ಅವಮಾನಿಸುವುದಿಲ್ಲ. ಪ್ರಧಾನಿ ಮೋದಿಯವರು ತಮ್ಮನ್ನು ಅವಮಾನಿಸಿದ್ದಾರೆ ಎಂದು ಭಾವಿಸಲಿಲ್ಲ. ಅವರ ಆಸ್ಥಾನಿಕರು ಭಾವಿಸಿ ನನ್ನನ್ನು ಅಮಾನತುಗೊಳಿಸಲಾಗಿದೆ ಎಂದು ನನಗೆ ತಿಳಿದುಬಂದಿದೆ” ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಹೇಳಿದರು.
ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಅವರು ಅಮಾನತು “ದುರದೃಷ್ಟಕರ” ಮತ್ತು “ಭಾರತದ ಸಂವಿಧಾನದ 105 (1) ನೇ ವಿಧಿಯ ಸಂಪೂರ್ಣ ಉಲ್ಲಂಘನೆ. ಈ ಘಟನೆಯು ಸಂಸತ್ತು ಮತ್ತು ಶಾಸಕಾಂಗಗಳಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಮಾಡುವ ಸ್ವತಂತ್ರ ಭಾಷಣದ ಬಗ್ಗೆ ಗಂಭೀರ ಪರಿಣಾಮಗಳನ್ನು ಉಂಟು ಮಾಡಲಿದೆ. ಅಮಾನತುಗೊಳಿಸುವಿಕೆಯನ್ನು ಸೂಕ್ತ ನ್ಯಾಯಾಲಯದಲ್ಲಿ ಪ್ರಶ್ನಿಸಲು ಇದು ಸೂಕ್ತವಾದ ಪ್ರಕರಣವಾಗಿದೆ” ಎಂದು ಹೇಳಿದ್ದಾರೆ.
ಲೋಕಸಭೆಯಲ್ಲಿ ಕಾಂಗ್ರೆಸ್ ವಿಪ್ ಮಾಣಿಕ್ಕಂ ಟ್ಯಾಗೋರ್, “ಮೋದಿ ವಿರುದ್ಧ ಮಾತನಾಡಿದ್ದಕ್ಕಾಗಿ ಮೊದಲ ಬಾರಿಗೆ, ಲೋಕಸಭೆಯ ಅತಿದೊಡ್ಡ ಪ್ರತಿಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಅವರನ್ನು ಅಮಾನತುಗೊಳಿಸಲಾಗಿದೆ. ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಇದು ನಿರಂಕುಶಪ್ರಭುತ್ವ ಹಾಗೂ ಪ್ರಜಾಪ್ರಭುತ್ವ ವಿರೋಧಿ ನಡೆ” ಎಂದು ಖಂಡಿಸಿದ್ದಾರೆ.