ಮುಸ್ಲಿಮರ ಮೊಹಲ್ಲಾಗಳಲ್ಲಿ(ಮುಸ್ಲಿಮರು ಹೆಚ್ಚಾಗಿ ವಾಸವಿರುವ ಪ್ರದೇಶ) ಭಗವದ್ಗೀತೆ ಸಂದೇಶ ಹರಡುವುದರಿಂದ ಹಿಂದೂ ರಾಷ್ಟ್ರ ಬಲಗೊಳ್ಳುತ್ತದೆ ಎಂದು ಮಹಾರಾಷ್ಟ್ರ ಸಚಿವ ಮತ್ತು ಬಿಜೆಪಿ ನಾಯಕ ನಿತೇಶ್ ರಾಣೆ ಭಾನುವಾರ ಕೋಮುವಾದಿ ಹೇಳಿಕೆಯನ್ನು ನೀಡಿದ್ದಾರೆ.
ಪುಣೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ “ಭಗವದ್ಗೀತೆ ಎಂದಿಗೂ ದ್ವೇಷವನ್ನು ಬೋಧಿಸುವುದಿಲ್ಲ ಅಥವಾ ಮತಾಂತರಗಳನ್ನು ಪ್ರತಿಪಾದಿಸುವುದಿಲ್ಲ. ಅದರ ಬೋಧನೆಗಳು ಮೊಹಲ್ಲಾಗಳಲ್ಲಿ ಹರಡಿದರೆ ಅವರ ಆಲೋಚನೆಗಳು ಸಹ ಬದಲಾಗುತ್ತದೆ. ಇದು ನಮ್ಮ ಹಿಂದೂ ರಾಷ್ಟ್ರವನ್ನು ಬಲಪಡಿಸುತ್ತದೆ” ಎಂದರು.
ಇದನ್ನು ಓದಿದ್ದೀರಾ? ‘ಟೆರಸ್ಟ್ರಿಯಲ್ ವರ್ಸಸ್’ ಸಿನಿಮಾ: ‘ಹಿಂದೂರಾಷ್ಟ್ರ ಕಟ್ಟುತ್ತೇವೆ’ ಎನ್ನುವವರಿಗೂ ಇಲ್ಲಿದೆ ಪಾಠ
“ಭಗವದ್ಗೀತೆಯ ಬೋಧನೆಗಳು ಸಾಮರಸ್ಯ ಮತ್ತು ಚಿಂತನೆಯ ಪರಿವರ್ತನೆಯನ್ನು ಉತ್ತೇಜಿಸುತ್ತವೆ. ಅದರ ಸಂದೇಶವು ದೇಶದ ಪ್ರತಿಯೊಂದು ಮೂಲೆಯನ್ನು ತಲುಪಬೇಕು” ಎಂದೂ ಹೇಳಿದ್ದಾರೆ.
1ನೇ ತರಗತಿಯಿಂದ ಶಾಲಾ ಪಠ್ಯಕ್ರಮದಲ್ಲಿ ಹಿಂದಿಯನ್ನು ಸೇರಿಸುವ ಬಗ್ಗೆ ವಿಪಕ್ಷಗಳ ವಿರೋಧದ ಬಗ್ಗೆಯೂ ಈ ಸಂದರ್ಭದಲ್ಲೇ ರಾಣೆ ಪ್ರತಿಕ್ರಿಯಿಸಿದ್ದಾರೆ. “ಯಾವುದೇ ಭಾಷೆಯನ್ನು ಕಡ್ಡಾಯಗೊಳಿಸುತ್ತಿಲ್ಲ. ವಿದ್ಯಾರ್ಥಿಗಳು ಬಯಸಿದರೆ ಸಂಸ್ಕೃತವನ್ನು ಮೂರನೇ ಭಾಷೆಯಾಗಿ ಆಯ್ಕೆ ಮಾಡಬಹುದು” ಎಂದರು.
ಹಾಗೆಯೇ, “ಗೀತರಚನೆಕಾರ ಜಾವೇದ್ ಅಖ್ತರ್, ನಟ ಆಮಿರ್ ಖಾನ್ ಅಥವಾ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮರಾಠಿಯಲ್ಲಿ ಮಾತನಾಡುವುದನ್ನು ನಾನೆಂದು ಕೇಳಿಲ್ಲ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಹಿಂದೂ ರಾಷ್ಟ್ರದ ಉದ್ದೇಶ ಸಾಕಾರಗೊಳಿಸಲು ಸ್ಥಳೀಯ ಸಂಸ್ಕೃತಿ ನಾಶ ಮಾಡಲು ಹೊರಟಿದ್ದಾರೆ: ಎ ನಾರಾಯಣ
ಶಿವಸೇನೆ (ಯುಬಿಟಿ) ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಜುಲೈ 5 ರಂದು ಹಿಂದೆ ಹೇರಿಕೆ ವಿರುದ್ಧ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸುವುದಾಗಿ ಘೋಷಿಸಿವೆ. ಈ ಬಗ್ಗೆ ಪ್ರತಿಕ್ರಿಯಿಸಿದ ರಾಣೆ, “ಬೆಹ್ರಂಪಾದ ಅಥವಾ ಮೊಹಮ್ಮದ್ ಅಲಿ ರಸ್ತೆಯಂತಹ ಹಿಂದಿ ಮಾತನಾಡುವ ಪ್ರದೇಶಗಳಲ್ಲಿ ಏಕೆ ಮೆರವಣಿಗೆ ನಡೆಸಬಾರದು? ‘ಆಜಾನ್’ (ಇಸ್ಲಾಮ್ ಪ್ರಾರ್ಥನೆ) ಮರಾಠಿಯಲ್ಲಿ ಕೂಗಿದ ದಿನ ಭಾಷೆಗೆ ನಿಜವಾದ ಗೌರವವಿದೆ ಎಂದು ನಮಗೆ ತಿಳಿಯುತ್ತದೆ” ಎಂದು ಹೇಳುವ ಮೂಲಕ ಬಿಜೆಪಿ ನಾಯಕ ಭಾಷಾ ಹೇರಿಕೆ ವಿವಾದದಲ್ಲೂ ಕೋಮು ಬಣ್ಣ ಬಳಿಯುವ ಯತ್ನ ಮಾಡಿದ್ದಾರೆ.
“ಹಿಂದೂಗಳಲ್ಲಿ ವಿಭಜನೆಯನ್ನು ಹೆಚ್ಚಿಸುವ ಬದಲು, ದಶಕಗಳಿಂದ ಮುಂಬೈನಲ್ಲಿ ವಾಸಿಸುತ್ತಿರುವ ಆದರೆ ಭಾಷೆಯನ್ನು ಸ್ವೀಕರಿಸದವರಿಗೆ ಮರಾಠಿ ಕಲಿಸಲು ಪ್ರಯತ್ನಿಸಬೇಕು” ಎಂದು ರಾಣೆ ಹೇಳಿದರು.
