‘ಟೆರಸ್ಟ್ರಿಯಲ್ ವರ್ಸಸ್’ ಸಿನಿಮಾ: ‘ಹಿಂದೂರಾಷ್ಟ್ರ ಕಟ್ಟುತ್ತೇವೆ’ ಎನ್ನುವವರಿಗೂ ಇಲ್ಲಿದೆ ಪಾಠ

Date:

ಬಹುತ್ವ ಭಾರತವು ಉಳಿದಾಗ ಮಾತ್ರ ಸಂವಿಧಾನ ಉಳಿಯುತ್ತದೆ. ಈ ಕಾರಣಕ್ಕೆ ‘ಟೆರಸ್ಟ್ರಿಯಲ್ ವರ್ಸಸ್’ ಸಿನಿಮಾ ನಮಗೆ ಪಾಠವಾಗಬೇಕಿದೆ

ಬೆಂಗಳೂರು ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ (ಬಿಫೆಸ್‌)ನಲ್ಲಿ ಪ್ರದರ್ಶನವಾದ ಪರ್ಷಿಯನ್ ಭಾಷೆಯ ‘ಟೆರಸ್ಟ್ರಿಯಲ್‌ ವರ್ಸಸ್’ ಸಿನಿಮಾ ವಿನೂತನ ನಿರೂಪಣೆಯ ಕಾರಣಕ್ಕಷ್ಟೇ ಅಲ್ಲದೇ, ಧಾರ್ಮಿಕ ಮೂಲಭೂತವಾದವನ್ನು ಕಟುವಾಗಿ ವಿಡಂಬನೆ ಮಾಡಿರುವುದಕ್ಕೂ ಚರ್ಚೆಗೆ ಅರ್ಹವಾದ ಸಿನಿಮಾ.

ಪರ್ಷಿಯನ್ ಭಾಷೆಯಲ್ಲಿರುವ ಈ ಸಿನಿಮಾದ ಕಥೆ ನಡೆಯುವುದು ಇರಾನಿನ ತೆಹ್ರಾನ್‌ನಲ್ಲಿ. ಕತ್ತಲು ಕವಿದಿರುವ ನಗರಕ್ಕೆ ಸೂರ್ಯರಶ್ಮಿ ಚೆಲ್ಲುವ ದೃಶ್ಯದೊಂದಿಗೆ ಸಿನಿಮಾ ಆರಂಭವಾಗುತ್ತದೆ. ಸುಮಾರು ಎರಡು ನಿಮಿಷ ಬೆಳಗಾಗುವ ದೃಶ್ಯ, ಹಿನ್ನೆಲೆಯಲ್ಲಿ ನಿಧಾನಕ್ಕೆ ಕೇಳಿಬರುವ ಜನಚಟುವಟಿಕೆಯ ಸದ್ದುಗದ್ದಲ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

78 ನಿಮಿಷಗಳ ಈ ಚಿತ್ರದಲ್ಲಿ ಬರುವ ಪಾತ್ರಗಳು ಕೆಲವೇ ಕೆಲವು. ಸಾಮಾನ್ಯ ಜನರು ಒಂದಲ್ಲ ಒಂದು ಕಾರಣಕ್ಕೆ ಪ್ರಭುತ್ವದ ಪ್ರತಿನಿಧಿಗಳನ್ನು ಎದುರುಗೊಳ್ಳುವ ಸಂದರ್ಭಗಳ ಗುಚ್ಛ ‘ಟೆರಸ್ಟ್ರಿಯಲ್‌ ವರ್ಸಸ್’. ಎದುರಿಗಿರುವ ಪ್ರಭುತ್ವದ ಪ್ರತಿನಿಧಿಯ ಮುಖವನ್ನು ಎಲ್ಲಿಯೂ ತೆರೆಯ ಮೇಲೆ ತಂದಿಲ್ಲ. ‌ಎದುರಿನಲ್ಲಿ ಕೂತಿರುವ ವ್ಯಕ್ತಿಯ ಮುಖ ಮಾತ್ರ ಕಾಣುತ್ತದೆ. ಆತನನ್ನು ಪ್ರಶ್ನಿಸುತ್ತಿರುವ ಅಥಾರಿಟಿಯ ಧ್ವನಿ ಮಾತ್ರ ಇಲ್ಲಿ ಉಂಟು. ಅಂತಹ ಒಂಬತ್ತು ಪಾತ್ರಗಳು ಪರದೆಯ ಮೇಲೆ ಬರುತ್ತವೆ.

ತನ್ನ ಮಗುವಿಗೆ ‘ಡೇವಿಡ್‌’ ಎಂದು ಹೆಸರಿಡಲು ಬಂದಿರುವ ತಂದೆ, ಹುಡುಗನೊಬ್ಬನ ಜೊತೆ ಮೋಟರ್‌ನಲ್ಲಿ ಹೋದಳೆಂದು ಪ್ರಾಂಶುಪಾಲೆಯ ಎದುರು ಕುಳಿತಿರುವ ಹುಡುಗಿ, ಹೆಡ್‌ಫೋನ್ ಹಾಕಿಕೊಂಡು ಪಾಪ್‌ ಸಾಂಗ್ ಕೇಳುತ್ತಿರುವ ಬಾಲಕಿಗೆ ಎಂತಹ ಡ್ರೆಸ್ ಧರಿಸಬೇಕೆಂದು ಹೇಳುತ್ತಿರುವ ಸೇಲ್ಸ್‌ವುಮೆನ್‌, ಡ್ರೈವಿಂಗ್ ಲೈಸೆನ್ಸ್‌ಗಾಗಿ ಬಂದ ವ್ಯಕ್ತಿಯ ಮೈಯೆಲ್ಲ ರೂಮಿ ಪದ್ಯಗಳ ಹಚ್ಚೆ ಹಾಕಿಸಿಕೊಂಡಿರುವುದನ್ನು ಪರಿಶೀಲಿಸುವ ಅಧಿಕಾರಿ, ತಲೆಗೂದಲು ಕಾಣದಂತೆ ಸ್ಕಾರ್ಫ್ ಧರಿಸಬೇಕೆಂದು ತಾಕೀತಿಗೆ ಒಳಗಾಗುವ ಯುವತಿ, ಪೊಲೀಸರ ಜಪ್ತಿಯಲ್ಲಿರುವ ಸಾಕುನಾಯಿಯನ್ನು ಹುಡುಕಿಕೊಂಡು ಬಂದ ಮುದುಕಿ, ಸಿನಿಮಾ ಕಥೆಯಲ್ಲಿ ಏನೇನು ಇರಬಾರದು ಎಂದು ತಾಕೀತಿಗೆ ಒಳಗಾಗಿ ಒಂದೊಂದೇ ಭಾಗವನ್ನು ಹರಿದು ಹಾಕುತ್ತಾ ಹೋಗುವ ನಿರ್ದೇಶಕ, ಉದ್ಯೋಗ ಅರಸಿ ಬಂದ ಮಧ್ಯವಯಸ್ಕನಿಗೆ ಧಾರ್ಮಿಕ ಆಚರಣೆಗಳ ಕಟ್ಟುಪಾಡುಗಳನ್ನು ಪರಿಶೀಲಿಸುವ ದೃಶ್ಯ-  ಹೀಗೆ ಈ ಎಲ್ಲ ಪಾತ್ರಗಳು ಎದುರಿಗಿರುವ ಅಧಿಕಾರಿಯೊಂದಿಗೆ ಪ್ರಶ್ನೆಗೆ ಒಳಗಾಗುತ್ತಿದ್ದಾರೆ.

ಕೆಲಸ ಹುಡುಕಿ ಬಂದು ಅಧಿಕಾರಿಯ ಎದುರು ಕುಳಿತುಕೊಂಡಿರುವ ಯುವತಿಯ ದೃಶ್ಯ ಪುರುಷ ಪ್ರಧಾನ ವ್ಯವಸ್ಥೆಯ ದೌರ್ಜನ್ಯಗಳಿಗೆ ಕನ್ನಡಿ ಹಿಡಿಯುತ್ತದೆ. ಆಕೆಯ ವೈಯಕ್ತಿಕ ಒಲವು, ನಿಲುವು, ಆಕೆಯ ಸಂಬಂಧಗಳನ್ನೆಲ್ಲ ಅಧಿಕಾರಿ ಕೇಳುತ್ತಾನೆ. ಯಾವ ಪ್ರಭುತ್ವ ಸ್ಕಾರ್ಫ್ ಕಡ್ಡಾಯ ಮಾಡಿದೆಯೋ, ಅದೇ ಪ್ರಭುತ್ವದ ಭಾಗವಾಗಿರುವ ವ್ಯಕ್ತಿಯು, “ಸ್ಕಾರ್ಫ್ ತೆಗಿ” ಎಂದು ಬಲವಂತ ಮಾಡುತ್ತಾನೆ.

ಸಂಭಾಷಣೆಯೇ ಈ ಸಿನಿಮಾದ ಜೀವಾಳ. ಪ್ರಭುತ್ವದ ಇಸ್ಲಾಂ ಮೂಲಭೂತವಾದವು ಇರಾನಿನ ಜನಸಾಮಾನ್ಯರ ವೈಯಕ್ತಿಕ ಆಯ್ಕೆ, ಬದುಕು, ಸ್ವತಂತ್ರ- ಎಲ್ಲವನ್ನೂ ಹೇಗೆ ನಿಯಂತ್ರಿಸುತ್ತಿದೆ ಎಂಬುದನ್ನು ವಿಡಂಬನೆಯ ಮೂಲಕ ಕಟ್ಟಿಕೊಡಲಾಗಿದೆ.

ಇಷ್ಟೆಲ್ಲ ಕಟ್ಟುಪಾಡುಗಳನ್ನು ಸೃಷ್ಟಿಸಿಕೊಂಡಿರುವ ಮನುಷ್ಯನ ಆಟ ಪ್ರಕೃತಿಯ ಎದುರು ನಡೆಯಲ್ಲ ಎಂಬ ಸಂದೇಶ ಕೊನೆಯ ದೃಶ್ಯದಲ್ಲಿ ವ್ಯಕ್ತವಾಗುತ್ತದೆ. ಭೂಕಂಪನವನ್ನು ತೋರಿಸುವ ಮೂಲಕ ಸಿನಿಮಾ ಕೊನೆಯಾಗುತ್ತದೆ. ಆದರೆ ಕೊನೆಯ ಪಾತ್ರಕ್ಕೆ ಯಾವುದೇ ಹೆಸರಿಲ್ಲ. ವಿಕಾರ ಮುಖಭಾವವನ್ನು ಹೊಂದಿರುವ ಮುದುಕನೊಬ್ಬನನ್ನು ಕರಾಳವಾಗಿ ಬಿಂಬಿಸುವುದು ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ. ಇಲ್ಲಿ ನಿರ್ದೇಶಕ ಈ ಪಾತ್ರವನ್ನು ಅಧಿಕಾರಶಾಹಿಯ ಭಾಗವಾಗಿ ತೋರಿಸಿದಂತೆ ತೋರುತ್ತದೆ. ಧಾರ್ಮಿಕ ಮೂಲಭೂತವಾದದಲ್ಲಿ ಹೆಂಗಸರಷ್ಟೇ ಅಲ್ಲ, ಗಂಡಸರೂ ಕೂಡ ಬಲಿಪಶುಗಳಾಗುತ್ತಾರೆ ಎಂಬುದನ್ನು ತೆರೆದಿಡುವ ಪ್ರಯತ್ನವನ್ನು ಈ ಸಿನಿಮಾ ಮಾಡುತ್ತದೆ.

ಕೇನ್ಸ್ ಫಿಲ್ಮ್ ಫೆಸ್ಟಿವಲ್ ಸೇರಿದಂತೆ ಹಲವು ಖ್ಯಾತ ಸಿನಿ ಹಬ್ಬಗಳಲ್ಲಿ ಅಲಿ ಅಸ್ಗರಿ ಮತ್ತು ಅಲಿರೆಜಾ ಖತಾಮಿ ನಿರ್ದೇಶನದ ‘ಟೆರಸ್ಟ್ರಿಯಲ್ ವರ್ಸಸ್’ ಪ್ರದರ್ಶನವಾಗಿದೆ. ಕೇನ್ಸ್‌ನಲ್ಲಿ ಈ ಸಿನಿಮಾ ಶೋ ಆದ ಬಳಿಕ ನಿರ್ದೇಶಕರಿಗೆ ನಿರ್ಬಂಧಗಳನ್ನು ಹೇರುವುದಕ್ಕೆ ಇರಾನ್‌ ಸರ್ಕಾರ ಮುಂದಾಗಿತ್ತು. ಮುಂದೆ ಸಿನಿಮಾಗಳನ್ನು ನಿರ್ದೇಶಿಸದಂತೆ ಮತ್ತು ಮತ್ತೊಂದು ನೋಟಿಸ್‌ ನೀಡುವವರೆಗೆ ಬೇರೆ ದೇಶಗಳಿಗೆ ಹೋಗಿ ಸಿನಿಮಾ ಪ್ರದರ್ಶಿಸದಂತೆ ಕಟ್ಟಾಜ್ಞೆ ಮಾಡಲಾಗಿತ್ತು ಎಂದು ವರದಿಗಳು ಹೇಳುತ್ತವೆ.

ಈ ಸಿನಿಮಾವನ್ನು ಉತ್ತರ ಅಮೆರಿಕದಲ್ಲಿ ವಿತರಣೆ ಮಾಡಲು ಕಿಮ್‌ಸ್ಟಿಮ್‌ ಸಂಸ್ಥೆ ಕೈಗೆತ್ತಿಕೊಂಡಿತ್ತು, ಫಿಲ್ಮ್ ಬೋಟಿಕ್ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಅರ್ಪಣೆ ಮಾಡಿತ್ತು. ಅರಬ್ ದೇಶಗಳ ಕುರಿತು ಪಾಶ್ಚಾತ್ಯ ರಾಷ್ಟ್ರಗಳು ಬಿತ್ತುವ ಅಸಹನೆ ಚರ್ಚೆಯ ವಿಚಾರವೇ. ಆದರೆ ಜನಸಾಮಾನ್ಯರ ಜೀವನವನ್ನು ಕಸಿದ ಮೂಲಭೂತವಾದವನ್ನು ಪ್ರಶ್ನಿಸುವುದು ಕೂಡ ಅಷ್ಟೇ ಮುಖ್ಯ. ಇರಾನಿನ ಒಳಗಿರುವ ಸಿನಿಮಾ ತಂತ್ರಜ್ಞರ ಕಲಾತ್ಮಕ ಪ್ರತಿರೋಧವಾಗಿಯೂ ಈ ಸಿನಿಮಾವನ್ನು ನೋಡಬೇಕಾಗುತ್ತದೆ. ಪ್ರಭುತ್ವದ ಹಸ್ತಕ್ಷೇಪಗಳ ಸವಾರಿಯನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಹೀಗಾಗಿ ಅಲ್ಲಿನ ಸರ್ಕಾರ ನಿರ್ದೇಶಕರ ಮೇಲೆ ಸಿಟ್ಟಾಗಿರುವುದು ಸಹಜವೂ ಹೌದು.

ಇರಾನ್‌, ಅಫಘಾನಿಸ್ತಾನದ ಧಾರ್ಮಿಕ ಮೂಲಭೂತವಾದವನ್ನು ಪ್ರಶ್ನಿಸುವ ಹೊತ್ತಿನಲ್ಲಿ ಇಂತಹ ಸಿನಿಮಾಗಳು ಭಾರತದಂತಹ ದೇಶದಲ್ಲಿ ಬೀರಬಹುದಾದ ಪರಿಣಾಮ, ಹುಟ್ಟು ಹಾಕುವ ಚರ್ಚೆಯೂ ಅಗತ್ಯ. ”ನೋಡಿ ಇಸ್ಲಾಂ ಮೂಲಭೂತವಾದ ಹೇಗೆಲ್ಲ ಅಟ್ಟಹಾಸ ಮೆರೆಯುತ್ತದೆ, ಮಹಿಳೆಯ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಾಗಿದೆ. ಇಂಥದ್ದನ್ನು ಭಾರತದಲ್ಲಿ ಮಟ್ಟಹಾಕಲು ಮೋದಿ ಆಡಳಿತವೇ ಬರಬೇಕಾಯಿತು. ಹೀಗಾಗಿ ನಮ್ಮದು ಹಿಂದೂ ರಾಷ್ಟ್ರ ಆಗಬೇಕು” ಎನ್ನುವ ಹಿಪೊಕ್ರಸಿಯ ಸಮಾಜ ನಮ್ಮದು. ”ಮುಸ್ಲಿಂ ಹೆಂಗಸರಿಗೆ ದಿನಕ್ಕೊಬ್ಬ ಗಂಡ ಇರುತ್ತಿದ್ದ, ಆದರೆ ಪರ್ಮನೆಂಟ್‌ ಗಂಡನನ್ನು ಕೊಟ್ಟಿದ್ದು ಮೋದಿ” ಎಂದು ಹಿಂದೂ ಮತೀಯವಾದಿಗಳ ಮುಂಚೂಣಿ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ಟ ಹೇಳಿದ್ದು ಭಾರೀ ಚರ್ಚೆಯಾಯಿತು. ಮಹಿಳೆಯ ಘನತೆಗೆ ಚ್ಯುತಿ ತರುವ ಮತ್ತು ಸಾಂವಿಧಾನಿಕ ಚೌಕಟ್ಟನ್ನು ಮೀರುವ ಈ ಹೇಳಿಕೆಯನ್ನು ನ್ಯಾಯಾಲಯವು ಗಂಭೀರವಾಗಿ ಪರಿಗಣಿಸಿದಂತೆ ಕಾಣಲಿಲ್ಲ. ಮುಖ್ಯವಾಗಿ ಒಂದು ಧರ್ಮವನ್ನು ಇನ್ನೊಂದು ಧರ್ಮದ ಮೂಲಭೂತವಾದಿಗಳು ಟೀಕಿಸುವುದೇ ಆಷಾಢಭೂತಿತನ ಆಗುತ್ತದೆ.

‘ಟೆರಸ್ಟ್ರಿಯಲ್ ವರ್ಸಸ್‌’ ಸಿನಿಮಾ ನಮ್ಮ ದೇಶಕ್ಕೂ ಪಾಠವಾಗಬೇಕಿದೆ. ನಮ್ಮದು ಸೆಕ್ಯುಲರ್‌ ದೇಶ. ಇಲ್ಲಿ ಎಲ್ಲ ಧರ್ಮಗಳನ್ನು ಸಮಾನವಾಗಿ ಪರಿಗಣಿಸಲಾಗಿದೆ. ಅಂತಹ ಆಡಳಿತ ವ್ಯವಸ್ಥೆಯನ್ನು ಸಂವಿಧಾನದ ಮೂಲಕ ರೂಪಿಸಿ ಬಾಬಾ ಸಾಹೇಬ್‌ ಡಾ.ಬಿ.ಆರ್‌.ಅಂಬೇಡ್ಕರ್‌ ನೀಡಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಏನಾಗುತ್ತಿದೆ ಎಂಬುದು ನಮಗೆ ಗೊತ್ತಿದೆ. ಸಂವಿಧಾನಕ್ಕೆ ವಿಧೇಯರಾಗಿರಬೇಕಿದ್ದ ಪ್ರಧಾನಿ ಒಂದು ಧರ್ಮದ ಅಥವಾ ಬಹುಸಂಖ್ಯಾತವಾದದ ಪ್ರತಿನಿಧಿ ಎಂಬಂತೆ ವರ್ತಿಸುತ್ತಾರೆ. ಸರ್ಕಾರಕ್ಕೆ ಧರ್ಮ ಎಂಬುದು ಇಲ್ಲ, ಅದೊಂದು ಸೆಕ್ಯುಲರ್‌ ಮುಖವಾಗಿರಬೇಕು. ಆದರೆ ಪ್ರಧಾನಿ ಧರ್ಮದ ಭಾಗವಾಗುತ್ತಾರೆ. ಮಂದಿರವನ್ನು ಉದ್ಘಾಟನೆ ಮಾಡುತ್ತಾರೆ, ಸಂಸತ್ ಭವನದಲ್ಲಿ ಹೋಮ ಹವನಗಳು ನಡೆಯುತ್ತವೆ, ಪ್ರಧಾನಿ ನೀರಿನಡಿ ತಪಸ್ಸು ಮಾಡುತ್ತಾರೆ. ತಾನೊಬ್ಬ ಎಲ್ಲ ಜಾತಿ ಧರ್ಮಗಳ ಪ್ರತಿನಿಧಿ ಎಂಬ ಕನಿಷ್ಠ ಎಚ್ಚರಿಕೆಯೂ ಪ್ರಧಾನಿಗೆ ಇಲ್ಲವಾಗಿದೆ.

ಮೋದಿ ಅಧಿಕಾರಕ್ಕೆ ಬಂದ ಮೇಲೆ ಹಿಂದೂ ರಾಷ್ಟ್ರ ಕಟ್ಟುತ್ತೇವೆ ಎಂದು ಬಲಪಂಥೀಯ ಫ್ರಿಂಜ್ ಎಲಿಮೆಂಟ್‌ಗಳು ಮತ್ತೆ ಮತ್ತೆ ಹೇಳುತ್ತಲೇ ಬರುತ್ತಿವೆ. ಈಗ ಫ್ರಿಂಜ್‌ಗಳು ಸೆಂಟರ್‌ನಲ್ಲಿದ್ದಾರೆ. ಜಾತ್ಯತೀತ ರಾಷ್ಟ್ರವೊಂದು ಧರ್ಮವೊಂದರ ಆಧಾರದ ಮೇಲೆ ರೂಪುಗೊಳ್ಳಬೇಕೆಂಬ ವಾದಕ್ಕೆ ಪ್ರೋತ್ಸಾಹ ನೀಡುತ್ತಾ ಹೋದರೆ ಏನಾಗಬಹುದು ಯೋಚಿಸಿ? ಸಂವಿಧಾನದ ಜಾಗದಲ್ಲಿ ಮನುಸ್ಮೃತಿ ಬಂದು ಕೂರುತ್ತದೆ. ಅವು ಹೇಳಿದ ಶ್ರೇಣೀಕೃತ ವ್ಯವಸ್ಥೆಯೇ ಕಾನೂನಾಗುತ್ತದೆ. ಅಸ್ಪೃಶ್ಯತೆ ಆಚರಣೆಗೆ ಪ್ರಭುತ್ವದ ಬಲ ಮತ್ತು ಪ್ರೋತ್ಸಾಹ ಸಿಕ್ಕಂತಾಗುತ್ತದೆ.

ಮಹಿಳೆಯರ ಸ್ವಾವಲಂಬನೆಗೆ ಬಲ ನೀಡುವ ‘ಶಕ್ತಿ’ ಯೋಜನೆಯನ್ನು ತಂದರೆ ಅದನ್ನು ಅಣಕಿಸುವ ಮನಸ್ಥಿತಿ ಯಾವುದು? ಮತ್ತದೇ ಪುರುಷ ಪ್ರಧಾನ ವ್ಯವಸ್ಥೆ. ಧರ್ಮದ ಸೋಗಿನಲ್ಲಿರುವ ಮಹಿಳಾ ವಿರೋಧಿ ಧೋರಣೆಗಳೇನು ನಮ್ಮಲ್ಲಿ ಕಡಿಮೆ ಇಲ್ಲ. ಧರ್ಮವೊಂದರ ತಳಹದಿಯ ಮೇಲೆ ದೇಶವನ್ನು ಕಟ್ಟುತ್ತೇವೆ ಎಂದು ಹೊರಡುವವರು ತಾಲಿಬಾನ್ ಮನಸ್ಥಿತಿಯನ್ನೇ ನೇರವಾಗಿ ಪ್ರತಿನಿಧಿಸುತ್ತಾರೆ ಎಂದರೂ ತಪ್ಪಾಗಲಾರದು. ‘ಹಿಂದುತ್ವ’ ಪ್ರತಿಪಾದನೆ ನಿಂತಿರುವುದೇ ಫ್ಯಾಸಿಸ್ಟ್ ಸಿದ್ಧಾಂತದ ಮೇಲೆ. ಹೆಡಗೇವಾರ್‌, ಸಾವರ್ಕರ್‌ ಬರಹಗಳನ್ನು ಓದಿದರೆ ಇದು ಮತ್ತಷ್ಟು ಸ್ಪಷ್ಟವಾಗುತ್ತದೆ. “ಅತ್ಯಾಚಾರವನ್ನು ರಾಜಕೀಯ ಅಸ್ತ್ರವಾಗಿ ಬಳಸಬೇಕು” ಎಂಬ ಸಮರ್ಥನೆಯನ್ನು ಸಾವರ್ಕರ್‌ ಮಾಡಿದ್ದಾರೆ. ಅಂತಹ ವ್ಯಕ್ತಿಯನ್ನು ವೈಭವೀಕರಣ ಮಾಡುವ ಪ್ರಭುತ್ವ ಮತ್ತು ಆ ವ್ಯಕ್ತಿಯ ಕುರಿತು ಸಿನಿಮಾ ಮಾಡುವವರು ಬಯಸುವುದಾದರೂ ಏನನ್ನು?

ನಮ್ಮಲ್ಲೂ ಸೆನ್ಸಾರ್‌ಶಿಪ್ ನಡೆಯುತ್ತಿದೆ. ನಿನ್ನೆ ಮೊನ್ನೆ ನಡೆದ ಘಟನೆ. ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದ್ದ ‘ಅನ್ನಪೂರಣಿ’ ಸಿನಿಮಾದಲ್ಲಿ ‘ರಾಮ ಮಾಂಸಾಹಾರ ತಿನ್ನುತ್ತಿದ್ದ’ ಎಂದು ಹೇಳಿ ಭಾವನೆಗೆ ಘಾಸಿಗೊಳಿಸಲಾಗಿದೆ ಎಂದು ಸಿನಿಮಾ ವಿರುದ್ಧ ಆಕ್ರೋಶ ಹೊರಹಾಕಲಾಯಿತು. ನೆಟ್‌ಫ್ಲಿಕ್ಸ್ ಬೆಚ್ಚಿತು. ಸಿನಿಮಾವನ್ನೇ ಪ್ಲಾಟ್‌ಫಾರಂನಿಂದ ತೆಗೆದಿತ್ತು. ವಾಲ್ಮೀಕಿ ಮಹರ್ಷಿಯಲ್ಲಿನ ರಾಮಾಯಣದಲ್ಲಿ ಇರುವ ಸಾಲನ್ನು ಉಲ್ಲೇಖಿಸಿದ್ದೂ ಇಲ್ಲಿ ಅಪರಾಧವಾಗಿ ಕಂಡಿತ್ತು. “ಮುನ್ನೂರು ರಾಮಾಯಣಗಳಿಲ್ಲ, ಕೇವಲ ಒಂದೇ ರಾಮಾಯಣ” ಎಂದು ಸಾಂಸ್ಕೃತಿಕ ದಬ್ಬಾಳಿಕೆ ನಡೆಸುವವರು ಧಾರ್ಮಿಕ ಮೂಲಭೂತವಾದಿಗಳಲ್ಲದೆ ಮತ್ತೇನೂ ಅಲ್ಲ.

ಇಸ್ಲಾಂ ಮೂಲಭೂತವಾದದ ಬಗ್ಗೆ ಮಾತನಾಡುತ್ತಲೇ ಹಿಂದೂ ಮೂಲಭೂತವಾದವನ್ನು ಪೋಷಿಸುವವರು ಕೂಡ ತಾಲಿಬಾನಿನ ಪ್ರತಿರೂಪವಾಗಿಯೇ ಕಾಣುತ್ತಾರಲ್ಲವೇ? ಬಹುತ್ವ ಭಾರತವು ಉಳಿದಾಗ ಮಾತ್ರ ಸಂವಿಧಾನ ಉಳಿಯುತ್ತದೆ. ಜನಸಾಮಾನ್ಯರ ಆಯ್ಕೆ, ಬಂಧುತ್ವ, ಆಚರಣೆಗಳಲ್ಲಿ ಮೂಗು ತೂರಿಸುವ ಪ್ರವೃತ್ತಿ ಹೆಚ್ಚಾದಷ್ಟೂ ಆಪತ್ತು ನಿಶ್ಚಿತ. ಈ ಕಾರಣಕ್ಕೆ ಟೆರಸ್ಟ್ರಿಯಲ್ ವರ್ಸಸ್‌ – ನಮಗೂ ಪಾಠವಾಗಬೇಕಿದೆ.

ಯತಿರಾಜ್‌ ಬ್ಯಾಲಹಳ್ಳಿ
+ posts

ಪತ್ರಕರ್ತ, ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ಪತ್ರಕರ್ತ, ಲೇಖಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆಕ್ಷೇಪಾರ್ಹ ದೃಶ್ಯಗಳಿದ್ದರೆ ಬಿಗ್‌ಬಾಸ್‌ ಪ್ರಸಾರ ನಿಲ್ಲಿಸಿ: ಕೇಂದ್ರಕ್ಕೆ ಕೇರಳ ಹೈಕೋರ್ಟ್ ನಿರ್ದೇಶನ

ಮಲಯಾಳಂ ರಿಯಾಲಿಟಿ ಶೋ ಬಿಗ್‌ಬಾಸ್‌ ಕಾರ್ಯಕ್ರಮದಲ್ಲಿ ಪ್ರಸಾರದ ನಿಯಮಾವಳಿಗಳನ್ನು ಉಲ್ಲಂಘಿಸುವ ಆಕ್ಷೇಪಾರ್ಹ...

ಹೆಣ್ಣುಮಕ್ಕಳ ಬಗ್ಗೆ ನಾಲಿಗೆ ಹರಿಬಿಟ್ಟ ಎಚ್‌ಡಿಕೆ ‘ದಾರಿತಪ್ಪಿದ ಮಗ’: ಪ್ರಕಾಶ್ ರಾಜ್

ನಾಡಿನ ಹೆಣ್ಣು ಮಕ್ಕಳ ಬಗ್ಗೆ ಅತ್ಯಂತ ಹಗುರ ಮತ್ತು ಅವಹೇಳನಕಾರಿಯಾಗಿ ಮಾತನಾಡಿರುವ...

ಖ್ಯಾತ ಕನ್ನಡ ಸಿನಿಮಾ ನಿರ್ಮಾಪಕ ಸೌಂದರ್ಯ ಜಗದೀಶ್​ ಆತ್ಮಹತ್ಯೆ!

ಬೆಂಗಳೂರಿನ ಜೆಟ್​ಲಾಗ್​ ಪಬ್ ಮಾಲೀಕ ಹಾಗೂ ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ...