ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಪೌರತ್ವ ಸ್ಥಿತಿಯನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ನಲ್ಲಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೇ, ರಾಹುಲ್ ಗಾಂಧಿ ವಿರುದ್ಧದ ಸುದೀರ್ಘ ದೂರಿನ ಸ್ಥಿತಿಗತಿ ಕುರಿತ ವರದಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.
2019ರ ಏಪ್ರಿಲ್‌ನಲ್ಲಿ ರಾಹುಲ್ ಅವರ ಪೌರತ್ವವನ್ನು ಪ್ರಶ್ನಿಸಿ ಸುಬ್ರಮಣಿಯನ್ ಸ್ವಾಮಿ ಅವರು ಕೇಂದ್ರ ಸರ್ಕಾರಕ್ಕೆ ದೂರು ನೀಡಿದ್ದರು. “ಬ್ರಿಟನ್ ಸರ್ಕಾರಕ್ಕೆ ದಾಖಲೆಗಳನ್ನು ಸಲ್ಲಿಸಿರುವ ರಾಹುಲ್ ಗಾಂಧಿ, ತಮ್ಮನ್ನು ಬ್ರಿಟನ್ ಪ್ರಜೆ ಎಂದು ಹೇಳಿಕೊಂಡಿದ್ದಾರೆ. ಆ ಮೂಲಕ ಭಾರತದ ಸಾಂವಿಧಾನಿಕ ನಿಬಂಧನೆಗಳನ್ನು ಉಲ್ಲಂಘಿಸಿದ್ದಾರೆ. ಭಾರತೀಯ ಪ್ರಜೆಯಾದ ರಾಹುಲ್ ಅವರು ಭಾರತ ಸಂವಿಧಾನದ 9ನೇ ವಿಧಿ ಮತ್ತು 1955ರ ಭಾರತೀಯ ಪೌರತ್ವ ಕಾಯಿದೆಗಳು ಭಾರತೀಯ ನಾಗರಿಕರು ದ್ವಿಪೌರತ್ವ ಹೊಂದುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸುತ್ತದೆ. ಆದರೆ, ರಾಹುಲ್ ಈ ಕಾಯಿದೆಗಳನ್ನು ಉಲ್ಲಂಘಿಸಿರುವ ಸಾಧ್ಯತೆಗಳಿವೆ” ಎಂದು ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದಾರೆ.
“2003 ರಲ್ಲಿ ನೋಂದಾಯಿಸಲಾದ ಯುಕೆ ಮೂಲದ ‘ಬ್ಯಾಕ್‌ಆಪ್ಸ್ ಲಿಮಿಟೆಡ್ ಕಂಪನಿ’ಯೊಂದಿಗೆ ರಾಹುಲ್ ವ್ಯಾವಹಾರಿಕ ಸಂಬಂಧ ಹೊಂದಿದ್ದಾರೆ. 2005 ಮತ್ತು 2006ರ ಕಂಪನಿಯ ವಾರ್ಷಿಕ ಆದಾಯದಲ್ಲಿ, ಗಾಂಧಿಯವರ ರಾಷ್ಟ್ರೀಯತೆಯನ್ನು ಬ್ರಿಟೀಷ್ ಪ್ರಜೆ ಎಂದು ಪಟ್ಟಿ ಮಾಡಲಾಗಿದೆ. ಇದು ಅವರ ಭಾರತೀಯ ಪೌರತ್ವದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತುತ್ತದೆ. ಅವರು ತಮ್ಮನ್ನು ತಾವು ಬ್ರಿಟೀಷ್ ಪ್ರಜೆ ಎಂದು ಘೋಷಿಸಿಕೊಂಡಿದ್ದರೆ, ಅವರ ಭಾರತೀಯ ಪೌರತ್ವವನ್ನು ರದ್ದುಪಡಿಸಬಹುದು” ಎಂದು ಸ್ವಾಮಿ ಹೇಳಿದ್ದಾರೆ.
2019 ರ ಏಪ್ರಿಲ್‌ನಲ್ಲಿ ಈ ವಿಷಯದ ಬಗ್ಗೆ ಸ್ಪಷ್ಟೀಕರಣ ಕೋರಿ ಕೇಂದ್ರ ಸರ್ಕಾರವು ರಾಹುಲ್‌ಗೆ ನೋಟಿಸ್ ಜಾರಿ ಮಾಡಿತ್ತು. ಇದರ ಹೊರತಾಗಿಯೂ, ತಮ್ಮ ದೂರಿಗೆ ಯಾವುದೇ ಮಹತ್ವದ ಪ್ರತಿಕ್ರಿಯೆ ಸರ್ಕಾರದಿಂದ ಬಂದಿಲ್ಲ ಎಂದು ಸ್ವಾಮಿ ಆರೋಪಿಸಿದ್ದಾರೆ. ಪದೇ ಪದೇ ಸರ್ಕಾರಕ್ಕೆ ಮನವಿಗಳನ್ನು ಕಳಿಸಿದರೂ, ಸರ್ಕಾರ ಮೌನವಾಗಿದೆ ಎಂದು ಹೇಳಿದ್ದಾರೆ.
“ತಮ್ಮ ದೂರಿನ ಬಗ್ಗೆ ಇನ್ನೂ ವಿಳಂಬ ಮಾಡದೆ ನಿರ್ಧಾರ ತೆಗೆದುಕೊಳ್ಳಬೇಕು ಮತ್ತು ಅಂತಿಮ ಆದೇಶವನ್ನು ನೀಡುವಂತೆ ಕೇಂದ್ರಕ್ಕೆ ನಿರ್ದೇಶಿಸಬೇಕು” ಎಂದು ಸ್ವಾಮಿ ಕೋರಿದ್ದಾರೆ. ಮುಂದಿನ ವಾರ ಸುಬ್ರಮಣಿಯನ್ ಸ್ವಾಮಿ ಅರ್ಜಿಯನ್ನು ಹೈಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.
ಇದೇ ಪೌರತ್ವದ ಚರ್ಚೆಯ ಕಾರಣಕ್ಕಾಗಿ 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದಂತೆ ರಾಹುಲ್ ಗಾಂಧಿಗೆ ನಿರ್ಬಂಧ ಹೇರಬೇಕೆಂದು ಸಲ್ಲಿಸಲಾಗಿದ್ದ ಅರ್ಜಿಯನ್ನು 2019ರ ಮೇನಲ್ಲಿ ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. “ಒಂದು ದಾಖಲೆಯಲ್ಲಿ ಅವರನ್ನು ಬ್ರಿಟೀಷ್ ಎಂದು ಉಲ್ಲೇಖಿಸಿದ ಕಾರಣಕ್ಕೆ, ಆ ದಾಖಲೆಯು ಅವರನ್ನು ಬ್ರಿಟೀಷ್ ಪ್ರಜೆಯನ್ನಾಗಿ ಮಾಡುತ್ತದೆಯೇ” ಎಂದು ಸುಪ್ರೀಂ ಕೋರ್ಟ್ ಆಗ ಪ್ರಶ್ನಿಸಿತ್ತು.
ಸುಪ್ರೀಂ ಕೋರ್ಟ್ 2019ರ ತೀರ್ಪಿನ ಹೊರತಾಗಿಯೂ, ರಾಹುಲ್ ಗಾಂಧಿ ಅವರು ಪೌರತ್ವದ ವಿಷಯವು ಸಂಪೂರ್ಣ ತನಿಖೆಗೆ ಅರ್ಹವಾಗಿದೆ ಎಂದು ಸ್ವಾಮಿ ವಾದಿಸುತ್ತಿದ್ದಾರೆ.