ರಾಜ್ಯದ ತೊಗರಿ ಬೆಳೆಗಾರರ ಆಗ್ರಹಕ್ಕೆ ಮಣೆ ಹಾಕಿರುವ ರಾಜ್ಯ ಸರ್ಕಾರವು, ರೈತರಿಗೆ ಖುಷಿಯ ಸುದ್ದಿ ನೀಡಿದೆ. ಬೆಂಬಲ ಬೆಲೆಯ ಜೊತೆಗೆ ಬೋನಸ್ ಘೋಷಿಸಿದೆ.
ಬೆಂಬಲ ಬೆಲೆಯ ಜೊತೆಗೆ ಬೋನಸ್ ಘೋಷಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, 2024-25ನೇ ಸಾಲಿಗೆ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ತೊಗರಿ ಉತ್ಪನ್ನಕ್ಕೆ ರೂ.450ಗಳ ಪ್ರೋತ್ಸಾಹಧನ ನೀಡುವುದಾಗಿ ತಿಳಿಸಿದ್ದಾರೆ.
ಆಡಳಿತ ಇಲಾಖೆಯ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿದ್ದು, 2024-25ನೇ ಸಾಲಿಗೆ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಉತ್ಪನ್ನಕ್ಕೆ ಪ್ರತಿ ಕ್ವಿಂಟಾಲ್ಗೆ ರೂ.7,550/-ಗಳ ಜೊತೆಗೆ ರಾಜ್ಯ ಸರ್ಕಾರದ ವತಿಯಿಂದ ಪ್ರತಿ ಕ್ವಿಂಟಾಲ್ಗೆ ರೂ.450/ ಗಳ ಪ್ರೋತ್ಸಾಹ ಧನವನ್ನು ನೀಡಲು ಹಾಗೂ ಇದಕ್ಕಾಗಿ ಅವಶ್ಯವಿರುವ ಅನುದಾನವನ್ನು ಆವರ್ತ ನಿಧಿಯಲ್ಲಿ ಲಭ್ಯವಿರುವ ಮೊತ್ತದಿಂದ ಭರಿಸಲು ಆರ್ಥಿಕ ಇಲಾಖೆ ಕೂಡ ಸಹಮತಿಸಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಈ ವರ್ಷ ತೊಗರಿ ಬೆಳೆಗಾರರಿಗೆ ತುಂಬಾ ನಷ್ಟವಾಗಿದೆ. ಕೂಡಲೇ ರೈತರ ಸಮಸ್ಯೆಗಳನ್ನು ಈಡೇರಿಸಬೇಕು. ಬೆಳೆಹಾನಿ ಅನುಭವಿಸಿದ ಸಾವಿರಾರು ರೈತರು ಬೀದಿಪಾಲಾಗಿದ್ದಾರೆ. ಸರ್ಕಾರ ಅವರ ನೆರವಿಗೆ ನಿಂತು ಪರಿಹಾರವಾಗಿ ವಿಶೇಷ ಪ್ಯಾಕೇಜ್ ಘೋಷಿಸಬೇಕು” ಎಂದು ರೈತರು ರಾಜ್ಯದ ಹಲವೆಡೆ ಪ್ರತಿಭಟನೆ ನಡೆಸಿದ್ದರು.
ಇದನ್ನು ಓದಿದ್ದೀರಾ? ಫೆ. 9ರಂದು ದುಬೈನಲ್ಲಿ ‘ಬ್ಯಾರಿ ಮೇಳ-2025’: ಐತಿಹಾಸಿಕ ಮೇಳಕ್ಕೆ ಸಿದ್ಧಗೊಳ್ಳುತ್ತಿದೆ ಇತಿಸಲಾತ್ ಮೈದಾನ
ʼತೊಗರಿ ಬೆಳೆಗೆ ಮೋಡ ಕವಿದ ವಾತಾವರಣ, ಬೆಳಗಿನ ಜಾವ ಬಿದ್ದ ಮಂಜಿನಿಂದ ರೋಗ ಬಾಧೆ ಕಾಣಿಸಿಕೊಂಡು ಹೂ ಉದುರಿತ್ತು. ಹೀಗಾಗಿ ಎಕರೆಗೆ 3 ರಿಂದ 4 ಕ್ವಿಂಟಾಲ್ ನಿರೀಕ್ಷೆಯ ಕನಸು ಕಾಣುತ್ತಿದ್ದ ರೈತರಿಗೆ ಭಾರಿ ನಿರಾಸೆಯುಂಟಾಗಿದೆ. ಸರ್ಕಾರ ಮುಂಗಾರು ಅತಿವೃಷ್ಟಿಯಿಂದ ಹಾನಿಯಾದ ಬೆಳೆಗೆ ತಕ್ಷಣ ಪರಿಹಾರ ಕೊಡಬೇಕು. ಪ್ರತಿ ಕ್ವಿಂಟಾಲ್ ತೊಗರಿಗೆ ₹12 ಸಾವಿರ ಬೆಲೆ ನಿಗದಿಪಡಿಸಬೇಕುʼ ಎಂದು ರೈತ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದರು.
