ಈ ದಿನ ವಿಶೇಷ | ತಮಿಳುನಾಡಿನ ರಾಜಕಾರಣದಲ್ಲಿ ಧೂಳೆಬ್ಬಿಸಲಿದ್ದಾರೆಯೇ ದಳಪತಿ ವಿಜಯ್?

Date:

Advertisements
ರಾಜಕಾರಣಕ್ಕೆ ಧುಮುಕುತ್ತಿರುವ ದಳಪತಿ ವಿಜಯ್, ರಾಜಕಾರಣದಲ್ಲಿ ಗಟ್ಟಿಯಾಗಿ ನೆಲೆಯೂರುವ ಸೂಚನೆಗಳನ್ನು ನೀಡುತ್ತಿದ್ದಾರೆ. ಅದಕ್ಕೆ ಕಾರಣ ಅವರ ಚಿಂತನೆ ಮತ್ತು ಮುಂದಾಲೋಚನೆ. ಇವರು ಕೂಡ ಸಿನೆಮಾಗಳಿಂದ ಗಳಿಸಿದ ಅಭಿಮಾನಿಗಳು ಮತ್ತು ಜನಪ್ರಿಯತೆಯನ್ನು ಗುರಾಣಿಯನ್ನಾಗಿ ಬಳಸುತ್ತಿದ್ದರೂ, ರಾಜಕಾರಣದಲ್ಲಿ ಮೂಲಭೂತ ಬದಲಾವಣೆ ತರುವುದು ನನ್ನ ಮುಖ್ಯ ಉದ್ದೇಶ ಎಂದಿರುವುದು ಹೆಚ್ಚು ಚರ್ಚೆಯಾಗುತ್ತಿದೆ.  

‘ಅಣ್ಣ ವರಾರ್… ವಳಿ ವಿಡು'(ಅಣ್ಣ ಬರ್ತಿದಾರೆ, ದಾರಿ ಬಿಡು)- ಇದು ಸೆಪ್ಟೆಂಬರ್ 5ರಂದು ಬಿಡುಗಡೆಯಾಗಲಿರುವ ತಮಿಳು ಸೂಪರ್ ಸ್ಟಾರ್ ವಿಜಯ್ ಅವರ ‘ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್’ ಅಥವಾ ‘ಗೋಟ್’ ಚಿತ್ರದ ಟ್ರೈಲರ್‌ನಲ್ಲಿ ಬಳಸಿರುವ ಘೋಷ ವಾಕ್ಯ.

ಇದು ಮುಂಬರುವ ಚಿತ್ರದ ಘೋಷವಾಕ್ಯವಾದರೂ, ಚಿತ್ರದ ಮುಖಾಂತರವೇ ರಾಜಕಾರಣಿಗಳಿಗೆ ‘ಅಣ್ಣ ಬರ್ತಿದಾರೆ, ದಾರಿ ಬಿಡು’ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಅದಕ್ಕೆ ಪೂರಕವಾಗಿ ವಿಜಯ್ ಆ. 22ರಂದು ಚೆನ್ನೈನಲ್ಲಿ ತಮ್ಮ ʼತಮಿಳಗ ವೆಟ್ರಿ ಕಳಗಂʼ(TVK) ರಾಜಕೀಯ ಪಕ್ಷದ ಧ್ವಜವನ್ನು ಅನಾವರಣಗೊಳಿಸಿದ್ದಾರೆ. ಆ ಧ್ವಜವನ್ನು ಒಂದು ರಾಜಕೀಯ ಪಕ್ಷದ ಧ್ವಜವನ್ನಾಗಿಸದೆ, ಅದರಲ್ಲಿಯೂ ಕೆಲವು ವಿಶೇಷತೆಗಳಿರುವಂತೆ ನೋಡಿಕೊಂಡಿದ್ದಾರೆ.

ತಮಿಳುನಾಡಿನ ಎರಡು ದ್ರಾವಿಡ ಪಕ್ಷ- ಡಿಎಂಕೆ ಮತ್ತು ಎಐಡಿಎಂಕೆಗಳೊಂದಿಗೆ ಸಾಂಪ್ರದಾಯಿಕವಾಗಿ ಸಂಬಂಧ ಹೊಂದಿರುವ ಕಪ್ಪು ಬಣ್ಣವನ್ನು ಬಿಟ್ಟು, ಕೆಂಪು ಮತ್ತು ಹಳದಿ ಬಣ್ಣಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಧ್ವಜದಲ್ಲಿ ಯುದ್ಧಕ್ಕೆ ಸಜ್ಜಾಗಿ ನಿಂತ ಎರಡು ಆನೆಗಳು, ಅವುಗಳ ನಡುವೆ ಒಂದು ಹೂವು ಇದೆ. ಆನೆಗಳು ಶಕ್ತಿಯ ಸಂಕೇತವಾದರೆ, ಅವುಗಳ ನಡುವಿನ ವಾಗೈ ಹೂವು, ಗೆಲುವಿನ ಸಂತೇಕವಾಗಿದೆ. ಇತಿಹಾಸದಲ್ಲಿ ಸಂಗಂ ಸಾಮ್ರಾಜ್ಯದಲ್ಲಿ ಯುದ್ಧದಲ್ಲಿ ಗೆದ್ದು ಬಂದ ಸಂಗಂ ರಾಜರು ಹಾರವಾಗಿ ಈ ವಾಗೈ ಹೂವುಗಳನ್ನು ಧರಿಸಿ ಸಂಭ್ರಮಿಸುತ್ತಿದ್ದರಂತೆ. ಈ ಹೂವು ಸಂಗಂ ರಾಜರ ವಿಜಯದ ಸಂಕೇತವಂತೆ. ಅದನ್ನೇ ಚುನಾವಣೆಯನ್ನು ಗೆಲ್ಲುವ ಉದ್ದೇಶದಿಂದ, ವಿಜಯದ ಸಂಕೇತವಾಗಿ ಧ್ವಜಕ್ಕೆ ದಳಪತಿ ವಿಜಯ್ ಉಪಯೋಗಿಸಿಕೊಂಡಿದ್ದಾರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

Advertisements
vij

ತಮಿಳು ಚಿತ್ರರಂಗದಲ್ಲಿ ಬಾಲನಟ, ಹಿನ್ನೆಲೆ ಗಾಯಕ, ನಾಯಕನಟನಾಗಿ ಕಳೆದ ಮೂರು ದಶಕಗಳಿಂದ ಸಂಚಲನ ಉಂಟು ಮಾಡಿರುವ ವಿಜಯ್ ಇಲ್ಲಿಯವರೆಗೆ 65 ಚಿತ್ರಗಳಲ್ಲಿ ನಟಿಸಿದ್ದಾರೆ. ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹಣ ಗಳಿಕೆಯಲ್ಲಿ ದಾಖಲೆ ನಿರ್ಮಿಸಿದ ಸಿನೆಮಾಗಳಲ್ಲಿ ನಟಿಸಿದ ನಟ ಎಂಬುದೂ ಇವರ ಹೆಸರಿನಲ್ಲಿದೆ. ಜೊತೆಗೆ ತಮಿಳುನಾಡಿನಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿ ಸಂಘಗಳನ್ನು ಹೊಂದಿರುವ, ಅದರಲ್ಲೂ ಯುವ ಪೀಳಿಗೆ- 10ರಿಂದ 30ರ ವಯೋಮಾನದವರನ್ನು ಹೆಚ್ಚು ಆಕರ್ಷಿಸುವ ನಟ ಎಂಬ ಹೆಗ್ಗಳಿಕೆ ವಿಜಯ್ ಪಾಲಿಗಿದೆ. ಹಾಗೆಯೇ ವಿಜಯ್ ಆಯ್ಕೆ ಮಾಡಿಕೊಳ್ಳುವ ಪಾತ್ರಗಳೆಲ್ಲ 18 ವರ್ಷದ ಯುವಕನದು. ಸುಂದರಿಯ ಹಿಂದೆ ಬೀಳುವ ಪ್ರೇಮಿ, ರೊಮ್ಯಾನ್ಸ್, ಡಾನ್ಸ್, ಫೈಟಿಂಗ್‌ಗಳ ಮೂಲಕ ಯುವಜನತೆಯ ಎದೆಬಡಿತ ಹೆಚ್ಚಿಸಿದರೆ, ಹಾಸ್ಯ ಹಾಗೂ ಮರ್ಯಾದಸ್ಥ ಕುಟುಂಬದ ಕುಡಿಯಂತೆಯೂ ನಟಿಸಿ ಎಲ್ಲರ ಮನ ಗೆದ್ದವರು. ಆ ಮೂಲಕ ಅಭಿಮಾನಿಗಳಲ್ಲಿ ʼಇದ್ದರೆ ಹಾಗಿರಬೇಕುʼ ಎನಿಸಿಕೊಂಡವರು.    

ಇಂತಹ ನಟನ ಮುಂದಿನ ಚಿತ್ರ ʼಗೋಟ್ʼ ಸೆಪ್ಟೆಂಬರ್ ಮೊದಲ ವಾರದಲ್ಲಿ ಬಿಡುಗಡೆಯಾಗಲಿದೆ. ಆನಂತರ, ಅದೇ ತಿಂಗಳ ಮೂರನೇ ವಾರದಲ್ಲಿ ಭಾರಿ ದೊಡ್ಡ ಮಟ್ಟದಲ್ಲಿ ರಾಜಕೀಯ ಸಮಾವೇಶವನ್ನು ಏರ್ಪಡಿಸುವ ಚಿಂತನೆಯನ್ನೂ ಹೊರಹಾಕಿದ್ದಾರೆ. ಅಂದರೆ, ತಮಿಳುನಾಡಿನ ರಾಜಕಾರಣಕ್ಕೆ ದಳಪತಿ ಅಧಿಕೃತವಾಗಿ ಧುಮುಕುತ್ತಿದ್ದಾರೆ. ಹಾಗೆಯೇ 2026ರಲ್ಲಿ ನಡೆಯಲಿರುವ ತಮಿಳುನಾಡಿನ ವಿಧಾನಸಭಾ ಚುನಾವಣೆಗೆ ಬೇಕಾದ ಪೂರ್ವತಯಾರಿಯನ್ನೂ ಮಾಡಿಕೊಳ್ಳುತ್ತಿದ್ದಾರೆ.

ತಮಿಳುನಾಡಿನ ಜನಜೀವನವನ್ನು, ಭಾಷಾಭಿಮಾನವನ್ನು, ಅತಿರೇಕಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ಅಲ್ಲಿನ ಜನರ ನರನಾಡಿಗಳಲ್ಲಿ ಸಿನೆಮಾ ಬೆರೆತುಹೋಗಿರುವುದಕ್ಕೆ ಪುರಾವೆ ಸಿಗುತ್ತದೆ. ಚಿತ್ರರಂಗದ ನಟನಟಿಯರು ಜನನಾಯಕರಾಗಿ ಹೊರಹೊಮ್ಮಿರುವುದು, ರಾಜಕಾರಣಕ್ಕೆ ಬಂದು ರಾಜ್ಯವನ್ನು ಆಳಿರುವುದು ಎದ್ದು ಕಾಣುತ್ತದೆ. 10 ವರ್ಷ ಮುಖ್ಯಮಂತ್ರಿಯಾಗಿ ಮೆರೆದ ಜನಪ್ರಿಯ ನಟ ಎಂಜಿಆರ್ ತಮಿಳರ ಆರಾದ್ಯದೈವವೇ ಆಗಿಹೋಗಿದ್ದಾರೆ. ಹಾಗೆಯೇ 14 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಆಳಿದ ನಟಿ ಜಯಲಲಿತಾ ತಮಿಳರ ʼಅಮ್ಮʼನಾಗಿ ಚರಿತ್ರೆಯ ಪುಟಗಳಲ್ಲಿ ದಾಖಲಾಗಿದ್ದಾರೆ. ಇವರಿಬ್ಬರಿಗೂ ಮೊದಲೇ ಸಿನೆಮಾ ಕ್ಷೇತ್ರದಿಂದ ರಾಜಕಾರಣಕ್ಕಿಳಿದು, 19 ವರ್ಷಗಳ ಕಾಲ ತಮಿಳುನಾಡನ್ನು ಆಳಿದ ಕರುಣಾನಿಧಿ, ಶೂದ್ರ ಸಂಕೇತವಾಗಿ-ದ್ರಾವಿಡ ಅಸ್ಮಿತೆಯಾಗಿ ಅಜರಾಮರರಾಗಿದ್ದಾರೆ. ಕರುಣಾನಿಧಿಯನ್ನು ರಾಜಕಾರಣಕ್ಕೆ ಕರೆತಂದ ಅಣ್ಣಾ ದೊರೈ, ತಮಿಳುನಾಡಿನಲ್ಲಿ ದ್ರಾವಿಡ ಯುಗಪ್ರವರ್ತಕರಾಗಿ ದಾಖಲಾಗಿದ್ದಾರೆ.

ಇವರ ಮುಂದುವರೆದ ಭಾಗವಾಗಿ, ನಟ ಟಿ. ರಾಜೇಂದರ್, ಶಿವಾಜಿ ಗಣೇಶನ್, ವಿಜಯಕಾಂತ್, ಶರತ್‌ ಕುಮಾರ್‌, ನೆಪೋಲಿಯನ್‌, ಕರುಣಾಸ್‌, ರಜನಿಕಾಂತ್, ಕಮಲ್ ಹಾಸನ್‌ರಂತಹ ಜನಪ್ರಿಯ ನಟರು ತಮ್ಮದೇ ಪಕ್ಷ ಕಟ್ಟಿ ಅಥವಾ ಈಗಾಗಲೇ ಇರುವ ಪಕ್ಷದೊಂದಿಗೆ ಗುರುತಿಸಿಕೊಂಡು ರಾಜಕಾರಣದ ಏಳು-ಬೀಳುಗಳನ್ನು ಕಂಡುಂಡಿದ್ದಾರೆ. ಉತ್ತರ ಭಾರತದಿಂದ ಬಂದ ನಟಿ ಖುಷ್ಬು, ತಮಿಳರೇ ಆಗಿಹೋಗಿದ್ದಾರೆ. ನಾಯಕನಟಿಯಿಂದ ಹಿನ್ನೆಲೆಗೆ ಸರಿಯುತ್ತಿದ್ದಂತೆ, 2020ರಂದು ಭಾರತೀಯ ಜನತಾ ಪಕ್ಷಕ್ಕೆ ಸೇರಿ, ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದಾರೆ. 

ಇವರೆಲ್ಲರಿಗಿಂತ ಭಿನ್ನವಾಗಿ, ಈಗ ರಾಜಕಾರಣಕ್ಕೆ ಧುಮುಕುತ್ತಿರುವ ದಳಪತಿ ವಿಜಯ್, ರಾಜಕಾರಣದಲ್ಲಿ ಗಟ್ಟಿಯಾಗಿ ನೆಲೆಯೂರುವ ಸೂಚನೆಗಳನ್ನು ನೀಡುತ್ತಿದ್ದಾರೆ. ಅದಕ್ಕೆ ಕಾರಣ ಅವರ ಚಿಂತನೆ ಮತ್ತು ಮುಂದಾಲೋಚನೆ. ಇವರು ಕೂಡ ಸಿನೆಮಾಗಳಿಂದ ಗಳಿಸಿದ ಅಭಿಮಾನಿಗಳು ಮತ್ತು ಜನಪ್ರಿಯತೆಯನ್ನು ಗುರಾಣಿಯನ್ನಾಗಿ ಬಳಸುತ್ತಿದ್ದರೂ, ರಾಜಕಾರಣದಲ್ಲಿ ಮೂಲಭೂತ ಬದಲಾವಣೆ ತರುವುದು ನನ್ನ ಮುಖ್ಯ ಉದ್ದೇಶ ಎಂದಿರುವುದು, ಗಂಭೀರವಾಗಿ ಪರಿಗಣಿಸುವಂತೆ ಮಾಡಿದೆ. ತಮಿಳುನಾಡಿನ ಜನರಲ್ಲಿ ನಂಬಿಕೆ ಹುಟ್ಟಿಸುತ್ತಿದೆ. ರಜನಿ, ಕಮಲ್‌ಗಿಂತ ಭಿನ್ನ ಎನಿಸತೊಡಗಿದೆ. 

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಮೋದಿಯವರನ್ನು ಮಾತಿನಿಂದಲೇ ತಿವಿದ ರಾಹುಲ್‌; ಕಾಶ್ಮೀರದಲ್ಲಿ ಪ್ರೀತಿಯ ಅಂಗಡಿ ತೆರೆಯುವರೇ?

ಸಿನೆಮಾ ಹಿನ್ನೆಲೆಯಿಂದ ರಾಜಕಾರಣಕ್ಕೆ ಬಂದ ಅಣ್ಣಾ ದೊರೈ, ಕರುಣಾನಿಧಿ, ಎಂಜಿಆರ್ ಮತ್ತು ಜಯಲಲಿತಾ ಅವರು ಗೆದ್ದಿದ್ದಾರೆ. ಜನನಾಯಕರಾಗಿ ಹೊರಹೊಮ್ಮಿ ತಮಿಳುನಾಡಿನ ಮುಖ್ಯಮಂತ್ರಿಗಳಾಗಿ ಜನಮಾನಸದಲ್ಲಿ ನೆಲೆಯಾಗಿದ್ದಾರೆ. ಹಾಗೆಯೇ ಶಿವಾಜಿ, ವಿಜಯಕಾಂತ್, ರಜನಿ, ಕಮಲ್ ಅವರು ಸೋತಿದ್ದಾರೆ. ಅದರಲ್ಲೂ ತಮಿಳುನಾಡಿನ ಜನ ಮತ್ತು ದೇಶದ ಪ್ರಜ್ಞಾವಂತರು ಕಮಲ್‌ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದರು. ಕಮಲ್ ಹಾಸನ್ ಇನ್ನೂರಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದವರು. ತಮಿಳುನಾಡಿನ ಗಡಿಯನ್ನೂ ದಾಟಿ ಬೇರೆ ಭಾಷೆಗಳಲ್ಲೂ ಹೆಸರು ಗಳಿಸಿದವರು. ಅವರ ಚಲನಚಿತ್ರಗಳು ವಿಮರ್ಶಕರ ಮನಗೆದ್ದಿವೆ ಮತ್ತು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸನ್ನು ಗಳಿಸಿವೆ. ಇಂತಹ ಜನಪ್ರಿಯ ನಟ 2018ರಲ್ಲಿ, ತಮ್ಮದೇ ಆದ ರಾಜಕೀಯ ಪಕ್ಷವಾದ ʼಮಕ್ಕಳ್ ನೀಧಿ ಮೈಯಂʼ(MNM) ಅನ್ನು ಆರಂಭಿಸಿದರು. ಅವರ ಸ್ಟಾರ್‌ಡಮ್ ಹೊರತಾಗಿಯೂ, ಪಕ್ಷವು 2019ರ ಲೋಕಸಭೆ ಚುನಾವಣೆಯಲ್ಲಿ ಮತ್ತು 2021ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ ಪ್ರತಿಯೊಂದು ಸ್ಥಾನವನ್ನು ಕಳೆದುಕೊಂಡಿತು.

ಹಾಗೆಯೇ 2018ರಲ್ಲಿ ರಜಿನಿಕಾಂತ್ ʼಮಕ್ಕಳ್ ಮನ್ರಾಮ್ʼ ರಚನೆಯ ಪ್ರಯೋಗವು ಮುನ್ನೆಲೆಗೆ ಬಂದಿತ್ತು. 2021ರಲ್ಲಿ ಪಕ್ಷವು ಯಾವುದೇ ಚುನಾವಣೆಗೆ ಸ್ಪರ್ಧಿಸಲಿಲ್ಲ ಮತ್ತು ಅದರ ಕಾರ್ಯಾಚರಣೆಯನ್ನು ಮುಂದುವರೆಸಲಿಲ್ಲ. ಕೊನೆಗೊಂದು ದಿನ ರಾಜಕಾರಣ ನನಗಲ್ಲ ಎಂದು ಹಿಂದೆ ಸರಿದದ್ದೂ ಆಯಿತು. ಹಾಗಾಗಿ ಕಮಲ್‌ ಮತ್ತು ರಜನಿ ಅವರು ದೇಶವೇ ಮೆಚ್ಚುವ ಸೂಪರ್‌ ಸ್ಟಾರ್‌ಗಳಾದರೂ, ತಮಿಳಿಗರ ನಾಡಿಮಿಡಿತ ಅರಿಯುವಲ್ಲಿ ವಿಫಲರಾದರು. ಜೊತೆಗೆ ತಮಿಳುನಾಡಿನ ಮತದಾರರು ಚಿತ್ರರಂಗದ ವ್ಯಕ್ತಿಗಳನ್ನು ಬೆಂಬಲಿಸುವಲ್ಲಿ ಸಾಕಷ್ಟು ವಿವೇಚನೆಯನ್ನು ತೋರಿಸಿದರು ಮತ್ತು ನಟರಾದ ರಜನಿ ಮತ್ತು ಕಮಲ್ ಅವರನ್ನು ರಾಜಕೀಯ ನಾಯಕರು ಎಂದು ಒಪ್ಪದೆ ತಿರಸ್ಕರಿಸಿದರು.

ಸಿನೆಮಾ ಜಗತ್ತಿನ ಜನ ರಾಜಕಾರಣದಲ್ಲಿ ಉಳಿದ-ಅಳಿದ ಎರಡೂ ಉದಾಹರಣೆಗಳು ವಿಜಯ್ ಅವರ ಕಣ್ಣಮುಂದಿವೆ. ಎರಡೂ ಅಧ್ಯಯನಯೋಗ್ಯವಾಗಿವೆ. ಎರಡರಿಂದಲೂ ವಿಜಯ್ ಪಾಠ ಕಲಿಯುವುದಿದೆ. ಹಾಗೆಯೇ ಅಧಿಕಾರದ ರುಚಿಯುಂಡ ವೃತ್ತಿವಂತ ರಾಜಕಾರಣಿಗಳು, ದಳಪತಿ ವಿಜಯ್‌ರನ್ನು ರಾಜಕಾರಣದಲ್ಲಿ ನೆಲೆಯೂರಲು ಬಿಡುತ್ತಾರೆಯೇ ಎನ್ನುವ ಪ್ರಶ್ನೆಯೂ ಇದೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ವಿಜಯ್‌ಗೆ ಈಗಿನ್ನೂ 50 ವರ್ಷ. ಜೊತೆಗೆ ಓಡಾಡುವ ಉತ್ಸಾಹ ಮತ್ತು ಆರೋಗ್ಯವಿದೆ. ಸಿನೆಮಾ ಮತ್ತು ಟಿವಿ- ಎರಡನ್ನೂ ಒಟ್ಟೊಟ್ಟಿಗೇ ಮ್ಯಾನೇಜ್‌ ಮಾಡುವ ಬುದ್ಧಿ ಇದೆ. ಈಗಲೂ ಚಾಲ್ತಿಯಲ್ಲಿರುವುದರಿಂದ ಇವರ ಹೆಚ್ಚಿನ ಅಭಿಮಾನಿಗಳು ಯುವಕರೇ ಆಗಿದ್ದಾರೆ. ಹಾಗೆಯೇ ಚಿತ್ರಬದುಕಿನ ಉತ್ತುಂಗದಲ್ಲಿರುವಾಗಲೇ ಮತ್ತೊಂದು ಮಜಲಿಗೆ- ರಾಜಕಾರಣಕ್ಕೆ ಹೊರಳುತ್ತಿದ್ದಾರೆ. ಹಾಗಾಗಿ ತಮಿಳುನಾಡಿನ ಜನರಲ್ಲಿ ನಿವೃತ್ತಿಯ ನಂತರ ರಾಜಕಾರಣವನ್ನು ಆಯ್ಕೆ ಮಾಡಿಕೊಂಡರು, ಎನ್ನುವ ಪ್ರಶ್ನೆ ಉದ್ಬವಿಸುವುದಿಲ್ಲ.

ಇಷ್ಟಲ್ಲದೆ, ವಿಜಯ್ ಸ್ಥಾಪಿಸಿರುವ ಎನ್‌ಜಿಒ- ಅಗತ್ಯವಿರುವವರಿಗೆ ವೈದ್ಯಕೀಯ ನೆರವು, ಕಾನೂನು ನೆರವು ಮತ್ತು ಮಕ್ಕಳ ಗ್ರಂಥಾಲಯಗಳಿಗೆ ಸಹಾಯ ಮಾಡುವಂತಹ ಶ್ಲಾಘನೀಯ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದೆ. ಇವುಗಳ ನಡುವೆಯೇ ವಿಜಯ್‌ರ ಟಿವಿಕೆ ಪಕ್ಷ 2021ರಲ್ಲಿ ನಡೆದ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಿ 129 ಸ್ಥಾನಗಳನ್ನು ಗೆದ್ದಿದೆ. ವಿಜಯ್ ಜನಪ್ರಿಯ ನಟನಾಗಿಯೂ, ಸಮಾಜ ಸೇವಕನಾಗಿಯೂ ತಮಿಳುನಾಡಿನ ಜನರ ಹೃದಯವನ್ನು ನಿಧಾನವಾಗಿ ಆವರಿಸಿಕೊಳ್ಳುತ್ತಿದ್ದಾರೆ.

ಈಗ ಎದುರಾಗಿರುವ ಪ್ರಶ್ನೆ ಎಂದರೆ, ತಮಿಳುನಾಡಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ನೆಲೆ ಇಲ್ಲ. ಸ್ಪರ್ಧೆ ಇರುವುದು ಡಿಎಂಕೆ ಮತ್ತು ಎಐಡಿಎಂಕೆಗಳ ನಡುವೆ ಮಾತ್ರ. ಅವೆರಡೂ ಪ್ರಾದೇಶಿಕ ಪಕ್ಷಗಳಾಗಿದ್ದು, ದ್ರಾವಿಡ ಸಿದ್ಧಾಂತವನ್ನು ಅಳವಡಿಸಿಕೊಂಡಿವೆ. ವಿಜಯ್ ಪಕ್ಷವೂ ಪ್ರಾದೇಶಿಕ ಅಸ್ಮಿತೆಯ ಪರವಿದ್ದು, ದ್ರಾವಿಡ ಸಿದ್ಧಾಂತವನ್ನು ಅಳವಡಿಸಿಕೊಂಡಿದೆ. ಜೊತೆಗೆ ಹಿಂದಿ ಮತ್ತು ಮೋದಿಯ ವಿರುದ್ಧವಿದೆ. ಇವೆಲ್ಲವುಗಳ ನಡುವೆಯೇ ಚಿತ್ರನಿರ್ದೇಶಕ ಸೀಮನ್, ʼನಾಮ್ ತಮಿಳರ್ ಕಚ್ಚಿʼ(NTK) ಎಂಬ ರಾಜಕೀಯ ಪಕ್ಷ ಕಟ್ಟಿ, ತಮಿಳು ಭಾಷೆ, ಅಸ್ತಿತ್ವ ಮತ್ತು ಸಂಸ್ಕೃತಿಗಾಗಿ ಹೋರಾಡುವುದಾಗಿ ಘೋಷಿಸಿದ್ದಾರೆ.  

ತಮಿಳುನಾಡಿನ ರಾಜಕೀಯ ಕ್ಷೇತ್ರದಲ್ಲಿ ಆಗುತ್ತಿರುವ ಈ ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿರುವ ಮುಖ್ಯಮಂತ್ರಿ ಸ್ಟಾಲಿನ್, ಮಗ ಉದಯನಿಧಿ ಸ್ಟಾಲಿನ್‌ರನ್ನು ಮುನ್ನೆಲೆಗೆ ತರುತ್ತಿದ್ದಾರೆ. 2026ರ ಚುನಾವಣೆಗೆ ಬೇಕಾದ ವೇದಿಕೆ ಸಜ್ಜುಗೊಳಿಸುತ್ತಿದ್ದಾರೆ. ಸ್ಟಾಲಿನ್‌ ಆಪ್ತರು, ಉದಯನಿಧಿಯನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದರೂ ಆಶ್ಚರ್ಯವಿಲ್ಲ ಎನ್ನುತ್ತಿದ್ದಾರೆ. ಇವುಗಳ ನಡುವೆ, 2026ರ ಚುನಾವಣೆಯಲ್ಲಿ ಡಿಎಂಕೆಗೆ ಆಡಳಿತವಿರೋಧಿ ಅಲೆ ಎದುರಾಗಬಹುದು. ಅದರ ಲಾಭ ಯಾರಿಗೆ ಎನ್ನುವುದು ತಮಿಳುನಾಡಿನ ಬಹುಮುಖ್ಯ ಚರ್ಚೆಯಾಗಿದೆ. ಡಿಎಂಕೆ- ನಾವೇ ಮತ್ತೊಮ್ಮೆ ಗೆಲ್ಲುತ್ತೇವೆ ಎನ್ನುತ್ತಿದೆ. ಎಐಡಿಎಂಕೆ- ನಾವು ಅಧಿಕಾರಕ್ಕೇರುತ್ತೇವೆ ಎನ್ನುತ್ತಿದ್ದಾರೆ. ಇವರ ನಡುವೆ ದಳಪತಿ ವಿಜಯ್, ರಾಜಕಾರಣವನ್ನು ಗಂಭೀರವಾಗಿ ಪರಿಗಣಿಸಿ ಮುಂದಿನ ಚುನಾವಣೆಯಲ್ಲಿ ಪೂರ್ಣಪ್ರಮಾಣದಲ್ಲಿ ಕಣಕ್ಕಿಳಿಯಲು ಸಿದ್ಧರಾಗಿ ನಿಂತಿದ್ದಾರೆ. ಜೊತೆಗೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಾಜಿ ಪೊಲೀಸ್ ಅಧಿಕಾರಿ ಅಣ್ಣಾಮಲೈ ಅವರನ್ನು ಮುಂದಿಟ್ಟುಕೊಂಡು ತಮಿಳುನಾಡಿನಲ್ಲಿ ನೆಲೆಯೂರಲು ತವಕಿಸುತ್ತಿದೆ.  

333 4

ಒಟ್ಟಾರೆ, 2026ರ ವಿಧಾನಸಭಾ ಚುನಾವಣೆಗೆ ಈಗಲೇ ರಂಗ ಸಜ್ಜಾಗುತ್ತಿದೆ. ಉದಯನಿಧಿ, ದಳಪತಿ ವಿಜಯ್, ಅಣ್ಣಾಮಲೈಗಳಂತಹ ಯುವಕರು ಒಂದು ಕಡೆ; ಸ್ಟಾಲಿನ್, ಪಳನಿಸಾಮಿ, ಪನಿರ್‌ ಸೆಲ್ವಂ, ವೈಕೋ, ಟಿ.ಆರ್.‌ ಬಾಲು, ಸಸಿಕಲಾ, ಸೀಮನ್‌ರಂಥ ಹಿರಿಯರು ಮತ್ತೊಂದು ಕಡೆ. ತಮಿಳುನಾಡಿನ ಜನರ ಚಿತ್ತ ಎತ್ತ ಎನ್ನುವುದನ್ನು ಕಾದು ನೋಡಬೇಕಿದೆ.

ಇವುಗಳ ನಡುವೆಯೇ ತಮಿಳುನಾಡಿನ ಜನ ಮತ್ತು ರಾಜಕಾರಣಿಗಳಿಂದ ನಾವು ಕಲಿಯಬೇಕಾದ್ದು ಬೇಕಾದಷ್ಟಿದೆ. ಅದರಲ್ಲೂ ಭಾಷೆಯ ಬಗೆಗಿನ ಅವರ ಅಪರಿಮಿತ ಅಭಿಮಾನ, ಕೇಂದ್ರದ ಹಿಂದಿ ಹೇರಿಕೆ ವಿರುದ್ಧದ ಒಗ್ಗಟ್ಟು, ಕಾವೇರಿ ನೀರಿಗಾಗಿ ಅಧಿಕಾರವನ್ನೇ ಪಣಕ್ಕಿಟ್ಟು ಹೋರಾಡುವ ಬದ್ಧತೆಯನ್ನು ಮೆಚ್ಚಲೇಬೇಕಿದೆ. ಅದೆಲ್ಲಕ್ಕಿಂತ ಮುಖ್ಯವಾಗಿ ಮೇಲ್ಜಾತಿಯ ವೈದಿಕರ ವಿರುದ್ಧ ದ್ರಾವಿಡ ಅಸ್ಮಿತೆಯನ್ನು ಬಲಿಷ್ಠಗೊಳಿಸಿ, ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ತಮಿಳುನಾಡಿನಲ್ಲಿ ನೆಲೆಯೂರದಂತೆ ನೋಡಿಕೊಂಡಿದ್ದು, ಅಧ್ಯಯನಯೋಗ್ಯವಾಗಿದೆ.

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

1 COMMENT

  1. ಉತ್ತಮ ಲೇಖನ.ತಮಿಳು ರಾಜಕಾರಣ ಕುರಿತು ಸವಿಸ್ತಾರವಾದ ಮಾತುಗಳು .

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X