ಮುರುಘಾಶ್ರೀಗೆ ಜಾಮೀನು | ಸಂತ್ರಸ್ತ ಮಕ್ಕಳಿರುವ ಜಿಲ್ಲೆಗಳಲ್ಲಿ ಓಡಾಡಲು ಆರೋಪಿಗೆ ನಿರ್ಬಂಧವಿಲ್ಲ! ಇದು ಸರಿಯೇ?

Date:

ಆರೋಪಿ ಮುರುಘಾಶ್ರೀ ಪೋಕ್ಸೋ ಪ್ರಕರಣದಡಿ ಬಂಧನವಾದ ನಂತರ  ಮುರುಘಾ ಮಠದ ವಿದ್ಯಾರ್ಥಿನಿಲಯದಲ್ಲಿ ಆಶ್ರಯ ಪಡೆದಿದ್ದ ಎಲ್ಲ ವಿದ್ಯಾರ್ಥಿನಿಯರನ್ನುವಿವಿಧ ಜಿಲ್ಲೆಗಳ ವಸತಿ ಶಾಲೆಗಳಿಗೆ ದಾಖಲಿಸಲಾಗಿತ್ತು. ಆರೋಪಿಗೆ ಜಾಮೀನು ಸಿಕ್ಕಿರುವ ಕಾರಣ ಮಕ್ಕಳ ಪೋಷಕರು ಆತಂಕಕ್ಕೀಡಾಗುವ ಅಪಾಯವಿದೆ

 

ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ/ ಅತ್ಯಾಚಾರ ಎಸಗಿರುವ ಆರೋಪ ಎದುರಿಸುತ್ತಿರುವ, ಪೋಕ್ಸೋ ಪ್ರಕರಣದಲ್ಲಿ 2022 ಸೆ. 22ರಂದು ಬಂಧನಕ್ಕೊಳಗಾಗಿದ್ದ ಮುರುಘಾ ಮಠದ ಅಧ್ಯಕ್ಷ ಶಿವಮೂರ್ತಿ ಸ್ವಾಮಿ 2023 ಡಿಸೆಂಬರ್‌ 16ರಂದು ಚಿತ್ರದುರ್ಗದ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ತರಾತುರಿಯಲ್ಲಿ ಕೋರ್ಟಿನ ಮಧ್ಯಸ್ಥಿಕೆಯಲ್ಲಿಯೇ ಮಠದ ಅಧಿಕಾರವನ್ನೂ ಶಿವಮೂರ್ತಿಗೆ ಹಸ್ತಾಂತರಿಸುವ ಪ್ರಕ್ರಿಯೆಯೂ ನಡೆದಿದೆ.

ಅಧಿಕಾರ ವಾಪಸ್‌ ಆಗುತ್ತಿದ್ದಂತೆ ಎಸ್‌ಜೆಎಂ ವಿದ್ಯಾಪೀಠ ಮತ್ತು ಎಸ್‌ಜೆಎಂ ವಿದ್ಯಾಲಯದ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಉದ್ಯಮಿ ಮತ್ತು ಶಿವಮೂರ್ತಿಯವರ ಆಪ್ತರಾಗಿದ್ದ ಎಂ. ಭರತ್‌ ಅವರನ್ನು ಕರ್ತವ್ಯಗಳಿಂದ ಮುಕ್ತಗೊಳಿಸಿದ್ದಾರೆ. ಅವರು 2022ರ ಡಿಸೆಂಬರ್‌ 22ರಿಂದ ಅಧಿಕಾರ ವಹಿಸಿಕೊಂಡಿದ್ದರು. ಶಿವಮೂರ್ತಿ ಸ್ವಾಮಿ ಜೈಲಿನಲ್ಲಿದ್ದ ಸಮಯದಲ್ಲಿ ಯಾರಿಗೆಲ್ಲ ಮಠದ ಅಧಿಕಾರ / ಜವಾಬ್ದಾರಿ ವಹಿಸಲಾಗಿತ್ತೋ ಅವರನ್ನೆಲ್ಲ ಆ ಸ್ಥಾನದಿಂದ ಮುಕ್ತಗೊಳಿಸಿ ತಾನೇ ಮಠದ ಎಲ್ಲ ವ್ಯವಹಾರವನ್ನು ಕೈಗೆತ್ತಿಕೊಳ್ಳುವ ಆತುರದಲ್ಲಿದ್ದಾರೆ.

ಈಗ ಮೂಡಿರುವ ಕಾನೂನಾತ್ಮಕ ಪ್ರಶ್ನೆ ಏನೆಂದರೆ, ಪೋಕ್ಸೋ ಪ್ರಕರಣದ ಆರೋಪಿ ತನ್ನ ಊರನ್ನು ಮಾತ್ರ ಪ್ರವೇಶಿಸದೇ ಸಂತ್ರಸ್ತ ಮಕ್ಕಳು ಇರುವ ಊರಿಗಳಲ್ಲಿ ಓಡಾಡಬಹುದೇ?

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಚಿತ್ರದುರ್ಗದಲ್ಲಿ ಪ್ರಕರಣ ನಡೆದಿರುವ ಕಾರಣ, ಆರೋಪಿಗೆ ಆ ಜಿಲ್ಲೆಗೆ ಮಾತ್ರ ಪ್ರವೇಶಿಸದಂತೆ ಕೋರ್ಟ್‌ ನಿರ್ದೇಶನ ನೀಡಿದೆ. ಜಾಮೀನಿನ ಮೇಲೆ ಬಿಡುಗಡೆಗೊಂಡ ಸ್ವಾಮಿ ದಾವಣಗೆರೆಯ ವಿರಕ್ತ ಮಠಕ್ಕೆ ತೆರಳಿದ್ದರು. ಬೆಂಗಳೂರು, ಮೈಸೂರು ಸಹಿತ ಹಲವೆಡೆ ಮುರುಘಾ ಮಠದ ಶಾಖೆ, ಶಿಕ್ಷಣ ಸಂಸ್ಥೆ, ಹಾಸ್ಟೆಲ್‌, ವಾಣಿಜ್ಯ ಕಟ್ಟಡಗಳು ಇವೆ. ಅಲ್ಲೆಲ್ಲ ಓಡಾಡಲು ಆರೋಪಿಗೆ ಯಾವುದೇ ನಿರ್ಬಂಧವಿಲ್ಲ. ಇದು ಸಾಕ್ಷಿಗಳ ಮೇಲೆ ಒತ್ತಡ, ಪ್ರಭಾವ ಬೀರಲು ಅವಕಾಶ ಕೊಟ್ಟಂತಾಗುತ್ತದೆ ಎಂಬ ಆರೋಪ ಕೇಳಿ ಬಂದಿದೆ.

ಆರೋಪಿ ಮುರುಘಾಶ್ರೀ ಪೋಕ್ಸೋ ಪ್ರಕರಣದಡಿ ಬಂಧನವಾದ ನಂತರ ಸರ್ಕಾರವೇ ಮಧ್ಯಪ್ರವೇಶ ಮಾಡಿ ಮುರುಘಾ ಮಠದ ವಿದ್ಯಾರ್ಥಿನಿಲಯದಲ್ಲಿ ಆಶ್ರಯ ಪಡೆದಿದ್ದ ಎಲ್ಲ ವಿದ್ಯಾರ್ಥಿನಿಯರನ್ನು ರಾಜ್ಯದ ವಿವಿಧ ಜಿಲ್ಲೆಗಳ ವಸತಿ ಶಾಲೆಗಳಿಗೆ ದಾಖಲಿಸಲಾಗಿತ್ತು. ಹೀಗಿರುವಾಗ ಸಂತ್ರಸ್ತರೆಂದು ಹೇಳಿಕೊಂಡ ಮಕ್ಕಳು ಸೇರಿದಂತೆ ಚಿತ್ರದುರ್ಗ ಮಠದ ಹಾಸ್ಟೆಲ್‌ನಲ್ಲಿದ್ದ ಬಾಲಕಿಯರು ಬೇರೆ ಬೇರೆ ಜಿಲ್ಲೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಹೀಗಿರುವಾಗ ಪೋಕ್ಸೊದಂತಹ ಗಂಭೀರ ಪ್ರಕರಣದ ಆರೋಪಿಯನ್ನು ರಾಜ್ಯದಿಂದಲೇ ಗಡಿಪಾರು ಮಾಡಬೇಕಾಗುತ್ತದೆ ಎಂಬುದು ಮೈಸೂರಿನ “ಒಡನಾಡಿ” ನಿರ್ದೇಶಕ ಸ್ಟ್ಯಾನ್ಸಿ ಅವರ ಅಭಿಪ್ರಾಯ.

POCSO ಆರೋಪಿಗೆ ಮಠದ ಆಡಳಿತಾತ್ಮಕ ಮತ್ತು ಆರ್ಥಿಕ ಅಧಿಕಾರವನ್ನು ನೀಡುವುದರಿಂದ ನ್ಯಾಯಾಂಗ ಪ್ರಕ್ರಿಯೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಸಂತ್ರಸ್ತರ ನೈತಿಕ, ಮಾನಸಿಕ ಶಕ್ತಿಯನ್ನು ಕುಗ್ಗಿಸಬಹುದು. ಆದುದರಿಂದ ಕಾನೂನು ಪ್ರಕ್ರಿಯೆಯ ಹಿತದೃಷ್ಟಿಯಿಂದ ಮಠದ ಅಧಿಕಾರ ಚಲಾಯಿಸುವ ಹಕ್ಕನ್ನು ಆರೋಪಿಗೆ ಕೊಡಬಾರದು” ಎಂದು ಅವರು ಒತ್ತಾಯಿಸಿದ್ದಾರೆ.

ಆರೋಪಿಗೆ ನೀಡಿರುವ ಜಾಮೀನು ರದ್ದುಪಡಿಸಬೇಕು ಎಂದು ಒಡನಾಡಿ ಸಂಸ್ಥೆ ಈಗಾಗಲೇ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದೆ. ಅರ್ಜಿಯ ವಿಚಾರಣೆ ಇನ್ನಷ್ಟೇ ನಡೆಯಬೇಕಿದೆ.

ಈ ಬಗ್ಗೆ ಹೈಕೋರ್ಟ್‌ ವಕೀಲೆ ರಾಜಲಕ್ಷ್ಮಿ ಅಂಕಲಗಿ ಅವರು ಈದಿನ.ಕಾಮ್‌ ಜೊತೆಗೆ ಮಾತನಾಡಿ, “ಇದು ಗಂಭೀರ ಪ್ರಕರಣ. ಪೋಕ್ಸೋ ಆರೋಪಿಯಾಗಿರುವ ಶಿವಮೂರ್ತಿ ಸ್ವಾಮೀಜಿ ಬಹಳ ಪ್ರಭಾವಿ ವ್ಯಕ್ತಿ. ಆತ ಸ್ವತಃ ಹೋಗಿ ಒತ್ತಡ ಹೇರುವ ಅಗತ್ಯ ಇಲ್ಲ. ಆತನ ಅಸಂಖ್ಯಾತ ಭಕ್ತರು, ಬೆಂಬಲಿಗರು ಆ ಕೆಲಸ ಮಾಡಬಹುದು. ಈಗ ಆರೋಪಿ ಜಾಮೀನಿನ ಮೇಲೆ ಹೊರ ಬಂದಿರುವುದರಿಂದ ಬೇರೆ ಬೇರೆ ಜಿಲ್ಲೆಯ ವಸತಿ ಶಾಲೆಗಳಲ್ಲಿ ಆಶ್ರಯ ಪಡೆದಿರುವ ಬಾಲಕಿಯರು ಮತ್ತು ಅವರ ಪೋಷಕರಿಗೆ ಸಹಜವಾಗಿಯೇ ಭಯ, ಆತಂಕ ಉಂಟಾಗುತ್ತದೆ. ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಂತಹ ಮಕ್ಕಳ ಮತ್ತು ಅವರ ಹೆತ್ತವರ ಬೆಂಬಲಕ್ಕೆ ನಿಲ್ಲಬೇಕು. ಅವರಲ್ಲಿ ಧೈರ್ಯ ತುಂಬುವ ನಿಟ್ಟಿನಲ್ಲಿ ಕೌನ್ಸೆಲಿಂಗ್‌ ನಡೆಸುವ ಅಗತ್ಯ ಇದೆ” ಎಂದು ಹೇಳಿದರು.

ಪೋಕ್ಸೋ ಕಾಯ್ದೆಯ ಪ್ರಕಾರ, ಪ್ರಕರಣಗಳ ತನಿಖೆಯನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಬೇಕು. ಆದರೆ, ಬಹುತೇಕ ಪ್ರಕರಣಗಳಲ್ಲಿ ನ್ಯಾಯಾಲಯಗಳೇ ಈ ನಿಯಮವನ್ನು ಮೀರುತ್ತಿವೆ. ಮುರುಘಾ ಮಠದ ಪ್ರಕರಣ ಕೋರ್ಟ್‌ ಮೆಟ್ಟಿಲೇರಿ ಈಗಾಗಲೇ ಹದಿನಾಲ್ಕು ತಿಂಗಳು ಕಳೆದಿದೆ. ಇನ್ನೂ ವಿಚಾರಣೆಯೇ ಆರಂಭವಾಗಿಲ್ಲ. ಅಷ್ಟರಲ್ಲೇ ಎರಡೆರಡು ಪೋಕ್ಸೋ ಪ್ರಕರಣದಡಿ ಆರೋಪಿಗೆ ಜಾಮೀನು ಸಿಕ್ಕಿದೆ. ಇದು ದುರ್ಬಲ ವರ್ಗದವರಿಗೆ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಕಳೆಯುವಂತೆ ಮಾಡಿದೆ.

ಈ ಮಧ್ಯೆ ಮಠದ ಉಸ್ತುವಾರಿ ವಹಿಸಿಕೊಂಡಿದ್ದ ಬಸವಪ್ರಭು ಅವರ ಮೇಲೆ ಹಣ ದುರುಪಯೋಗದ ಆರೋಪವೂ ಕೇಳಿ ಬಂದಿದೆ. ಬೃಹನ್ಮಠದ ಖಾತೆಗೆ ಜಮೆ ಆಗಬೇಕಿದ್ದ ರೂ. 24 ಲಕ್ಷ ದುರುಪಯೋಗದ ಬಗ್ಗೆ ಆಡಳಿತಾಧಿಕಾರಿ ಬಸವಪ್ರಭು ಅವರಿಗೆ ನೋಟಿಸ್‌  ಜಾರಿ ಮಾಡಿದ್ದರು. “ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣದ ವಕೀಲರಿಗೆ ಸಂಭಾವನೆಯಾಗಿ ಆ ಹಣವನ್ನು ನೀಡಲಾಗಿದೆ” ಎಂದು ಬಸವಪ್ರಭು ಉತ್ತರಿಸಿದ್ದರು. ಆದರೆ ಉತ್ತರ ಸಮರ್ಪಕವಾಗಿಲ್ಲ ಎಂದು ಆಡಳಿತಾಧಿಕಾರಿ ನವೆಂಬರ್‌ ನಾಲ್ಕರಂದು ಅಂತಿಮ ನೋಟಿಸ್‌ ನೀಡಿ ತಕ್ಷಣ ಹಣವನ್ನು ಮಠದ ಖಾತೆಗೆ ಜಮೆ ಮಾಡಬೇಕು ಎಂದು ತಿಳಿಸಿದ್ದರು. ಅದಾಗಿ ಕೆಲವೇ ದಿನಗಳಲ್ಲಿ ಆರೋಪಿಗೆ ಜಾಮೀನು ಸಿಕ್ಕಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಹೇಮಾ ವೆಂಕಟ್‌
+ posts

ಮುಖ್ಯ ಉಪಸಂಪಾದಕರು
ಈ ದಿನ.ಕಾಮ್‌

ಪೋಸ್ಟ್ ಹಂಚಿಕೊಳ್ಳಿ:

ಹೇಮಾ ವೆಂಕಟ್‌
ಹೇಮಾ ವೆಂಕಟ್‌
ಮುಖ್ಯ ಉಪಸಂಪಾದಕರು ಈ ದಿನ.ಕಾಮ್‌

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಿಂದುತ್ವಕ್ಕೆ ಬಲಿಯಾದ ಕುಲಾಲ ಮತ್ತು ಸಣ್ಣ ಸಮುದಾಯಗಳ ಪ್ರಾತಿನಿಧ್ಯ!

ಬಿಜೆಪಿ ಮತ್ತು ಸಂಘಪರಿವಾರದಲ್ಲಿ ಕುಂಬಾರ/ಕುಲಾಲ್/ಮೂಲ್ಯ ಸಮುದಾಯಗಳ ಯುವಕರು ಇದ್ದರೂ ಅವರಿಗೆ ರಾಜಕೀಯ...

ಅಂಬೇಡ್ಕರ್ ವಿಶೇಷ | ಭಾರತೀಯರೆಲ್ಲರೂ ಗೌರವಿಸಲೇಬೇಕಾದ ಮೇರುವ್ಯಕ್ತಿತ್ವ- ಬಾಬಾ ಸಾಹೇಬ್ ಅಂಬೇಡ್ಕರ್

ಬಾಬಾ ಸಾಹೇಬ್ ಅವರಲ್ಲದೆ ಬೇರೆಯವರು ನಮ್ಮ ಸಂವಿಧಾನ ರಚಿಸಿದ್ದರೆ ಭಾರತ ಹೇಗಿರುತ್ತಿತ್ತು...

ಆನೆಗಳ ಕುರಿತ ಹೊಸ ನಿಯಮ, ಅನಂತ ಅಂಬಾನಿಯ ವನತಾರ ಮತ್ತು ಆನೆ ತಜ್ಞ ಪ್ರೊ. ರಾಮನ್‌ ಸುಕುಮಾರ್

‌ಆನೆಗಳ ಸಾಗಾಟ ಮತ್ತು ಸಾಕಾಣಿಕೆಗೆ ಸಂಬಂಧಿಸಿದ ಹೊಸ ನಿಯಮ(ಕ್ಯಾಪ್ಟಿವ್‌ ಎಲಿಫೆಂಟ್) ಮತ್ತು...

ಹಿಂದುತ್ವದಲ್ಲಿ ಬಂಟ, ಬಿಲ್ಲವರ ಬದುಕು-ಮರಣಕ್ಕೆ ಸಮಾನ ಗೌರವ ಸಿಕ್ಕಿತ್ತಾ ?

ಕೊಲೆ ಮಾಡುವ ತಲವಾರಿಗೆ ಬಂಟ-ಬಿಲ್ಲವ ಎಂಬುದು ಗೊತ್ತಾಗುತ್ತೋ ಇಲ್ವೋ ! ಬಂಟ-...