- ಶಾಸಕಾಂಗ ಪಕ್ಷ ನಾಯಕನಾಗಿ ಲಿಂಗಾಯತ ಸಮುದಾಯದ ಬೊಮ್ಮಾಯಿ ಮುಂದುವರಿಕೆ
- ಒಬಿಸಿ ಸಮುದಾಯದ ಕೈ ಹಿಡಿದು ಮುಂದಿನ ಚುನಾವಣೆಗಳನ್ನು ಗೆಲ್ಲಲು ಸುನೀಲ್ ಅಧ್ಯಕ್ಷ
ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಬಿಜೆಪಿ ಅದರಿಂದ ಹೊರ ಬರಲು ಆತ್ಮಾವಲೋಕನ ಸಭೆ ನಡೆಸಲು ನಿರ್ಧರಿಸಿದೆ. ಇದಕ್ಕೂ ಮುನ್ನ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸೋಲಿನ ಪರಾಮರ್ಶೆ ಸಭೆ ನಡೆಸಿರುವ ಪಕ್ಷ ಈಗ ಆತ್ಮಾವಲೋಕನ ಸಭೆಗೆ ಸಿದ್ಧತೆ ಆರಂಭಿಸಿದೆ.
ಇದರ ಜೊತೆಜೊತೆಗೆ ಹಿರಿಯರ ಅನುಪಸ್ಥಿತಿಯಲ್ಲಿ ಪಕ್ಷವನ್ನು ಮತ್ತೊಮ್ಮೆ ತಳಮಟ್ಟದಿಂದ ಕಟ್ಟಬೇಕಾದ ಅನಿವಾರ್ಯತೆ ಪಕ್ಷಕ್ಕೊದಗಿ ಬಂದಿರುವುದರಿಂದ ಆ ಬಗೆಗೂ ಪಕ್ಷದ ವರಿಷ್ಠರು ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲು ಸಿದ್ದರಾಗುತ್ತಿದ್ದಾರೆ.
ಇವೆಲ್ಲದರ ನಡುವೆ ಪಕ್ಷ ರಾಜ್ಯಾಧ್ಯಕ್ಷರ ಅವಧಿ ಮುಗಿದಿದ್ದು, ಚುನಾವಣೆ ಕಾರಣ ನಳಿನ್ ಕುಮಾರ್ ಕಟೀಲ್ ಅವರನ್ನು ಮುಂದುವರೆಸಿದ್ದ ಪಕ್ಷ ಈಗ ಆ ಸ್ಥಾನಕ್ಕೂ ಸೂಕ್ತ ನಾಯಕನ ತಲಾಶೆಗಿಳಿದಿದೆ.
ಒಂದೆಡೆ ಪಕ್ಷಕ್ಕೆ ನೂತನ ರಾಜ್ಯಾಧ್ಯಕ್ಷ, ಶಾಸಕಾಂಗ ಪಕ್ಷಕ್ಕೆ ಅನುಭವಿ ನಾಯಕನ ನೇಮಕ- ಈ ಎರಡೂ ಜವಾಬ್ಧಾರಿಗಳು ಬಿಜೆಪಿ ವರಿಷ್ಠರ ಹೆಗಲೇರಿವೆ. ಇದನ್ನು ಪಕ್ಷದ ನಾಯಕರು ಹೇಗೆ ನಿರ್ವಹಿಸುತ್ತಾರೆನ್ನುವ ಕುತೂಲವೀಗ ಬಿಜೆಪಿ ಕಾರ್ಯಕರ್ತರನ್ನು ಕಾಡುತ್ತಿದೆ.
ಪಕ್ಷದ ಜನಪ್ರಿಯತೆ ಕಳೆದುಕೊಳ್ಳುವ ಹೊತ್ತಿನಲ್ಲಿ ಪ್ರಯೋಗಗಳ ಮೊರೆ ಹೋಗಿ ಅದಕ್ಕೆ ಹೊಸತನದ ಲೇಪ ಬಳಿದು, ಜನಮನ್ನಣೆ ಪಡೆಯುವ ಪ್ರಯೋಗವನ್ನು ದೇಶದ ಹಲವು ಕಡೆ ಮಾಡಿದ್ದ ಬಿಜೆಪಿ, ಕೆಲವೆಡೆ ಗೆದ್ದು ಕೆಲವೆಡೆ ಸೋತು ನಿಂತಿದೆ.
ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಮಾಡಿದ ಪ್ರಯೋಗ ದಕ್ಷಿಣ ಭಾರತದಲ್ಲಿನ ಬಿಜೆಪಿ ಹೆಬ್ಬಾಗಿಲೆಂದು ಕರೆಯಿಸಿಕೊಂಡಿದ್ದ ಸರ್ಕಾರವನ್ನೇ ಮಕಾಡೆ ಮಲಗಿಸಿದೆ. ರಾಷ್ಟ್ರೀಯ ನಾಯಕರ ಪ್ರಯೋಗದ ಆಟ ರಾಜ್ಯದಲ್ಲಿ ಪಕ್ಷವನ್ನೂ ಅದರ ನಾಯಕತ್ವದ ನೆಲೆಯನ್ನೂ ಕುಸಿದು ಬೀಳುವಂತೆ ಮಾಡಿದೆ. ಇದರ ಜೊತೆಗೆ ಹಿರಿಯ ನಾಯಕರನ್ನು ಕಡೆಗಣಿಸಿ ಚುನಾವಣಾ ರಾಜಕೀಯದಿಂದ ದೂರ ನಿಲ್ಲಿಸಿದ್ದು ಬಿಜೆಪಿಗೆ ನಾಯಕರ ಕೊರತೆಯನ್ನು ಹುಟ್ಟುಹಾಕಿದೆ.
ಬದಲಾದ ಕಾಲಮಾನದಲ್ಲಿ ಹೊಸ ತಲೆಮಾರನ್ನು ಮುನ್ನಡೆಸಿಕೊಂಡು ಹೋಗುವ ಅನಿವಾರ್ಯತೆ ಈಗ ರಾಜ್ಯ ಬಿಜೆಪಿಗೆ ಎದುರಾಗಿದೆ. ಒಂದು ಕಡೆ ಪಕ್ಷದ ಮೂಲಧ್ಯೇಯ, ಮತ್ತೊಂದೆಡೆ ಎಲ್ಲರೂ ಒಪ್ಪುವ ಸಾಮುದಾಯಿಕ ನಾಯಕತ್ವ, ಇವೆರಡನ್ನೂ ಹೊಂದಿರುವ, ಹೊಂದಬಹುದಾದ ನಾಯಕತ್ವದ ಹುಡುಕಾಟದಲ್ಲಿರುವ ಬಿಜೆಪಿಗೆ ಸದ್ಯಕ್ಕೆ ಸಿಕ್ಕಿರುವ ಹೊಸ ಹೆಸರು ಸುನಿಲ್ ಕುಮಾರ್.
ಕಾರ್ಕಳ ವಿಧಾನಸಭೆ ಶಾಸಕ ಸುನಿಲ್ ಕುಮಾರ್ ಮುಂದಿನ ಬಿಜೆಪಿ ರಾಜ್ಯಾಧ್ಯಕ್ಷರಾಗುವ ಸಾಧ್ಯತೆ ದಟ್ಟವಾಗುತ್ತಿದೆ. ಪಕ್ಷದ ವರಿಷ್ಠರ ಒಲವು, ಪಕ್ಷದ ಬಗೆಗಿನ ನಿಷ್ಠೆ ಸೈದ್ಧಾಂತಿಕ ಬದ್ಧತೆ ಹಾಗೂ ಯುವ ನಾಯಕನಾಗಿ ಗುರುತಿಸಿಕೊಂಡಿರುವ ಸುನಿಲ್ ಕುಮಾರನ್ನು ಪಕ್ಷದ ಮುಂದಿನ ಸಾರಥಿಯಾಗಿಸಲು ಬಿಜೆಪಿ ಚಿಂತನೆ ನಡೆಸಿದೆ ಎನ್ನುವುದು ಮೂಲಗಳ ಮಾಹಿತಿ.
ಈ ಹಿಂದೆ ಪ್ರಬಲ ಲಿಂಗಾಯತ ಸಮುದಾಯದ ನಾಯಕ ಯಡಿಯೂರಪ್ಪ ಅವರ ವಿಚಾರದಲ್ಲಿ ಪಕ್ಷ ತೆಗೆದುಕೊಂಡ ನಿರ್ಧಾರ ಯಾವ ಮಟ್ಟಿನ ಹೊಡೆತ ನೀಡಿತ್ತೆನ್ನುವುದನ್ನು ಬಲ್ಲ ಬಿಜೆಪಿ, ಈ ಬಾರಿ ಅದಕ್ಕೆ ಅವಕಾಶ ಮಾಡಿಕೊಡದೆ, ಒಬಿಸಿ ಸಮುದಾಯದೊಂದಿಗೆ ಸಾಗುವ ತನ್ನ ಹೊಸ ಮಂತ್ರವನ್ನು ಸುನಿಲ್ ಮುಖಾಂತರ ಮಾಡಿಸಲು ಮುಂದಾಗುತ್ತಿದೆಯಂತೆ.
ಹಿಂದಿನ ಲೆಕ್ಕಾಚಾರಗಳ ಪ್ರಕಾರ ಶಾಸಕರಾಗಿ ಆಯ್ಕೆಯಾಗಿದ್ದಿದ್ದರೆ, ಸಿಟಿ ರವಿ ರಾಜ್ಯಾಧ್ಯಕ್ಷರನ್ನಾಗಿಸುವ ಚಿಂತನೆ ಪಕ್ಷ ಮಾಡಿಕೊಂಡಿತ್ತಂತೆ. ಆದರೆ ರವಿ ಪಕ್ಷದ ರಾಷ್ಟ್ರೀಯ ಜವಾಬ್ದಾರಿ ಹೊತ್ತ ಕಾರಣ ಅಲ್ಲಿಗೆ ಅವರ ಜೊತೆಗಾರನಾದ ಸುನಿಲ್ ಕುಮಾರ್ ಅವರನ್ನು ತರಲು ಈಗ ಸಿದ್ಧತೆ ನಡೆಸಿದೆ.
ಆರ್ ಎಸ್ ಎಸ್ ಹಿನ್ನೆಲೆ, ಹಿಂದುತ್ವ ಪ್ರತಿಪಾದಕ ಹಾಗೂ ಒಬಿಸಿ ಸಮುದಾಯ ಪ್ರತಿನಿಧಿಯೂ ಆಗಿರುವ ಸುನಿಲ್ ಕುಮಾರ್ ಪಕ್ಷ ಬೇಡುವ ಎಲ್ಲ ಅರ್ಹತೆಗಳನ್ನು ಹೊಂದಿದ್ದಾರೆ. ಜೊತೆಗೆ ಪ್ರಬಲ ವಾಗ್ಮಿಯಾಗಿರುವ ಕಾರಣ ಅವರಿಗೆ ಈ ಅವಕಾಶ ಹುಡುಕಿ ಬಂದಿದೆ ಎನ್ನುವುದು ಮೂಲಗಳ ಮಾಹಿತಿ.
ಸುನಿಲ್ ಕುಮಾರ್ ರಾಜ್ಯಾಧ್ಯಕ್ಷರಾದಲ್ಲಿ ಪಕ್ಷ ಬೆಂಬಲಿಸುತ್ತಿರುವ ಯುವ ಸಮುದಾಯವೂ ಅವರನ್ನು ಒಪ್ಪಿಕೊಳ್ಳುತ್ತದೆ ಎನ್ನುವುದು ರಾಷ್ಟ್ರೀಯ ನಾಯಕರ ಲೆಕ್ಕಾಚಾರ. ಜೊತೆಗೆ ಬಿಜೆಪಿ ಭದ್ರಕೋಟೆ ಕರಾವಳಿ ಕರ್ನಾಟಕ ಭಾಗದ ನಾಯಕನಾಗಿರುವ ಕಾರಣ ಸುನಿಲ್‌ಗೆ ಜನಬೆಂಬಲ ಸಿಗುತ್ತದೆನ್ನುವ ವಿಶ್ವಾಸ ಪಕ್ಷದ್ದು. ಎರಡನೇ ಸ್ತರದ ನಾಯಕತ್ವ ಬೆಳೆಸುವ ಅನಿವಾರ್ಯತೆ ಪಕ್ಷಕ್ಕೆ ಇರುವ ಕಾರಣ ಈ ಪ್ರಯೋಗ ಫಲಪ್ರದವಾಗುವ ಸಾಧ್ಯತೆಯೇ ಹೆಚ್ಚು.
ಇಂತಹದ್ದೊಂದು ಲೆಕ್ಕಾಚಾರದ ನಡುವೆ ಕೇಳಿ ಬಂದಿರುವ ಮತ್ತೊಂದು ಹೆಸರು ಬಿ ವೈ ವಿಜಯೇಂದ್ರರದ್ದು. ಹಾಲಿ ಚುನಾವಣೆಯಲ್ಲಿ ಲಿಂಗಾಯತ ಸಮುದಾಯವನ್ನು ಕಡೆಗಣಿಸಿದ್ದು ಹಾಗೂ ಯಡಿಯೂರಪ್ಪರನ್ನು ದೂರ ಸರಿಸಿದ್ದರ ಪರಿಣಾಮ ಎದುರಿಸುತ್ತಿರುವ ಬಿಜೆಪಿ, ಅದನ್ನ ಸರಿಪಡಿಸಿಕೊಳ್ಳಲು ಯುವ ನಾಯಕ, ಪ್ರಸ್ತುತ ಬಿಜೆಪಿ ಉಪಾಧ್ಯಕ್ಷರಾಗಿರುವ ವಿಜಯೇಂದ್ರರನ್ನೂ ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸಬಹುದು ಎನ್ನುವುದು ಮತ್ತೊಂದು ಮಾಹಿತಿ. ಇವೆರಡರಲ್ಲಿ ಸುನಿಲ್ ಕುಮಾರ್ ಆಯ್ಕೆ ಬಹುತೇಕ ಅಂತಿಮವಾಗಬಹುದು.
ಇನ್ನು ಶಾಸಕಾಂಗ ಪಕ್ಷದ ನಾಯಕನ ವಿಚಾರಕ್ಕೆ ಬಂದಾಗ ಬಿಜೆಪಿಗೆ ಉಳಿದಿರುವ ಏಕೈಕ ಆಯ್ಕೆ ಹಂಗಾಮಿ ಸಿಎಂ ಬಸವರಾಜ ಬೊಮ್ಮಾಯಿ, ಜನಪ್ರತಿನಿಧಿಯಾಗಿ ಉಳಿದಿರುವ ಹಳೆ ತಲೆಮಾರಿನ ಕೊನೆಯ ನಾಯಕ ಬೊಮ್ಮಾಯಿ.
ಈ ಸುದ್ದಿ ಓದಿದ್ದೀರಾ?:ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ; ಸುಳಿವು ನೀಡಿದ ಪ್ರಲ್ಹಾದ್ ಜೋಶಿ
ಹೀಗಾಗಿ ಅವರಿಗೇ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಸ್ಥಾನ ದೊರಕುವುದು ಬಹುಪಾಲು ಖಚಿತ. ಈ ಮೊದಲು ಇಲ್ಲಿಗೆ ಬಸನಗೌಡ ಪಾಟೀಲ್ ಯತ್ನಾಳ್ ಹೆಸರು ಕೇಳಿ ಬಂದಿತ್ತಾದರೂ, ಸದನ ನಿಯಮಗಳಿಗೆ ಗೌರವ ನೀಡಿ ಪಕ್ಷ ಮುನ್ನಡೆಸುವ ವಿಚಾರದಲ್ಲಿ ಅವರು ಹಿಂದೆ ಬೀಳುವ ಅನುಮಾನವಿರುವ ಕಾರಣ, ಅವರ ಬದಲು ಸಿಎಂ ಬೊಮ್ಮಾಯಿರವರಿಗೇ ಆ ಸ್ಥಾನ ನೀಡಿದರೆ ಸೂಕ್ತ ಎನ್ನುವುದು ಪಕ್ಷದ ನಿಲುವು.
ಹೀಗೆ ಹೊಸ ಬದಲಾವಣೆ ಜೊತೆ ಪಕ್ಷ ಮುನ್ನಡೆಸಲು ಅನುವಾಗುತ್ತಿರುವ ಬಿಜೆಪಿ, ಯುವ ರಾಜ್ಯಾಧ್ಯಕ್ಷ ಹಾಗೂ ಅನುಭವಿ ಶಾಸಕಾಂಗ ಪಕ್ಷದ ನಾಯಕರ ಜೊತೆ ಆಡಳಿತ ಪಕ್ಷ ಕಾಂಗ್ರೆಸ್ ಎದುರು ಸೆಣೆಸಲು ಸಿದ್ದವಾಗುತ್ತಿದೆ. ದೆಹಲಿ ವರಿಷ್ಠರ ರಾಜ್ಯ ಪ್ರವಾಸದ ಬಳಿಕ ಬಿಜೆಪಿಯ ಈ ಯೋಜನೆ ಅನುಷ್ಠಾನವಾಗಬಹುದು, ಅಲ್ಲಿಯವರೆಗೆ ಪಕ್ಷದ ಕಾರ್ಯಕರ್ತರು ಕಾದು ಕೂರಬೇಕಿದೆ.