ಸ್ವಾಮೀಜಿಗಳು ಧರ್ಮ ರಾಜಕಾರಣವನ್ನು ಬೋಧಿಸಬಾರದು. ಧರ್ಮವನ್ನು ರಾಜಕೀಯದಲ್ಲಿ ತರಬಾರದು. ಸ್ವಾಮೀಜಿಗಳು ರಾಜಕೀಯದಿಂದ ಹೊರಗಿರಬೇಕು ಎಂದು ಬೆಳಗಾವಿ ಜಿಲ್ಲೆಯ ನಿಷ್ಕಾಲ ಮಠದ ನಿಜಗುಣಾನಂದ ಸ್ವಾಮೀಜಿ ಹೇಳಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, “ಲಿಂಗಾಯತ ಸ್ವಾಮೀಜಿಗಳು ಮಾತ್ರವಲ್ಲ ಮೌಲ್ವಿ, ಪಾದ್ರಿಗಳು ಸೇರಿದಂತೆ ಯಾವುದೇ ಧರ್ಮದ ನೇತಾರರು ರಾಜಕಾರಣದಲ್ಲಿ ಭಾಗಿಯಾಗಬಾರದು. ನಮ್ಮದೇನಿದ್ದರೂ ಧರ್ಮ, ಸಂಸ್ಕೃತಿ, ಸಂಸ್ಕಾರದ ವಿಚಾರವಾಗಿರಬೇಕು” ಎಂದರು.
“ಮಾಧ್ಯಮಗಳೂ ರಾಜಕಾರಣದ ಹೊರತಾಗಿಲ್ಲ. ಸಮಾಜದಲ್ಲಿ ಮಾಧ್ಯಮ ಮತ್ತು ಸ್ವಾಮೀಜಿಗಳ ಪಾತ್ರಗಳು ಸೋಲುತ್ತಿವೆ. ಮಠಾಧೀಶರು ರಾಜಕಾರಣಕ್ಕೆ ಬರಬಾರದು. ರಾಜಕಾರಣಿಗಳ ಓಲೈಕೆ ಮಾಡುವ ಕೆಲಸವನ್ನು ಸ್ವಾಮೀಜಿಗಳು ಮಾಡಬಾರದು” ಎಂದು ಹೇಳಿದರು.
“ರಾಜಕಾರಣಿಗಳ ಜೊತೆ ಮಾತನಾಡುವಾಗ ಸ್ವಾಮೀಜಿಗಳು ಎಚ್ಚರಿಕೆಯಿಂದ ಇರಬೇಕು. ಮಠಗಳಿಗೆ ಬರುವ ಅನುದಾನ ಪ್ರಜಾಪ್ರಭುತ್ವದ ತೆರಿಗೆ ಹಣವೇ ಆಗಿರುತ್ತದೆ. ಆದರೂ, ಪ್ರಜೆಗಳಿಗೆ ಮಠಗಳು ಸೇವೆ ಮಾಡುತ್ತವೆ” ಎಂದರು.