ಅಮೆರಿಕದ ಖಜಾನೆ ಇಲಾಖೆಯ $720 ಬಿಲಿಯನ್ ಬಾಂಡ್‌ಗಳನ್ನು ಚೀನಾ ಖರೀದಿಸಿ, ಅಮೆರಿಕದ ಆರ್ಥಿಕ ಸ್ವಾತಂತ್ರ್ಯವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ. ಇತರ ದೇಶಗಳಿಗೆ ಸುಂಕ ಜಾರಿಯನ್ನು 90 ದಿನಗಳವರೆಗೆ ಮುಂದೂಡಿರುವ ಅಮೆರಿಕ, ಚೀನಾಕ್ಕೆ ವಿನಾಯಿತಿ ನೀಡಿಲ್ಲ. ಆದರೆ ಚೀನಾ 'ನಾವು ಬಗ್ಗುವವರಲ್ಲ, ಹೆದರುವವರೂ ಅಲ್ಲ' ಎಂದು ಅಮೆರಿಕಕ್ಕೆ ಸೆಡ್ಡು ಹೊಡೆದಿದೆ.
ಅಮೆರಿಕ-ಚೀನಾ ನಡುವಿನ ಸುಂಕ ಸಮರ ತಾರಕಕ್ಕೇರಿದೆ. ಪ್ರಪಂಚದ ಯಾವ ದೇಶಗಳೂ ಇಲ್ಲಿಯವರೆಗೆ ಕಂಡು ಕೇಳಿರದಿದ್ದ ಸುಂಕವನ್ನು ಅಮೆರಿಕ ಇತರ ದೇಶಗಳ ಸರಕುಗಳ ಮೇಲೆ ವಿಧಿಸುತ್ತಿದೆ. ಕೆಲ ಸಣ್ಣಪುಟ್ಟ ದೇಶಗಳು ದೊಡ್ಡಣ್ಣನ ಸುಂಕಕ್ಕೆ ಹೆದರಿ ತಲೆಬಾಗಿವೆ. ಮಾತುಕತೆಗೆ ಮುಂದಾಗಿವೆ. ಆದರೆ, ಅಮೆರಿಕದ ದ್ವೇಷದ ಶೇ.145ರಷ್ಟು ಸುಂಕಕ್ಕೆ ಪ್ರತಿಯಾಗಿ ಚೀನಾ ಕೂಡ ಶೇ.84ರಷ್ಟು ಸುಂಕ ವಿಧಿಸಿದೆ. ದೊಡ್ಡಣ್ಣನ ಸುಂಕಕ್ಕೆ ಹೆದರುವುದಿಲ್ಲ, ಮಾತುಕತೆಗೂ ಮುಂದಾಗುವುದಿಲ್ಲ ಎಂದು ಖಡಾಖಂಡಿತವಾಗಿ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.
ಇದರಿಂದ ಕೆರಳಿರುವ ಅಮೆರಿಕ, ಚೀನಾ ಮತ್ತೆ ಸುಂಕ ಏರಿಕೆ ಮಾಡಿದರೆ ಅತ್ಯಂತ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಧಮ್ಕಿ ಹಾಕಿದೆ. ಮುಂದುವರೆದು, ‘ಚೀನಾ ಮತ್ತೆ ಸುಂಕ ದರ ಏರಿಕೆ ಮಾಡುವ ಧೈರ್ಯ ತೋರಬಾರದು, ಒಂದು ವೇಳೆ ಹಾಗೆ ಮಾಡಿದರೆ ಈ ಬಾರಿ ಮತ್ತೆಂದೂ ಚೇತರಿಸಿಕೊಳ್ಳದಂತೆ ಹೊಡೆತ ನೀಡಲಾಗುವುದು…’ ಎಂದು ವೈಟ್‌ಹೌಸ್ ಎಚ್ಚರಿಕೆ ನೀಡಿದೆ.
ಇದು ಜಾಗತಿಕ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿದೆ. ಅಮೆರಿಕ ಎಂಬ ದೊಡ್ಡಣ್ಣನ ಆರ್ಭಟ ಎಂಬಂತೆ ಬಿಂಬಿಸಲಾಗಿದೆ. ಆದರೆ ವಸ್ತುಸ್ಥಿತಿ ಹಾಗಿಲ್ಲ. ಅಮೆರಿಕ ಆಂತರಿಕವಾಗಿ ದಿವಾಳಿಯ ಅಂಚಿನಲ್ಲಿದೆ. ಡಾಲರ್ ಡೋಲಾಯಮಾನ ಸ್ಥಿತಿಯಲ್ಲಿದೆ. ಆರ್ಥಿಕವಾಗಿ ಕುಸಿತ ಕಾಣತೊಡಗಿದೆ. ಅದು ಷೇರುಪೇಟೆಯ ಏರಿಳಿತಗಳಲ್ಲಿ ನಿಚ್ಚಳವಾಗಿ ಕಾಣುತ್ತಿದೆ.
ಜಾಗತಿಕ ಷೇರುಪೇಟೆಯ ಈ ಏರಿಳಿತದಲ್ಲೂ ಟ್ರಂಪ್ ಮ್ಯಾನುಪುಲೇಷನ್ ಇದೆ ಎಂದು ಹೇಳಲಾಗುತ್ತಿದೆ. ಟ್ರಂಪ್ ಷೇರು ಮಾರುಕಟ್ಟೆಯಲ್ಲಿ ಕೃತಕ ಸಂಕಷ್ಟ ಸೃಷ್ಟಿಸಲು ಈ ಎಲ್ಲ ಪ್ರಕ್ರಿಯೆ ಆರಂಭಿಸಿದ್ದಾರೆ ಎಂಬ ಸಂಶಯ ವ್ಯಕ್ತವಾಗುತ್ತಿದೆ. ಷೇರು ಬೆಲೆಗಳು ಕುಸಿದಾಗ ಅವರ ಆಪ್ತರು ಅದನ್ನು ಕಡಿಮೆ ಬೆಲೆಗೆ ಖರೀದಿಸಿ, ನಂತರ ನೀತಿ ಬದಲಾವಣೆ ಮಾಡಿ ಮತ್ತೆ ಮಾರುಕಟ್ಟೆ ಏರಿಸಿ ಲಾಭ ಗಳಿಸುವ ಯೋಜನೆ ಇರಬಹುದು ಎನ್ನಲಾಗುತ್ತಿದೆ.
ಇದು ನಿಜವಾಗಿದ್ದರೆ, ಪ್ರಪಂಚದ ಜನರು ಮೋಸ ಹೋಗಿದ್ದಾರೆಂದು ಅರ್ಥ. ಆದರೆ ಷೇರು ಮಾರುಕಟ್ಟೆಯ ವಿಷಯ ಸಂಕೀರ್ಣವಾಗಿದೆ. ಟ್ರಂಪ್ ಮಾರುಕಟ್ಟೆಯನ್ನು ಕುಸಿಯುವಂತೆ ಮಾಡಿ ತಮ್ಮ ಸ್ನೇಹಿತರಿಗೆ ಲಾಭವಾಗುವಂತೆ ಮಾಡಿದ್ದಾರೆ ಎಂದು ಸುಲಭವಾಗಿ ಸಾಬೀತು ಮಾಡಲಾಗುವುದಿಲ್ಲ. ಮಾರುಕಟ್ಟೆ ಕುಸಿದಿತ್ತು, ಏಪ್ರಿಲ್ 10ರಂದು ವಿಶ್ವದಾದ್ಯಂತ ಸುಧಾರಣೆ ಕಂಡಿತು. ಆದರೆ ಅಂಕಿಅಂಶಗಳನ್ನು ನೋಡಿದರೆ, ಅಮೆರಿಕದ ಮಾರುಕಟ್ಟೆ ಇನ್ನೂ ಪೂರ್ಣವಾಗಿ ಸುಧಾರಿಸಿಲ್ಲ.
ಇದನ್ನು ಓದಿದ್ದೀರಾ?: ಹಿಂದುತ್ವವಾದಿಗಳ ದಾಂಧಲೆ-ಆಕ್ಷೇಪ; ‘ಫುಲೆ’ ಸಿನಿಮಾ ಬಿಡುಗಡೆ ಮುಂದೂಡಿಕೆ
ಭಾರತದಲ್ಲೂ ಇದೇ ರೀತಿ ನಡೆದಿತ್ತು. ಲೋಕಸಭಾ ಚುನಾವಣೆಯ ಸಮಯದಲ್ಲಿ ಪ್ರಧಾನಿ ಮೋದಿಯೂ ಷೇರು ಮಾರುಕಟ್ಟೆಯಲ್ಲಿ ಹಣ ಹೂಡುವ ಬಗ್ಗೆ ಮಾತನಾಡಿದ್ದರು. ಇದರ ಬಗ್ಗೆ ಆ ಸಂದರ್ಭದಲ್ಲಿ ಅನೇಕ ಪ್ರಶ್ನೆಗಳು ಎದ್ದಿದ್ದವು.
ಡೊನಾಲ್ಡ್ ಟ್ರಂಪ್ ಎರಡನೇ ಅವಧಿಗೆ ಅಧಿಕಾರ ವಹಿಸಿಕೊಂಡ ದಿನವೇ, ಈದಿನ.ಕಾಮ್ ಟ್ರಂಪ್ ಎಂಬ ತಿಕ್ಕಲು ಆಸಾಮಿಯಿಂದ ಅಮೆರಿಕಕ್ಕೆ ಅಪಾಯ ಕಾದಿದೆ ಎಂದು ಹೇಳಿತ್ತು. ಅದು ದಿನಗಳುರುಳಿದಂತೆ, ಅವರ ನಡೆ-ನುಡಿಯಿಂದ ನಿಜವಾಗತೊಡಗಿದೆ.
ಟ್ರಂಪ್ ಅಧಿಕಾರಕ್ಕೇರಿದ ದಿನವೇ ‘ಅಮೆರಿಕವನ್ನು ಸದೃಢ ರಾಷ್ಟ್ರವನ್ನಾಗಿಸುತ್ತೇನೆ, ಅದು ಯಾವಾಗಲೂ ದೊಡ್ಡಣ್ಣನ ಸ್ಥಾನದಲ್ಲಿಯೇ ಇರಬೇಕು’ ಎಂದಿದ್ದರು. ಅದರ ಮೊದಲ ಪ್ರಯೋಗವಾಗಿ ಸುಂಕನೀತಿಯನ್ನು ಜಾರಿಗೆ ತಂದಿದ್ದರು. ಟ್ಯಾರಿಫನ್ನೇ ಯುದ್ಧಾಸ್ತ್ರದಂತೆ ಬಡ ದೇಶಗಳ ಮೇಲೆ ಪ್ರಯೋಗಕ್ಕೊಡ್ಡಿದ್ದರು. ಏಪ್ರಿಲ್ 2ರಂದು ಶುರುವಾದ ಟ್ರಂಪ್ ಟ್ಯಾರಿಫ್ ವಾರ್, ಪ್ರತಿದಿನವೂ ಏರುಗತಿಯಲ್ಲೇ ಇತ್ತು. ಇದರಿಂದ ಜಾಗತಿಕ ಷೇರುಪೇಟೆ ಮೇಲೆ ದುಷ್ಪರಿಣಾಮ ಬೀರಿತು. ಕಳೆದ ನಾಲ್ಕು ದಿನಗಳಿಂದ ಷೇರುಪೇಟೆಯ ವಹಿವಾಟು ಕುಸಿಯಿತು. ಅದರಿಂದ 10 ಟ್ರಿಲಿಯನ್ ಡಾಲರ್(ನೂರು ಲಕ್ಷ ಕೋಟಿ) ನಷ್ಟ ಉಂಟಾಯಿತು. ಇದರಿಂದ ಅಮೆರಿಕ ತತ್ತರಿಸಿಹೋಗಿದೆ. ಈ ಕಾರಣಕ್ಕಾಗಿಯೇ ಟ್ರಂಪ್ ತಮ್ಮ ಪ್ರತಿಸುಂಕದ ವಿಚಾರದಲ್ಲಿ ಬಿಗಿ ಧೋರಣೆ ಸಡಿಲಿಸಿದರು ಎಂದು ಹೇಳಲಾಗುತ್ತಿದೆ.

ಅಮೆರಿಕ ಒಂದು ರೀತಿಯಲ್ಲಿ ಭೂಕಂಪದ ರಿಕ್ಟರ್ ಮಾಪನದ ಕೇಂದ್ರಬಿಂದುವಿದ್ದಂತೆ. ಅಲ್ಲಿಂದ ಹೊರಡುವ ಕಂಪನಗಳಿಂದ ಬೇರೆ ದೇಶಗಳ ಮೇಲೆ ಆಗಬಹುದಾದ ಅನಾಹುತ ಅಂದಾಜಿಗೂ ಸಿಗುವುದಿಲ್ಲ. ಅದೇ ರೀತಿ ಅಮೆರಿಕದ ಸುಂಕದ ದಾಳಿಯಿಂದ ಸಣ್ಣಪುಟ್ಟ ದೇಶಗಳ ಆರ್ಥಿಕ ಸ್ಥಿತಿ ಏರುಪೇರಾಗಿದೆ. ಆರ್ಥಿಕವಾಗಿ ಸದೃಢ ಸ್ಥಿತಿಯಲ್ಲಿಲ್ಲದ ದೇಶಗಳು ಅಮೆರಿಕವನ್ನು ಎದುರು ಹಾಕಿಕೊಳ್ಳಲಾಗದೆ, ಟ್ರಂಪ್ ಹೇರಿದ ಸುಂಕವನ್ನು ಮೌನವಾಗಿ ಒಪ್ಪಿಕೊಂಡಿವೆ. ಕೆಲ ನಾಯಕರು ಮಾತುಕತೆಗೂ ಮುಂದಾಗಿದ್ದಾರೆ.
ಭಾರತದ ಪ್ರಧಾನಿ ಮೋದಿ ಮಾತನಾಡದೆ ಟ್ರಂಪ್ ಹೇಳಿದ್ದಕ್ಕೆಲ್ಲ ಎಸ್ ಎಂದು, ಕಾದು ನೋಡುವ ತಂತ್ರಕ್ಕೆ ತಲೆಬಾಗಿದ್ದಾರೆ. ಇವರ ಈ ಕಾದು ನೋಡುವ ತಂತ್ರಕ್ಕೆ ತಕ್ಕಂತೆ ಟ್ರಂಪ್, ಪ್ರತಿಸುಂಕ ಜಾರಿಯನ್ನು 90 ದಿನಗಳಿಗೆ ಮುಂದೂಡಿದ್ದಾರೆ. ಇದನ್ನೇ ಭಾರತದ ಮಡಿಲ ಮಾಧ್ಯಮಗಳು ಮೋದಿ-ಟ್ರಂಪ್ ಸ್ನೇಹವೇ ಇದಕ್ಕೆಲ್ಲ ಕಾರಣವೆಂಬಂತೆ ಬಣ್ಣ ಕಟ್ಟಿ ಬಣ್ಣಿಸುತ್ತಿವೆ.
ಆದರೆ ಆರ್ಥಿಕವಾಗಿ ಸದೃಢ ಸ್ಥಿತಿಯಲ್ಲಿರುವ ಚೀನಾ, ಅಮೆರಿಕದ ಖಜಾನೆ ಇಲಾಖೆಯ $720 ಬಿಲಿಯನ್ ಬಾಂಡ್‌ಗಳನ್ನು ಖರೀದಿಸಿ ಇಟ್ಟುಕೊಂಡಿದೆ. ಆ ಮೂಲಕ ಅದರ ಆರ್ಥಿಕ ಸ್ವಾತಂತ್ರ್ಯವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ. ಯಾವುದೇ ಸಮಯದಲ್ಲಿ ಈ ಬಾಂಡ್‌ಗಳನ್ನು ಮಾರಾಟ ಮಾಡಿ ಅಮೆರಿಕವನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳಬಹುದು ಎಂಬ ಹೆದರಿಕೆಯೂ ಇದೆ. ಈ ಬಗ್ಗೆ ಶ್ವೇತಭವನದ ಆರ್ಥಿಕ ತಜ್ಞರು, ಎದುರಾಗಬಹುದಾದ ಸಮಸ್ಯೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿ, 90 ದಿನಗಳವರೆಗೆ ಮುಂದೂಡಲು ಸೂಚಿಸಿದ್ದರು ಎನ್ನಲಾಗಿದೆ.
ಇತರ ದೇಶಗಳಿಗೆ ಸುಂಕ ಜಾರಿಯನ್ನು 90 ದಿನಗಳವರೆಗೆ ಮುಂದೂಡಿ, ಚೀನಾಕ್ಕೆ ವಿನಾಯಿತಿ ನೀಡದಿರುವ ಕ್ರಮಕ್ಕೂ ಚೀನಾ ‘ನಾವು ಬಗ್ಗುವವರಲ್ಲ, ಹೆದರುವವರೂ ಅಲ್ಲ’ ಎಂದು ಅಮೆರಿಕಕ್ಕೆ ಸೆಡ್ಡು ಹೊಡೆದಿದೆ. ಇದಕ್ಕೆ ಪೂರಕವಾಗಿ ಚೀನಾದ ವಿದೇಶಾಂಗ ಸಚಿವಾಲಯವು ಚೀನಾದ ನಾಯಕ ಮಾವೋ ತ್ಸೆ ತುಂಗ್ 1953ರಲ್ಲಿ ಆಡಿದ ಮಾತುಗಳನ್ನು ಮತ್ತೆ ಮುನ್ನೆಲೆಗೆ ತಂದಿದೆ. ಅವರ ಮಾತುಗಳನ್ನು ಪುನರಾವರ್ತಿಸಿ ‘ಚೀನಾ ಚೀನಾ. ಹಿಮ್ಮೆಟ್ಟುವುದಿಲ್ಲ. ಹಿಮ್ಮೆಟ್ಟುವುದು ಚೀನಾಕ್ಕೆ ತಿಳಿದಿಲ್ಲ’ ಎಂದು ಸ್ಪಷ್ಟವಾಗಿ ಹೇಳಿದೆ.
ಇದನ್ನು ಓದಿದ್ದೀರಾ?: ಆನ್‌ಲೈನ್ ಗೇಮಿಂಗ್-ಬೆಟ್ಟಿಂಗ್‌ಗೆ ಕಡಿವಾಣ ಹಾಕಿ, ಕಾಯ್ದೆ ರೂಪಿಸುವ ಅಗತ್ಯವಿದೆ
ಚೀನಾ ಮಾವೋ ತ್ಸೆ ತುಂಗ್ ಮೂಲಕ ತನ್ನ ವಾದವನ್ನು ಏಕೆ ಮುಂದಿಡುತ್ತಿದೆ ಎಂಬುದು ಕೂಡ ಇಲ್ಲಿ ಬಹಳ ಮುಖ್ಯವಾದ ವಿಚಾರ. ಮಾವೋ ತ್ಸೆ ತುಂಗ್ ಫೆಬ್ರವರಿ 7, 1953ರಂದು ‘ಚೈನೀಸ್ ಪೀಪಲ್ಸ್ ಪೊಲಿಟಿಕಲ್ ಕನ್ಸಲ್ಟೇಟಿವ್ ಕಾನ್ಫರೆನ್ಸ್’ನಲ್ಲಿ ಈ ಭಾಷಣ ಮಾಡಿದ್ದರು. ಅದು ಎರಡೂವರೆ ವರ್ಷಗಳಿಂದ ಕೊರಿಯನ್ ಯುದ್ಧ ನಡೆಯುತ್ತಿದ್ದ ಸಂದರ್ಭ. ಅಮೆರಿಕ ದಕ್ಷಿಣ ಕೊರಿಯಾದ ಪರವಾಗಿತ್ತು, ಚೀನಾ ಉತ್ತರ ಕೊರಿಯಾದ ಜೊತೆಯಲ್ಲಿತ್ತು. ಆಗ ಮಾವೋ, ‘ಈ ಯುದ್ಧ ಎಷ್ಟು ಕಾಲವಾದರೂ ನಡೆಯಲಿ, ನಾವು ಬಗ್ಗುವುದಿಲ್ಲ. ಪೂರ್ಣ ವಿಜಯ ಸಾಧಿಸುವವರೆಗೆ ನಾವು ಹೋರಾಡುತ್ತೇವೆ’ ಎಂದಿದ್ದರು. ಮುಂದೆ, ಅಮೆರಿಕ ಮತ್ತು ರಷ್ಯಾ ನಡುವೆ ಯುದ್ಧ ನಡೆಯುತ್ತಿದ್ದಾಗ, ಚೀನಾ ತನ್ನ ಆಂತರಿಕ ವಿಷಯಗಳತ್ತ ಗಮನ ಹರಿಸಿತ್ತು.
ಈಗ ಚೀನಾ ಸದೃಢ ಸ್ಥಿತಿಗೆ ತಲುಪಿದೆ. ಪಾಶ್ಚಾತ್ಯ ದೇಶಗಳೊಂದಿಗೆ ಸ್ಪರ್ಧಿಸುವ ಸಾಮರ್ಥ್ಯವನ್ನು ಹೊಂದಿದೆ. ಬಹುತೇಕ ಪಾಶ್ಚಾತ್ಯ ದೇಶಗಳು ಚೀನಾದತ್ತ ನೋಡುತ್ತಿವೆ. ಆ ಅವಕಾಶವನ್ನು ಬಳಸಿಕೊಂಡ ಚೀನಾ, ಐರೋಪ್ಯ ಒಕ್ಕೂಟ, ಆಗ್ನೇಯ ಏಷ್ಯಾದತ್ತ ಹೆಜ್ಜೆ ಹಾಕಿದೆ. ಆ ರಾಷ್ಟ್ರಗಳ ಮಾರುಕಟ್ಟೆ ಕಂಡುಕೊಳ್ಳುವ ಪ್ರಯತ್ನ ಆರಂಭಿಸಿದೆ. ಜೊತೆಗೆ ಮಾವೋನ ವಿಡಿಯೋ ತುಣುಕನ್ನು ಹರಿಬಿಟ್ಟು, ಚೀನಾ ಎಲ್ಲದಕ್ಕೂ ಸಿದ್ಧವಾಗಿದೆ ಎಂಬ ಸಂದೇಶವನ್ನು ರವಾನಿಸಿದೆ.
ಸಾಮಾನ್ಯವಾಗಿ ಚೀನಾ ಹೆಚ್ಚು ಮಾತನಾಡುವುದಿಲ್ಲ. ಆದರೆ ಈ ಸಲ ಚೀನಾ ಮಾತನಾಡುತ್ತಿದೆ. ಚೀನಾದಲ್ಲಿ ಟ್ರಂಪ್ ಮತ್ತು ಅಮೆರಿಕದ ಬಗ್ಗೆ ಅನೇಕ ಮೀಮ್‌ಗಳು ರಚಿಸಲ್ಪಟ್ಟು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೆಯಾಗುತ್ತಿವೆ. ಅವೆಲ್ಲವೂ ಟ್ರಂಪ್‌ರನ್ನು ಬಫೂನ್‌ನಂತೆ ಚಿತ್ರಿಸಿವೆ. ಎಲ್ಲದಕ್ಕೂ ಇತರ ದೇಶಗಳ ಜನರ ಮೇಲೆ ಅವಲಂಬಿತರಾಗಿರುವ ಅಮೆರಿಕನ್ನರನ್ನು ಸೋಮಾರಿಗಳೆಂದು ಚಿತ್ರಿಸಿ, ವಿಡಂಬನೆಯ ವಸ್ತುವನ್ನಾಗಿಸಿಕೊಂಡಿವೆ. ಇದು ಹೊಸ ಚೀನಾ ಚಿತ್ರಣವನ್ನು ವಿಶ್ವಕ್ಕೆ ಪರಿಚಯಿಸುತ್ತಿದೆ.
ಇದರ ಪರಿಣಾಮವಾಗಿ ಚೀನಾ-ಅಮೆರಿಕ ವ್ಯಾಪಾರ ಯುದ್ಧ ಮತ್ತೊಂದು ಮಗ್ಗುಲಿಗೆ ಹೊರಳಿದೆ. ಇದು ಪ್ರಪಂಚದ ಆರ್ಥಿಕತೆಗೆ ದೊಡ್ಡ ಪೆಟ್ಟು ನೀಡಬಹುದು ಎಂದು ಆರ್ಥಿಕ-ರಾಜಕೀಯ ತಜ್ಞರು ವಿಶ್ಲೇಷಿಸುತ್ತಿದ್ದಾರೆ.
ಏತನ್ಮಧ್ಯೆ, ಟ್ರಂಪ್ 70 ದೇಶಗಳ ಮೇಲೆ ಹೇರಿದ್ದ ಸುಂಕದ ಜಾರಿಯನ್ನು ಮುಂದೂಡಿದ್ದರೂ, ಆ ದೇಶಗಳು ಅಮೆರಿಕದ ಬೆಂಬಲಕ್ಕೆ ಬಂದರೂ, ಚೀನಾ ಅಮೆರಿಕದ ಒತ್ತಡಕ್ಕೆ ಮಣಿಯುವುದಿಲ್ಲ. ಬದಲಿಗೆ 70 ದೇಶಗಳು ಚೀನಾ ವಿರುದ್ಧ ಅಮೆರಿಕದ ಪಕ್ಷ ವಹಿಸುತ್ತವೆ ಎಂದು ಹೇಳಲಾಗುವುದಿಲ್ಲ. ಒಟ್ಟಾರೆ, ಚೀನಾ ಮತ್ತು ಅಮೆರಿಕದ ನಡುವಿನ ಉದ್ವಿಗ್ನ ವಾತಾವರಣದಲ್ಲಿ ಇನ್ನೂ ಯಾವುದೇ ಸುಧಾರಣೆ ಕಂಡಿಲ್ಲ. ಟ್ಯಾರಿಫ್ ನಿರ್ಧಾರವನ್ನು ನಿಲ್ಲಿಸಿದ್ದರಿಂದ ಬದಲಾವಣೆಯೂ ಆಗಿಲ್ಲ.
ಒಂದು ಕಾಲದಲ್ಲಿ ಚೀನಾ ಅಮೆರಿಕದೊಂದಿಗೆ ಸ್ನೇಹದಿಂದಿತ್ತು. ಅಮೆರಿಕವನ್ನು ತನ್ನ ಬಾಸ್ ಎಂದು ಒಪ್ಪಿಕೊಂಡಿತ್ತು. ಅಮೆರಿಕದ ಹಣ, ತಂತ್ರಜ್ಞಾನ ತೆಗೆದುಕೊಂಡಿತ್ತು. ಆದರೆ ಈಗ ಅದೇ ಚೀನಾ ಚಾಟ್ ಜಿಪಿಟಿಯನ್ನೇ ಹಿಂದಕ್ಕೆ ಹಾಕಿ, ಡೀಪ್ ಸೀಪ್ ಮೂಲಕ ಜಗತ್ತನ್ನೇ ದಿಗ್ಭ್ರಮೆಗೊಳಿಸಿದೆ. ತಂತ್ರಜ್ಞಾನದಲ್ಲಿ ಇತರ ದೇಶಗಳಿಗಿಂತ ಬಲಿಷ್ಠವಾಗಿದೆ. ಶೀ ಜಿನ್‌ಪಿಂಗ್‌ರ ಚೀನಾ ಬಹಳ ಬೇರೆಯಾಗಿದೆ. ‘ಹೆದರಿಸಿದರೆ ಹೆದರುವುದಿಲ್ಲ, ಯುದ್ಧ ಮಾಡಿದರೆ ನಾವೂ ಸಿದ್ಧ’ ಎಂದು ಅಮೆರಿಕದ ವಿರುದ್ಧ ಧೈರ್ಯವಾಗಿ ಮಾತನಾಡುತ್ತಿದೆ.
ಇದನ್ನು ಓದಿದ್ದೀರಾ?: ವಕ್ಫ್ ತಿದ್ದುಪಡಿ ಮಸೂದೆ 2025 | ಬೇರೆ ಧಾರ್ಮಿಕ ಸಂಸ್ಥೆಗಳು ಸ್ವಚ್ಛವಾಗಿವೆಯೇ?
ಅದೇ ರೀತಿ ಪುಟ್ಟ ದೇಶ ವಿಯೆಟ್ನಾಮ್ ಈಗ ಎರಡನೇ ಚೀನಾದಂತಾಗುತ್ತಿದೆ. ಕಳೆದ 10 ವರ್ಷಗಳಲ್ಲಿ ಉತ್ಪಾದನೆಯಲ್ಲಿ ಭಾರತವನ್ನು ಹಿಂದಿಕ್ಕಿದೆ. ಪ್ರವಾಸೋದ್ಯಮದಲ್ಲಿ ಅದ್ಭುತವಾಗಿ ಬೆಳೆದಿದೆ. ಮಹಿಳೆಯರಿಗೆ ಸುರಕ್ಷಿತ ತಾಣ ಎಂಬ ಹೆಸರು ಪಡೆದಿದೆ. ಈಗ ಚೀನಾ ಪರವಾಗಿ ನಿಂತಿದೆ.
ನಮ್ಮ ಪಕ್ಕದ ವಿಯೆಟ್ನಾಮ್ ಪ್ರಗತಿಯ ಹಾದಿಯಲ್ಲಿವೆ. ನಮ್ಮದೇ ಸ್ಥಿತಿಯಲ್ಲಿದ್ದ ಚೀನಾ- ಕೃಷಿ ಪ್ರಧಾನ, ಮಾನವ ಸಂಪನ್ಮೂಲ, ಜನಸಂಖ್ಯೆ- ಇಂದು ಅಭಿವೃದ್ಧಿಯ ನಾಗಾಲೋಟದಲ್ಲಿದೆ. ನಾವು ಅವರೊಂದಿಗೆ ಕೈ ಜೋಡಿಸುವ, ಬೆಳೆಯುವ ಬದಲು, ಅಮೆರಿಕವನ್ನು ಆಶ್ರಯಿಸಿದ್ದೇವೆ. ದೂರದ ಬೆಟ್ಟ ಅಮೆರಿಕವನ್ನು ಹಾಗೂ ಟ್ರಂಪ್ ಎಂಬ ತಿಕ್ಕಲು ಆಸಾಮಿಯನ್ನು ನಂಬಿದ್ದೇವೆ.

ಅಮೆರಿಕದ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್, ತಮ್ಮ ಮೊದಲ 90 ದಿನಗಳ ಆಡಳಿತದಲ್ಲಿ ಏನನ್ನಾದರೂ ಸಾಧಿಸಲು ಬಯಸಿದ್ದರು. ಆದರೆ ಈಗ ಅದೇ 90 ದಿನಗಳನ್ನು ಎದುರು ನೋಡಬೇಕಾಗಿದೆ. ಅವರ ಮೊದಲ ಆರು ತಿಂಗಳ ಆಡಳಿತ- ನಿರ್ಧಾರ ತೆಗೆದುಕೊಳ್ಳುವುದು, ತಡೆಯುವುದು, ಬದಲಾಯಿಸುವುದರಲ್ಲೇ ಕಳೆಯಬಹುದು.
‘ನಾನು ಬಗ್ಗಬಹುದು. ಮಾರುಕಟ್ಟೆ ಬದಲಾಗಬಹುದು. ಇದು ಆರ್ಥಿಕ ಇತಿಹಾಸದಲ್ಲಿ ದೊಡ್ಡ ಬದಲಾವಣೆ’ ಎಂದು ಟ್ರಂಪ್ ಈಗ ರಾಗ ಎಳೆಯುತ್ತಿದ್ದಾರೆ. ಅವರಿಗೆ ಯುರೋಪ್, ಕೆನಡಾ, ಚೀನಾ ಕೂಡ ಪ್ರತಿಸುಂಕ ಹಾಕುತ್ತವೆ ಎಂದು ಗೊತ್ತಿರಲಿಲ್ಲವೇ? ಚೀನಾ ಇಷ್ಟು ಧೈರ್ಯದಿಂದ ಎದುರು ನಿಲ್ಲುತ್ತದೆ ಎಂದು ಊಹಿಸಿರಲಿಲ್ಲವೇ?
ಒಟ್ಟಿನಲ್ಲಿ, ದೊಡ್ಡಣ್ಣನ ಸ್ಥಾನದಲ್ಲಿದ್ದ ಅಮೆರಿಕ ಟ್ರಂಪ್‌ನನ್ನು ಆಯ್ಕೆ ಮಾಡಿಕೊಂಡು ದಡ್ಡಣ್ಣನಾಗಿದೆ. ಮುಂದೆ ಇನ್ನೇನು ಅನಾಹುತಗಳು ಕಾದಿವೆಯೋ, ನೋಡಬೇಕು.

ಲೇಖಕ, ಪತ್ರಕರ್ತ