ಮುಖ್ಯಮಂತ್ರಿ ಕೆಸಿಆರ್ ಸಭೆಗೆ ಅಡ್ಡಿಪಡಿಸಬಹುದು ಎನ್ನುವ ಕಾರಣಕ್ಕೆ 2018ರ ಡಿಸೆಂಬರ್ ನಾಲ್ಕರಂದು ಪೊಲೀಸರು ಬೆಳಗಿನ ಜಾವ ರೇವಂತ್ ರೆಡ್ಡಿ ಮನೆಗೇ ಹೋಗಿ ಅವರನ್ನು ಬಲವಂತವಾಗಿ ಬಂಧಿಸಿ ಕರೆದೊಯ್ದಿದ್ದರು. ಅದಾಗಿ ಸರಿಯಾಗಿ ಐದು ವರ್ಷಗಳ ನಂತರ, ಇವತ್ತು, ಅವರು ತೆಲಂಗಾಣದ ಮುಖ್ಯಮಂತ್ರಿ ಆಗಿ ಆಯ್ಕೆಯಾಗಿದ್ದಾರೆ.
ಜನತಾ ದಳ ತೊರೆದು 2006ರಲ್ಲಿ ಕಾಂಗ್ರೆಸ್ ಸೇರಿದ್ದ ಸಿದ್ದರಾಮಯ್ಯ 2013ರಲ್ಲಿ ಮೊದಲ ಬಾರಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಇಂಥದ್ದೇ ಇತಿಹಾಸ ನೆರೆಯ ತೆಲಂಗಾಣದಲ್ಲೂ ಮರುಕಳಿಸುತ್ತಿದೆ. ತೆಲುಗು ದೇಶಂ ತೊರೆದು 2017ರಲ್ಲಿ ಕಾಂಗ್ರೆಸ್ ಸೇರಿದ್ದ ರೇವಂತ್ ರೆಡ್ಡಿಗೆ ಈಗ ಅಲ್ಲಿನ ಮುಖ್ಯಮಂತ್ರಿ ಆಗುವ ಸದವಕಾಶ ದೊರಕಿದೆ.
ಕರ್ನಾಟಕದ ಗೆಲುವು, ಆರು ಗ್ಯಾರಂಟಿಗಳು, ಕೆಸಿಆರ್ ವಿರುದ್ಧದ ಆಡಳಿತ ವಿರೋಧಿ ಅಲೆ.. ಹೀಗೆ ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಹಲವು ಅಂಶಗಳು ನೆರವಾಗಿವೆ. ಇವುಗಳ ಜೊತೆಗೆ ಇನ್ನೂ ಒಂದು ಕಾರಣವಿದೆ; ಅದು. ರೇವಂತ್ ರೆಡ್ಡಿ ಎನ್ನುವ ಫೈರ್ ಬ್ರಾಂಡ್ ನಾಯಕ.
ಕೆಸಿಆರ್ ಗಡಸು ಮಾತಿಗೆ, ಎದುರಾಳಿ ಮೇಲೆ ತೀವ್ರ ವಾಗ್ದಾಳಿಗೆ ಹೆಸರಾದವರು. ಅವರಿಗೆ ಸರಿಸಾಟಿಯಾದ ನಾಯಕನಿಲ್ಲದೇ ತೆಲಂಗಾಣ ಕಾಂಗ್ರೆಸ್ ಕಳೆಗುಂದಿತ್ತು. ತೆಲಂಗಾಣ ತೆಲುಗಿನ ತಮ್ಮ ವಾಗ್ಝರಿಯಿಂದ ಕೆಸಿಆರ್ ಗಾಂಧಿ ಕುಟುಂಬವನ್ನು ಚಿಂದಿ ಮಾಡುತ್ತಿದ್ದರೆ, ಆ ಪಕ್ಷದ ಕಾರ್ಯಕರ್ತರು ಮೂಕ ಪ್ರೇಕ್ಷಕರಾಗಿ ತೆಪ್ಪಗಿರುತ್ತಿದ್ದರು. ರೇವಂತ್ ರೆಡ್ಡಿ ರಂಗಪ್ರವೇಶದ ನಂತರ ಪರಿಸ್ಥಿತಿ ಬದಲಾಯಿತು. ರೇವಂತ್, ಕೆಸಿಆರ್‌ಗೆ ಅವರದೇ ಧಾಟಿಯಲ್ಲಿ, ಅವರದೇ ಭಾಷೆಯಲ್ಲಿ ಉತ್ತರ ನೀಡತೊಡಗಿದರು. ಒಮ್ಮೆಮ್ಮೆಯಂತೂ ಕೆಸಿಆರ್ ಹಾಗೂ ರೇವಂತ್ ಇಬ್ಬರೂ ಯಾವ ಭಿಡೆಯೂ ಇಲ್ಲದೇ ಸಾರ್ವಜನಿಕ ವೇದಿಕೆಗಳಲ್ಲೇ ಎಲ್ಲೆ ಮೀರಿ ಬಯ್ದಾಡುವ ಮೂಲಕ ರಾಜಕೀಯದ ಮೌಲ್ಯವನ್ನು ಕುಸಿಯುವಂತೆ ಮಾಡಿದ್ದು ಕೂಡ ನಿಜ.
ಆದರೆ, ತೆಲಂಗಾಣದ ಜನರಿಗೆ, ಮುಖ್ಯವಾಗಿ, ರಾಜ್ಯ ಕಾಂಗ್ರೆಸ್‌ಗೆ, ಕೆಸಿಆರ್ ಅವರನ್ನು ದಿಟ್ಟವಾಗಿ ಎದುರಿಸಬಲ್ಲ ಒಬ್ಬ ಸಮರ್ಥ ನಾಯಕ ಸಿಕ್ಕಿದ್ದ. ಇದನ್ನು ಶೀಘ್ರವಾಗಿ ಗ್ರಹಿಸಿದ ರಾಹುಲ್ ಗಾಂಧಿ, ರೇವಂತ್ ರೆಡ್ಡಿಯನ್ನು ತೆಲಂಗಾಣ ಕಾಂಗ್ರೆಸ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದರು. ಅಲ್ಲಿಂದ ಮತ್ತಷ್ಟು ಹುಮ್ಮಸ್ಸಿನಿಂದ ಕೆಲಸ ಮಾಡತೊಡಗಿದ್ದ ರೇವಂತ್ ರೆಡ್ಡಿ, ಇವತ್ತು ತೆಲಂಗಾಣದ ಮೂರನೇ ಮುಖ್ಯಮಂತ್ರಿ ಆಗುವ ಹಂತ ತಲುಪಿದ್ದಾರೆ.
ರೇವಂತ್ ರೆಡ್ಡಿಗೆ ಜಿಲ್ಲಾ ಪಂಚಾಯ್ತಿ ಸದಸ್ಯ, ಶಾಸಕ, ವಿಧಾನ ಪರಿಷತ್ ಸದಸ್ಯ, ಸಂಸದನಾಗಿದ್ದು ಬಿಟ್ಟರೆ, ಆಡಳಿತ ನಡೆಸಿದ ಅನುಭವವೇ ಇಲ್ಲ. ಈ ಪ್ರಶ್ನೆಯನ್ನು ಪತ್ರಕರ್ತರೊಬ್ಬರು ಅವರ ಮುಂದಿಟ್ಟಾಗ, ‘ಇಂದಿರಾ ಗಾಂಧಿಯವರು ಪ್ರಧಾನಿಯಾಗಿ ಅದ್ಭುತ ಆಡಳಿತ ನೀಡಿದರು. ಅವರಿಗೆ ಯಾವ ಅನುಭವ ಇತ್ತು; ಭಾರತಕ್ಕೆ ಕಂಪ್ಯೂಟರ್ ತಂದ ರಾಜೀವ್ ಗಾಂಧಿ ಪೈಲಟ್ ಆಗಿದ್ದವರು; ಅಲ್ಲಿಂದ ನೇರವಾಗಿ ಬಂದು ಪ್ರಧಾನಿ ಮಂತ್ರಿ ಆಗಿದ್ದರು. ಅವರು ಉತ್ತಮ ಆಡಳಿತ ನೀಡಲಿಲ್ಲವೇ’ ಎಂದು ಮರುಪ್ರಶ್ನಿಸಿದ್ದರು ರೇವಂತ್.
ಚುನಾವಣೆಗೆ ಮುಂಚೆಯೇ ರೇವಂತ್ ರೆಡ್ಡಿಗೆ ಕಾಂಗ್ರೆಸ್ ಗೆಲ್ಲುವ ಸೂಚನೆ ಸಿಕ್ಕಿತ್ತು. ಆಗಲೇ ತಾನು ಸಿಎಂ ಆಗುವ ಬಗ್ಗೆಯೂ ಅವರಿಗೆ ಸಂಪೂರ್ಣ ನಂಬಿಕೆಯಿತ್ತು. ‘ಡಿಸೆಂಬರ್ 9, 2009ರಂದು ಕೇಂದ್ರ ಮಂತ್ರಿಯಾಗಿದ್ದ ಪಿ ಚಿದಂಬರಂ ತೆಲಂಗಾಣ ಪ್ರತ್ಯೇಕ ರಾಜ್ಯ ಘೋಷಣೆ ಮಾಡಿದ್ದರು. ತೆಲಂಗಾಣ ಕೊಟ್ಟ ಸೋನಿಯಾ ಗಾಂಧಿ ಹುಟ್ಟಿದ ಹಬ್ಬ ಡಿಸೆಂಬರ್ 9ರಂದು. ತಾನು ಕಾಂಗ್ರೆಸ್ ಸೇರಿದ ನಂತರ ತೆಲಂಗಾಣದ ಕಾಂಗ್ರೆಸ್ ಕಚೇರಿ ಗಾಂಧಿಭವನ್‌ಗೆ ಕಾಲಿಟ್ಟಿದ್ದು 2017ರ ಡಿಸೆಂಬರ್ 9ರಂದು. ಹಾಗಾಗಿ ತೆಲಂಗಾಣದಲ್ಲಿ ಈ ಬಾರಿ ಕಾಂಗ್ರೆಸ್ ಸರ್ಕಾರ ರಚನೆ ಮಾಡಲಿದ್ದು, 2023ರ ಡಿಸೆಂಬರ್ 9ರಂದು ಹೊಸ ಮುಖ್ಯಮಂತ್ರಿಯ ಪ್ರಮಾಣ ವಚನ ನಡೆಯುತ್ತದೆ’ ಎಂದು ಅವರು 20 ದಿನಗಳ ಹಿಂದೆಯೇ ಸಂದರ್ಶನವೊಂದರಲ್ಲಿ ಭವಿಷ್ಯ ನುಡಿದಿದ್ದರು.
ಎನುಮುಲ ರೇವಂತ್ ರೆಡ್ಡಿ ಮೆಹಬೂಬ್‌ನಗರ ಜಿಲ್ಲೆಯ ಕೊಂಡರೆಡ್ಡಿಪಲ್ಲಿಯ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ ಬೆಳೆದವರು. ಬಿಎ ಪದವಿ ಪಡೆದ ನಂತರ ಹೈದರಾಬಾದ್‌ನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದವರು. ಮಾಜಿ ಕೇಂದ್ರ ಸಚಿವ ಜೈಪಾಲ್ ರೆಡ್ಡಿಯವರ ಸಂಬಂಧಿಯನ್ನು ಮದುವೆಯಾಗಿರುವ ರೇವಂತ್ ರೆಡ್ಡಿಗೆ ಒಬ್ಬಳು ಮಗಳಿದ್ದು, ಅವರಿಗೆ ಮದುವೆಯಾಗಿದೆ. ವಿದ್ಯಾರ್ಥಿ ದೆಸೆಯಲ್ಲಿಯೇ ಎಬಿವಿಪಿ ಸಂಪರ್ಕಕ್ಕೆ ಬಂದಿದ್ದ ರೇವಂತ್, 2001-02ರಲ್ಲಿ ತೆಲಂಗಾಣ ರಾಷ್ಟ್ರ ಸಮಿತಿಯಲ್ಲೂ ಒಂದಷ್ಟು ಕಾಲ ಓಡಾಡಿಕೊಂಡಿದ್ದರು. ಆದರೆ, ಆ ಪಕ್ಷದಲ್ಲಿ ನೆಲೆ ಕಂಡುಕೊಳ್ಳಲು ಸಾಧ್ಯವಾಗದೇ 2006ರಲ್ಲಿ ಸ್ವತಂತ್ರವಾಗಿ ಜಿಲ್ಲಾ ಪಂಚಾಯ್ತಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. 2007ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿಯೇ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ರೇವಂತ್ ರೆಡ್ಡಿ, ಅದೇ ವರ್ಷ ತೆಲುಗು ದೇಶಂ ಪಕ್ಷವನ್ನು ಸೇರಿದ್ದರು.
ಟಿಡಿಪಿ ಅಭ್ಯರ್ಥಿಯಾಗಿ 2009ರಲ್ಲಿ ಕೋಡಂಗಲ್ ಕ್ಷೇತ್ರದಿಂದ ಗೆದ್ದ ಅವರು ಆಂಧ್ರಪ್ರದೇಶ ವಿಧಾನಸಭೆಯ ಶಾಸಕರಾಗಿದ್ದರು. ರಾಜ್ಯ ವಿಭಜನೆ ನಂತರ, 2014ರಲ್ಲಿ, ಅದೇ ಕ್ಷೇತ್ರದಿಂದ ಗೆದ್ದು ತೆಲಂಗಾಣ ವಿಧಾನಸಭೆಯ ಶಾಸಕರಾಗಿ ಆಯ್ಕೆಯಾಗಿದ್ದರು. ಟಿಡಿಪಿಯಲ್ಲಿದ್ದಾಗ ಎಂಎಲ್‌ಸಿ ಚುನಾವಣೆಯಲ್ಲಿ ಮತ ಚಲಾಯಿಸಲು ಹಣ ನೀಡಿದ ಆರೋಪದ ಮೇಲೆ ರೇವಂತ್ ರೆಡ್ಡಿ ಜೈಲು ಸೇರಿದ್ದರು. ಅದರ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಅಲ್ಲಿಗೆ ರೇವಂತ್ ರೆಡ್ಡಿ ರಾಜಕೀಯ ಜೀವನ ಮುಗಿಯಿತು ಎಂದೆ ಬಹುತೇಕರು ಭಾವಿಸಿದ್ದರು. ಆದರೆ, ರೇವಂತ್ ಗಟ್ಟಿಗ; ಯಾರೂ ಊಹಿಸದ ರೀತಿಯಲ್ಲಿ ಪುಟಿದೆದ್ದು ನಿಂತರು.
2017ರಲ್ಲಿ ಟಿಡಿಪಿ ಬಿಟ್ಟು ಕಾಂಗ್ರೆಸ್ ಸೇರಿದ್ದ ರೇವಂತ್, 2018ರ ಚುನಾವಣೆಯಲ್ಲಿ ಕೋಡಂಗಲ್ ಕ್ಷೇತ್ರದಿಂದ ಸ್ಪರ್ಧಿಸಿ, ತಮ್ಮ ಜೀವನದ ಮೊದಲ ಚುನಾವಣಾ ಸೋಲು ಕಂಡಿದ್ದರು. ತಾನು ಎಲ್ಲಿ ಸಮಬಲನಾಗಿ ಬೆಳೆದುಬಿಡುತ್ತೇನೋ ಎಂದು ಹೆದರಿದ್ದ ಕೆಸಿಆರ್ ಮತ್ತು ಅವರ ಮಗ ಕೆಟಿಆರ್ ತನ್ನನ್ನು ಚುನಾವಣೆಯಲ್ಲಿ ಸೋಲಿಸುವ ಮೂಲಕ ವಿಧಾನಸಭೆ ಪ್ರವೇಶಿಸದಂತೆ ನೋಡಿಕೊಂಡಿದ್ದರು ಎನ್ನುವುದು ರೇವಂತ್ ವಾದ. ಆಗಲೂ ರೇವಂತ್ ಸುಮ್ಮನೆ ಕೂರಲಿಲ್ಲ. ಸಿಂಹದ ಗುಹೆಗೇ ನುಗ್ಗಿ ಅದನ್ನು ಎದುರಿಸುವ ಛಲ ತೋರಿದರು. ಮೂರೇ ತಿಂಗಳ ನಂತರ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ಬಿಆರ್‌ಎಸ್ ಬಿಗಿಹಿಡಿತವಿದ್ದ, ದೇಶದ ಅತಿ ದೊಡ್ಡ ಕ್ಷೇತ್ರವಾದ ಮಲ್ಕಾಜ್‌ಗಿರಿಯಲ್ಲಿ ನಿಂತು ಗೆದ್ದು ಸಂಸತ್ ಪ್ರವೇಶಿಸಿದ್ದರು.
ಉತ್ತಮ ಸಂಘಟಕ ಎನ್ನಿಸಿಕೊಂಡಿರುವ ರೇವಂತ್, ಕಾಂಗ್ರೆಸ್‌ಗೆ ಬಂದ ಅಲ್ಪಾವಧಿಯಲ್ಲಿಯೇ ಟಿಪಿಸಿಸಿ ಕಾರ್ಯಾಧ್ಯಕ್ಷರಾದರು. ಒನ್ ಮ್ಯಾನ್ ಆರ್ಮಿಯಂತೆ ರಾಜ್ಯದಾದ್ಯಂತ ಸಂಚರಿಸುತ್ತಾ ತನ್ನ ಅಗ್ರೆಸ್ಸೀವ್ ಮಾತುಗಳಿಂದ ಕೆಸಿಆರ್ ಹಾಗೂ ಅವರ ಮಗ ಕೆಟಿಆರ್ ವಿರುದ್ಧ ಸಮರ್ಥ ಪ್ರತಿದಾಳಿ ನಡೆಸುತ್ತಿದ್ದರು. ಯಾವ ಮಟ್ಟಕ್ಕೆ ಎಂದರೆ, ಕೆಸಿಆರ್ ಮತ್ತು ಅವರ ಮಗ ಕೆಟಿಆರ್ ಜೊತೆ ರೇವಂತ್‌ಗೆ ಮಾತುಕತೆಯೇ ನಿಂತುಹೋಗಿ ಶತ್ರುತ್ವ ಬೆಳೆಯಿತು. ವೈಯಕ್ತಿಕ ಸಂಬಂಧವೂ ಹಳಸಿಹೋಯಿತು. ಹೀಗಾಗಿಯೇ ಕೆಸಿಆರ್ ಸರ್ಕಾರ ಅನೇಕ ಬಾರಿ ರೇವಂತ್ ರೆಡ್ಡಿಯನ್ನು ಜೈಲಿಗೆ ಅಟ್ಟಿತು. 2014ರಿಂದ 2018ರವರೆಗೆ ಅವರ ವಿರುದ್ಧ 120 ಕೇಸ್‌ಗಳು ದಾಖಲಾದರೆ, 2018ರಿಂದ 2023ರವರೆಗೆ 89 ಕೇಸುಗಳು ದಾಖಲಾದವು. ದ್ರೋಣ್ ಹಾರಿಸಿದರು ಎಂಬ ಸಣ್ಣ ಕಾರಣಕ್ಕೆ ಅವರನ್ನು 18 ದಿನ ಜೈಲಿನಲ್ಲಿಟ್ಟಿದ್ದರು. ಈ ಬಗ್ಗೆ ಮಾತನಾಡಿರುವ ರೇವಂತ್, ‘ನನ್ನ ವಿರುದ್ಧದ ಪ್ರಕರಣಗಳನ್ನು ನಾನು ಮೆಡಲ್ಸ್‌ನಂತೆ ತೆಗೆದುಕೊಳ್ಳುತ್ತೇನೆ’ ಎಂದಿದ್ದಾರೆ.
ಕೆಸಿಆರ್ ಸಭೆಗೆ ಎಲ್ಲಿ ಅಡ್ಡಿಪಡಿಸುತ್ತಾರೋ ಎಂದು 2018ರ ಡಿಸೆಂಬರ್ ನಾಲ್ಕರಂದು ಪೊಲೀಸರು ಬೆಳಗಿನ ಜಾವ ಅವರ ಮನೆಗೇ ಹೋಗಿ ಅವರನ್ನು ಬಲವಂತವಾಗಿ ಬಂಧಿಸಿ ಕರೆದೊಯ್ದಿದ್ದರು. ಅದಾಗಿ ಸರಿಯಾಗಿ ಐದು ವರ್ಷಗಳ ನಂತರ, ಇವತ್ತು, ರೇವಂತ್ ತೆಲಂಗಾಣದ ಸಿಎಂ ಆಗಿ ಆಯ್ಕೆಯಾಗಿದ್ದಾರೆ.
ಎಬಿವಿಪಿಯಲ್ಲಿದ್ದ ಕಾರಣಕ್ಕೆ ಅವರನ್ನು ಇವತ್ತಿಗೂ ಗುಮಾನಿಯಿಂದ ನೋಡುವವರಿದ್ದಾರೆ. ಅವರು ಗಾಂಧಿಭವನ್ ಅನ್ನೇ ಆರ್‌ಎಸ್‌ಎಸ್ ಕೇಂದ್ರ ಕಚೇರಿಯನ್ನಾಗಿ ಮಾಡಿಬಿಡುತ್ತಾರೆ ಎನ್ನುವುದು ಅಸಾದುದ್ದೀನ್ ಓವೈಸಿ ಆರೋಪ. ಎಐಎಂಐಎಂ ಬಿಜೆಪಿ ಬಿ ಟೀಮ್ ಎನ್ನುವುದು ಅವರ ಪ್ರತ್ಯಾರೋಪ. ಬಿಜೆಪಿಗೆ ಸಹಾಯ ಮಾಡಲೆಂದು ಎಐಎಂಐಎಂ ಹಣ ಪಡೆದಿದೆ ಎಂದು ಅವರು ಓವೈಸಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಮತ್ತು ಬಿಆರ್‌ಎಸ್ ಕೂಡ ಒಂದೇ ಎನ್ನುವುದು ರೇವಂತ್ ವಾದ. ದೇಶದ ಎಲ್ಲ ವಿರೋಧ ಪಕ್ಷಗಳ ನಾಯಕರ ಮೇಲೂ ಕೇಸು ಹಾಕಿ ಜೈಲಿಗೆ ಕಳಿಸಿದ ಮೋದಿ, ಅಮಿತ್ ಶಾ ಕೆಸಿಆರ್ ಅವರ ಕುಟುಂಬದವರನ್ನು ಮಾತ್ರ ಜೈಲಿಗೆ ಕಳಿಸಲಿಲ್ಲ ಎನ್ನುವುದೇ ಇದಕ್ಕೆ ಸಾಕ್ಷಿ ಎನ್ನುತ್ತಾರೆ ರೇವಂತ್. ಇಷ್ಟೆಲ್ಲ ಆದರೂ ಆಂಧ್ರ ಮುಖ್ಯಮಂತ್ರಿ ಜಗನ್‌ಮೋಹನ್‌ರೆಡ್ಡಿ ಚಂದ್ರಬಾಬು ನಾಯ್ಡು ವಿರುದ್ಧ ಮಾಡಿದಂತೆ ತಾನು ಕೆಸಿಆರ್ ವಿರುದ್ಧ ಪ್ರತೀಕಾರ ತೆಗೆದುಕೊಳ್ಳುವುದಿಲ್ಲ. ಡೆಮಾಕ್ರಟಿಕ್ ಆಗಿಯೇ ನಡೆದುಕೊಳ್ಳುತ್ತೇನೆ ಎನ್ನುವುದು ಅವರ ನುಡಿ.
ಹೈಕಮಾಂಡ್ ಏನು ಹೇಳಿದರೂ ಅದನ್ನು ತಾನು ಕೇಳುತ್ತೇನೆ ಎನ್ನುವ ರೇವಂತ್, ಟಿಡಿಪಿ ಜೊತೆಗೆ ಇವತ್ತಿಗೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಮೊನ್ನೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿದ ನಂತರ ಗಾಂಧಿಭವನ್‌ಗೆ ಮೆರವಣಿಗೆಯಲ್ಲಿ ರೇವಂತ್ ತೆರಳುತ್ತಿದ್ದಾಗ ಅಲ್ಲಿ ತೆಲುಗು ದೇಶಂ ಬಾವುಟಗಳು ಕೂಡ ಹೆಚ್ಚಿನ ಪ್ರಮಾಣದಲ್ಲಿಯೇ ಹಾರಾಡುತ್ತಿದ್ದವು.
ಈ ಸುದ್ದಿ ಓದಿದ್ದೀರಾ: ಕಾಂಗ್ರೆಸ್‌ಗೆ ಹೊಸ ತಿರುವು ನೀಡಬಲ್ಲ 2023ರ ತೆಲಂಗಾಣ ಚುನಾವಣೆಯ ಕಥೆ; ತಂಗಾಳಿಯೋ ಚಂಡಮಾರುತವೋ?
ಕೆಸಿಆರ್ ತೆಲಂಗಾಣದ ಜನರ ಆತ್ಮಗೌರವ ಕಸಿದುಕೊಂಡರು, ಜನರ ಸ್ವಾತಂತ್ರ್ಯ ಕಸಿದುಕೊಂಡರು, ಜನರನ್ನು ಮನುಷ್ಯರಂತೆ ನೋಡಲಿಲ್ಲ. ಹಾಗಾಗಿ ಜನ ಅವರಿಗೆ ಬುದ್ಧಿ ಕಲಿಸಿದರು ಎನ್ನುವುದು ರೇವಂತ್ ಅಭಿಪ್ರಾಯ. ರೆಡ್ಡಿ ಪ್ರಬಲ ರೆಡ್ಡಿ ಸಮುದಾಯಕ್ಕೆ ಸೇರಿದವರು. ಕೆಸಿಆರ್‌ರಂತೆಯೇ ದಾಢಸೀ ಸ್ವಭಾವದ ರೇವಂತ್ ರೆಡ್ಡಿ ಕೂಡ ಅವರಂತೆ ಅಹಂಕಾರಿ ಆಗದಿರಲಿ; ಉತ್ತಮ ಆಡಳಿತ ನೀಡಲಿ ಎನ್ನುವುದು ಅಲ್ಲಿನ ಜನರ ನಿರೀಕ್ಷೆ.