ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಹೆಚ್ಚಿಸಲು ಸುಪ್ರೀಂ ಕೋರ್ಟ್ ಅನ್ನು ವೇದಿಕೆಯನ್ನಾಗಿ ಬಳಸಬಾರದು. ಅಲ್ಲದೆ ನಾವು ಕಾನೂನು ಮತ್ತು ಸುವ್ಯವಸ್ಥೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ತಿಳಿಸಿದ್ದಾರೆ.
ಈಶಾನ್ಯ ರಾಜ್ಯದಲ್ಲಿ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ ನಡೆಯುತ್ತಿರುವ ಹಿಂಸಾಚಾರಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ಸಿಜೆಐ ಹಾಗೂ ನ್ಯಾಯಮೂರ್ತಿ ಪಿ ಎಸ್ ನರಸಿಂಹ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ತಿಳಿಸಿದೆ.
ಸುಪ್ರೀಂ ಕೋರ್ಟ್ ಕಾನೂನು ಮತ್ತು ಸುವ್ಯವಸ್ಥೆಯನ್ನು ನಡೆಸಲು ಸಾಧ್ಯವಿಲ್ಲ ಮತ್ತು ಹಾಗೆ ಮಾಡುವುದು ಚುನಾಯಿತ ಸರ್ಕಾರದ ಕೆಲಸವಾಗಿದೆ ಎಂದು ಕುಕಿ ಸಮುದಾಯವನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವಿಸ್ ಅವರು ಈಶಾನ್ಯ ರಾಜ್ಯದ ಪರಿಸ್ಥಿತಿಯನ್ನು ಹತೋಟಿಗೆ ತರಲು ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆಗೆ ಒತ್ತಾಯಿಸಬೇಕು ಎಂದು ಮನವಿ ಸಲ್ಲಿಸಿದಾಗ ತನ್ನ ಅಭಿಪ್ರಾಯ ತಿಳಿಸಿತು.
ಮಣಿಪುರದಲ್ಲಿ ಹಿಂಸಾಚಾರವನ್ನು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಪ್ರಚೋದಿಸುತ್ತಿದೆ. ಹಿಂಸಾಚಾರದಲ್ಲಿ ತೊಡಗಿರುವ ಸಶಸ್ತ್ರ ಗುಂಪುಗಳಿಗೆ ರಾಜ್ಯ ಸರ್ಕಾರ ಬೆಂಬಲ ನೀಡುತ್ತಿದೆ. ಇದು ಯುಎಪಿಎಯಲ್ಲಿ ಸೂಚಿಸಲಾದ ಸಶಸ್ತ್ರ ಗುಂಪುಗಳಿಂದ ತೀವ್ರ ಉಲ್ಬಣಗೊಳ್ಳುವ ಪ್ರಕರಣವಾಗಿದೆ. ಇವುಗಳನ್ನು ರಾಜ್ಯವು ಬಳಸುತ್ತಿದೆ ಎಂದು ಗೊನ್ಸಾಲ್ವಿಸ್ ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್, “ಹಿಂಸಾಚಾರವನ್ನು ಹೆಚ್ಚಿಸುವ ಅಥವಾ ತಗ್ಗಿಸುವ ವೇದಿಕೆ ಇದಲ್ಲ. ಸುಪ್ರೀಂ ಕೋರ್ಟ್‌ನ ಮಿತಿಯ ಬಗ್ಗೆ ನಾವು ಜಾಗೃತರಾಗಿರಬೇಕು. ನಾವು ಕಾನೂನು ಮತ್ತು ಸುವ್ಯವಸ್ಥೆಯನ್ನು ನಿರ್ವಹಿಸಲು ಸಾಧ್ಯವಿಲ್ಲ. ಚುನಾಯಿತ ಸರ್ಕಾರ ಇದನ್ನು ಮಾಡುತ್ತದೆ. ಇದು ಮಾನವೀಯತೆಯ ಬಿಕ್ಕಟ್ಟು. ಆದರೆ ನಾವು ಸಹ ಜಾಗೃತರಾಗಿದ್ದೇವೆ. ಇದನ್ನು ಪಕ್ಷಪಾತದ ವಿಷಯವಾಗಿ ನೋಡದೆ ಮಾನವೀಯ ಸಮಸ್ಯೆಯಾಗಿ ನೋಡಿ. ನಾವು ನಿಮ್ಮ ಭಾವನೆಗಳನ್ನು ಅರ್ಥಮಾಡಿಕೊಂಡಿದ್ದೇವೆ. ಆದರೆ ಈ ನ್ಯಾಯಾಲಯದ ಮುಂದೆ ವಾದಿಸಲು ಕೆಲವು ವಿಧಾನಗಳು ಇರಬೇಕು ಎಂದು ಅರ್ಜಿದಾರರಿಗೆ ‘ನಿರ್ದಿಷ್ಟ ಸಲಹೆಗಳೊಂದಿಗೆ’ ಮನವಿ ಸಲ್ಲಿಸಿ ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಯಾವಾಗ ಮದುವೆಯಾಗುತ್ತೀರಿ ಎಂದು ಕೇಳಿದ ಮೆಕ್ಯಾನಿಕ್‌ಗೆ ರಾಹುಲ್ ಗಾಂಧಿ ನೀಡಿದ ಉತ್ತರವೇನು ಗೊತ್ತಾ?
ರಾಜ್ಯದ ಪ್ರಸ್ತುತ ಪರಿಸ್ಥಿತಿಯ ಕುರಿತು ಮುಖ್ಯ ಕಾರ್ಯದರ್ಶಿ ಸಲ್ಲಿಸಿದ ಪ್ರಸ್ತುತ ವರದಿಯನ್ನು ನ್ಯಾಯಾಲಯವು ದಾಖಲಿಸಿತು. ಕಳೆದ ವಾರ, ಹಿಂಸಾಚಾರವನ್ನು ತಡೆಯಲು ಮತ್ತು ಸಂತ್ರಸ್ತರ ಪುನರ್ವಸತಿಗಾಗಿ ತೆಗೆದುಕೊಂಡ ಕ್ರಮಗಳ ಕುರಿತು ನವೀಕರಿಸಿದ ವರದಿಯನ್ನು ಸಲ್ಲಿಸುವಂತೆ ನ್ಯಾಯಾಲಯವು ರಾಜ್ಯ ಸರ್ಕಾರವನ್ನು ಕೇಳಿತ್ತು.
ಮಣಿಪುರ ಹೈಕೋರ್ಟ್ ಬಾರ್ ಅಸೋಸಿಯೇಷನ್‌ನ ಮನವಿಯನ್ನು ಪರಿಗಣಿಸಲು ನ್ಯಾಯಾಲಯವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಕೇಳಿದೆ.
ಜನಾಂಗೀಯ ಗುಂಪುಗಳ ನಡುವಿನ ಘರ್ಷಣೆಯಿಂದಾಗಿ ಮಣಿಪುರದಲ್ಲಿ ಕಳೆದ ಎರಡು ತಿಂಗಳಿನಿಂದ ಪರಿಸ್ಥಿತಿ ಉದ್ವಿಗ್ನವಾಗಿ 150 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ. ಸೋಮವಾರ(ಜುಲೈ 10), ಮಣಿಪುರದ ವೆಸರ್ ಕಾಂಗ್ಪೊಕ್ಪಿ ಪ್ರದೇಶದಲ್ಲಿ ರಾತ್ರಿಯ ಘರ್ಷಣೆಯಲ್ಲಿ ಒಬ್ಬ ಪೋಲೀಸರು ಸಾವನ್ನಪ್ಪಿದರು ಮತ್ತು 10 ಮಂದಿ ಗಾಯಗೊಂಡರು.