ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿ ಡಿ ಕೆ ಶಿವಕುಮಾರ್ ಅವರ ಪಾತ್ರವಿದೆ ಎಂದು ಕುಮಾರಸ್ವಾಮಿ ನೀಡುತ್ತಿರುವ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿರುವ ಕೃಷಿ ಸಚಿವ ಚೆಲುವರಾಯಸ್ವಾಮಿ, “ಈ ಪ್ರಕರಣದಲ್ಲಿ ವಿಡಿಯೋ ಮಾಡಿಕೊಂಡವರ ಕೃತ್ಯದ ಬಗ್ಗೆ ಮಾತನಾಡುವುದು ಬಿಟ್ಟು, ವಿಡಿಯೋ ಹಂಚಿಕೆಯ ಬಗ್ಗೆ ಮಾತನಾಡಲಾಗುತ್ತಿದೆ. ಇದರಲ್ಲಿ ಡಿ.ಕೆ.ಶಿವಕುಮಾರ್ ಅವರ ಮಧ್ಯ ಪ್ರವೇಶವಾಗಿಲ್ಲ” ಎಂದು ಕಿಡಿಕಾರಿದರು.
ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ನಡೆದ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, “ಈ ಹಗರಣದಲ್ಲಿ ಯಾವುದೇ ಕಾರಣಕ್ಕೂ ಡಿ.ಕೆ.ಶಿವಕುಮಾರ್ ಅವರು ಮಧ್ಯಪ್ರವೇಶ ಮಾಡಿಲ್ಲ. ನೂರಕ್ಕೆ ನೂರರಷ್ಟು ಈ ವಿಚಾರಕ್ಕೂ ಅವರಿಗೂ ಸಂಬಂಧವಿಲ್ಲ. ಅವರು ಟೀಕೆ ಮಾಡಿದ ಕಾರಣಕ್ಕೆ ಕೆಪಿಸಿಸಿ ಅಧ್ಯಕ್ಷರು ತಿರುಗೇಟು ನೀಡಿದ್ದಾರೆ. ಈ ವಿಚಾರಕ್ಕೂ ಮೊದಲೇ ಇಬ್ಬರ ನಡುವೆ ಟೀಕೆ, ಟಿಪ್ಪಣಿಗಳು ನಡೆದಿವೆ” ಎಂದು ತಿಳಿಸಿದ್ದಾರೆ.
“ಈ ಅನಾಚಾರವನ್ನು ಯಾರೋ ವಿಡಿಯೋ ಮಾಡಿದ್ದಲ್ಲ. ಸ್ವತಃ ಅವರೇ ಮಾಡಿಕೊಂಡಿರುವುದು. ಇದು ಹಾಸನದಲ್ಲಿಯೇ ಎಲ್ಲರಿಗೂ ಹಂಚಿಕೆಯಾಗಿದೆ. ಸಾಮಾಜಿಕ ಜಾಲತಾಣಗಳಿಗೆ ಸೋರಿಕೆಯಾದ ನಂತರ ಯಾವುದೂ ಸಹ ಯಾರ ಹಿಡಿತಕ್ಕೂ ಸಿಗುವುದಿಲ್ಲ. ವಿಚಾರ ಗಾಳಿಗೆ ಹೋದ ಮೇಲೆ ಯಾವ ದಿಕ್ಕಿಗೆ ಹೋಗುತ್ತದೆ ಎನ್ನುವುದು ಯಾರಿಗೂ ತಿಳಿಯಲ್ಲ” ಎಂದು ಸಚಿವ ಚೆಲುವರಾಯಸ್ವಾಮಿ ತಿಳಿಸಿದ್ದಾರೆ.
“ಸೂಕ್ಷ್ಮವಾದ ಇಂತಹ ವಿಚಾರವನ್ನು ಜನತಾದಳದವರು ಬೀದಿರಂಪ ಮಾಡುತ್ತಿದ್ದಾರೆ. ಯಾವ ವಿಚಾರಕ್ಕೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ. ಯಾವ ಸಾಧನೆ ಮಾಡಿದ್ದಾರೆ ಎಂದು ಪ್ರತಿಭಟನೆಗೆ ರಾಜ್ಯಾದ್ಯಂತ ಕರೆ ಕೊಟ್ಟಿದ್ದಾರೆ ಎಂದು ತಿಳಿದಿಲ್ಲ. ಈ ವಿಚಾರ ಬೇರೆ ದಿಕ್ಕಿಗೆ ಹೋಗಲಿ ಎಂದು ರಾಜಕೀಕರಣ ಮಾಡಲು ದಳದವರು ಹೊರಟಿದ್ದಾರೆ” ಎಂದು ಕುಮಾರಸ್ವಾಮಿಯವರಿಗೆ ತಿರುಗೇಟು ನೀಡಿದ್ದಾರೆ.
“ಡಿ.ಕೆ.ಶಿವಕುಮಾರ್ ಅವರನ್ನು ಸಂಪುಟದಿಂದ ವಜಾ ಮಾಡಲು, ತೆಗೆದುಹಾಕಲು ಕೋಳಿ ಮರಿಯೇ? ಸಿದ್ದರಾಮಯ್ಯ, ರಾಹುಲ್ ಗಾಂಧಿ ಅವರನ್ನು ಏಕವಚನದಲ್ಲಿ ಸಂಬೋಧಿಸುತ್ತಿದ್ದಾರೆ. ಅವರು ತಾವೇ ಉನ್ನತಮಟ್ಟದ ವ್ಯಕ್ತಿ ಎಂದುಕೊಂಡಿದ್ದಾರೆ. ಇಬ್ಬರ ನಡುವಿನ ದೂರವಾಣಿ ಸಂಭಾಷಣೆಯಲ್ಲಿ ಸಹ ಏನೂ ಇಲ್ಲ. ನಿನ್ನಿಂದ ಬಹಳ ಉಪಯೋಗವಾಗುತ್ತದೆ ಬಾ ಎಂದು ಹೇಳಿಲ್ಲ. ದೇವರಾಜೇಗೌಡ ಹಾಗೂ ಶಿವರಾಮೇಗೌಡ ಇಬ್ಬರೂ ಕೂಡ ಬಿಜೆಪಿ ನಾಯಕ ಆಗಿರುವ ಕಾರಣಕ್ಕೆ ಪೋನ್ ನೀಡಿದಾಗ ಮಾತನಾಡಿದ್ದಾರೆ. ಈ ವಿಚಾರದಲ್ಲಿ ಅವರ ಮಧ್ಯಪ್ರವೇಶವಾಗಿಲ್ಲ” ಎಂದು ಸಚಿವರು ತಿಳಿಸಿದ್ದಾರೆ.
“ಸಮಾಜವನ್ನು ಈ ವಿಚಾರದಲ್ಲಿ ಎಳೆದು ತರುವುದು ಒಳ್ಳೆಯದಲ್ಲ. ನಾವು, ನೀವು ಈ ಸಮಾಜಕ್ಕೆ ಕಟ್ಟಾಳುಗಳಲ್ಲ. ಸಂದರ್ಭ ಬಂದಾಗ ಸಮಾಜ ನಮ್ಮನ್ನು, ನಿಮ್ಮನ್ನು ಬೆಂಬಲಿಸುತ್ತದೆ. ಸಮಾಜವು ಒಂದಷ್ಟು ಜನರಿಗೆ ಹೆಚ್ಚು, ಕಡಿಮೆ ಆಶೀರ್ವಾದ ಮಾಡಿರಬಹುದು. ಆದರೆ ಎಲ್ಲವೂ ನಮ್ಮದೇ ಹಿಡಿತದಲ್ಲಿ ಇದೆ ಎಂದು ಭಾವಿಸುವುದು ತಪ್ಪು. ಒಕ್ಕಲಿಗ ಸಮುದಾಯದವರು ನಮಗೂ, ನಿಮಗೂ ಆಶೀರ್ವಾದ ಮಾಡಿದ್ದಾರೆ” ಎಂದು ಚೆಲುವರಾಯಸ್ವಾಮಿ ತಿಳಿಸಿದ್ದಾರೆ.
“ನೀವು ಅಂದರೆ ಒಕ್ಕಲಿಗರು, ಒಕ್ಕಲಿಗರು ಎಂದರೆ ನೀವು. ನೀವು ಏನು ಮಾಡಿದರೂ ಒಕ್ಕಲಿಗರು ಬೆಂಬಲಕ್ಕೆ ನಿಲ್ಲುತ್ತಾರೆ ಎಂದುಕೊಂಡಿದ್ದೀರಿ. ಕೆಂಪೇಗೌಡರು, ಕುವೆಂಪು ಅವರು ಹುಟ್ಟಿದ ಸಮುದಾಯ ಇದು. ಎಲ್ಲಾ ಜನಾಂಗದವರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಶಕ್ತಿ ಈ ಸಮುದಾಯಕ್ಕೆ ಇದೆ. ಈ ಸಮಾಜಕ್ಕೆ ತನ್ನದೇ ಆದ ಗೌರವಿದೆ ಎನ್ನುವುದನ್ನು ಮರೆಯಬಾರದು” ಎಂದು ಕುಮಾರಸ್ವಾಮಿಯವರಿಗೆ ಕೃಷಿ ಸಚಿವರು ಕಿವಿಮಾತು ಹೇಳಿದ್ದಾರೆ.
“ಮೊದಲು ಏಕವಚನದಲ್ಲಿ ಮಾತನಾಡುವುದು, ಗದರಿಸಿ ಮಾತನಾಡುವುದನ್ನು ನಿಲ್ಲಿಸಬೇಕು. ನಿಮಗಿಂತ ಚೆನ್ನಾಗಿ ಏಕವಚನದಲ್ಲಿ ಮಾತನಾಡಲು ನಮಗೆ ಸಾಧ್ಯವಾಗುತ್ತದೆ. ಆದರೆ ನಾವು ಟಿವಿ ಮುಂದೆ ಕುಳಿತಾಗ ಈ ಮಾತುಗಳನ್ನು ಕೇಳಲು ಸಾಧ್ಯವಾಗದ ಕಾರಣ ಬಳಸುವುದಿಲ್ಲ. ನಿಮಗೆ ಏನು ಅನ್ನಿಸುತ್ತದೆಯೋ ತಿಳಿದಿಲ್ಲ. ಮುಖ್ಯಮಂತ್ರಿ ಮತ್ತು ಡಿಸಿಎಂ ವಿಚಾರದಲ್ಲಿ ಲಘುವಾಗಿ ಮಾತನಾಡುವುದು ಖಂಡನೀಯ. ಶ್ರೇಯಸ್ ಪಟೇಲ್ ಕಾರು ಚಾಲಕನ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಇರುವ ನಮ್ಮ ಜೊತೆ ನೂರಾರು ಜನ ಫೋಟೋ ತೆಗೆಸಿಕೊಳ್ಳುತ್ತಿರುತ್ತಾರೆ. ಅವರ ಪೂರ್ವಾಪರ ತಿಳಿದುಕೊಂಡು ಪೋಟೋ ತೆಗೆಸಿಕೊಳ್ಳಲು ಆಗುತ್ತದೆಯೇ?” ಎಂದು ಚೆಲುವರಾಯಸ್ವಾಮಿ ಪ್ರಶ್ನಿಸಿದ್ದಾರೆ.
ಇದನ್ನು ಓದಿದ್ದೀರಾ? ಮಂಗಳೂರು | ಮೆಡಿಕಲ್ ಕಾಲೇಜು ವಿದ್ಯಾರ್ಥಿನಿಯರ ಟಾಯ್ಲೆಟ್‌ನಲ್ಲಿ ಮೊಬೈಲ್ ಇಟ್ಟು ಚಿತ್ರೀಕರಣಕ್ಕೆ ಯತ್ನ: ಅಪ್ರಾಪ್ತನ ಬಂಧನ
“ಎಸ್‌ಐಟಿ ವ್ಯವಸ್ಥೆ ಸರಿಯಿಲ್ಲ ಅವರ ಮೇಲೆ ನಮಗೆ ನಂಬಿಕೆ ಇಲ್ಲ ಎಂದು ಜನತಾದಳದ ಮಿತ್ರರು ಹೇಳುತ್ತಿದ್ದಾರೆ. ಇನ್ನೂ ತನಿಖೆಯ ಪ್ರಾರಂಭದಲ್ಲೇ ತನಿಖೆ ಸರಿ ಇಲ್ಲ ಎನ್ನುವುದು ಎಷ್ಟು ಸರಿ? ಇಡೀ ಕರ್ನಾಟಕ, ಕನ್ನಡಿಗರು ತಲೆ ತಗ್ಗಿಸುವ ವಿಚಾರ. ನೂರಾರು ಸಂಸಾರಗಳು ತಲೆ ತಗ್ಗಿಸಬೇಕಾಗಿದೆ. ತನಿಖೆ ಒಂದು ಹಂತಕ್ಕೆ ಹೋಗುವ ತನಕ ಬೀದಿಗೆ ಬಂದು ಮಾತನಾಡುವ ವಿಚಾರ ಇದಲ್ಲ” ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ತಿಳಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ ಚಂದ್ರಶೇಖರ್, ಎಐಸಿಸಿ ಸಂಶೋಧನಾ ವಿಭಾಗದ ಅಧ್ಯಕ್ಷ ರಾಜೀವ್ ಗೌಡ, ಶಾಸಕರಾದ ರಮೇಶ್ ಬಾಬು ಬಂಡ್ಢಿಸಿದ್ದೇಗೌಡ, ಗಣಿಗ ರವಿಕುಮಾರ್, ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು, ಕೆಪಿಸಿಸಿ ವಕ್ತಾರರೆ ಶ್ರೀಮತಿ ತೇಜಶ್ವಿನಿ ರಮೇಶ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿಜಯ್ ಮುಳಗುಂದ್ ಭಾಗವಹಿಸಿದ್ದರು.
