ಪ್ರತಿಭಟನೆ ವೇಳೆ ರಾಜ್ಯಪಾಲ ಥಾವರ್ ಚಂದ್ ಗೆಲಹೋಟ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಅವರ ಮಂಗಳೂರಿನ ವೆಲೆನ್ಸಿಯಾದ ಮನೆಯ ಮೇಲೆ ಬುಧವಾರ ರಾತ್ರಿ ಕಲ್ಲು ತೂರಾಟ ನಡೆದಿದೆ.
ರಾತ್ರಿ 11 ಗಂಟೆ ಸುಮಾರಿಗೆ ಹೆಲ್ಮೆಟ್ ಧರಿಸಿಕೊಂಡು ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮನೆಯ ಮೇಲೆ ಕಲ್ಲು ತೂರಾಟ ನಡೆಸಿ ಪರಾರಿಯಾಗಿದ್ದಾರೆ. ಮತ್ತೆ ಸ್ವಲ್ಪ ಸಮಯದ ನಂತರ ಮರಳಿ ಬಂದು ಕಲ್ಲು ತೂರಾಟ ಮಾಡಿದ್ದಾರೆ. ಇದರಿಂದ ಐವನ್ ಡಿಸೋಜಾ ಅವರ ಮನೆಯ ಕಿಟಕಿ ಗಾಜುಗಳು ಒಡೆದಿವೆ.
ಐವನ್ ಡಿಸೋಜಾ ಅವರ ಪತ್ನಿ ಕವಿತಾ ಡಿಸೋಜಾ ಅವರು ಮನೆ ಬಳಿ ಕಾರು ಪಾರ್ಕ್ ಮಾಡಿ ಒಳಗೆ ಹೋದ ಐದು ನಿಮಿಷದಲ್ಲೇ ಈ ಕಲ್ಲು ತೂರಾಟ ನಡೆದಿದೆ. ಸ್ಥಳಕ್ಕೆ ಪಾಂಡೇಶ್ವರ ಠಾಣಾ ಪೊಲೀಸರು ಭೇಟಿ ನೀಡಿ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿದ್ದಾರೆ. ಸದ್ಯ ಐವನ್ ಡಿಸೋಜಾ ಅವರ ಮನೆಗೆ ಪೊಲೀಸ್ ಭದ್ರತೆ ನೀಡಲಾಗಿದೆ. ಸಿಸಿ ಕ್ಯಾಮೆರಾದಲ್ಲಿ ಆರೋಪಿಗಳ ಚಹರೆ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಬೆಂಗಳೂರಿಗೆ ಹೋಗಿದ್ದ ಐವನ್ ಡಿಸೋಜಾ
ಕಲ್ಲು ತೂರಾಟ ನಡೆಯುವ ವೇಳೆ ಐವನ್ ಡಿಸೋಜಾ ಅವರು ಮನೆಯಲ್ಲಿರಲಿಲ್ಲ. ಅವರು ಬೆಂಗಳೂರಿನಲ್ಲಿ ಪಕ್ಷದ ಮೀಟಿಂಗ್‌ಗೆ ಹೋಗಿದ್ದರು. ಮನೆಯಲ್ಲಿ ಇಬ್ಬರು ಪುತ್ರಿಯರು, ಕವಿತಾ ಅವರ ಸಹೋದರ ಮಾತ್ರ ಇದ್ದರು. ಎರಡನೇ ಬಾರಿ ಕಲ್ಲು ತೂರಾಟ ನಡೆಸುವಾಗ ಐವನ್ ಡಿಸೋಜಾ ಪುತ್ರಿ ಮಹಡಿ ಮೇಲಿಂದ ನೋಡಿದ್ದಾರೆ.
ಐವನ್ ಡಿಸೋಜಾ ಏನು ಹೇಳಿಕೆ ನೀಡಿದ್ದರು?
ಮುಡಾ ಪ್ರಕರಣಲ್ಲಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲ ನಡೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ, “ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ರಾಷ್ಟ್ರಪತಿಗಳು ವಾಪಸ್ ಕರೆಸಿಕೊಳ್ಳದಿದ್ದರೆ ಬಾಂಗ್ಲಾದೇಶ ಪ್ರಧಾನಮಂತ್ರಿಗಳಿಗೆ ಬಂದ ಪರಿಸ್ಥಿತಿ ರಾಜ್ಯಪಾಲರ ಕಚೇರಿಗೂ ಬರಲಿದೆ” ಎಂಬ ಅರ್ಥದಲ್ಲಿ ಐವನ್ ಡಿಸೋಜ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿ, ರಾಜ್ಯ ಪೋಲಿಸ್ ಇಲಾಖೆಯ ಮಹಾನಿರ್ದೇಶಕರಿಗೂ ದೂರು ನೀಡಿದೆ.