- ಅಕ್ಕಿ ವಿತರಿಸಲು ಆಗದಿದ್ದರೆ, ಎಲ್ಲ ಕುಟುಂಬಗಳಿಗೆ ಡಿಬಿಟಿ ಮೂಲಕ ಹಣ ನೀಡಿ
- ‘ರಾಜ್ಯ ಸರ್ಕಾರಗಳ ಮೇಲೆ ಹೊರೆ ಹೊರಿಸದೆ, 5 ಕೆಜಿ ಅಕ್ಕಿ ಕೇಂದ್ರ ನೀಡುತ್ತಿದೆ’
ಜೂನ್ ತಿಂಗಳಲ್ಲಿ ಸರ್ಕಾರ 10 ಕೆಜಿ ಪಡಿತರವನ್ನು ಒದಗಿಸದೇ ಇದ್ದಲ್ಲಿ, ನಾವು ರಾಜ್ಯ ವ್ಯಾಪಿ ಹೋರಾಟ ನಡೆಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಸಿದ್ದಾರೆ.
ಈ ಕುರಿತು ಸರಣಿನ ಟ್ವೀಟ್ ಮಾಡಿರುವ ಅವರು, “ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದು, ಈಗ ಭರವಸೆಗಳನ್ನು ಈಡೇರಿಸಲು ಆಗದೆ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಯತ್ನಿಸುವ ಈ ಸರ್ಕಾರಕ್ಕೆ ಕೆಲವೇ ದಿನಗಳಲ್ಲಿ ಜನತೆ ಹಿಡಿಶಾಪ ಹಾಕಲಿದ್ದಾರೆ” ಎಂದು ಕಿಡಿ ಕಾರಿದ್ದಾರೆ.
“ಈ ಕೂಡಲೇ ವಿವಿಧ ಆಹಾರ ನಿಗಮಗಳನ್ನು ಸಂಪರ್ಕಿಸಿ ಮಾತು ತಪ್ಪದಂತೆ, ಸಾರ್ವಜನಿಕರಿಗೆ 10 ಕೆಜಿ ಅಕ್ಕಿಯನ್ನು ನೀಡಬೇಕು ಎಂದು ಆಗ್ರಹಿಸುತ್ತೇನೆ. ಒಂದು ವೇಳೆ ಆಗದಿದ್ದರೆ, ಎಲ್ಲಾ ಕುಟುಂಬಗಳಿಗೆ ಡಿಬಿಟಿ ಮೂಲಕ 10 ಕೆಜಿ ಅಕ್ಕಿಯ ಬದಲು ಹಣವನ್ನು ನೀಡಬೇಕು. ನಮ್ಮ ಬಳಿ ಡಿಬಿಟಿ ಮೂಲಕ ಹಣ ಪಾವತಿಸಲು ಎಲ್ಲ ಅಗತ್ಯ ದತ್ತಾಂಶಗಳು ಸಹ ಇವೆ” ಎಂದಿದ್ದಾರೆ.
“ಹೊಸ ಸರ್ಕಾರ ರಚನೆಯಾದ ಮೊದಲ ಸಂಪುಟ ಸಭೆಯಲ್ಲಿ ಸಿದ್ದರಾಮಯ್ಯ ಅವರು ಐದು ಗ್ಯಾರಂಟಿಗಳಿಗೆ ತಾತ್ವಿಕ ಒಪ್ಪಿಗೆ ನೀಡಿ, ಅಧಿಕಾರಿಗಳೊಂದಿಗೆ ಅನೇಕ ಸರಣಿ ಸಭೆ ನಡೆಸಿದರು. ಅಂದೇ ಅಧಿಕಾರಿಗಳಿಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲು ತಿಳಿಹೇಳಬಹುದಿತ್ತಲ್ವಾ? ಕೊನೆ ಪಕ್ಷ ಟೆಂಡರ್ ಸಹ ಕರೆಯಲಿಲ್ಲ, ಕೇಂದ್ರ ಸರ್ಕಾರದೊಂದಿಗೆ ಸಂಪರ್ಕ ಸಹ ನಡೆಸದೇ, ಕೇವಲ ಎಫ್‌ಸಿಐನೊಂದಿಗೆ ಸಂವಹನ ನಡೆಸಿರುವುದನ್ನು ಗಮನಿಸಿದರೆ, ಈ ಸರ್ಕಾರಕ್ಕೆ ನುಡಿದಂತೆ ನಡೆಯಲು, ಜನರಿಗೆ ಅಕ್ಕಿ ಕೊಡಲು ಇಷ್ಟವಿಲ್ಲ ಎಂಬುದು ಸಾಬೀತಾಗುತ್ತದೆ. ಅಕ್ಕಿ ಕೊಡುವ ದಿನ ಹತ್ತಿರ ಬಂದ ಕಾರಣ, ಈಗ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಿ, ತಮ್ಮ ತಪ್ಪನ್ನು ಸಾರ್ವಜನಿಕರೆದುರು ಮರೆಮಾಚಲು ಯತ್ನಿಸುತ್ತಿದ್ದಾರೆ” ಎಂದು ಟೀಕಿಸಿದ್ದಾರೆ.
“ರಾಜ್ಯ ಸರ್ಕಾರದ ಬೊಕ್ಕಸದಿಂದ ಹಣ ಹೊಂದಿಸಿ, 1 ಕೆಜಿ ಅಕ್ಕಿಯನ್ನು ಖರೀದಿಸುವ ವೇಳೆಯಲ್ಲಿ ಸಹ, ಎಫ್‌ಸಿಐ ನಮಗೆ ಈ ಬಗ್ಗೆ ನಿಬಂಧನೆ ಇದೆ ಎಂದು ತಿಳಿಸಿತ್ತು. ಆನಂತರ ಈ ಬಗ್ಗೆ ಕಡತದಲ್ಲಿ ನಾನು ಸವಿವರವಾಗಿ ನಮೂದಿಸಿದ್ದು, ಏಪ್ರಿಲ್, ಮೇ, ಜೂನ್, ಜುಲೈಗೆ ಹೆಚ್ಚುವರಿ ಅಕ್ಕಿಯನ್ನು ಟೆಂಡರ್ ಮುಖಾಂತರ ಬೇರೆ ಆಹಾರ ನಿಗಮಗಳಿಂದಾದರೂ ಸಹ ಖರೀದಿಸಬೇಕು, ಕೇವಲ ಎಫ್‌ಸಿಐ ಮೇಲೆ ಅವಲಂಬಿತರಾಗಬಾರದು ಎಂದು ಸ್ಪಷ್ಟವಾಗಿ ಅಧಿಕಾರಿಗಳಿಗೆ ತಿಳಿಸಿದ್ದೆ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಿಜೆಪಿಯವರನ್ನು ಬಡವರ ವಿರೋಧಿಗಳು ಎಂದು ಕರೆಯದೆ ಬೇರೇನು ಹೇಳಬೇಕು: ಸಿದ್ದರಾಮಯ್ಯ ತರಾಟೆ
“ಬಡವರ ಮೇಲೆ ಸಿದ್ದರಾಮಯ್ಯ ಅವರಿಗೆ ಸ್ವಲ್ಪವೂ ಕಾಳಜಿ ಇಲ್ಲ. ಬಡವರಿಗೆ ಆಸೆ-ಆಮೀಷಗಳನ್ನು ಒಡ್ಡಿ, ಈಗ ಅಧಿಕಾರಕ್ಕೆ ಬಂದ ನಂತರ, ನೀಡಿದ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗದಾಗ ಬೇರೆಯವರ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ. ಮಾತೆತ್ತಿದರೇ 13 ಬಜೆಟ್ ಮಂಡಿಸಿದ್ದೇನೆ ಎಂದು ಬೀಗುವ ಸ್ವಯಂಘೋಷಿತ ಆರ್ಥಿಕ ತಜ್ಞರಿಗೆ, ಗ್ಯಾರಂಟಿಗಳನ್ನು ಈಡೇರಿಸಲು ಸಂಪನ್ಮೂಲವನ್ನು ಹೇಗೆ ಕ್ರೋಡೀಕರಣಗೊಳಿಸುವುದು ಎಂಬ ಸಣ್ಣ ಅಂಶ ಗಮನಕ್ಕೆ ಬಂದಿರಲಿಲ್ಲವೇ?” ಎಂದು ಕುಟುಕಿದ್ದಾರೆ.
“ಕೇಂದ್ರ ಸರ್ಕಾರವು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ, ಯಾವುದೇ ಇತರ ಖರ್ಚುಗಳನ್ನು ರಾಜ್ಯ ಸರ್ಕಾರಗಳ ಮೇಲೆ ಹೊರಿಸದೇ, 5 ಕೆಜಿ ಅಕ್ಕಿಯನ್ನು ನೀಡುತ್ತಿದೆ. ಡಿಸೆಂಬರ್ ನಿಂದ, ಗರೀಬ್ ಕಲ್ಯಾಣ್ ಯೋಜನೆಯಡಿ ಕೇಂದ್ರ ಸರ್ಕಾರವು 10 ಕೆಜಿ ಅಕ್ಕಿಯನ್ನು ನೀಡುತ್ತಿದೆ” ಕೇಂದ್ರ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
“ಇಂಧನ ದರ ಏರಿಕೆಯನ್ನು ಹಿಂದಿನ ಸರ್ಕಾರ ಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಸುಳ್ಳು ಹೇಳಿ ಜನರನ್ನು ವಂಚಿಸುತ್ತಿದ್ದಾರೆ. ಇಂಧನ ದರ ಏರಿಕೆಯ ಬಗ್ಗೆ ಜೂನ್ 02 ರಂದು ಅಧಿಕೃತ ಆದೇಶ ಹೊರ ಬಂದಿದೆ. ಜೂನ್ 02 ನೇ ತಾರೀಖು ಯಾರ ಸರ್ಕಾರ ಇತ್ತು ಎಂಬುದನ್ನು ರಾಜ್ಯದ ಜನತೆ ಗಮನಿಸಬೇಕು” ಎಂದು ಹೇಳಿದ್ದಾರೆ.
ಖಂಡಿತವಾಗಿಯೂ ಇದು ಒಬ್ಬ ಪ್ರಜ್ಞಾವಂತ ಮಾಜಿ ಮುಖ್ಯಮಂತ್ರಿಗಳ ಹೇಳಿಕೆ ಅಲ್ಲವೇ ಅಲ್ಲ! ಒಬ್ಬ ಲಜ್ಜೆಗೆಟ್ಟ ಮಾನ ಗೇಡಿ ನೀಡುವಂತಹ ಹೇಳಿಕೆಯಂತೆ ಇದೆ.