ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹಾಡಹಗಲೇ ಗುಂಡು ಹಾರಿಸಿ ಜ್ಯೂವೆಲ್ಲರಿ ಶಾಪ್ ಕಳ್ಳತನ ಮಾಡಿದ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿಯ ಪೈಪ್‌ಲೈನ್ ರಸ್ತೆಯಲ್ಲಿ ನಡೆದಿದೆ
ಬ್ಯಾಡರಹಳ್ಳಿಯ ಪೈಪ್‌ಲೈನ್ ರಸ್ತೆಯಲ್ಲಿರುವ ವಿನಾಯಕ ಜ್ಯೂವೆಲ್ಲರಿ ಶಾಪ್‌ಗೆ ಗುರುವಾರ (ಸೆ.12) ಬೆಳಗ್ಗೆ ಸುಮಾರು 10.45ರ ಸುಮಾರಿಗೆ ಎರಡು ಬೈಕ್‌ನಲ್ಲಿ 4 ಜನ ದರೋಡೆಕೋರರು ಬಂದಿದ್ದಾರೆ. ದರೋಡೆಕೋರರು ಉಪಾಯವಾಗಿ ಜ್ಯೂವೆಲ್ಲರಿ ಶಾಪ್‌ಗೆ ಬಂದಿದ್ದು, ಜತೆಗೆ ಲಾಂಗ್, ಚಾಕು ಹಾಗೂ ಗನ್ ತೆಗೆದುಕೊಂಡು ಬಂದಿದ್ದಾರೆ.
ದರೋಡೆಕೋರರು ಏಕಾಏಕಿ ಒಳಬಂದು ವಿನಾಯಕ ಜ್ಯೂವೆಲ್ಲರಿ ಶಾಪ್ ಮಾಲೀಕ ಮನೋಜ್ ಅವರಿಗೆ ಬಂದೂಕು ತೋರಿಸಿ ಬೆದರಿಸಿ ಹಣ ಮತ್ತು ಒಡವೆ ನೀಡಲು ಹೇಳಿದ್ದಾರೆ. ಇದಕ್ಕೆ ಅಂಗಡಿ ಮಾಲೀಕ ಮನೋಜ್ ಹೆದರದೆ ಅವರನ್ನು ತಡೆಯಲು ಮುಂದಾದಾಗ, ದರೋಡೆಕೋರರು ಮನೋಜ್ ಅವರ ಕಾಲಿಗೆ ಗುಂಡು ಹಾರಿಸಿದ್ದಾರೆ. ಬಳಿಕ ಶಾಪ್‌ನಲ್ಲಿದ್ದ ಚಿನ್ನಾಭರಣವನ್ನೆಲ್ಲ ದೋಚಿ ಪರಾರಿಯಾಗಿದ್ದಾರೆ.
ಮನೋಜ್ ಅವರನ್ನು ಹಿಡಿಯಲು ಯತ್ನಿಸಿದಾಗ ದರೋಡೆಕೋರರು ಗಾಬರಿಯಿಂದ ತಾವು ತಂದಿದ್ದ ಬ್ಲಾಕ್ ಪಲ್ಸರ್ ಬೈಕ್ ಅನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಬೈಕ್ ಕೂಡ ಕದ್ದಿರುವ ಶಂಕೆ ವ್ಯಕ್ತವಾಗಿದೆ. ದರೋಡೆಕೋರರು ಸುಮಾರು ಒಂದು ಕೆ.ಜಿಯಷ್ಟು ಚಿನ್ನಾಭರಣ ಕಳ್ಳತನ ಮಾಡಿದ್ದಾರೆ ಎಂದು ಮನೋಜ್ ತಿಳಿಸಿದ್ದಾರೆ.
ಸದ್ಯ ಮನೋಜ್ ಅವರು ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುಮಾರು 1 ಕೆಜಿಗೂ ಹೆಚ್ಚು ಚಿನ್ನಾಭರಣ ದರೋಡೆ ಮಾಡಿದ್ದಾರೆ ಎನ್ನಲಾಗುತ್ತಿದೆ.
ಸ್ಥಳಕ್ಕೆ ಬ್ಯಾಡರಹಳ್ಳಿ ಠಾಣಾ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಹಾಡಹಗಲೇ ನಡೆದ ಘಟನೆಯಿಂದ ಸ್ಥಳೀಯ ವ್ಯಾಪಾರಿಗಳು ಭಯಭೀತರಾಗಿದ್ದಾರೆ. ದೂರು ದಾಖಲಿಸಿಕೊಂಡಿರುವ ಬ್ಯಾಡರಹಳ್ಳಿ ಪೊಲೀಸರು ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಅತ್ತಿಬೆಲೆ ದುರಂತ | ಪಟಾಕಿ ಖರೀದಿಗಾಗಿ ಹೋಗಿ ಅವಘಡಕ್ಕೆ ಸಿಲುಕಿದ್ದ ಬಾಡಿ ಬಿಲ್ಡರ್ ವೆಂಕಟೇಶ್ ಸಾವು
“ನಾಲ್ಕು ಜನ ದರೋಡೆಕೋರರು ಬೈಕ್‌ನಲ್ಲಿ ಬಂದು ಈ ಕೃತ್ಯ ಎಸಗಿದ್ದಾರೆ. ಪರಾರಿಯಾಗುವ ಸಂದರ್ಭದಲ್ಲಿ ಬೈಕ್ ಅನ್ನು ಅಲ್ಲಿಯೇ ಬಿಟ್ಟು ತೆರಳಿದ್ದಾರೆ. ಆರೋಪಿಗಳ ಪತ್ತೆಗೆ ನಾಲ್ವರು ಇನ್ಸ್‌ಪೆಕ್ಟರ್‌ಗಳ ನೇತೃತ್ವದಲ್ಲಿ ನಾಲ್ಕು ತಂಡ ರಚನೆ ಮಾಡಲಾಗಿದೆ. ಒಂದು ಕೆಜಿಗೂ ಹೆಚ್ಚಿನ ಚಿನ್ನಾಭರಣ ದರೋಡೆ ಆಗಿರುವ ಮಾಹಿತಿಯಿದೆ” ಎಂದು ಪಶ್ಚಿಮ ವಿಭಾಗ ಡಿಸಿಪಿ ಗಿರೀಶ್ ತಿಳಿಸಿದ್ದಾರೆ.