ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ರಾಜ್ಯದ ಸ್ವಾಯತ್ತತೆಯನ್ನು ಕಾಪಾಡುವ ಗುರಿಯನ್ನು ಹೊಂದಿರುವ ಉನ್ನತ ಮಟ್ಟದ ಸಮಿತಿಯನ್ನು ರಚಿಸುವುದಾಗಿ ಘೋಷಿಸಿದ್ದಾರೆ. ನಿವೃತ್ತ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ನೇತೃತ್ವದ ಸಮಿತಿ ಇದಾಗಿದೆ.
ರಾಜ್ಯದ ಹಕ್ಕುಗಳು ಮತ್ತು ಕೇಂದ್ರ ಸರ್ಕಾರದೊಂದಿಗಿನ ಸಂಬಂಧಗಳನ್ನು ಹೆಚ್ಚಿಸಲು ಕ್ರಮಗಳನ್ನು ಶಿಫಾರಸು ಮಾಡುವ ಹೊಣೆ ಈ ಸಮಿತಿಯದ್ದಾಗಿದೆ. 2026ರ ಜನವರಿಯೊಳಗೆ ಮಧ್ಯಂತರ ವರದಿ ಸಲ್ಲಿಸುವ ನಿರೀಕ್ಷೆಯಿದೆ. 2028ರ ಒಳಗಾಗಿ ಅಂತಿಮ ವರದಿ ಸಲ್ಲಿಸಲಿದೆ. “ತಮಿಳುನಾಡು ಸೇರಿದಂತೆ ಎಲ್ಲಾ ರಾಜ್ಯಗಳ ಹಕ್ಕುಗಳನ್ನು ರಕ್ಷಿಸುವುದು ಇದರ ಗುರಿಯಾಗಿದೆ” ಎಂದು ಸ್ಟಾಲಿನ್ ವಿಧಾನಸಭೆಗೆ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ತಮಿಳುನಾಡು | ನೀಟ್ ರದ್ದುಗೊಳಿಸುವ ಭರವಸೆ ನೀಡಿದ ಸಿಎಂ ಎಂ ಕೆ ಸ್ಟಾಲಿನ್
ತಮಿಳುನಾಡಿನ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ನಂತಹ ಶಿಕ್ಷಣ ನೀತಿಗಳ ಕುರಿತು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದೊಂದಿಗೆ ನಿರಂತರ ಸಂಘರ್ಷ ನಡೆಸುತ್ತಿದೆ. ಜೊತೆಗೆ ರಾಷ್ಟ್ರೀಯ ಶಿಕ್ಷಣ ನೀತಿಯಡಿಯಲ್ಲಿ ತ್ರಿಭಾಷಾ ನೀತಿಯನ್ನು ತಮಿಳುನಾಡು ಸರ್ಕಾರ ನಿರಂತರವಾಗಿ ವಿರೋಧಿಸುತ್ತಿದೆ. ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ವಿರುದ್ಧ ಹಲವು ರಾಜ್ಯಗಳು ಆಕ್ರೋಶ ವ್ಯಕ್ತಪಡಿಸಿದೆ. ಈ ನಡುವೆ ರಾಜ್ಯ ಸ್ವಾಯತ್ತತೆಯನ್ನು ಕಾಪಾಡುವ ಕುರಿತಾದ ವರದಿ ನಿರ್ಣಾಯಕವಾಗಿದೆ.
ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಅವರು ರಾಜ್ಯ ಮಸೂದೆಗಳನ್ನು ಅಂಗೀಕರಿಸದೆ ವಿಳಂಬ ಮಾಡುವ ಮೂಲಕ ತಮ್ಮ ಅಧಿಕಾರದ ದುರ್ಬಳಕೆ ಮಾಡಿದ್ದಾರೆ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಟೀಕಿಸಿದೆ. ನ್ಯಾಯಾಲಯವು ರಾಜ್ಯಪಾಲರ ಕ್ರಮವನ್ನು ಕಾನೂನುಬಾಹಿರ ಎಂದು ಹೇಳಿದೆ. ಇದು ಮಾತ್ರವಲ್ಲದೇ ಕೇಂದ್ರದೊಂದಿಗೆ ಹಲವು ವಿಚಾರಗಳಲ್ಲಿ ತಮಿಳುನಾಡು ಸರ್ಕಾರ ವಾಕ್ಸಮರ ಮುಂದುವರೆಸಿದೆ.
ಹೊಸ ಶಿಕ್ಷಣ ನೀತಿಯನ್ನು ಜಾರಿ ಮಾಡದಿದ್ದರೆ ತಮಿಳುನಾಡು ಸರ್ಕಾರಕ್ಕೆ ನೀಡಬೇಕಾದ ನಿಧಿಯನ್ನು ಬಿಡುಗಡೆ ಮಾಡಲಾರೆವು ಎಂಬ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿಕೆಯೂ ಸ್ಟಾಲಿನ್ ಸರ್ಕಾರವನ್ನು ಕೆರಳಿಸಿದೆ. ಆದರೆ ಬಿಜೆಪಿ ಮಾತ್ರ ನಮ್ಮ ಸರ್ಕಾರ ಈ ರೀತಿ ಬೆದರಿಕೆ ಹಾಕಿಲ್ಲ ಎಂದು ಹೇಳಿಕೊಳ್ಳುತ್ತಲೇ ಇದೆ. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ರಾಜ್ಯ ಸ್ವಾಯತ್ತತೆಯನ್ನು ಕಾಪಾಡಲು ಉನ್ನತ ಮಟ್ಟದ ಸಮಿತಿ ರಚಿಸಲು ಸ್ಟಾಲಿನ್ ಮುಂದಾಗಿದ್ದಾರೆ.
