ಚೆನ್ನೈನ 19 ವರ್ಷದ ಎಂಬಿಬಿಎಸ್ ಆಕಾಂಕ್ಷಿಯೊಬ್ಬ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ (ನೀಟ್) ಪ್ರವೇಶ ಪಡೆಯಲು ವಿಫಲರಾದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಕೆಲವೇ ದಿನಗಳ ಬಳಿಕ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ನೀಟ್ ಅನ್ನು ರದ್ದುಗೊಳಿಸುವುದಾಗಿ ವಿದ್ಯಾರ್ಥಿಗಳಿಗೆ ಭರವಸೆ ನೀಡಿದ್ದಾರೆ.
ಯಾವುದೇ ರೀತಿಯ ಆತ್ಮಹತ್ಯಾ ಪ್ರವೃತ್ತಿಯನ್ನು ಬೆಳೆಸಿಕೊಳ್ಳದೆ ಆತ್ಮಸ್ಥೈರ್ಯದಿಂದ ಜೀವನವನ್ನು ಎದುರಿಸಬೇಕು ಎಂದು ಸ್ಟಾಲಿನ್ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ್ದಾರೆ.
“ಯಾವುದೇ ಸಂದರ್ಭದಲ್ಲೂ ಯಾವುದೇ ವಿದ್ಯಾರ್ಥಿಗಳು ತಮ್ಮ ಪ್ರಾಣವನ್ನು ಕಳೆದುಕೊಳ್ಳುವ ನಿರ್ಧಾರವನ್ನು ತೆಗೆದುಕೊಳ್ಳಬಾರದು ಎಂದು ನಾನು ಮನವಿ ಮಾಡುತ್ತೇನೆ. ನಿಮ್ಮ ಬೆಳವಣಿಗೆಗೆ ಅಡ್ಡಿಯಾಗಿರುವ ನೀಟ್ ಅನ್ನು ರದ್ದುಗೊಳಿಸಲಾಗುವುದು. ರಾಜ್ಯ ಸರಕಾರವು ಈ ನಿಟ್ಟಿನಲ್ಲಿ ಕಾನೂನು ಉಪಕ್ರಮದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ” ಎಂದು ಎಂ ಕೆ ಸ್ಟಾಲಿನ್ ತಿಳಿಸಿದ್ದಾರೆ.
19 ವರ್ಷದ ವೈದ್ಯಕೀಯ ಆಕಾಂಕ್ಷಿ ಜಗದೀಶ್ವರನ್ ಚೆನ್ನೈನಲ್ಲಿ ಎರಡು ಬಾರಿ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಂತರ ಆತನ ತಂದೆ ಸೆಲ್ವಂ ಕೂಡ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಇದು ಹುಸಿ ದೇಶಭಕ್ತರ ಮೋದಿ ಕಾಲ; ಗಾಂಧಿ ಅವಮಾನಿಸುವ ಕಾಲ
ರಾಜ್ಯಪಾಲ ಆರ್ ಎನ್ ರವಿ ವಿರುದ್ಧ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ, ರಾಜಕೀಯ ಬದಲಾವಣೆಗಳು ನಡೆದಾಗ ಕೆಲವೇ ತಿಂಗಳಲ್ಲಿ ನೀಟ್ ತಡೆಗೋಡೆ ಕುಸಿಯಲಿದೆ ಎಂದು ಹೇಳಿದ್ದಾರೆ.
“ನೀಟ್ ತೇರ್ಗಡೆಯಾದವರು ಹಣವಿದ್ದರೆ ವೈದ್ಯಕೀಯ ಕಾಲೇಜಿಗೆ ಸೇರುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಹಣವಿದ್ದವರಿಗೆ ಮಾತ್ರ ವೈದ್ಯಕೀಯ ಶಿಕ್ಷಣ ಎಂಬಂತಾಗಿದೆ. ಹೀಗಿದ್ದರೂ ರಾಜ್ಯ ಸರಕಾರವು ಸರಕಾರಿ ಶಾಲೆಗಳ ಬಡ ವಿದ್ಯಾರ್ಥಿಗಳಿಗೆ ವೈದ್ಯಕೀಯ ಕಾಲೇಜುಗಳಲ್ಲಿ ಶೇ.7.5ರಷ್ಟು ಮೀಸಲಾತಿಯನ್ನು ಜಾರಿಗೆ ತಂದಿದೆ. ಆದರೆ, ರಾಜ್ಯಪಾಲರು ಇದನ್ನು ಅರ್ಥಮಾಡಿಕೊಳ್ಳಲು ನಿರಾಕರಿಸುತ್ತಿದ್ದಾರೆ. ಅವರು ಕೋಚಿಂಗ್ ಸೆಂಟರ್‌ಗಳ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂಬ ಅನುಮಾನವಿದೆ” ಎಂದು ಸ್ಟಾಲಿನ್ ಆರೋಪಿಸಿದ್ದಾರೆ.
“ತಮಿಳುನಾಡು ಸರ್ಕಾರ ನೀಟ್ ರದ್ದುಗೊಳಿಸುವ ನಿರ್ಣಯವನ್ನು ರಾಜ್ಯಪಾಲರು ಮೊದಲು ಹಿಂತಿರುಗಿಸಿದ್ದರು. ಎರಡನೇ ಬಾರಿ ಕಳುಹಿಸಿದ್ದ ನಿರ್ಣಯವನ್ನು ರಾಷ್ಟ್ರಪತಿಗಳ ಒಪ್ಪಿಗೆಗಾಗಿ ಕಳುಹಿಸಿದರು. ರಾಜ್ಯಪಾಲರು ಈ ಮಸೂದೆಯನ್ನು ಸ್ಥಗಿತಗೊಳಿಸಬೇಕೆಂದು ಬಯಸುತ್ತಿರುವಂತೆ ತೋರುತ್ತಿದೆ. ಅವರ ಅಪೇಕ್ಷೆ ಶ್ರೀಮಂತರು ಮಾತ್ರ ವೈದ್ಯಕೀಯ ಶಿಕ್ಷಣ ಪಡೆಯುವುದಾಗಿದೆ” ಎಂದು ಮುಖ್ಯಮಂತ್ರಿ ಹೇಳಿದರು.
ಸ್ವಾತಂತ್ರ್ಯ ದಿನದ ಟೀ ಕೂಟಕ್ಕೆ ಬಹಿಷ್ಕಾರ
ರಾಜ್ಯಪಾಲ ಆರ್ ಎನ್ ರವಿ ಅವರ ನೀಟ್ ಪರ ನಿಲುವನ್ನು ಕಟುವಾಗಿ ಖಂಡಿಸಿರುವ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು, ಸ್ವಾತಂತ್ರ್ಯ ದಿನದಂದು ಅವರು ಆಯೋಜಿಸುವ ಟೀ ಪಾರ್ಟಿಯನ್ನು ತಮ್ಮ ಸರ್ಕಾರ ಬಹಿಷ್ಕರಿಸುವುದಾಗಿ ತಿಳಿಸಿದ್ದಾರೆ.