ಸರ್ಕಾರ ಹಮ್ಮಿಕೊಂಡಿರುವ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯ ಅಭಿವೃದ್ಧಿಯಲ್ಲಿ ಹಿಂದೆ ಬೀಳುತ್ತದೆ ಮತ್ತು ರಾಜ್ಯದ ಹಣಕಾಸು ವ್ಯವಸ್ಥೆ ಹದಗೆಡುತ್ತದೆ ಎಂದು ಹಲವರು ಭವಿಷ್ಯ ನುಡಿದಿದ್ದರು. ಆ ಭವಿಷ್ಯವನ್ನು ಸರಕಾರ ಸುಳ್ಳು ಮಾಡಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಅಭಿಪ್ರಾಯಪಟ್ಟರು.
ಸೋಮವಾರ ಆರಂಭವಾರ ವಿಧಾಮಂಡಲ ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡಿದರು. ರಾಜ್ಯ ಸರ್ಕಾರ ಬರೆದುಕೊಟ್ಟ ಭಾಷಣವನ್ನು ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಓದಬೇಕಾಗಿರುವುದು ಅವರ ಸಾಂವಿಧಾನಿಕ ಕರ್ತವ್ಯ. ಸರ್ಕಾರದ ಮುಖ್ಯಸ್ಥರಾಗಿ, ಭಾಷಣ ಮಾಡಲೇಬೇಕು. ಅದನ್ನು ಉಲ್ಲಂಘಿಸಿದರೆ ಸದನದ ಸಂಪ್ರದಾಯಕ್ಕೆ ಮಾಡುವ ಅಪಚಾರವಾಗುತ್ತದೆ.
ಈ ನಡುವೆ ತಮಿಳುನಾಡಿನ ರಾಜ್ಯಪಾಲ ಆರ್.ಎನ್. ರವಿಯವರು, ಡಿಎಂಕೆ ಸರ್ಕಾರ ಬರೆದುಕೊಟ್ಟಿದ್ದನ್ನು ಓದದೆ ಉದ್ಧಟತನ ಮೆರೆದು ಭಾರೀ ಟೀಕೆಗೆ ಆಗಾಗ್ಗೆ ಒಳಗಾಗಿದ್ದೂ ಇದೆ. ಅಸಹಕಾರದ ಎಲ್ಲೆಗಳನ್ನು ಮೀರಿ ವರ್ತಿಸಿ, ಅಕ್ಷರಶಃ ಕೇಂದ್ರದ ಆಣತಿಯಂತೆ, ಆರ್‌ಎಸ್‌ಎಸ್ ಪ್ರತಿನಿಧಿಯಂತೆ ರವಿ ವರ್ತಿಸಿ ಸೈದ್ಧಾಂತಿಕ ಸೇಡಿನ ರಾಜಕೀಯ ಮಾಡುತ್ತಾರೆ. ಬಿಜೆಪಿಯೇತರ ರಾಜ್ಯಗಳಲ್ಲಿನ ರಾಜ್ಯಪಾಲರ ಅಸಹಕಾರ ಪ್ರವೃತ್ತಿ ಟೀಕೆಗೆ ಒಳಗಾಗುತ್ತಲೇ ಇದೆ ಎಂಬುದನ್ನು ಗಮನಿಸಬಹುದು.
“ಪ್ರತಿಯೊಂದು ವಲಯದಲ್ಲೂ ರಾಜ್ಯವು ಉತ್ತಮವಾದ ಸಾಧನೆಗಳನ್ನು ದಾಖಲಿಸಿದೆ. ರಾಜ್ಯದ ಆದಾಯ ಹೆಚ್ಚುತ್ತಿದೆ. ರಾಜ್ಯಕ್ಕೆ ಖಾಸಗಿ ಬಂಡವಾಳ ದಾಖಲೆ ಪ್ರಮಾಣದಲ್ಲಿ ಹರಿದು ಬರುತ್ತಿದೆ. ಕಲ್ಯಾಣ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನದಿಂದಾಗಿ ಅಸಮಾನತೆಯ ತೀವ್ರತೆ ಕಡಿಮೆಯಾಗುತ್ತಿದೆ. ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಜಿಎಸ್‌ಟಿ ಬೆಳವಣಿಗೆ ದರ ಉತ್ತಮವಾಗಿದೆ” ಎಂದು ಥಾವರ್ ಚಂದ್ ಗೆಹ್ಲೋತ್ ಹೇಳಿದರು.
“ಕರ್ನಾಟಕದಲ್ಲಿ ಕಳೆದ 19 ತಿಂಗಳಲ್ಲಿ ಗಂಭೀರವಾದ ಕಾನೂನು ಸುವ್ಯವಸ್ಥೆ ಸಮಸ್ಯೆ ಉದ್ಭವಿಸಿಲ್ಲ. ಪೊಲೀಸ್ ಠಾಣೆಗಳು ಜನ ಸ್ನೇಹಿಯಾಗಿ ಕೆಲಸ ಮಾಡ್ತಿವೆ. ಸೈಬರ್ ಅಪರಾಧಗಳಿಗೆ ಕಡಿವಾಣ ಹಾಕಲು ಸರ್ಕಾರ ಆದ್ಯತೆ ನೀಡುತ್ತಿದೆ. ರಾಜ್ಯದ ಅಭಿವೃದ್ಧಿಯ ವೇಗವನ್ನು ಸರ್ಕಾರ ಚುರುಕುಗೊಳಿಸುವುದರಲ್ಲಿ ಮತ್ತು ಹಣಕಾಸು ವ್ಯವಸ್ಥೆಯನ್ನು ಇನ್ನಷ್ಟು ಸದೃಢಗೊಳಿಸುವಲ್ಲಿ ಯಶಸ್ವಿಯಾಗಿದೆ. ಮಹಾತ್ಮಾ ಗಾಂಧಿಯವರು ಹೇಳಿದಂತೆ ಆಡಳಿತವನ್ನು ಅಂತಿಮ ವ್ಯಕ್ತಿಯ ಕಣ್ಣೀರು ಒರೆಸುವ ಅವಕಾಶವೆಂಬಂತೆ ಬಳಸಿಕೊಳ್ಳಲು ಸರ್ಕಾರ ಕಟಿಬದ್ದವಾಗಿದೆ” ಎಂದು ತಿಳಿಸಿದರು.
344 ಘೋಷಣೆಗಳ ಪೈಕಿ 331 ಘೋಷಣೆ ಅನುಷ್ಠಾನ
“2024-25ನೇ ಸಾಲಿನ ಬಜೆಟ್‌ನಲ್ಲಿ ಆದೇಶ ಹೊರಡಿಸಬೇಕಾಗಿದ್ದ 344 ಘೋಷಣೆಗಳ ಪೈಕಿ 331 ಘೋಷಣೆಗಳಿಗೆ ಸರ್ಕಾರಿ ಆದೇಶ ಹೊರಡಿಸಲಾಗಿದೆ. ಘೋಷಣೆ ಮಾಡಿದ್ದ ಕಾರ್ಯಕ್ರಮಗಳೂ ಸಹ ಸಮರ್ಪಕವಾಗಿ ಅನುಷ್ಠಾನವಾಗುತ್ತಿವೆ. ಇನ್ನುಳಿದ ಘೋಷಣೆಗಳೂ ಆದೇಶ ಹೊರಡಿಸುವ ಹಂತದಲ್ಲಿವೆ” ಎಂದು ತಿಳಿಸಿದರು.
“ಸರ್ಕಾರವು ತೆಗೆದುಕೊಂಡ ಕಲ್ಯಾಣ ಕಾರ್ಯಕ್ರಮಗಳಿಂದ ರಾಜ್ಯದ ರೈತ ಕುಟುಂಬಗಳಲ್ಲಿ ಆತ್ಮಹತ್ಯೆಗಳ ಪ್ರಮಾಣವು ಗಣನೀಯವಾಗಿ ಕಡಿಮೆಯಾಗಿದೆ. ಕಾಂಗ್ರೆಸ್ ಸರ್ಕಾರವು ರಚನೆಯಾದಾಗಿಂದಲೂ ತೊಗರಿ ಮತ್ತು ಕೊಬ್ಬರಿಗೆ ಬೆಲೆಗಳು ಕುಸಿದಾಗ ರೈತರ ನೆರವಿಗೆ ನಿಂತು ಪ್ರೋತ್ಸಾಹ ಧನವನ್ನು ನೀಡಿದೆ. ಕೃಷಿಭಾಗ್ಯ ಯೋಜನೆಯನ್ನು ಮುಂದುವರೆಸುವ ಮೂಲಕ ಅಗತ್ಯ ಇರುವ ಕಡೆಗಳಲ್ಲೆಲ್ಲಾ ಕೃಷಿ ಹೊಂಡಗಳನ್ನು ನಿರ್ಮಿಸಲಾಗುತ್ತಿದೆ” ಎಂದರು.
“ಕರ್ನಾಟಕವು ಹಾಲಿನ ಉತ್ಪಾದನೆಯಲ್ಲಿ ದಾಖಲೆ ಬರೆದಿದೆ. ಕೆಎಂಎಫ್ ಈ ಬಾರಿ ದಿನವೊಂದಕ್ಕೆ 1 ಕೋಟಿ ಲೀಟರ್‌ಗಳಷ್ಟು ಹಾಲನ್ನು ಸಂಗ್ರಹಿಸಿದೆ. ಹೈನೋದ್ಯಮಕ್ಕೆ ನೀಡುತ್ತಿರುವ ಪ್ರೋತ್ಸಾಹದ ಕಾರಣಕ್ಕಾಗಿಯೇ ಈ ಸಾಧನೆ ಸಾಧ್ಯವಾಗಿದೆ. ಸರ್ಕಾರವು ಇದುವರೆಗೆ ಪಶುಪಾಲಕರಿಗೆ 1500 ಕೋಟಿ ರೂ.ಗಳಷ್ಟು ಪ್ರೋತ್ಸಾಹಧನ ನೀಡಿದೆ. ಸರ್ಕಾರವು ಪಶುಪಾಲಕರ ನೆರವಿಗಾಗಿ ಅನುಗ್ರಹ ಯೋಜನೆಯನ್ನು ಮುಂದುವರೆಸಿದೆ. ಪ್ರಸಕ್ತ ಸಾಲಿನಲ್ಲಿ ಆಕಸ್ಮಿಕವಾಗಿ ಮರಣ ಹೊಂದಿದ 24934 ರಾಸುಗಳು ಹಾಗೂ 33373 ಕುರಿ ಮತ್ತು ಮೇಕೆಗಳಿಗೆ 26.60 ಕೋಟಿ ರೂಪಾಯಿಗಳಷ್ಟು ಪರಿಹಾರವನ್ನು ನೀಡಿದೆ” ಎಂದು ಹೇಳಿದರು.

ರಾಜ್ಯಪಾಲರ ಭಾಷಣದ ಉಳಿದ ಹೈಲೈಟ್ಸ್
ಸಂವಿಧಾನವು ಅಸಮಾನತೆಯನ್ನು ತಗ್ಗಿಸಿ ಆದಾಯದ ನ್ಯಾಯಯುತ ಪಾಲನ್ನು ಜನರಿಗೆ ಖಾತರಿಪಡಿಸಬೇಕೆಂದು ಹೇಳುತ್ತದೆ. ಈ ನಿಟ್ಟಿನಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಇದಕ್ಕಾಗಿ ವರ್ಷಕ್ಕೆ 52 ಸಾವಿರ ಕೋಟಿಗಳಿಗೂ ಹೆಚ್ಚಿನ ಸಂಪನ್ಮೂಲಗಳನ್ನು ಒದಗಿಸುತ್ತಿದೆ. ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ 5 ಗ್ಯಾರಂಟಿ ಯೋಜನೆಗಳಿಗಾಗಿ 70000 ಕೋಟಿ ರೂಪಾಯಿಗಳನ್ನು ನೇರವಾಗಿ ಜನರ ಖಾತೆಗಳಿಗೆ ವರ್ಗಾಯಿಸಿದೆ.
ಕಲ್ಯಾಣ ಕಾರ್ಯಕ್ರಮಗಳಿಗಾಗಿ ವರ್ಷಕ್ಕೆ ಒಟ್ಟಾರೆ 90 ಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚಿನ ಹಣವನ್ನು ಖರ್ಚು ಮಾಡಲಾಗುತ್ತಿದೆ. ಸಾಮಾಜಿಕ ಪಿಂಚಣಿಗಳು, ರೈತರ ಪಂಪು ಸೆಟ್ಟುಗಳಿಗೆ ಉಚಿತ ವಿದ್ಯುತ್, ಕೃಷಿ-ತೋಟಗಾರಿಕೆ, ರೇಷ್ಮೆ, ಪಶುಪಾಲನೆ, ಮೀನುಗಾರಿಕೆ, ಆಹಾರ ಮತ್ತು ನಾಗರಿಕ ಸರಬರಾಜು, ಕೈಮಗ್ಗ ಮತ್ತು ಜವಳಿ, ವಸತಿ, ಶಿಕ್ಷಣ, ಕೈಗಾರಿಕೆ, ಕೌಶಲ್ಯಾಭಿವೃದ್ಧಿ, ಹಿಂದುಳಿದ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸೇರಿದಂತೆ ಹಲವಾರು ಇಲಾಖೆಗಳ ವತಿಯಿಂದ ನೀಡುವ ನೇರ ನಗದು ಯೋಜನೆಗಳು ಮತ್ತು ಸಬ್ಸಿಡಿ, ಪ್ರೋತ್ಸಾಹ ಧನಗಳಿಂದ ಸುಮಾರು 1.25 ಕೋಟಿಗೂ ಹೆಚ್ಚು ಕುಟುಂಬಗಳು ಅನುಕೂಲ ಪಡೆಯುತ್ತಿವೆ. ಅಭಿವೃದ್ಧಿಯಲ್ಲಿ ಕರ್ನಾಟಕದ ವಿಶಿಷ್ಟ ಮಾದರಿಯನ್ನು ಸರ್ಕಾರವು ರೂಪಿಸುತ್ತಿದೆ.
ಕರ್ನಾಟಕ ಮಾದರಿ ಅಭಿವೃದ್ಧಿಯೆಂದರೆ ಜನಕೇಂದ್ರಿತ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಆಡಳಿತವನ್ನು ರೂಪಿಸುವುದು ಎಂದರ್ಥ. ಹಸಿರು ಇಂಧನ, ಮಹಿಳಾ ಸಬಲೀಕರಣ ಮುಂತಾದವುಗಳೂ ಇದರಲ್ಲಿ ಸೇರುತ್ತವೆ. ಕರ್ನಾಟಕದ ಮಾದರಿಯನ್ನು ಜಗತ್ತಿನ ಅನೇಕ ಅರ್ಥಶಾಸ್ತ್ರಜ್ಞರು ಮತ್ತು ವಿಶ್ವವಿದ್ಯಾಲಯಗಳು ಅಧ್ಯಯನ ಮಾಡುತ್ತಿವೆ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು ಹೂಮನ್ ರೈಟ್ಸ್ ಹಬ್‌ನ ಬ್ಲಾಗ್‌ನಲ್ಲಿ “ಶೈನಿಂಗ್ ಎ ಲೈಟ್ ಇನ್ ದ ಡಾರ್ಕ್‌ನೆಸ್” ಎಂದು ಮತ್ತು “ಎ ಬ್ಲೂ ಪ್ರಿಂಟ್ ಫಾರ್ ದ ವರ್ಲ್ಡ್” ಎಂದು ಈ ಮಾದರಿಯನ್ನು ವ್ಯಾಖ್ಯಾನಿಸಿವೆ. ಈ ಪ್ರಮೇಯದ ಕುರಿತು ತಿಳಿದುಕೊಳ್ಳಲು ವಿಶ್ವಸಂಸ್ಥೆಯ ಮುಖ್ಯಸ್ಥರೆ ರಾಜ್ಯಕ್ಕೆ ಬಂದು ನಮ್ಮ ಯೋಜನೆಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಶಿಕ್ಷಣ ಕ್ಷೇತ್ರಕ್ಕಾಗಿ ಅಪಾರ ಪ್ರಮಾಣದ ಸಂಪನ್ಮೂಲವನ್ನು ವಿನಿಯೋಗಿಸಲಾಗುತ್ತಿದೆ. ಶಿಕ್ಷಣ ಇಲಾಖೆಯಲ್ಲಿ 13000 ಕ್ಕೂ ಹೆಚ್ಚಿನ ಪದವೀಧರ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಉನ್ನತ ಶಿಕ್ಷಣ ಇಲಾಖೆಯಲ್ಲಿ 1088 ಸಹಾಯಕ ಪ್ರಾಧ್ಯಾಪಕರಿಗೆ ನೇಮಕಾತಿ ಆದೇಶ ನೀಡಸಲಾಗಿದೆ. 8,311 ಸಂಖ್ಯೆಯ ಶಾಲಾ ಕೊಠಡಿಗಳನ್ನು ನಿರ್ಮಿಸಲಾಗಿದೆ. ವಿವೇಕ ಯೋಜನೆ ಹಾಗೂ ವಿಶೇಷ ಅನುದಾನದಡಿ 5349 ಶಾಲಾ ಕೊಠಡಿಗಳ ಕಾಮಗಾರಿ ಪೂರ್ಣಗೊಂಡಿವೆ. ಪ್ರಸ್ತುತ 784 ಕೊಠಡಿ ಕಾಮಗಾರಿಗಳು ಪುಗತಿಯಲ್ಲಿವೆ. 522 ಕೆಪಿಎಸ್ ಶಾಲೆಗಳನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ರಾಜ್ಯದ 1953 ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸಿ ನರ್ಸರಿ ಶಾಲೆಗಳನ್ನು ತೆರೆಯಲಾಗಿದೆ. ಇದಷ್ಟೇ ಅಲ್ಲದೆ, ಮಕ್ಕಳಿಗೆ ರಜಾ ದಿನಗಳನ್ನು ಹೊರತುಪಡಿಸಿ ವಾರದ ಎಲ್ಲಾ ದಿನಗಳಂದು ಸರ್ಕಾರ ಹಾಗೂ ಅಜೀಂ ಪ್ರೇಮ್ ಜಿ ಫೌಂಡೇಶನ್ನುಗಳು ಸೇರಿ ಮೊಟ್ಟೆಯನ್ನು ನೀಡುತ್ತಿವೆ.
ಪ್ರಾದೇಶಿಕ ಅಸಮಾನತೆಯನ್ನು ಹೋಗಲಾಡಿಸುವ ದೃಷ್ಟಿಯಿಂದ 2002 ರಲ್ಲಿ ಡಾ. ಡಿ.ಎಂ.ನಂಜುಂಡಪ್ಪನವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿತ್ತು. ಸಮಿತಿಯ ವರದಿಯನ್ನು ಆಧರಿಸಿ ಇದುವರೆಗೆ 37,662 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಇಲ್ಲಿಯವರೆಗೆ ಈ ದಿಶೆಯಲ್ಲಿ ಖರ್ಚು ಮಾಡಿದ ಸಂಪನ್ಮೂಲಗಳ ಪರಿಣಾಮ ಹಾಗೂ ಮುಂದುವರಿದ ಪ್ರಾದೇಶಿಕ ಅಸಮತೋಲನದ ಕುರಿತು ಅಧ್ಯಯನ ಮಾಡಿ ವರದಿ ಸಲ್ಲಿಸಲು ಆರ್ಥಿಕ ತಜ್ಞರಾದ ಡಾ.ಗೋವಿಂದರಾವ್ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯು ಈ ವರ್ಷವೇ ತನ್ನ ವರದಿಯನ್ನು ಸಲ್ಲಿಸಲಿದೆ. ವರದಿಯನ್ನು ಆಧರಿಸಿ ಮುಂದಿನ ದಿನಗಳಲ್ಲಿ ಅಭಿವೃದ್ಧಿಯಲ್ಲಿ ಸಮತೋಲನವನ್ನು ಸಾಧಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು.
ಸರ್ಕಾರವು ಇತ್ತೀಚೆಗೆ ತಾನೆ ಜಾಗತಿಕ ಹೂಡಿಕೆದಾರರ ಸಮ್ಮೇಳನವನ್ನು ಯಶಸ್ವಿಯಾಗಿ ಆಯೋಜಿಸಿದೆ. ವಿಶ್ವದ 19 ಪ್ರಮುಖ ದೇಶಗಳು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದವು. ಈ ಸಮ್ಮೇಳನವು ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ಜಿ ಹೂಡಿಕೆಯಲ್ಲಿ ಹೊಸ ದಾಖಲೆಯನ್ನ ಬರೆದಿದೆ. 10.27 ಲಕ್ಷ ಕೋಟಿ ರೂ.ಗಳಷ್ಟು ಮೊತ್ತವನ್ನು ಹೂಡಿಕೆ ಮಾಡಲು ಒಡಂಬಡಿಕೆಗಳಾಗಿವೆ. ಈ ಬಾರಿ ಬಿಯಾಂಡ್ ಬೆಂಗಳೂರು ಪರಿಕಲ್ಪನೆಯಡಿ ಬೆಂಗಳೂರು ವ್ಯಾಪ್ತಿಯಿಂದ ಹೊರಗೆ ಶೇ.75ಕ್ಕೂ ಹೆಚ್ಚಿನ ಪ್ರಮಾಣದ ಹೂಡಿಕೆ ಒಪ್ಪಂದಗಳಾಗಿವೆ. ಉತ್ತರ ಕರ್ನಾಟಕದಲ್ಲಿ ಶೇ.45ರಷ್ಟು ಹೂಡಿಕೆ ಮಾಡಲು ಉದ್ದಿಮೆದಾರರು ಮುಂದೆ ಬಂದಿದ್ದಾರೆ. ಇದರಿಂದ ರಾಜ್ಯದ ನಿರುದ್ಯೋಗ ಸಮಸ್ಯೆಯನ್ನು ನಿಯಂತ್ರಿಸಲು ನೆರವಾಗುತ್ತದೆ.
ಆಡಳಿತದಲ್ಲಿ ಪಾರದರ್ಶಕತೆ ತರಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಈ ಕಾರಣದಿಂದಲೇ ಕಂದಾಯ, ಗ್ರಾಮೀಣಾಭಿವೃದ್ಧಿ, ಅಬಕಾರಿ, ಅರಣ್ಯ ಮುಂತಾದ ಇಲಾಖೆಗಳಲ್ಲಿ ಅಧಿಕಾರಿ ನೌಕರರ ವರ್ಗಾವಣೆಗಳಿಗಾಗಿ ಕೌನ್ಸೆಲಿಂಗ್ ವ್ಯವಸ್ಥೆ ಜಾರಿಗೆ ತಂದಿದೆ. ಜನರಿಗೆ ನೀಡುವ ಸವಲತ್ತುಗಳನ್ನು ಮಧ್ಯವರ್ತಿ ರಹಿತವಾಗಿ ನೀಡಲು ಕ್ರಮವಹಿಸಲಾಗಿದೆ. ಹಿಂದೆ ನಡೆದಿದ್ದ ಭ್ರಷ್ಟಾಚಾರದ ಪ್ರಕರಣಗಳ ತನಿಖೆಗಳು ತಾರ್ಕಿಕ ಅಂತ್ಯ ಕಾಣುವ ಹಂತಕ್ಕೆ ಬಂದಿವೆ.
ಸರ್ಕಾರವು 2024-25ನೇ ಸಾಲಿನಲ್ಲಿ ರಾಜ್ಯದ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವುದರೊಂದಿಗೆ ವಿತ್ತೀಯ ನಿರ್ವಹಣೆಯನ್ನು ಉತ್ತಮವಾಗಿ ನಿರ್ವಹಿಸಿದೆ. 2024-25ರ ಆರ್ಥಿಕ ವರ್ಷದ ಮೊದಲ ಮೂರು ತ್ರೈಮಾಸಿಕದಲ್ಲಿ ರಾಜ್ಯದ ರಾಜಸ್ವ ಸಂಗ್ರಹಣೆಯು 1,81,908 ಕೋಟಿ ರೂ.ಗಳಿಗೆ ತಲುಪಿರುತ್ತದೆ. ಕಳೆದ ಸಾಲಿಗೆ ಹೋಲಿಸಿದರೆ, ಡಿಸೆಂಬರ್ ತಿಂಗಳ ಅಂತ್ಯದವರೆಗೆ ರಾಜ್ಯದ ರಾಜಸ್ವ ಸ್ವೀಕೃತಿಯು ಶೇಕಡ 13 ರಷ್ಟು ಬೆಳವಣಿಗೆ ಸಾಧಿಸಿದೆ. ರಾಜ್ಯಗಳಿಂದ ಸ್ವೀಕೃತವಾಗುವ ಒಟ್ಟು ಜಿ.ಎಸ್.ಟಿ ತೆರಿಗೆಯಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲಿಯೇ 2ನೇ ಸ್ಥಾನದಲ್ಲಿದ್ದು, ಪ್ರಸಕ್ತ ವರ್ಷದ ಡಿಸೆಂಬರ್ ಅಂತ್ಯದವರೆಗೆ ರಾಜ್ಯದ ಜಿ.ಎಸ್.ಟಿ ತೆರಿಗೆಯು ಶೇ.12ರಷ್ಟು ವರ್ಷವಾರು ಬೆಳವಣಿಗೆ ಸಾಧಿಸಿದೆ.
ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಸಮಾಜದ ಆರ್ಥಿಕ ದುರ್ಬಲ ವರ್ಗದ ಜನತೆಯಿಂದ ಸಾಲ ವಸೂಲಾತಿಯಲ್ಲಿ ಕಿರುಕುಳ, ಹಿಂಸೆ ಮತ್ತು ಒತ್ತಡದ ಹಲವಾರು ಘಟನೆಗಳು ಬೆಳಕಿಗೆ ಬಂದಿವೆ. ಕರ್ನಾಟಕ ರಾಜ್ಯದಲ್ಲಿ ಕಿರು ಸಾಲ ಮತ್ತು ಸಣ್ಣ ಸಾಲ ವಸೂಲಾತಿಯಲ್ಲಿ ಕಿರುಕುಳ, ಹಿಂಸೆ ಮತ್ತು ಒತ್ತಡ ತಡೆಯುವ ನಿಟ್ಟಿನಲ್ಲಿ ಪರಿಣಾಮಕಾರಿಯಾದ ಗಂಭೀರ ಕ್ರಮಗಳನ್ನು ಕೈಗೊಳ್ಳಲು, ಕಿರುಕುಳ ನೀಡುವ ವ್ಯಕ್ತಿಗಳಿಗೆ ಕನಿಷ್ಠ 6 ತಿಂಗಳು ಮತ್ತು ಗರಿಷ್ಠ 10 ವರ್ಷಗಳ ವರೆಗೆ ವಿಸ್ತರಿಸಬಹುದಾದ ಶಿಕ್ಷೆ ಹಾಗೂ 5 ಲಕ್ಷ ರೂಪಾಯಿ ವರೆಗೆ ದಂಡ ವಿಧಿಸಲು ಅವಕಾಶ ಕಲ್ಪಿಸುವ ಸುಗ್ರೀವಾಜ್ಞೆಯನ್ನು ನನ್ನ ಸರ್ಕಾರ ಅನುಷ್ಠಾನಗೊಳಿಸಿದೆ. ಕಿರು ಸಾಲ ವಸೂಲಾತಿಯ ಕಿರುಕುಳವನ್ನು ತಡೆಯುವ ನಿಟ್ಟಿನಲ್ಲಿ ಶಾಸನಾತ್ಮಕವಾದ ಕ್ರಮಗಳಿಗೆ ಸರ್ಕಾರ ಮುಂದಾಗಿದೆ.
ಕೃಷಿಯು ಹವಾಮಾನ ವೈಪರೀತ್ಯ ಮುಂತಾದ ಬದಲಾದ ಸಂದರ್ಭಗಳಲ್ಲಿ ಹಲವು ಮಾರ್ಪಾಟುಗಳನ್ನು ಹೊಂದುತ್ತಿದೆ. ಬಿತ್ತನೆಯಿಂದ ಹಿಡಿದು ಕಟಾವಿನವರೆಗೆ ಯಾಂತ್ರೀಕೃತ ಗೊಳಿಸಬೇಕಾದ ಅವಶ್ಯಕತೆ ಸೃಷ್ಟಿಯಾಗಿದೆ. ಈ ಸಾಲಿನಲ್ಲಿ 194 ಹೈಟೆಕ್ ಹಾರ್ವೆಸ್ಟ್ ಹಬ್‌ಗಳು ಸ್ಥಾಪನೆಯಾಗುತ್ತಿವೆ. ಹಾರ್ವೆಸ್ಟರ್‌ಗಳನ್ನು ಪಡೆಯುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ರೈತರಿಗೆ ಶೇ.50 ರಷ್ಟು ಮತ್ತು ಇತರೆಯವರಿಗೆ ಶೇ.40 ರಷ್ಟು ಸಹಾಯ ಧನ ನೀಡಲಾಗುತ್ತಿದೆ.
ಕರ್ನಾಟಕ ರಾಜ್ಯವು 27.41 ಲಕ್ಷ ಹೆಕ್ಟೇರ್ ತೋಟಗಾರಿಕೆ ಪ್ರದೇಶವನ್ನು ಹೊಂದಿದ್ದು, ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಪ್ರಸಕ್ತ ವರ್ಷದಲ್ಲಿ ಹೊಸದಾಗಿ 19,166 ಹೆಕ್ಟೇರ್ ಪ್ರದೇಶವನ್ನು ತೋಟಗಾರಿಕೆ ಬೆಳೆಗಳ ಅಡಿಯಲ್ಲಿ ತರಲಾಗಿದೆ. ತೋಟಗಾರಿಕೆ ಇಲಾಖೆ ವತಿಯಿಂದ ಬೀಜದಿಂದ ಮಾರುಕಟ್ಟೆಯವರೆಗಿನ ಸೇವೆಗಳನ್ನು ಒಂದೇ ಸೂರಿನಡಿ ಫಲಾನುಭವಿಗಳಿಗೆ ಪರಿಣಾಮಕಾರಿಯಾಗಿ ಒದಗಿಸಲು “ತೋಟಗಾರಿಕೆ ಕಿಸಾನ್ ಮಾಲ್”ಗಳನ್ನು ಸ್ಥಾಪಿಸಲಾಗುತ್ತಿದೆ. ಈವರೆಗೆ ರೈತರಿಗೆ 15.63 ಲಕ್ಷ ಉತ್ತಮ ಗುಣಮಟ್ಟದ ಸಸಿಗಳನ್ನು ವಿತರಿಸಲಾಗಿದೆ. ಅಗತ್ಯವಾದ ಯಂತ್ರೋಪಕರಣಗಳನ್ನು ಸಬ್ಸಿಡಿ ದರದಲ್ಲಿ ಜನರಿಗೆ ನೀಡಲಾಗಿದೆ. ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ 16 ವಿವಿಧ ತೋಟಗಾರಿಕಾ ಬೆಳೆಗಳ ತಳಿಗಳನ್ನು ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಲಾಗಿರುತ್ತದೆ. ರಾಜ್ಯದ ರೈತ ಮತ್ತು ರೈತ ಉತ್ಪಾದಕರ ಸಂಸ್ಥೆಯಿಂದ ಉತ್ಪಾದನೆಯಾಗುತ್ತಿರುವ ಜೇನುತುಪ್ಪಕ್ಕೆ “ಝೇಂಕಾರ” ಎಂಬ ಹೆಸರಿನ ವಿಶೇಷ ಬ್ರಾಂಡ್ ರೂಪಿಸಿ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
ಸರ್ಕಾರವು ಯಾಂತ್ರೀಕೃತ ಮೀನುಗಾರಿಕೆ ದೋಣಿಗಳಿಗೆ ನೀಡಲಾಗುತ್ತಿದ್ದ ಕರರಹಿತ ಡೀಸೆಲ್‌ನ ವಾರ್ಷಿಕ ಮಿತಿಯನ್ನು 1.50 ಲಕ್ಷ ಕಿಲೋ ಲೀಟರ್‌ನಿಂದ 2.0 ಲಕ್ಷ ಕಿಲೋ ಲೀಟರ್‌ಗೆ ಹೆಚ್ಚಿಸಿದೆ. ಸಮುದ್ರ ಮೀನುಗಾರಿಕೆಗೆ ತೆರಳಿದಾಗ ಅಪಘಾತ ಅಥವಾ ಅನಾರೋಗ್ಯಕ್ಕೆ ಒಳಗಾಗುವ ಮೀನುಗಾರರನ್ನು ತ್ವರಿತವಾಗಿ ದಡಕ್ಕೆ ತರಲು ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಸಮುದ್ರದ ಆಂಬ್ಯುಲೆನ್ಸ್ ಖರೀದಿಸಲು ಕ್ರಮವಹಿಸಲಾಗುತ್ತಿದೆ.
ರೇಷ್ಮೆಗೆ ಸಂಬಂಧಿಸಿದಂತೆ ಹಲವು ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ರಾಜ್ಯವು ರೇಷ್ಮೆ ಉತ್ಪಾದನೆಯಲ್ಲಿ ಅಗ್ರಸ್ಥಾನ ಹೊಂದಿದೆ. ರೇಷ್ಮೆ ಕೃಷಿ ಮತ್ತು ರೇಷ್ಮೆ ನೂಲು ಬಿಚ್ಚಾಣಿಕೆ ಚಟುವಟಿಕೆಗಳಲ್ಲಿ ಪ್ರತಿ ವರ್ಷ ಅಂದಾಜು 15.43 ಲಕ್ಷ ಜನರಿಗೆ ಉದ್ಯೋಗವನ್ನು ಕಲ್ಪಿಸಲಾಗಿದೆ. 2024-25ನೇ ಸಾಲಿನಲ್ಲಿ ವಿವಿಧ ಫಲಾನುಭವಿಯಾಧಾರಿತ ಕಾರ್ಯಕ್ರಮಗಳಡಿ ಸರ್ಕಾರವು ರೂ.60 ಕೋಟಿಗಳ ಸಹಾಯಧನ ಸೌಲಭ್ಯವನ್ನು ಭಾಗೀದಾರರಿಗೆ ಒದಗಿಸಿದೆ.
ಜನವರಿ 2025 ರ ಅಂತ್ಯಕ್ಕೆ 20.22 ಲಕ್ಷ ರೈತರಿಗೆ ರೂ.16,942 ಕೋಟಿಗಳ ಬೆಳೆ ಸಾಲ ಮತ್ತು 46,000 ರೈತರಿಗೆ ರೂ.1442 ಕೋಟಿಗಳ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಸಾಲ ವಿತರಿಸಲಾಗಿದೆ. ಈ ವರ್ಷದಲ್ಲಿ ಸಹಕಾರ ಸಂಘಗಳಿಗೆ ಬಡ್ಡಿ ಸಹಾಯಧನ ನೀಡಲು 1451 ಕೋಟಿ ರೂ.ಗಳನ್ನು ಒದಗಿಸಿ ಖರ್ಚು ಮಾಡಲಾಗಿದೆ.
ಆರ್ಥಿಕ ಬಿಕ್ಕಟ್ಟಿನಲ್ಲಿದ್ದ ಮೈಸೂರು ಸಕ್ಕರೆ ಕಂಪನಿಗೆ ಮರುಜೀವ ನೀಡಿ 2024-25ನೇ ಸಾಲಿನ ಕಬ್ಬು ಅರೆಯುವ ಹಂಗಾಮಿನಲ್ಲಿ 1,99,888 ಮೆ.ಟನ್‌ಗಳಷ್ಟು ಕಬ್ಬನ್ನು ನುರಿಸಿ ರೈತರಿಗೆ ರೂ.70.46 ಕೋಟಿಗಳ ಕಬ್ಬು ಬಿಲ್ಲನ್ನು ಪಾವತಿಸಲಾಗಿದೆ.
ರಾಜ್ಯದಲ್ಲಿ ಕೈಗಾರಿಕಾ ಕ್ಷೇತ್ರವನ್ನು ದೇಶದಲ್ಲಿಯೇ ಅಭೂತಪೂರ್ವ ಮಾದರಿಯಲ್ಲಿ ಮುನ್ನಡೆಸುವ ಉದ್ದೇಶದಿಂದ ಹೊಸ ಕರ್ನಾಟಕ ಕೈಗಾರಿಕಾ ನೀತಿ, 2025-30 ಅನ್ನು ಜಾರಿಗೆ ತರಲಾಗಿದೆ. ಬಂಡವಾಳ ಹೂಡಿಕೆಯಲ್ಲಿ ರಾಜ್ಯವು 2ನೇ ಸ್ಥಾನದಲ್ಲಿದೆ. 2024-25ನೇ ಸಾಲಿನಲ್ಲಿ ಏಪ್ರಿಲ್ 2024 ರಿಂದ ಸೆಪ್ಟೆಂಬರ್ 2024ರ ಅಂತ್ಯದವರೆಗೆ ರಾಜ್ಯವು 88,853 ಮಿಲಿಯನ್ ಡಾಲರುಗಳಷ್ಟು ಮೌಲ್ಯದ ಸರಕು ಸೇವೆಗಳನ್ನು ರಫ್ತು ಮಾಡುವುದರೊಂದಿಗೆ ಒಟ್ಟಾರೆ ರಫ್ತನಲ್ಲಿ 1ನೇ ಸ್ಥಾನದಲ್ಲಿದೆ. 2023-24ಕ್ಕೆ ಹೋಲಿಸಿದರೆ ರಫ್ತನಲ್ಲಿ ರಾಜ್ಯವು ಶೇ. 11.17 ರಷ್ಟು ಏರಿಕೆಯ ಪ್ರಗತಿಯನ್ನು ಸಾಧಿಸಿದೆ.
ಸರ್ಕಾರವು ಹೊಸದಾಗಿ ಬೆಂಗಳೂರು ಹೊರವಲಯದಲ್ಲಿ ರೂ.40,000 ಕೋಟಿ ಬಂಡವಾಳ ಹೂಡಿಕೆಯೊಂದಿಗೆ ಕ್ವಿನ್ ಸಿಟಿ (Knowledge, Wellness and Innovation (KWIN) City) ಅನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಿದೆ. ಇದರಿಂದಾಗಿ ಸುಮಾರು 80,000 ಉದ್ಯೋಗಾವಕಾಶಗಳು ಸೃಷ್ಟಿಯಾಗಬಹುದೆಂದು ಅಂದಾಜಿಸಲಾಗಿದೆ. ಎಂಎಸ್ ಎಂ ಇ ವಲಯವು ವ್ಯಾಪಕ ಪ್ರಮಾಣದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ವಲಯವಾಗಿದೆ. ಈ ವಲಯವು ಕರ್ನಾಟಕದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ನನ್ನ ಸರ್ಕಾರವು ಈ ವಲಯದ ಅಭಿವೃದ್ಧಿಗಾಗಿ 687 ಕೋಟಿ ರೂ.ಗಳನ್ನು ಹಂಚಿಕೆ ಮಾಡಿದೆ.
ಕಲಬುರಗಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಶೇ.51 ಹಾಗೂ ಶೇ.49 ರ ಜಂಟಿ ಸಹಭಾಗಿತ್ವದಲ್ಲಿ 1000 ಎಕರೆ ಜಾಗದಲ್ಲಿ, ಜವಳಿ ಪಾರ್ಕ್ ಸ್ಥಾಪಿಸಲು ಉದ್ದೇಶಿಸಿದೆ. ಈ ಸಂಬಂಧ ವಿವಿಧ ಮೂಲಭೂತ ಕಾಮಗಾರಿಗಳಿಗೆ ರೂ.390 ಕೋಟಿ ಅನುದಾನವನ್ನು ನೀಡಲು ಸಚಿವ ಸಂಪುಟವು ಅನುಮೋದನೆ ನೀಡಿದೆ. ಇದರಿಂದಾಗಿ 1 ಲಕ್ಷ ನೇರ ಉದ್ಯೋಗಗಳು ಸೃಜನೆಯಾಗಬಹುದೆಂದು ಅಂದಾಜಿಸಲಾಗಿದೆ.
ನೇಕಾರ ಸಮ್ಮಾನ್ ಯೋಜನೆಯಡಿ 2024-25ನೇ ಸಾಲಿಗೆ 1,16,189 ಕೈಮಗ್ಗ ಮತ್ತು ವಿದ್ಯುತ್ ಮಗ್ಗ ನೇಕಾರರಿಗೆ ಒಟ್ಟು ರೂ. 81 ಕೋಟಿಗಳ ಅನುದಾನ ಹಂಚಿಕೆ ಮಾಡಲಾಗಿದ್ದು, ನೇರ ನಗದು ವರ್ಗಾವಣೆ ಮುಖಾಂತರ ಬಿಡುಗಡೆ ಮಾಡುತ್ತಿದೆ.
ರಾಜ್ಯದ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವ ದೃಷ್ಟಿಯಿಂದ ವಿಜಯಪುರ ಜಿಲ್ಲೆಯಲ್ಲಿ ರೂ.347 ಕೋಟಿ ವೆಚ್ಚದಲ್ಲಿ ವಿಮಾನ ನಿಲ್ದಾಣ ಕಾಮಗಾರಿಯನ್ನು ಇದೇ ಸಾಲಿನಲ್ಲಿ ಮುಕ್ತಾಯಗೊಳಿಸಿ ಪ್ರಯಾಣಿಕರಿಗೆ ಸಜ್ಜುಗೊಳಿಸಲಾಗುತ್ತಿದೆ. ಮೈಸೂರು ವಿಮಾನ ನಿಲ್ದಾಣ ರನ್‌ವೇ ವಿಸ್ತರಣೆಯನ್ನು ರೂ.319 ಕೋಟಿ ವೆಚ್ಚದಲ್ಲಿ, ರಾಯಚೂರು ವಿಮಾನ ನಿಲ್ದಾಣವನ್ನು ರೂ.219 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಂಡಿದೆ. ರಾಜ್ಯದ ಧರ್ಮಸ್ಥಳ, ಮಡಿಕೇರಿ ಮತ್ತು ಚಿಕ್ಕಮಗಳೂರಿನಲ್ಲಿ ಏರ್‌ಸ್ಟ್ರಿಪ್‌ಗಳನ್ನು ಅಭಿವೃದ್ಧಿಪಡಿಸಲು ಭೂಮಿಯನ್ನು ಗುರುತಿಸುವ ಮತ್ತು ಭೂಸ್ವಾಧೀನ ಪ್ರಕ್ರಿಯೆ ನಡೆಸುವ ಕೆಲಸ ಮಾಡುತ್ತಿದೆ.
ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 407 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಬೆಂಗಳೂರು ಸಿಗ್ನೆಚರ್ ಬ್ಯುಸಿನೆಸ್ ಪಾರ್ಕನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣವನ್ನು ಸ್ಥಾಪಿಸಲು ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗಿದೆ. ಕಾರವಾರ ನೌಕಾನೆಲೆ ಬಳಿಯ ವಿಮಾನ ನಿಲ್ದಾಣದ ಕಾಮಗಾರಿಗೆ ಭೂಸ್ವಾಧೀನ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ.
ರಾಜ್ಯದ 9 ರೈಲ್ವೆ ಯೋಜನೆಗಳಿಗಾಗಿ ನನ್ನ ಸರ್ಕಾರವು 600 ಕೋಟಿ ರೂ. ಗಳನ್ನು ಪ್ರಸ್ತುತ ಸಾಲಿನಲ್ಲಿ ಒದಗಿಸಿದೆ. ಈ ಯೋಜನೆಗಳಿಗೆ ಕಾಮಗಾರಿ ವೆಚ್ಚದ ಶೇ.50 ರಷ್ಟು ಮತ್ತು ಭೂಸ್ವಾಧೀನ ವೆಚ್ಚದಲ್ಲಿ ಶೇ.50 ರಿಂದ ಶೇ.100 ರಷ್ಟನ್ನು ರಾಜ್ಯ ಸರ್ಕಾರವೇ ಭರಿಸುತ್ತಿದೆ. ರಾಜ್ಯದಲ್ಲಿನ 66ಕಿ.ಮೀ. ರೈಲ್ವೆ ದ್ವಿಪಥ ಯೋಜನೆಗಾಗಿ 407 ಕೋಟಿ ರೂ.ಗಳನ್ನು ನನ್ನ ಸರ್ಕಾರವೇ ಒದಗಿಸುತ್ತಿದೆ. ಈ ದ್ವಿಪಥ ರೈಲ್ವೆ ಯೋಜನೆಗಳು 2025ರ ಆಗಸ್ಟ್ ವೇಳೆಗೆ ಸಂಪೂರ್ಣಗೊಳ್ಳಲಿವೆ.
ರಾಜ್ಯ ಸರ್ಕಾರ ಹಾಗೂ ರೈಲ್ವೆ ಇಲಾಖೆಗಳ ಸಹಭಾಗಿತ್ವದಲ್ಲಿ 148.17 ಕಿ.ಮೀ ಉದ್ದದ ಬೆಂಗಳೂರು ಉಪನಗರ ರೈಲ್ವೆ ಯೋಜನೆಯ ಜಾಲವನ್ನು ರೂ.15,767 ಕೋಟಿಗಳ ಅಂದಾಜು ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕೆಲಸ ಮಾಡುತ್ತಿದೆ. ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸಾಧ್ಯವಿರುವ ಎಲ್ಲ ಉಪಕ್ರಮಗಳನ್ನು ನನ್ನ ಸರ್ಕಾರ ಕೈಗೆತ್ತಿಕೊಂಡಿದೆ.
Center of Excellence in Wired and Wireless Technology ಅನ್ನು 5 ವರ್ಷಗಳ ಅವಧಿಗೆ ರೂ.25 ಕೋಟಿ ವೆಚ್ಚದಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಸಹಯೋಗದೊಂದಿಗೆ ಸ್ಥಾಪಿಸಲಾಗುತ್ತಿದೆ. ಮೈಸೂರಿನ ಮಂಡಕಳ್ಳಿಯಲ್ಲಿರುವ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ರೂ.30 ಕೋಟಿಗಳ ವೆಚ್ಚದಲ್ಲಿ “ಜಾಗತಿಕ ತಂತ್ರಜ್ಞಾನ ಕೇಂದ್ರ” (Global Technology Center) ವನ್ನು ಸ್ಥಾಪಿಸಲು ಕ್ರಮ ಕೈಗೊಂಡಿದೆ.
ಮಹಿಳಾ ನೇತೃತ್ವದ ಸ್ಮಾರ್ಟ್ ಅಪ್‌ಗಳನ್ನು ಪ್ರೊತ್ಸಾಹಿಸಲು ವಿಶೇಷವಾಗಿ Incubation ಮತ್ತು ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸಲು Acceleration WEscalate ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ಈ ಕಾರ್ಯಕ್ರಮವು ಉತ್ಪನ್ನಗಳ ಮಾನ್ಯಗೊಳಿಸುವಿಕೆ, ಮಾರುಕಟ್ಟೆಗೆ ಪ್ರವೇಶ ಮತ್ತು ಕಾರ್ಯಚಟುವಟಿಕೆಗಳನ್ನು ವಿಸ್ತರಿಸಲು ಅವಶ್ಯಕ ಸಾಧನಗಳು, ಮಾರ್ಗದರ್ಶನ ಮತ್ತು Mentorship ಸೌಲಭ್ಯವನ್ನು ಒದಗಿಸುತ್ತದೆ.
ರಾಷ್ಟ್ರಮಟ್ಟದಲ್ಲಿನ ಜೈವಿಕ ತಂತ್ರಜ್ಞಾನ ಕ್ಷೇತ್ರವನ್ನು ಗಮನದಲ್ಲಿಟ್ಟುಕೊಂಡು, ಇಂದಿನ ಸ್ಥಿತಿಗತಿಯನ್ನು ಮೌಲ್ಯಮಾಪನ ಮಾಡಿ ಜೈವಿಕ ತಂತ್ರಜ್ಞಾನ ನೀತಿ-4.0 ಅನ್ನು ಪ್ರಕಟಿಸಲಾಗಿದೆ. ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು ರಾಜ್ಯಕ್ಕೆ ಆಹ್ವಾನಿಸಲು ದೇಶದಲ್ಲಿಯೇ ಮೊದಲ ಬಾರಿಗೆ ಕರ್ನಾಟಕ ಜಾಗತಿಕ ಸಾಮರ್ಥ್ಯ ಕೇಂದ್ರಗಳ ನೀತಿಯನ್ನು (Karnataka Global Capability Centre Policy 2024) ಪ್ರಕಟಿಸಿದೆ.
ನವೆಂಬರ್ 2024 ರ ದಿನಾಂಕ 19 ರಿಂದ 21 ರವರೆಗೆ ಆಯೋಜಿಸಿದ್ದ. ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ ಭಾಗವಹಿಸಿದ್ದ 51 ದೇಶಗಳಿಂದ ಒಟ್ಟಾರೆ 35,000ಕ್ಕೂ ಹೆಚ್ಚು ಪ್ರತಿನಿಧಿಗಳನ್ನು ಆಕರ್ಷಿಸಲಾಗಿದೆ. ಹೂಡಿಕೆದಾರರ ಸಂಪರ್ಕದಂತಹ ವಿವಿಧ ಉಪಕ್ರಮಗಳ ಮೂಲಕ ನವೋದ್ಯಮಗಳು ಈ ಶೃಂಗಸಭೆಯಲ್ಲಿ ಲಾಭ ಪಡೆದಿವೆ.
“ಗೃಹಜ್ಯೋತಿ” ಯೋಜನೆಯಡಿ ಪ್ರಸ್ತುತ 1.62 ಕೋಟಿ ಗ್ರಾಹಕರು ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಆಗಸ್ಟ್-2023 ರಿಂದ ಜನವರಿ-2025 ರವರೆಗೆ ಒಟ್ಟಾರೆ 17290 ಕೋಟಿ ರೂ.ಗಳಷ್ಟು ಬೃಹತ್ ಸಹಾಯಧನವನ್ನು ವಿದ್ಯುತ್ ಸರಬರಾಜು ಕಂಪನಿಗಳಿಗೆ ಬಿಡುಗಡೆ ಮಾಡಲಾಗಿದೆ.
ನನ್ನ ಸರ್ಕಾರವು 2000 ಮೆಗಾವ್ಯಾಟ್ ಸಾಮರ್ಥ್ಯದ ಶರಾವತಿ ಪಿಎಸ್‌ಪಿ 11.03.2024ರಂದು ಯೋಜನೆಯ ಅನುಷ್ಠಾನಕ್ಕೆ ದಿನಾಂಕ ថ໙.8645 ಕೋಟಿಯ ಕಾಮಗಾರಿಗೆ ಕಾರ್ಯಾದೇಶ ನೀಡಿದೆ.
ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ 11.5 ಮೆಗಾವ್ಯಾಟ್ ಸ್ಥಾವರವನ್ನು ವೇಸ್ಟ್ ಟು ಎನರ್ಜಿ ಯೋಜನೆಯಡಿ ಬಿಡದಿಯಲ್ಲಿ ದಿನಾಂಕ: 19.12.2024ರಂದು ಯಶಸ್ವಿಯಾಗಿ ಕಾರ್ಯಾರಂಭಗೊಳಿಸಿದೆ. ರೈತರಿಗೆ ಹಗಲಿನ ವೇಳೆಯಲ್ಲಿ ವಿಶ್ವಾಸಾರ್ಹ ವಿದ್ಯುತ್ ಒದಗಿಸಲು ಮತ್ತು ರೈತರ ಜೀವನ ಶೈಲಿಯನ್ನು ಸುಧಾರಿಸಲು 40,000 ಜಾಲಮುಕ್ತ ಸೌರಪಂಪ್ ಸೆಟ್‌ಗಳಿಗೆ ವಿಕೇಂದ್ರೀಕೃತ ಫೀಡರ್ ಸೌರೀಕರಣಕ್ಕಾಗಿ 2392 ಮೆಗಾವ್ಯಾಟ್ ಸಾಮರ್ಥ್ಯದ ಯೋಜನೆಯನ್ನು ಪಿ.ಎಂ ಕುಸುಮ್ ಯೋಜನೆಯ ಅಡಿಯಲ್ಲಿ ಕೈಗೆತ್ತಿಕೊಂಡಿದೆ.
ರಾಜ್ಯದ ಜನರಿಗೆ ಆಹಾರ ಖಾತ್ರಿಯನ್ನು ಸಮರ್ಪಕಗೊಳಿಸಲು ಸಂವಿಧಾನದ ಮೂಲತತ್ವಗಳಿಗೆ ಅನುಗುಣವಾಗಿ ನಡೆದುಕೊಳ್ಳಲು ಉದ್ದೇಶಿಸಿ 1,28,48,173 ಪಡಿತರ ಚೀಟಿಗಳ ಒಟ್ಟು 4,48,41,976 ಫಲಾನುಭವಿಗಳಿಗೆ ಅನ್ನಭಾಗ್ಯ ಯೋಜನೆಯಡಿ ಆಹಾರ ಧಾನ್ಯ ಹಂಚಿಕೆ ಮಾಡಲಾಗಿದೆ. ಆಹಾರ ಖಾತ್ರಿ ಯೋಜನೆಯಡಿ 5 ಕೆ.ಜಿ. ಧಾನ್ಯಗಳನ್ನು ನೀಡುವುದರ ಜೊತೆಗೆ ರಾಜ್ಯ ಸರ್ಕಾರ ಘೋಷಿಸಿದ್ದ 5 ಕೆ.ಜಿ. ಆಹಾರ ಧಾನ್ಯಗಳಿಗೆ ಬದಲಾಗಿ ತಿಂಗಳಿಗೆ ತಲಾ 170 ರೂ. ಗಳಂತೆ ಹಣವನ್ನು ನೇರವಾಗಿ ಅವರ ಖಾತೆಗಳಿಗೆ ವರ್ಗಾಯಿಸುತ್ತಿತ್ತು. ಇದಕ್ಕಾಗಿ ರಾಜ್ಯ ಸರ್ಕಾರವು ಜುಲೈ-2023 ರ ಮಾಹೆಯಿಂದ ಸೆಪ್ಟೆಂಬರ್-2024ರ ಮಾಹೆಯವರೆಗೆ 10009 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ಈ ಹಿಂದೆ ಕೇಂದ್ರ ಸರ್ಕಾರದ ಸಂಸ್ಥೆಗಳು ಅಕ್ಕಿ ಕೊಡುವುದಿಲ್ಲ ಎಂದು ತಿಳಿಸಿದ್ದರಿಂದ ಹಣ ವರ್ಗಾಯಿಸುವ ವ್ಯವಸ್ಥೆ ತಂದಿದ್ದೆವು. ಈಗ ಭಾರತೀಯ ಆಹಾರ ನಿಗಮವು ಅಕ್ಕಿ ಕೊಡಲು ಮುಂದಾಗಿರುವುದರಿಂದ ತಲಾ 10 ಕೆ.ಜಿ. ಆಹಾರ ಧಾನ್ಯಗಳನ್ನು ನೀಡಲು ಪ್ರಾರಂಭಿಸಲಾಗುತ್ತಿದೆ.
ಅರಣ್ಯ ವಲಯವನ್ನು ಹೆಚ್ಚಿಸಲು 15 ಸಾವಿರ ಎಕರೆ ಭೂಮಿಯನ್ನು ಹೆಚ್ಚುವರಿಯಾಗಿ ಕಾಯ್ದಿಟ್ಟ ಅರಣ್ಯ ಎಂದು ಅಧಿಸೂಚನೆ ಹೊರಡಿಸಿದೆ. ಕಳೆದ 20 ತಿಂಗಳುಗಳಲ್ಲಿ ಬೆಂಗಳೂರು ನಗರದಲ್ಲಿ 117 ಎಕರೆ ಸೇರಿದಂತೆ ರಾಜ್ಯಾದ್ಯಂತ ಬೆಲೆಕಟ್ಟಲಾಗದ ಸುಮಾರು 5000 ಎಕರೆ ಒತ್ತುವರಿ ತೆರವು ಮಾಡಿಸಲಾಗಿದೆ.
ಬೆಂಗಳೂರು ನಗರದಲ್ಲಿ ಹಸಿರು ವಲಯ ಸಂರಕ್ಷಿಸಲು ಮತ್ತು ಅಪರೂಪದ ಪಕ್ಷಿಗಳ ನೆಲೆಯನ್ನು ಕಾಪಾಡಲು ಹೆಸರಘಟ್ಟ ಕೆರೆ ಪ್ರದೇಶದ 5678 ಎಕರೆ ಪ್ರದೇಶವನ್ನು ಗ್ರೇಟರ್ ಹೆಸರಘಟ್ಟ ಸಂರಕ್ಷಿತ ಹುಲ್ಲುಗಾವಲು ಎಂದು ಘೋಷಿಸಿ, ಭೂಕಬಳಿಕೆಗೆ ಕಡಿವಾಣ ಹಾಕಲಾಗಿದೆ. ಯಲಹಂಕ ಬಳಿಯ ಮಾದಪ್ಪನಹಳ್ಳಿಯ 153 ಎಕರೆ ನೆಡುತೋಪಿನಲ್ಲಿ ಬೃಹತ್ ಉದ್ಯಾನ ನಿರ್ಮಿಸಲು ಪ್ರಾರಂಭಿಸಿದೆ.
ಪ್ರಸ್ತುತ ನಿಂತು ಹೋಗಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಎಚ್.ಎಂ.ಟಿ.ಗೆ ಪೀಣ್ಯ ಪ್ಲಾಂಟೇಷನ್ನಲ್ಲಿ ನೀಡಲಾಗಿದ್ದ ಸುಮಾರು 14300 ಕೋಟಿ ರೂ. ಮೌಲ್ಯದ ಅರಣ್ಯ ಭೂಮಿ ಹಿಂಪಡೆದು, ಶ್ವಾಸ ತಾಣವಾಗಿ ಉಳಿಸಲು ಕಾನೂನು ಪ್ರಕ್ರಿಯೆ ಆರಂಭಿಸಲಾಗಿದೆ.
ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಣಕ್ಕೆ 2024-25ರ ಸಾಲಿನಲ್ಲಿ 78.9ಕಿ.ಮೀ. ರೈಲ್ವೆ ಬ್ಯಾರಿಕೇಡ್ ಅಳವಡಿಸಲಾಗಿದ್ದು, ಮಾನವ-ಆನೆ ಸಂಘರ್ಷ ತಡೆಗೆ ಬಂಡೀಪುರದಲ್ಲಿ ತಮಿಳುನಾಡು, ಕೇರಳ, ಆಂಧ್ರಪ್ರದೇಶ ರಾಜ್ಯಗಳ ಅರಣ್ಯ ಸಚಿವರು, ಅಧಿಕಾರಿಗಳ ಸಭೆ ಹಾಗೂ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಸಮಾವೇಶವನ್ನು ಯಶಸ್ವಿಯಾಗಿ ನಡೆಸಿ, ಬೆಂಗಳೂರು ಚಾರ್ಟರ್ ಅನ್ನು ಸಿದ್ಧಪಡಿಸಿ ಅಂಗೀಕರಿಸಲಾಗಿದೆ.
ರಾಜ್ಯದ ಜನರ ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ಅನೀಮಿಯ ಮುಕ್ತ ಪೌಷ್ಠಿಕ ಕರ್ನಾಟಕ ಯೋಜನೆಯನ್ನು ಪ್ರಾರಂಭಿಸಿ 10.8 ಲಕ್ಷ ಪಿ.ಯು.ಸಿ ವಿದ್ಯಾರ್ಥಿಗಳ ಅನೀಮಿಯ ಪರೀಕ್ಷೆ ಮಾಡಿದಾಗ ಶೇ. 32.5 ರಷ್ಟು ಮಕ್ಕಳಲ್ಲಿ ಅನೀಮಿಯ ಇರುವುದು ಕಂಡುಬಂದಿದೆ. ಈ ಮಕ್ಕಳಿಗೆ ರಕ್ತವೃದ್ಧಿ ಚಿಕಿತ್ಸೆ ನೀಡಿದ್ದರಿಂದ ರಕ್ತಹೀನತೆಯುಳ್ಳವರಲ್ಲಿ ಶೇ.60ರಷ್ಟು ಮಕ್ಕಳು ಗುಣಮುಖರಾಗಿದ್ದಾರೆ. ಎರಡನೆ ಹಂತದಲ್ಲಿ 1 ರಿಂದ 10ನೇ ತರಗತಿ ಮಕ್ಕಳ ಅನೀಮಿಯ ಸ್ಥಿತಿಗತಿಗಳ ತಪಾಸಣೆಯನ್ನು ಪ್ರಾರಂಭಿಸಲಾಗುತ್ತಿದೆ.
ಆಶಾ ಕಿರಣ ಎಂಬ ಯೋಜನೆಯಡಿ 1.4 ಕೋಟಿ ಜನರ ಕಣ್ಣಿನ ಜಿ ತಪಾಸಣೆಗಳನ್ನು ಮಾಡಿ 3.3 ಲಕ್ಷ ಜನರಿಗೆ ಉಚಿತ ಕನ್ನಡಕ ವಿತರಿಸಲಾಗಿದೆ. 93,800 ಜನರಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ಎಂಬ ಯೋಜನೆಯನ್ನು ನಿಮ್ಹಾನ್ಸಿನ ಸಹಯೋಗದೊಂದಿಗೆ ಪ್ರಾರಂಭಿಸಿ 2,60,878 ಜನರಿಗೆ ತಪಾಸಣೆ ಮಾಡಿ 32,630 ನರರೋಗಿಗಳಿಗೆ ಚಿಕಿತ್ಸೆ ಮಾಡಲಾಗಿದೆ.
ತುರ್ತು ವೈದ್ಯಕೀಯ ಸೇವೆಗಳನ್ನು ನೀಡಲು 108 ಆರೋಗ್ಯ ಕವಚ ತುರ್ತು ಸೇವೆಗಳಿಗೆ 288 ಅಡ್ವಾನ್ಸ್ ಲೈಫ್ ಸಪೋರ್ಟ್ (ಎಎಲ್‌ಎಸ್) ಆಂಬ್ಯುಲೆನ್ಸ್ ಗಳನ್ನು ಮತ್ತು 39 ಸಂಖ್ಯೆಯ ಬೇಸಿಕ್ ಲೈಫ್ ಸಪೋರ್ಟ್ (ಬಿಎಲ್‌ಎಸ್) ಆಂಬ್ಯುಲೆನ್ಸ್‌ಗಳನ್ನು ಒದಗಿಸಲಾಗಿದೆ.
ರಾಜ್ಯದಲ್ಲಿ ಕಿಡ್ನಿ ರೋಗಿಗಳಿಗೆ ಉಚಿತವಾಗಿ ನೀಡುವ ಡಯಾಲಿಸಿಸ್ ಕೇಂದ್ರಗಳನ್ನು 192 ರಿಂದ 220 ಕ್ಕೆ ವಿಸ್ತರಿಸಿ 3.67 ಲಕ್ಷ ಡಯಾಲಿಸಿಸ್ ಸೈಕಲ್ ಸೇವೆಗಳನ್ನು ಒದಗಿಸಲಾಗಿದೆ. ರಾಜ್ಯದಲ್ಲಿ 50 ಹಾಸಿಗೆಗಳ ಸಾಮರ್ಥ್ಯದ ತಾಯಿ ಮತ್ತು ಮಕ್ಕಳ 5 ಆಸ್ಪತ್ರೆಗಳನ್ನು ಹಾಗೂ 50 ಹಾಸಿಗೆಗಳ ಸಾಮರ್ಥ್ಯದ 14 ಕ್ರಿಟಿಕಲ್ ಕೇರ್ ಬ್ಲಾಕ್‌ಗಳನ್ನು ಮತ್ತು 100 ಹಾಸಿಗೆಗಳ ಸಾಮರ್ಥ್ಯದ ಒಂದು ಕ್ರಿಟಿಕಲ್ ಕೇರ್ ಬ್ಲಾಕ್ ಅನ್ನು ಸ್ಥಾಪಿಸಿದೆ. ಇದರ ಜೊತೆಗೆ 857 ಕೋಟಿ ರೂ. ಅನುದಾನದಲ್ಲಿ ಪಿ.ಹೆಚ್.ಸಿ., ಸಿ.ಹೆಚ್.ಸಿ. ಮತ್ತು ತಾಲ್ಲೂಕು ಆಸ್ಪತ್ರೆಗಳ 88 ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗುತ್ತಿದೆ.
ಜೀವ ಸಾರ್ಥಕತೆ ಸಂಸ್ಥೆಯು 4 ಸರ್ಕಾರಿ ಆಸ್ಪತ್ರೆಗಳನ್ನು ಒಳಗೊಂಡಂತೆ. 78 ಆಸ್ಪತ್ರೆಗಳು ಅಂಗಾಂಗ ಕಸಿ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿವೆ. ಇಲ್ಲಿಯವರೆಗೆ 344 ಬಿ.ಪಿ.ಎಲ್. ರೋಗಿಗಳಿಗೆ ಸಾಸ್ಟ್ (SAST) ಯೋಜನೆಯಡಿ ಉಚಿತವಾಗಿ ಅಂಗಾಂಗ ಕಸಿ ಮಾಡಲಾಗಿದೆ. ಇದಕ್ಕಾಗಿ ರಾಷ್ಟ್ರಮಟ್ಟದಲ್ಲಿ 2ನೇ ಅತ್ಯತ್ತಮ ಪ್ರಶಸ್ತಿ ಲಭಿಸಿದೆ.
ಡಾ. ಪುನೀತ್ ರಾಜ್‌ಕುಮಾರ್ ಹೃದಯ ಜ್ಯೋತಿ ಯೋಜನೆಯಲ್ಲಿ ಇಲ್ಲಿಯವರೆಗೆ 416 ಹೃದಯಾಘಾತ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಜನರಿಗೆ ಕೈಗೆಟುಕುವ ಮಾದರಿಯಲ್ಲಿ ಆರೋಗ್ಯ ಸೇವೆಯನ್ನು ಕಲ್ಪಿಸುವ ಉದ್ದೇಶದಿಂದ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ 450 ಹಾಸಿಗೆ ಸಾಮರ್ಥ್ಯ ಆಸ್ಪತ್ರೆಯ ಕಟ್ಟಡವನ್ನು 143 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗಿದ್ದು ಈವರೆಗೆ 15,778 ಒಳರೋಗಿಗಳು ಹಾಗೂ 78,848 ಹೊರರೋಗಿಗಳು ಚಿಕಿತ್ಸೆಯನ್ನು ಪಡೆದಿರುತ್ತಾರೆ. ಜಿಮ್ಸ್ ಕಲಬುರಗಿಯಲ್ಲಿ, ರೂ. 54.80 ಕೋಟಿ ವೆಚ್ಚದಲ್ಲಿ ಟ್ರಾಮಾ ಕೇರ್ ಆಸ್ಪತ್ರೆಯನ್ನು ಫೆಬ್ರವರಿ 2024 ರಿಂದ ಪ್ರಾರಂಭಿಸಿದ್ದು, ರೋಗಿಗಳು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ರೂ.92ಕೋಟಿ ವೆಚ್ಚದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ.
ಕೆಕೆಆರ್‌ಡಿಬಿ ವತಿಯಿಂದ ಗುಲ್ಬರ್ಗಾದಲ್ಲಿ 371 ಹಾಸಿಗೆ ಸಾಮರ್ಥ್ಯದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನೆ ಸಂಸ್ಥೆಯನ್ನು ರೂ.304.20 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, 22.12.2024 ರಂದು ಲೋಕಾರ್ಪಣೆ ಮಾಡಲಾಗಿದೆ. ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಕ್ಯಾಥ್ ಲ್ಯಾಬ್ ಸೌಲಭ್ಯದೊಂದಿಗೆ Super Speciality Cardiac unit ಅನ್ನು ರೂ.10 ಕೋಟಿ ವೆಚ್ಚದಲ್ಲಿ ಪ್ರಾರಂಭಿಸಲಾಗಿದೆ.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ‘ಅಕ್ಷರ ಅವಿಷ್ಕಾರ’ ಎನ್ನುವ ಸಮಗ್ರ ಶಾಲಾ ಅಭಿವೃದ್ಧಿ ಯೋಜನೆಯನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ಜಾರಿಗೆ ತರಲಾಗಿದೆ. ಈ ಸಂಬಂಧ ರೂ.700 ಕೋಟಿ ಅನುದಾನ ಮೀಸಲಿರಿಸಲಾಗಿದೆ. ರಾಜ್ಯದ ಪ್ರತಿ ಶಾಲೆಗೆ ಉಚಿತ ವಿದ್ಯುತ್ ಹಾಗೂ ನೀರಿನ ಸೌಲಭ್ಯ ಒದಗಿಸಲಾಗಿದ್ದು, ಇದರಿಂದ ಸ್ಮಾರ್ಟ್ ಕ್ಲಾಸ್ ಹಾಗೂ ಸಂಜೆ ತರಗತಿಗಳನ್ನು ನಡೆಸಲು ಉಪಯುಕ್ತವಾಗಿದೆ.
ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಸಹಭಾಗಿತ್ವದಲ್ಲಿ ಆಯ್ದ 89 ಸರ್ಕಾರಿ ಕಾಲೇಜುಗಳ ಸುಮಾರು 30,000 ವಿದ್ಯಾರ್ಥಿಗಳಿಗೆ “ಕಲಿಕೆ ಜೊತೆ ಕೌಶಲ್ಯ” ಕಾರ್ಯಕ್ರಮದಡಿ ಕೌಶಲ್ಯ ತರಬೇತಿ ನೀಡಲಾಗಿದೆ. ಶಿಕ್ಷಣ ಇಲಾಖೆಯ ವತಿಯಿಂದ ರೂ.277 ಕೋಟಿ ವೆಚ್ಚದಲ್ಲಿ 101 ಹೊಸ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.
“ಯುವನಿಧಿ ಯೋಜನೆ” ಅಡಿಯಲ್ಲಿ 2,23,883 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದು, 1,65,014 ಅರ್ಹ ಅಭ್ಯರ್ಥಿಗಳಿಗೆ ನೇರ ನಗದು ವರ್ಗಾವಣೆ ಮಾಡಲಾಗುತ್ತಿದೆ. ಇಂಡಿಯಾ ಸ್ಕಿಲ್ 2024 ರಲ್ಲಿ, 45 ಕೌಶಲ್ಯಗಳಲ್ಲಿ ಭಾಗವಹಿಸಿದ್ದ 62 ಅಭ್ಯರ್ಥಿಗಳ ಪೈಕಿ ಕರ್ನಾಟಕವು 48 ಪದಕಗಳನ್ನು ಗಳಿಸಿ ದೇಶದಲ್ಲಿ ಎರಡನೇ ಸ್ಥಾನ ಗಳಿಸಿದೆ. ವಿಶ್ವ ಕೌಶಲ್ಯ-2024 ರಲ್ಲಿ 52 ಕೌಶಲ್ಯಗಳಲ್ಲಿ ಭಾಗವಹಿಸಿದ್ದ 60 ಅಭ್ಯರ್ಥಿಗಳ ಪೈಕಿ ಕರ್ನಾಟಕವು 4 ಪದಕಗಳನ್ನು ಗೆದ್ದಿದೆ.
ನನ್ನ ಸರ್ಕಾರವು ಜನರ ವಸತಿ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ 3.05 ಲಕ್ಷ ಮನೆಗಳನ್ನು 4761.15 ಕೋಟಿ ವೆಚ್ಚದಲ್ಲಿ ನಿರ್ಮಿಸಲು ನೆರವು ನೀಡಿದೆ. 4096 ಎಕರೆ ಜಮೀನಿನಲ್ಲಿ ನಿವೇಶನಗಳನ್ನು ಸಿದ್ಧಪಡಿಸುತ್ತಿರುವ 1.23 ಲಕ್ಷ ನಿವೇಶನಗಳನ್ನು ಹಂಚಿಕೆ ಮಾಡಲು ಕ್ರಮವಹಿಸುತ್ತಿದೆ.
ಕೊಳಚೆ ಅಭಿವೃದ್ಧಿ ಮಂಡಳಿ ವತಿಯಿಂದ 1,66,867 ಕೊಳಚೆ ಪ್ರದೇಶದಲ್ಲಿನ ಕುಟುಂಬಗಳಿಗೆ ಹಕ್ಕುಪತ್ರಗಳನ್ನು ವಿತರಿಸಿ ಆ ಕುಟುಂಬಗಳ ನೆಮ್ಮದಿಯುತ ಜೀವನಕ್ಕೆ ದಾರಿ ಮಾಡಿಕೊಟ್ಟಿದೆ. ಪ್ರಧಾನ ಮಂತ್ರಿ ಆವಾಸ್(ನಗರ) ಯೋಜನೆಯನ್ನು ಬಿ. ಆರ್ಂ. ಅಂಬೇಡ್ಕರ್ ನಿವಾಸ್ ಯೋಜನೆಯೊಂದಿಗೆ ಸಮನ್ವಯಗೊಳಿಸಿ ಅನುಷ್ಠಾನಗೊಳಿಸಲಾಗುತ್ತಿದೆ. 118359 ಮನೆಗಳ ಫಲಾನುಭವಿಗಳು ಕೇಂದ್ರ ಮತ್ತು ರಾಜ್ಯದ ಸಹಾಯಧನವನ್ನು ಹೊರತುಪಡಿಸಿ 4 ರಿಂದ 5 ಲಕ್ಷಗಳಷ್ಟು ವಂತಿಕೆಯನ್ನು ಪಾವತಿಸಬೇಕಾಗಿತ್ತು. ಆದರೆ ಫಲಾನುಭವಿಗಳು ಕಟ್ಟಲಾಗದ ಸ್ಥಿತಿಯಲ್ಲಿರುವುದನ್ನು ಮನಗಂಡು, ಫಲಾನುಭವಿಗಳು 1 ಲಕ್ಷ ರೂ. ಮಾತ್ರ ವಂತಿಕೆಯ ರೂಪದಲ್ಲಿ ನೀಡಿ ಉಳಿಕೆ ಪೂರ್ತಿ ಅನುದಾನವನ್ನು ನನ್ನ ಸರ್ಕಾರವೇ ಪಾವತಿಸುತ್ತಿದೆ. ಈಗಾಗಲೇ 36,789 ಮನೆಗಳನ್ನು ಲೋಕಾರ್ಪಣೆ ಮಾಡಲಾಗಿದೆ. 39,843 ಮನೆಗಳು ಸದ್ಯದಲ್ಲೆ ಲೋಕಾರ್ಪಣೆಗೆ ಸಿದ್ಧವಾಗಿವೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ದೃಷ್ಟಿಯಿಂದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ 33 ಘಟಕಗಳನ್ನೇ ವಿಶೇಷ ಪೊಲೀಸ್ ಠಾಣೆಗಳೆಂದು ಅಧಿಸೂಚನೆ ಹೊರಡಿಸಲು ಕ್ರಮ ಕೈಗೊಂಡಿದೆ. ಇದಕ್ಕಾಗಿ 450 ಹೊಸ ಹುದ್ದೆಗಳನ್ನು ಸೃಜಿಸಲು ಅನುಮತಿ ನೀಡಲಾಗಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮಗ್ರ ಅಭಿವೃದ್ಧಿಗಾಗಿ, 2024-25ರಲ್ಲಿ, SCSP ಅಡಿಯಲ್ಲಿ ರೂ.27,674 ಕೋಟಿಗಳು ಮತ್ತು TSP ಅಡಿಯಲ್ಲಿ ರೂ.11,447 ಕೋಟಿಗಳು, ಒಟ್ಟು ರೂ.39,121 ಕೋಟಿಗಳನ್ನು ಹಂಚಿಕೆ ಮಾಡಿ ಖರ್ಚು ಮಾಡುತ್ತಿದೆ.
2024-25ರ ಬಜೆಟ್‌ನಲ್ಲಿ ಘೋಷಿಸಿದಂತೆ, 22 ಹೊಸ ವಸತಿ ಶಾಲೆಗಳು ಮತ್ತು 31 ಹಾಸ್ಟೆಲ್‌ಗಳನ್ನು ಪ್ರಾರಂಭಿಸಲಾಗಿದೆ. ವಿದ್ಯಾರ್ಥಿಗಳಿಗೆ ಮೂಲಸೌಕರ್ಯ ಸೌಲಭ್ಯಗಳನ್ನು ಒದಗಿಸಲು 47 ಹಾಸ್ಟೆಲ್/ವಸತಿ ಶಾಲೆಗಳ ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ.
ಸಮಾಜ ಕಲ್ಯಾಣ ಇಲಾಖೆಯು 2024 ರಲ್ಲಿ “ಪ್ರಜಾಪ್ರಭುತ್ವ ದಿನ”ವನ್ನು ಯಶಸ್ವಿಯಾಗಿ ನಡೆಸಿದ್ದು, ಬೀದರ್‌ನಿಂದ ಚಾಮರಾಜನಗರದವರೆಗೆ ಒಟ್ಟು 2500ಕಿ.ಮೀ. ದೂರವನ್ನು 22 ಲಕ್ಷ ಜನರನ್ನು ಒಳಗೊಂಡ ಮಾನವ ಸರಪಳಿಯನ್ನು ರಚಿಸಿ, ವಿಶ್ವ ದಾಖಲೆಯನ್ನು ಪಡೆದಿದೆ. ಸಂವಿಧಾನ ವಿರೋಧಿ ಶಕ್ತಿಗಳು ಕ್ರಿಯಾಶೀಲವಾಗುತ್ತಿರುವುದನ್ನು ಮನಗಂಡಿರುವ ನನ್ನ ಸರ್ಕಾರವು ಸಂವಿಧಾನವನ್ನು ನಾವು ರಕ್ಷಿಸಿದರೆ ಸಂವಿಧಾನವು ನಮ್ಮನ್ನು ರಕ್ಷಿಸುತ್ತದೆ ಎಂಬ ಉದ್ದೇಶದಿಂದ ಸಂವಿಧಾನ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಶ್ಲಾಘನೀಯ ಕೆಲಸ ಮಾಡುತ್ತಿದೆ.
ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ಕೊಡಿಸುವ ಉದ್ದೇಶದಿಂದ 216 ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ 45 ಕೋಟಿ ರೂಪಾಯಿಗಳನ್ನು ಭರಿಸಲಾಗುತ್ತಿದೆ. 12,858 ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತಿದೆ. 2024-25ನೇ ಸಾಲಿನಲ್ಲಿ 7 ಜಿಲ್ಲೆಗಳಲ್ಲಿ 100 ಸಂಖ್ಯಾಬಲದ 14 ಮೆಟ್ರಿಕ್ ನಂತರದ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳನ್ನು ಪ್ರಾರಂಭಿಸಲಾಗಿದೆ. ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ವತಿಯಿಂದ ಒಟ್ಟು 403 ವಸತಿ ಶಾಲೆ/ನಿಲಯಗಳನ್ನು ನಿರ್ವಹಣೆ ಮಾಡಲಾಗುತ್ತಿದ್ದು ಒಟ್ಟಾರೆ 45,560 ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಗಳ ವಿದ್ಯಾರ್ಥಿಗಳ drop-out ಪ್ರಮಾಣವನ್ನು ತಡೆಗಟ್ಟಲು 7 ರಿಂದ 8ನೇ ತರಗತಿಗೆ ಮೇಲ್ದರ್ಜೆಗೇರಿಸಲಾಗಿದೆ ಹಾಗೂ ವಸತಿ ಶಾಲೆಗಳ ವಿದ್ಯಾರ್ಥಿಗಳ ಸಂಖ್ಯಾಬಲವನ್ನು 25 ರಿಂದ 40 ಹೆಚ್ಚಿಸಲಾಗಿದೆ.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 250 ಸಂಖ್ಯಾ ಬಲದ 25 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಮತ್ತು 100 ಸಂಖ್ಯಾ ಬಲದ 96 ಮೆಟ್ರಿಕ್ ನಂತರದ ಬಾಲಕ/ಬಾಲಕಿಯರ ವಿದ್ಯಾರ್ಥಿನಿಲಯಗಳನ್ನು ಹಾಗೂ 300 ಸಂಖ್ಯಾಬಲವುಳ್ಳ 50 ಹೊಸ ಮೌಲಾನಾ ಆಜಾದ್ ಶಾಲೆಗಳನ್ನು ತೆರೆಯಲಾಗಿದೆ.
2024-25ನೇ ಸಾಲಿನ ಆಯವ್ಯಯ ಘೋಷಣೆಯಂತೆ ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗಾಗಿ ರೂ. 200 ಕೋಟಿಗಳ ಅನುದಾನದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. ಅಲ್ಪಸಂಖ್ಯಾತರ ನಿರ್ದೇಶನಾಲಯದಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಒಟ್ಟು 76 ಮೊರಾರ್ಜಿ ದೇಸಾಯಿ ವಸತಿ ಶಾಲೆ/ಕಾಲೇಜು, ಮೌಲಾನಾ ಆಜಾದ್ ಮಾದರಿ ಶಾಲೆಗಳು ಮತ್ತು ವಿದ್ಯಾರ್ಥಿನಿಲಯಗಳಿಗೆ ರೂ.700 ಕೋಟಿಗಳ ವೆಚ್ಚದಲ್ಲಿ ಸ್ವಂತ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಇಲಾಖಾ ವತಿಯಿಂದ ನಡೆಸುತ್ತಿರುವ 161 ವಸತಿ ಶಾಲೆ/ಕಾಲೇಜುಗಳಲ್ಲಿ ವಸತಿ ಸೌಲಭ್ಯದೊಂದಿಗೆ ಆಂಗ್ಲ ಮಾಧ್ಯಮದಲ್ಲಿ ಒಟ್ಟು 44,957 ವಿದ್ಯಾರ್ಥಿಗಳು ವ್ಯಾಸಂಗವನ್ನು ಪಡೆಯುತ್ತಿದ್ದಾರೆ. 250 ಮೌಲಾನಾ ಆಜಾದ್ ಮಾದರಿ ಶಾಲೆಗಳಲ್ಲಿ 38,876 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡಲಾಗುತ್ತಿದ್ದು ಸದರಿ ಶಾಲೆಗಳ ನಿರ್ವಹಣೆಗಾಗಿ ರೂ.106 ಕೋಟಿಗಳನ್ನು ಒದಗಿಸಲಾಗಿದೆ.
ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಯಡಿ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ರೂ.2000/-ಗಳನ್ನು ನೀಡಲಾಗುತ್ತಿದೆ. ಸದರಿ ಯೋಜನೆಯಡಿ 1,26,24,547 ಮಹಿಳಾ ಫಲಾನುಭವಿಗಳು ನೋಂದಣಿಯಾಗಿದ್ದು ಯೋಜನೆ ಪ್ರಾರಂಭವಾದಾಗಿನಿಂದ ಈ ವರೆಗೆ 36,000 ಕೋಟಿ ರೂ.ಗಳನ್ನು ನೇರವಾಗಿ ಫಲಾನುಭವಿಗಳ ಖಾತೆಗಳಿಗೆ ಜಮಾ ಮಾಡಲಾಗಿದೆ. ಗೃಹಲಕ್ಷ್ಮಿ ಯೋಜನೆಯ ಸೌಲಭ್ಯವನ್ನು ಈಗ ಲಿಂಗತ್ಯ ಅಲ್ಪಸಂಖ್ಯಾತರಿಗೂ ವಿಸ್ತರಿಸಲಾಗಿದೆ.
ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಹೆಣ್ಣು ಮಗುವಿನ ಜನನವನ್ನು ಪ್ರೋತ್ಸಾಹಿಸುವ ಮತ್ತು ಲಿಂಗಾನುಪಾತವನ್ನು ಉತ್ತಮಗೊಳಿಸುವ ಉದ್ದೇಶದಿಂದ ಭಾಗ್ಯಲಕ್ಷ್ಮಿ-ಸುಕನ್ಯಾ ಸಮೃದ್ಧಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಡಿ ಪ್ರತಿ ಹೆಣ್ಣು ಮಗುವಿನ ಖಾತೆಗೆ ಪ್ರತಿ ವರ್ಷ ರೂ.3,000ದಂತೆ 15 ವರ್ಷಗಳವರೆಗೆ ಜಮೆ ಮಾಡಲಾಗುತ್ತಿದೆ. 2024-25ನೇ ಸಾಲಿನಲ್ಲಿ, ಇಲ್ಲಿಯವರೆಗೆ 5,59,693 ಫಲಾನುಭವಿಗಳ ಖಾತೆಗೆ 168 ಕೋಟಿ ರೂ.ಗಳನ್ನು ಜಮಾ ಮಾಡಲಾಗಿದೆ.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ 10,01,379 ಫಲಾನುಭವಿಗಳನ್ನು ನೋಂದಾಯಿಸಿ ವಿವಿಧ ಕಲ್ಯಾಣ ಮತ್ತು ಸಾಮಾಜಿಕ ಭದ್ರತಾ ಸೌಲಭ್ಯಗಳಡಿ 11.94 ಲಕ್ಷ ಫಲಾನುಭವಿಗಳಿಗೆ ರೂ.702 ಕೋಟಿ ಮೊತ್ತದಷ್ಟು ಸಹಾಯಧನ ಪಾವತಿಸಲಾಗಿದೆ. ರೂ.1,515 ಕೋಟಿ ಮೊತ್ತದ ಸುಂಕ ಸಂಗ್ರಹಿಸಲಾಗಿದೆ. 10.63 ಲಕ್ಷ ಫಲಾನುಭವಿಗಳಿಗೆ ಪ್ರಿವೆಂಟಿವ್ ಹೆಲ್ತ್ ಕೇರ್ ಯೋಜನೆಯಡಿ ವೈದ್ಯಕೀಯ ತಪಾಸಣೆ ನಡೆಸಿರುತ್ತದೆ. ಫಲಾನುಭವಿಗಳ ನೋಂದಣಿ ಮತ್ತು ಸೌಲಭ್ಯಗಳನ್ನು ವಿತರಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ 43 ಕಾರ್ಮಿಕ ಸೇವಾ ಕೇಂದ್ರಗಳನ್ನು ಸ್ಥಾಪಿಸಲು ಕ್ರಮ ಕೈಗೊಂಡಿದೆ.
ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆಯಡಿ, 221 ಅಪಘಾತ ಪ್ರಕರಣಗಳಲ್ಲಿ .10.61 ಕೋಟಿಗಳ “ಅಪಘಾತ ಪರಿಹಾರ”ವನ್ನು ಪಾವತಿಸಲಾಗಿದೆ. ‘ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ’ಯಡಿ 25 ವರ್ಗದ 21,89,945 ಅಸಂಘಟಿತ ಕಾರ್ಮಿಕರನ್ನು ನೋಂದಾಯಿಸಿ ಸವಲತ್ತು ನೀಡಲಾರಂಭಿಸಿದೆ.
ಮೋಟಾರು ಸಾರಿಗೆ ಮತ್ತು ಇತರೆ ಸಂಬಂಧಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸಲು, “ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರೆ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು “ಕ್ಷೇಮಾಭಿವೃದ್ಧಿ ಮಂಡಳಿ”ಯನ್ನು ರಚಿಸಲಾಗಿದ್ದು, 5,12,135 ಕಾರ್ಮಿಕರನ್ನು ನೋಂದಾಯಿಸಲಾಗಿದೆ.
ರಾಜ್ಯ ಸರ್ಕಾರವು ಗ್ರಾಮೀಣ ಮನೆಗಳಿಗೆ ನಳ ಸಂಪರ್ಕ ಕಲ್ಪಿಸುವ ಯೋಜನೆಯನ್ನು ಮುಂದುವರೆಸಿದೆ. 101.32 ಲಕ್ಷ ಮನೆಗಳ ಪೈಕಿ ಈವರೆಗೆ 83.94 ಲಕ್ಷ ಮನೆಗಳಿಗೆ ನಳ ಸಂಪರ್ಕವನ್ನು ಒದಗಿಸಲಾಗಿದೆ. 2024-25ನೇ ಸಾಲಿನಲ್ಲಿ 7.27 ಲಕ್ಷ ಮನೆಗಳಿಗೆ ಸಂಪರ್ಕ ಒದಗಿಸಲಾಗಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಪ್ರಸ್ತುತ ಸಾಲಿನಲ್ಲಿ ಜನವರಿ-2025ರ ಅಂತ್ಯದವರೆಗೆ 10.91 ಕೋಟಿ ಮಾನವ ದಿನಗಳ ಉದ್ಯೋಗ ಸೃಜನೆ ಮಾಡಲಾಗಿದೆ. ಪ್ರಸ್ತುತ ಸಾಲಿನಲ್ಲಿ, ಒಟ್ಟು ರೂ.5626.56 ಕೋಟಿ ಮೊತ್ತ ವೆಚ್ಚ ಮಾಡಲಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಹನ ದಟ್ಟಣೆ ತಗ್ಗಿಸುವ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಡಬಲ್ ಡೆಕ್ಕರ್ ಮಾದರಿಯಲ್ಲಿ ಮೆಟ್ರೋ ಮತ್ತು ರಸ್ತೆ ಮೇಲ್ವೇತುವೆ ನಿರ್ಮಿಸಲು ಉದ್ದೇಶಿಸಿದೆ. ಸುಮಾರು 40.50 ಕಿ.ಮೀ. ಸಂಯುಕ್ತ ಮೆಟ್ರೋ ರಸ್ತೆ ಮೇತುವೆ ಯೋಜನೆಯನ್ನು ರೂ.8,916 ಕೋಟಿಗಳಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ. ಬೆಂಗಳೂರು ಪೆರಿಫೆರಲ್ ರಿಂಗ್ ರಸ್ತೆ, ಭಾಗ-1 ರ ಯೋಜನೆಯನ್ನು ಕೈಗೊಳ್ಳಲು ಅಗತ್ಯವಿರುವ ರೂ.27,000 ಕೋಟಿಗಳನ್ನು ಹುಡೋ ಸಂಸ್ಥೆಯಿಂದ ಸಾಲದ ರೂಪದಲ್ಲಿ ಪಡೆಯಲು ನಿರ್ಧರಿಸಿದ್ದು, ಸಾಲದ ಮೊತ್ತಕ್ಕೆ ಭದ್ರತೆ ನೀಡಲಿದೆ. ಕಾಮಗಾರಿಯನ್ನು ಸುಮಾರು 2565 ಎಕರೆ ಭೂ ಪ್ರದೇಶವನ್ನು ಸ್ವಾಧೀನಪಡಿಸಿಕೊಂಡು ಕೈಗೊಳ್ಳಲು ಉದ್ದೇಶಿಸಲಾಗಿರುತ್ತದೆ. ಸುಮಾರು 73 ಕಿ.ಮೀ ಉದ್ದದ ರಸ್ತೆ ನಿರ್ಮಾಣ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ.
ಬೆಂಗಳೂರು ಮೆಟ್ರೋ ರೈಲು ಯೋಜನೆಯ ಹಂತ-2A ರಲ್ಲಿ ಸೆಂಟ್ರಲ್ ಸಿಲ್ಕ್ ಬೋರ್ಡ್ ನಿಂದ ಕೃಷ್ಣರಾಜಪುರದವರೆಗೆ 19.75ಕಿ.ಮೀ. ಮತ್ತು ಹಂತ-28 ರಲ್ಲಿ ಕೃಷ್ಣರಾಜಪುರದಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ 38.44 ಕಿ.ಮೀ. ಉದ್ದದ ಒಟ್ಟು ರೂ.14,788 ಕೋಟಿ ಅಂದಾಜು ವೆಚ್ಚದ ಕಾಮಗಾರಿಯು ಪ್ರಗತಿಯಲ್ಲಿದೆ. ಹಂತ-3 ಕಾರಿಡಾರ್ 1 -ಕೆಂಪಾಪುರದಿಂದ ಜೆ.ಪಿ.ನಗರ 4ನೇ ಹಂತದವರೆಗೆ – 32.15 ಕಿ.ಮೀ ಮತ್ತು ಕಾರಿಡಾರ್ 2 – ಹೊಸಹಳ್ಳಿಯಿಂದ ಕಡಬಗೆರೆವರೆಗಿನ -12.50 ಕಿ.ಮೀ ಒಟ್ಟು 44.65 ಕಿ.ಮೀ ಉದ್ದದ, ರೂ. 15,611 ಕೋಟಿ ಅಂದಾಜು ವೆಚ್ಚದ ಕಾಮಗಾರಿಗಳು ಪಗತಿಯಲ್ಲಿವೆ. ಈ ಯೋಜನೆಗಳನ್ನು ಡಿಸೆಂಬರ್-2029 ರೊಳಗೆ ಪೂರ್ಣಗೊಳಿಸಲು ಯೋಜಿಸಲಾಗಿದೆ.
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯಿಂದಾಗಿ ಭಾರೀ ಸಂಚಾರ ದಟ್ಟಣೆಯಾಗಿ ಅಪಘಾತಗಳ ಹೆಚ್ಚಳಕ್ಕೆ ಕಾರಣವಾಗಿದೆ. ಸುಗಮ ಸಂಚಾರಕ್ಕಾಗಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ಬೆಂಗಳೂರು ಸಂಚಾರ ಪೊಲೀಸರು ಮುಂಚೂಣಿಯಲ್ಲಿದ್ದಾರೆ. ಸುಸ್ಥಿರ ಸಂಚಾರ ನಿರ್ವಹಣೆಗಾಗಿ ASTRAM-ಕೃತಕ ಬುದ್ಧಿಮತ್ತೆ ಆಧಾರಿತ ಡೇಟಾ ಪ್ಲಾಟ್ ಫಾರಂ, ನೈಜ ಸಮಯದಲ್ಲಿ ಡೇಟಾವನ್ನು ಸಂಗ್ರಹಿಸಲು ಮತ್ತು ವಿಶ್ಲೇಷಿಸಲು ಮತ್ತು ಸಂಚಾರವನ್ನು ತೆರವುಗೊಳಿಸುವುದಕ್ಕೆ ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳಲು Al ಆಧಾರಿತ ಡೇಟಾ ವೇದಿಕೆಯಾಗಿದೆ.
ವಿಶ್ವಬ್ಯಾಂಕ್ ನೆರವಿನ “ಕರ್ನಾಟಕ ನಗರ ನೀರು ಸರಬರಾಜು ಆಧುನೀಕರಣ ಯೋಜನೆ” ಯಡಿಯಲ್ಲಿ ರೂ.3741 ಕೋಟಿ ವೆಚ್ಚದಲ್ಲಿ 5 ವರ್ಷಗಳ ಅವಧಿಗೆ ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮತ್ತು ಕಲಬುರಗಿ ನಗರಗಳ ಮಹಾನಗರ ಪಾಲಿಕೆ ವ್ಯಾಪ್ತಿ ಪ್ರದೇಶಗಳಲ್ಲಿ ನಿರಂತರ ನೀರು ಸರಬರಾಜು ಪೂರೈಸುವ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಸದರಿ ಯೋಜನೆಯನ್ನು ಜೂನ್ 2025 ರ ವೇಳೆಗೆ ಅನುಷ್ಠಾನಗೊಳಿಸುವ ಗುರಿಯಿದೆ.
ನನ್ನ ಸರ್ಕಾರವು ನಗರ ಮತ್ತು ಗ್ರಾಮೀಣ ಭಾಗದ ಜನರ ಕ್ರಮಬದ್ಧವಲ್ಲದ ಆಸ್ತಿಗಳಿಗೆ ಇ-ಖಾತಾ ನೀಡಲು ಅತ್ಯಂತ ಜನಪರವಾದ ಯೋಜನೆಯನ್ನು ರೂಪಿಸಿ ಅನುಷ್ಠಾನ ಮಾಡುತ್ತಿದೆ. ಪ್ರಾರಂಭದಲ್ಲಿ ಕರ್ನಾಟಕ ಮಹಾನಗರಪಾಲಿಕೆಗಳ ಅಧಿನಿಯಮ ಮತ್ತು ಕರ್ನಾಟಕ ಪೌರಸಭೆಗಳ ಅಧಿನಿಯಮ ಕಾಯ್ದೆಗೆ ತಿದ್ದುಪಡಿ ತಂದು ಬಹುದಿನಗಳಿಂದ ನಗರ ಪಟ್ಟಣ ಪ್ರದೇಶಗಳಲ್ಲಿ ಬಾಕಿ ಉಳಿದಿದ್ದ ಸುಮಾರು 30 ಲಕ್ಷಕ್ಕೂ ಹೆಚ್ಚಿನ ಅನಧಿಕೃತ ಆಸ್ತಿಗಳಿಗೆ ಇ-ಖಾತಾ ನಮೂನೆ 3ಬಿ ನೀಡಲು ಪ್ರಾರಂಭಿಸಿದೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಕ್ಕೂ ಈ ಸೌಲಭ್ಯವನ್ನು ವಿಸ್ತರಿಸಲಾಗುತ್ತದೆ.
ರೈತರ ಜಮೀನುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸುರಕ್ಷಿತವಾಗಿಡಲು ಕಂದಾಯ ಇಲಾಖೆಯು ‘ಭೂ ಸುರಕ್ಷಾ’ ಎಂಬ ಗ್ಯಾರಂಟಿಯನ್ನು ನೀಡುತ್ತಿದೆ. ಕಂದಾಯ ಇಲಾಖೆಯಲ್ಲಿನ ಧೀರ್ಘಾವಧಿ ಮತ್ತು ಮುಖ್ಯ ದಾಖಲೆಗಳನ್ನು ಸ್ಕ್ಯಾನಿಂಗ್, ಡಿಜಿಟಲೀಕರಣ, ಇಂಡೆಕ್ಸಿಂಗ್ ಮತ್ತು ಕೆಟಲಾಗಿಂಗ್ ಮಾಡಿ ಜನರಿಗೆ ಸುಲಭವಾಗಿ ಸಿಗುವಂತೆ ಮಾಡಲಾಗುವುದು. ಈಗಾಗಲೇ 9 ಕೋಟಿ ಪುಟಗಳನ್ನು ಸ್ಕ್ಯಾನ್ ಮಾಡಿ ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡಲಾಗಿದೆ.
ಕಂದಾಯ ಇಲಾಖೆಯಲ್ಲಿ ಮ್ಯುಟೇಶನ್‌ಗೆ ಸಂಬಂಧಿಸಿದಂತೆ ಜನರು ಅನವಶ್ಯಕವಾಗಿ ಸುತ್ತಾಡುವುದನ್ನು ತಪ್ಪಿಸಲು ಮ್ಯುಟೇಶನ್ ಗ್ಯಾರಂಟಿಯನ್ನು ನೀಡಲಾಗಿದೆ. ಮೊದಲು ಖಾತೆ ಬದಲಾವಣೆಗೆ ಸರಾಸರಿ 32 ದಿನಗಳಷ್ಟು ಕಾಲಾವಧಿ ಬೇಕಾಗಿತ್ತು. ಆಡಳಿತಕ್ಕೆ ಚುರುಕು ಮುಟ್ಟಿಸಿದ ಕಾರಣದಿಂದ ಶೇ.67 ರಷ್ಟು ಖಾತೆ ಬದಲಾವಣೆಗಳು ಕೆಲವೇ ಗಂಟೆಗಳಲ್ಲಿ ಆಗುತ್ತಿವೆ. ಇನ್ನುಳಿದ ಶೇ.33 ರಷ್ಟು ಮೈಟೇಶನ್ನುಗಳನ್ನು 9 ರಿಂದ 13 ದಿನಗಳಲ್ಲಿ ಮಾಡಲಾಗುತ್ತಿದೆ.
ಕಂದಾಯ ನ್ಯಾಯಾಲಯಗಳಲ್ಲಿ ಸಾವಿರಾರು ಪ್ರಕರಣಗಳು 5-10 ವರ್ಷಗಳಿಂದಲೂ ಬಾಕಿ ಉಳಿದಿದ್ದವು. ಇಂತಹ ಪ್ರಕರಣಗಳ ವಿಲೇವಾರಿಯನ್ನು ಅಭಿಯಾನ ರೂಪದಲ್ಲಿ 2 ಕೈಗೊಂಡ ಕಾರಣದಿಂದ ತಹಶೀಲ್ದಾರ್ ನ್ಯಾಯಾಲಯದಲ್ಲಿದ್ದ 10,744 ಅವಧಿ ಮೀರಿದ ಪ್ರಕರಣಗಳ ಪೈಕಿ 10,410 ಪ್ರಕರಣಗಳನ್ನು ವಿಲೇ ಮಾಡಲಾಗಿದೆ. ಉಪವಿಭಾಗಾಧಿಕಾರಿಗಳ ನ್ಯಾಯಾಲಯಗಳಲ್ಲಿ ಬಾಕಿ ಇದ್ದ 62,857 ಪ್ರಕರಣಗಳಲ್ಲಿ 37,217 ಪ್ರಕರಣಗಳನ್ನು ವಿಲೇ ಮಾಡಲಾಗಿದೆ.
ಸರ್ಕಾರವು ಅಧಿಕಾರಕ್ಕೆ ಬರುವ ಮೊದಲು ಭೂಮಾಪನ ಇಲಾಖೆಯಲ್ಲಿ 11ಇ ನಕ್ಷೆ ಪಡೆಯಲು ಸರಾಸರಿ 90 ದಿನಗಳು ಹಾಗೂ ಹದ್ದುಬಸ್ತಿಗೆ 120-180 ದಿನಗಳನ್ನು ತೆಗೆದುಕೊಳ್ಳಲಾಗುತ್ತಿತ್ತು. ಈಗ ಪರಿಣಾಮಕಾರಿ ಆಡಳಿತದಿಂದಾಗಿ 90 ದಿನಗಳ ಬದಲಾಗಿ 30 ದಿನಗಳಿಗೆ 11ಇ ನಕ್ಷೆ ಸಿಗುತ್ತಿದೆ. ಹದ್ದುಬಸ್ತು ಪ್ರಕರಣಗಳನ್ನು 45 ದಿನಗಳಲ್ಲಿ ಮಾಡಲಾಗುತ್ತಿದೆ.
ರಾಜ್ಯದಲ್ಲಿ ನನ್ನ ಭೂಮಿ ಯೋಜನೆಯ ಮುಖಾಂತರ ದರಖಾಸ್ತು ಜಮೀನುಗಳ ಪೋಡಿ ದುರಸ್ತಿ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಹಿಂದಿನ 5 ವರ್ಷಗಳಲ್ಲಿ 5813 ದರಖಾಸ್ತು ಮಂಜೂರಿ ಜಮೀನುಗಳಿಗೆ ಪೋಡಿ ದುರಸ್ತಿ ಮಾಡಲಾಗಿದ್ದರೆ ನನ್ನ ಭೂಮಿ ಎಂಬ ಯೋಜನೆ ಜಾರಿಗೆ ಬಂದ 2024ರ ಡಿಸೆಂಬರ್‌ನಿಂದ ಇಲ್ಲಿಯವರೆಗೆ 4850ಕ್ಕೂ ಹೆಚ್ಚು ರೈತ ಕುಟುಂಬಗಳಿಗೆ ಮಂಜೂರಾಗಿದ್ದ ಜಮೀನುಗಳಿಗೆ ಪೋಡಿ ದುರಸ್ತಿ ಮಾಡಲಾಗಿದೆ.
ಕನ್ನಡ ಭಾಷೆ ಮತ್ತು ಸಂಸ್ಕೃತಿಯ ವರ್ಧನೆಗಾಗಿ ಹಲವಾರು ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಕರ್ನಾಟಕ ಸಂಭ್ರಮ-50ರ ಅಂಗವಾಗಿ ದಿನಾಂಕ: 01.11.2024 ರಂದು “ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ” ಸಮಾರಂಭದಲ್ಲಿ 50 ಪುರುಷ ಮತ್ತು 50 ಮಹಿಳಾ ಸಾಧಕರಿಗೆ ಸುವರ್ಣ ಮಹೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ದಿನಾಂಕ: 27.01.2025 ರಂದು ವಿಧಾನಸೌಧದ ಆವರಣದಲ್ಲಿ ನಾಡದೇವಿ ಭುವನೇಶ್ವರಿಯ ಕಂಚಿನ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಲಾಗಿದೆ. ಕರ್ನಾಟಕದ ಎಲ್ಲಾ ಕಛೇರಿಗಳು, ಅಂಗಡಿ-ಮುಂಗಟ್ಟುಗಳು, ವಾಣಿಜ್ಯೋದ್ಯಮ ಸಂಸ್ಥೆಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯಗೊಳಿಸಲು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮವನ್ನು ಜಾರಿಗೊಳಿಸಲಾಗಿದೆ. ಮೈಸೂರಿನಲ್ಲಿ “ಸಾಂಸ್ಕೃತಿಕ ಮುನ್ನೋಟ ಚಿಂತನಾ ಸಮಾವೇಶ”, ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲ್ಲೂಕಿನ ಗುಡ್ಡಾಪುರದಲ್ಲಿ “ಗಡಿ ನಾಡ ಸಮಾವೇಶ” ಮತ್ತು ರಾಯಚೂರಿನಲ್ಲಿ “ಗೋಕಾಕ್ ಚಳುವಳಿಯ ಹಿನ್ನೋಟ ಮುನ್ನೋಟ” ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ.
ಸವದತ್ತಿ ಯಲ್ಲಮ್ಮ ಕ್ಷೇತ್ರದಲ್ಲಿ ಸಕಲ ಸೌಲಭ್ಯಗಳನ್ನು ಒದಗಿಸಲು ದಾಪುಗಾಲನ್ನಿಡಲಾಗಿದೆ. ಈ ಕ್ಷೇತ್ರದಲ್ಲಿ ಭಕ್ತರು ದೇವಿಯ ದರ್ಶನವನ್ನು ಸುಗಮವಾಗಿ ಮಾಡಲು ಅನುಕೂಲವಾಗುವಂತೆ ತಿರುಪತಿ ಮಾದರಿಯಲ್ಲಿ ಸರದಿ ಸಾಲಿನ ಸಂಕೀರ್ಣವನ್ನು (Queue complex) ಆದ್ಯತೆಯ ಮೇಲೆ ನಿರ್ಮಾಣ ಮಾಡಲು ಮತ್ತು ಭಕ್ತಾದಿಗಳು ಸ್ವತ: ಅಡುಗೆ ಮಾಡಿಕೊಳ್ಳುವುದರಿಂದ ಅಲ್ಲಿ 500 ಚಿಕ್ಕ ಹೊರವಲಯದ ಅಡುಗೆ ಮನೆಗಳನ್ನು ಮತ್ತು ಗೌರವ ಘಟಕ (ಶೌಚಾಲಯ) ಗಳನ್ನು ನಿರ್ಮಿಸಲು ರೂ.200 ಕೋಟಿಗಳ ಅಂದಾಜು ವೆಚ್ಚದ ಮಾಸ್ಟರ್ ಪ್ಲಾನ್ ಸಿದ್ದಪಡಿಸಲಾಗುತ್ತಿದೆ. ಸವದತ್ತಿ ಯಲ್ಲಮ್ಮ ಗುಡ್ಡಕ್ಕೆ ರೋಪ್-ವೇ ನಿರ್ಮಾಣ ಮಾಡಲು ಪ್ರಸ್ತಾಪಿಸಲಾಗಿದೆ.
ಪೊಲೀಸ್ ಇಲಾಖೆಗೆ ಅಗತ್ಯವಿರುವ ಸಂಪನ್ಮೂಲಗಳನ್ನು ಒದಗಿಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ 26 ಸುಸಜ್ಜಿತ ಪೊಲೀಸ್ ಠಾಣೆಗಳು ಹಾಗೂ 2016 ವಸತಿ ಗೃಹಗಳನ್ನು ನಿರ್ಮಿಸಲು ಆದ್ಯತೆ ನೀಡಲಾಗಿದೆ. ಗ್ರಾಮೀಣ ಪತ್ರಕರ್ತರಿಗೆ ವೃತ್ತಿ ನಿಮಿತ್ತ ಜಿಲ್ಲಾ ವ್ಯಾಪ್ತಿಯಲ್ಲಿ ಸಂಚರಿಸಲು ಬಸ್ ಪಾಸ್ ವಿತರಿಸುವ ಯೋಜನೆಯನ್ನು ಸಾರಿಗೆ ಇಲಾಖೆಯ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲಾಗಿದೆ.
ಸರ್ಕಾರವು ತನ್ನ ಪರಿಮಿತ ಆರ್ಥಿಕ ಸಂಪನ್ಮೂಲಗಳ ಆಧಾರದ ಮೇಲೆಯೆ ಇಷ್ಟೆಲ್ಲ ಸಾಧನೆಗಳನ್ನು ಮಾಡಿದೆ. ಏಳನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿಗೆ ತಂದಿದೆ. ಸರ್ಕಾರವು ರಾಜ್ಯದ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕವೂ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನ ಮಾಡುತ್ತಿದೆ. ಸಂವಿಧಾನದ ಆಶಯಗಳಿಗೆ ಪೂರಕವಾಗಿ ಜನ ಕಲ್ಯಾಣವನ್ನೆ ಪ್ರಧಾನ ಧೈಯವಾಗಿಟ್ಟುಕೊಂಡು ಕೆಲಸ ಮಾಡುತ್ತಿದೆ. ಸರ್ವರ ಶಾಂತಿ, ಸರ್ವರ ಅಭ್ಯುದಯವೆ ಸಂವಿಧಾನದ ಆಶಯ. ಈ ಆಶಯವನ್ನು ಚಾಚೂ ತಪ್ಪದೆ ಪಾಲಿಸುತ್ತಿದೆ ಎಂದು ರಾಜ್ಯಪಾಲರು ಹೇಳಿದರು.
ಪಾಪ ನಕಲಿ ದೇಶಭಕ್ತರ ಗತಿ ಅಧೋಗತಿ,, ರಾಜ್ಯಪಾಲರನ್ನು ಅವಮಾನ ಮಾಡಿದ್ದಾರೆ ಸರ್ಕಾರ ಅಂತ ಧರಣಿ ಸತ್ಯಾಗ್ರಹ ಮಾಡುತ್ತಿದ್ದಾರೆ ಬಿಜೆಪಿ, ಇಲ್ಲಿ ಅದೇ ರಾಜ್ಯಪಾಲರು ಕಪಾಳಮೋಕ್ಷ ಮಾಡಿದ್ದಾರೆ