- ಮುಂದಿನ ವಿಚಾರಣೆ ಮೇ 9ಕ್ಕೆ ಮುಂದೂಡಿಕೆ
- ಕೆ ಎಂ ಜೋಸೆಫ್ ನೇತೃತ್ವದ ಪೀಠದಿಂದ ಆದೇಶ
ರಾಜ್ಯ ಸರ್ಕಾರದ 2ಬಿ ಮೀಸಲಾತಿ ರದ್ದು ಆದೇಶವನ್ನು ಮುಂದಿನ ವಿಚಾರಣೆವರೆಗೆ ಜಾರಿಗೊಳಿಸದಂತೆ ಸುಪ್ರೀಂಕೋರ್ಟ್ ತಡೆ ನೀಡಿದೆ. ನ್ಯಾಯಾಲಯದ ಆದೇಶದಿಂದ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿದೆ.
ಸುಮಾರು ನಾಲ್ಕು ದಶಕಗಳಿಂದ ಮುಸ್ಲಿಮರಿಗೆ ಶೇ. 4ರಷ್ಟು ಮೀಸಲಾತಿ ನೀಡಲಾಗುತ್ತಿತ್ತು. ಆದರೆ, ಇತ್ತೀಚೆಗೆ ರಾಜ್ಯ ಸರ್ಕಾರ ಮುಸ್ಲಿಮರ ಮೀಸಲಾತಿ ಕಿತ್ತುಕೊಂಡು ಒಕ್ಕಲಿಗ ಮತ್ತು ಲಿಂಗಾಯತರಿಗೆ ತಲಾ ಶೇ. 2ರಷ್ಟು ಮೀಸಲಾತಿ ಹಂಚಿಕೆ ಮಾಡಿತ್ತು.
ಈ ಕುರಿತು ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ ಎಂ ಜೋಸೆಫ್ ಅವರ ನೇತೃತ್ವದ ಪೀಠ ರಾಜ್ಯ ಸರ್ಕಾರದ ಆದೇಶಕ್ಕೆ ತಡೆ ನೀಡಿದೆ.
ಮೀಸಲಾತಿ ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ಏಪ್ರಿಲ್ 13ರಂದು ನಡೆಸಿತ್ತು. ಆಗ, “ಮುಸ್ಲಿಮರ ಮೀಸಲಾತಿ ರದ್ದುಗೊಳಿಸಿರುವ ಕರ್ನಾಟಕ ರಾಜ್ಯ ಸರ್ಕಾರದ ನಿರ್ಧಾರವು ದೋಷ ಪೂರಿತ ಮತ್ತು ಪ್ರಮಾದದಿಂದ ಕೂಡಿದೆ” ಎಂದು ಹೇಳಿತ್ತು.
ಮಂಗಳವಾರದ ವಿಚಾರಣೆ ಮುಂದುವರಿಸಿದ ಸುಪ್ರೀಂ ಕೋರ್ಟ್ ಮೇ 9ಕ್ಕೆ ವಿಚಾರಣೆ ಮುಂದೂಡಿತು. ಅಲ್ಲಿಯವರೆಗೆ ಮೀಸಲಾತಿ ಜಾರಿಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ಈ ಸುದ್ದಿ ಓದಿದ್ದೀರಾ? ಬಿಜೆಪಿ ಅಭ್ಯರ್ಥಿ ನಾಮಪತ್ರ ರಕ್ಷಣೆಗೆ ನಿಯಮ ಉಲ್ಲಂಘಿಸಿದ ಆಯೋಗ; ರಮೇಶ್ ಬಾಬು ಆರೋಪ
ಮೀಸಲಾತಿ ಪರಿಷ್ಕರಣೆ ವೇಳೆ ಮುಸ್ಲಿಮರಿಗೆ ರಾಜ್ಯ ಸರ್ಕಾರ ಶೇ. 4ರ ಮೀಸಲಾತಿ ರದ್ದು ಮಾಡಿತ್ತು. ಸರ್ಕಾರದ ಈ ಆದೇಶ ಸಾಮಾಜಿಕ ವಲಯದಲ್ಲಿ ಹೆಚ್ಚು ಚರ್ಚೆಗೀಡಾಗಿತ್ತು. ಸುಪ್ರೀಂಕೋರ್ಟ್ ಆದೇಶದಿಂದಾಗಿ ಈಗ ಒಕ್ಕಲಿಗ ಮತ್ತು ಲಿಂಗಾಯತ ಮೀಸಲಾತಿ ಹೆಚ್ಚಳದ ಮೇಲೆ ಪರಿಣಾಮ ಬೀಳಲಿದೆ.