1971ರ ಯುದ್ಧ- ಇತಿಹಾಸದ ಪುಟಗಳಲ್ಲಿ ದಾಖಲಾದ ಯುದ್ಧ. ಅದನ್ನು ದಕ್ಷತೆಯಿಂದ ನಿರ್ವಹಿಸಿದ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರನ್ನು ದೇಶದ ಜನತೆ ಇಂದು ನೆನಪು ಮಾಡಿಕೊಳ್ಳುತ್ತಿರುವುದು ಸೂಕ್ತವಾಗಿದೆ. ಹಾಗೆಯೇ ಪ್ರಸ್ತುತ ಪ್ರಧಾನಿ ಮೋದಿಯವರತ್ತ ಪ್ರಶ್ನೆಗಳ ಬಾಣ ಬಿಡುತ್ತಿರುವುದು ಕೂಡ ಸರಿಯಾಗಿಯೇ ಇದೆ.
ಅಮೆರಿಕದ ಮಧ್ಯಸ್ಥಿಕೆಯ ಮಾತುಕತೆಯ ನಂತರ ಭಾರತ ಮತ್ತು ಪಾಕಿಸ್ತಾನ ‘ಪೂರ್ಣ ಮತ್ತು ತಕ್ಷಣದ’ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದರು. ಈ ಘೋಷಣೆಯನ್ನು ಕಾಂಗ್ರೆಸ್ ‘ಅಭೂತಪೂರ್ವ’ ಎಂದು ಕರೆದಿದೆ. ಇತರ ಪಕ್ಷದ ನಾಯಕರು ಕೇಂದ್ರವು ಅಮೆರಿಕದ ಒತ್ತಡಕ್ಕೆ ‘ಬಲಿಯಾಗುತ್ತಿದೆ’ ಎಂದು ಆರೋಪಿಸಿದ್ದಾರೆ.
‘ಅಮೆರಿಕದ ಅಧ್ಯಕ್ಷರಿಂದ ನಾವು ಇದನ್ನು ತಿಳಿದುಕೊಳ್ಳುವುದು ಅಭೂತಪೂರ್ವವಾಗಿದೆ… ಆದ್ದರಿಂದ, ಭಾರತ ಕೇಳಲು ಬಯಸುವ ಪ್ರಶ್ನೆಗಳಿಗೆ ಸಂಸತ್ತಿನ ವಿಶೇಷ ಅಧಿವೇಶನದ ಮೂಲಕ ಮಾತ್ರ ಉತ್ತರಿಸಬಹುದು. ಆದ್ದರಿಂದ, ಕಾಂಗ್ರೆಸ್ ಸಂಸತ್ತಿನ ವಿಶೇಷ ಅಧಿವೇಶನ ಮತ್ತು ಸರ್ವಪಕ್ಷ ಸಭೆಯನ್ನು ಒತ್ತಾಯಿಸುತ್ತದೆ… ಪಹಲ್ಗಾಮ್ ಸಂತ್ರಸ್ತರು ತಮಗೆ ನ್ಯಾಯ ನೀಡಲಾಗಿದೆಯೇ ಅಥವಾ ಇಲ್ಲವೇ ಎಂದು ತಿಳಿಯಲು ಬಯಸುತ್ತಾರೆ,’ ಎಂದು ಕಾಂಗ್ರೆಸ್ ಪಕ್ಷದ ನಾಯಕ ಪವನ್ ಖೇರಾ, ಕೇಂದ್ರ ಸರ್ಕಾರದ ಕ್ರಮವನ್ನು, ಯುದ್ಧದಲ್ಲಿ ಅದು ನಿರ್ವಹಿಸಿದ ಪಾತ್ರವನ್ನು ನಾಜೂಕಾಗಿಯೇ ಕೆಣಕಿದ್ದಾರೆ.
ಹಾಗೆಯೇ, ಇದು ಭಾರತ-ಪಾಕ್ ನಡುವಿನ ಯುದ್ಧ. ಇದರಲ್ಲಿ ದೂರದ ಅಮೆರಿಕದ ಪಾತ್ರವೇನು? ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾತಿಗೆ ಮೋದಿ ಮಣಿದಿದ್ದೇಕೆ? ಭಾರತ-ಪಾಕ್ ದೇಶಗಳ ನಾಯಕರು ಘೋಷಿಸಬೇಕಾದ ಕದನ ವಿರಾಮವನ್ನು ಅಮೆರಿಕದ ಅಧ್ಯಕ್ಷರೇಕೆ ಘೋಷಿಸಿದರು? ಎಂಬ ಹಲವಾರು ಪ್ರಶ್ನೆಗಳಿಗೆ ಉತ್ತರ ಬಯಸುತ್ತಿರುವ ದೇಶದ ಜನ, 1971ರಲ್ಲಿ ನಡೆದ ಭಾರತ-ಪಾಕ್ ಯುದ್ಧವನ್ನು, ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ನಡೆಯನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ.
1971ರಲ್ಲಿ ನಡೆದ ಯುದ್ಧ ಭಾರತ ಮತ್ತು ಪಾಕಿಸ್ತಾನದ ನಡುವಿನ 3ನೇ ಯುದ್ಧವಾಗಿತ್ತು. ಈ ಯುದ್ಧ, ಬಾಂಗ್ಲಾದೇಶದ ಉದಯಕ್ಕೆ ಕಾರಣವಾಗಿತ್ತು. ಇದನ್ನು ಬಾಂಗ್ಲಾದೇಶ ವಿಮೋಚನಾ ಯುದ್ಧ ಎಂದೇ ಕರೆಯಲಾಗಿತ್ತು.
ಅಂದು ಭಾರತದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರ ದಿಟ್ಟ, ದೃಢ ನಿರ್ಧಾರದಿಂದಾಗಿ, ಪಾಕ್ ವಿರುದ್ಧ ಭಾರತ ಯುದ್ಧ ಗೆದ್ದಿತ್ತು. ಅಷ್ಟೇ ಅಲ್ಲ, ಭಾರತೀಯ ಸೇನೆಯ ಶಕ್ತಿ, ಪರಾಕ್ರಮ ಜಗತ್ತಿಗೆ ಗೊತ್ತಾಗುವಂತೆ ಮಾಡಿದ ಯುದ್ಧ ಅದಾಗಿತ್ತು. ಆ ಯುದ್ಧವನ್ನು, ಇಂದಿರಾ ಗಾಂಧಿಯವರು ನಿರ್ವಹಿಸಿದ ಪಾತ್ರವನ್ನು ದೇಶದ ಜನ ಈಗ ನೆನಪು ಮಾಡಿಕೊಳ್ಳುತ್ತಿದ್ದಾರೆ. ಅಂದು ಇಂದಿರಾ ಗಾಂಧಿಯವರು ತೋರಿದ ಧೈರ್ಯ ಮತ್ತು ಮುತ್ಸದ್ದಿತನವನ್ನು ಸೋಷಿಯಲ್ ಮೀಡಿಯಾಗಳಲ್ಲಿ ಇಂದು ಮೆಚ್ಚಿ ಮಾತನಾಡುತ್ತಿದ್ದಾರೆ.
ಹಾಗಾದರೆ, 1971ರಲ್ಲಿ ನಡೆದ ಭಾರತ-ಪಾಕಿಸ್ತಾನ ಯುದ್ಧದ ಹಿನ್ನೆಲೆ ಏನು?
1971ಕ್ಕೂ ಮೊದಲು ಬಾಂಗ್ಲಾದೇಶ ಪಾಕಿಸ್ತಾನದ ಭಾಗವಾಗಿತ್ತು. ಆಗ ಅದನ್ನು ಪೂರ್ವ ಪಾಕಿಸ್ತಾನ ಎಂದು ಕರೆಯಲಾಗುತ್ತಿತ್ತು. ಆದರೆ ಪೂರ್ವ ಪಾಕಿಸ್ತಾನದಲ್ಲಿ ಬಿಹಾರಿ ಮತ್ತು ಬಂಗಾಳಿಗಳ ನಡುವೆ ಜನಾಂಗೀಯ ಕದನ ಆರಂಭವಾಗಿತ್ತು. ಉರ್ದು ಮತ್ತು ಬಂಗಾಳಿ ಭಾಷಾ ಚಳವಳಿಯೂ ತಳಕು ಹಾಕಿಕೊಂಡಿತ್ತು. ಇದರ ದುರುಪಯೋಗ ಪಡೆದ ಸೇನಾಪಡೆ ಅಲ್ಲಿನ ಜನರ ಮೇಲೆ ಅತ್ಯಾಚಾರ, ಕೊಲೆ, ಸುಲಿಗೆ ನಡೆಸುತ್ತಿದ್ದರು. ಇದರಿಂದಾಗಿ ಲಕ್ಷಾಂತರ ಜನ ನಿರಾಶ್ರಿತರು ಭಾರತದೊಳಕ್ಕೆ ನುಸುಳುವಂತಹ ಸಂದರ್ಭ ಸೃಷ್ಟಿಯಾಗಿತ್ತು.

ಇದು, ಅಭಿವೃದ್ಧಿ ಹೊಂದುತ್ತಿದ್ದ ಭಾರತಕ್ಕೆ ಸಮಸ್ಯೆಯನ್ನು ತಂದೊಡ್ಡಿತ್ತು. ಏಕೆಂದರೆ ಲಕ್ಷಾಂತರ ಮಂದಿ ಅಲ್ಲಿನ ಸೇನಾಪಡೆಯ ಹಿಂಸಾಚಾರ ತಾಳಲಾಗದೇ ಭಾರತದೊಳಗೆ ನುಸುಳಿದ್ದರು. ಪೂರ್ವ ಪಾಕಿಸ್ತಾನದಲ್ಲಿಯೂ ಕೂಡ ಸೇನೆಯ ವಿರುದ್ಧ ದಂಗೆಗಳು ಆರಂಭವಾಗಿದ್ದು, ಅಲ್ಲಿನ ಪ್ರಬಲ ಪಕ್ಷವಾದ ಅವಾಮಿ ಲೀಗ್, ಪಶ್ಚಿಮ ಪಾಕಿಸ್ತಾನದ ಸೇನೆಯ ಕಪಿಮುಷ್ಟಿಯಲ್ಲಿ ನರಳುವಂತಾಗಿತ್ತು. ಕೆಲವರನ್ನು ಬಂಧಿಸಿ, ಪಶ್ಚಿಮ ಪಾಕಿಸ್ತಾನಕ್ಕೂ ಕರೆದೊಯ್ಯಲಾಗಿತ್ತು.
ಪೂರ್ವ ಪಾಕಿಸ್ತಾನದಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೆಚ್ಚಾಗುತ್ತಿದ್ದಂತೆ ಪ್ರಧಾನಿ ಇಂದಿರಾ ಗಾಂಧಿ ಅಲ್ಲಿನ ಸ್ವಾತಂತ್ರ್ಯ ಹೋರಾಟಗಾರರಿಗೆ ಬೆಂಬಲ ನೀಡಿದ್ದರು. ಭಾರತ ಮತ್ತು ಪೂರ್ವ ಪಾಕಿಸ್ತಾನದ ಗಡಿಗಳಲ್ಲಿ, ಪಶ್ಚಿಮ ಬಂಗಾಳ, ಅಸ್ಸಾಂ, ಬಿಹಾರ, ಮೇಘಾಲಯ ಮುಂತಾದ ಕಡೆಗಳಲ್ಲಿ ನಿರಾಶ್ರಿತರ ಕೇಂದ್ರಗಳನ್ನು ತೆರೆಯಲಾಗಿತ್ತು.
ಇದನ್ನು ಓದಿದ್ದೀರಾ?: ಪಾಕಿಸ್ತಾನವನ್ನು ಮಣಿಸುವ ಮಾತಾಡಿದ್ದ ಮೋದಿ ಟ್ರಂಪ್‌ಗೆ ಶರಣಾದರೇ?
ಬಾಂಗ್ಲಾದೇಶ ವಿಮೋಚನೆಗೆ ಭಾರತ ಬೆಂಬಲ ನೀಡಿದ್ದು, ಪಾಕಿಸ್ತಾನಕ್ಕೆ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು. ಅಲ್ಲದೇ ಬಂಗಾಳಿ ಮುಸ್ಲಿಮರು ಮತ್ತು ಹಿಂದೂಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ ತೆಗೆದುಕೊಂಡ ನಿಲುವು, ಪಾಕಿಸ್ತಾನವನ್ನು ಕೆರಳಿಸಿತ್ತು.
ಬಾಂಗ್ಲಾದೇಶಿಗರ ವಿರುದ್ಧ ಪಾಕಿಸ್ತಾನಿ ಸೇನೆಯ ಹಿಂಸಾಚಾರ ತೀವ್ರಗೊಂಡಾಗ ಬಾಂಗ್ಲಾದೇಶವನ್ನು ವಿಮೋಚನೆಗೊಳಿಸುವ ನಿಟ್ಟಿನಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಭಾರತೀಯ ಸೇನೆಯ ಫೀಲ್ಡ್ ಮಾರ್ಷಲ್ ಮಾಣಿಕ್ ಶಾ ಅವರನ್ನು ಕರೆದು ಮಾತನಾಡಿದರು. ಅವರಿಗೆ ಪೂರ್ಣ ಪ್ರಮಾಣದ ಅಧಿಕಾರ ಕೊಟ್ಟರು.
ಆರಂಭದಲ್ಲಿ ಭಾರತ ಯುದ್ಧ ಘೋಷಣೆ ಮಾಡಿರಲಿಲ್ಲ. ಆದರೆ ಭಾರತದ ಕ್ರಮದಿಂದಾಗಿ ತಾಳ್ಮೆ ಕಳೆದುಕೊಂಡ ಪಾಕಿಸ್ತಾನದ ಸೇನಾ ಆಡಳಿತಗಾರ ಜನರಲ್ ಅಯೂಬ್ ಖಾನ್, ಮೊದಲು ಯುದ್ಧ ಘೋಷಣೆ ಮಾಡಿದರು. ಎಂಟು ಭಾರತೀಯ ವಾಯು ನೆಲೆಗಳ ಮೇಲೆ ಪೂರ್ವಭಾವಿ ವೈಮಾನಿಕ ದಾಳಿಗಳನ್ನು ಒಳಗೊಂಡ ಪಾಕಿಸ್ತಾನದ ಆಪರೇಷನ್ ಚೆಂಗಿಜ್ ಖಾನ್‌ನೊಂದಿಗೆ ಯುದ್ಧ ಪ್ರಾರಂಭವಾಯಿತು. ಈ ದಾಳಿಗಳು, ಭಾರತ ಪಾಕಿಸ್ತಾನದ ಮೇಲೆ ಯುದ್ಧ ಘೋಷಿಸಲು ಕಾರಣವಾಯಿತು. 1971ರ ಡಿಸೆಂಬರ್ 3ರಂದು ಪೂರ್ವ ಪಾಕಿಸ್ತಾನದ ಜನರನ್ನು ರಕ್ಷಿಸುವ ನಿಟ್ಟಿನಲ್ಲಿ ಪಾಕಿಸ್ತಾನದ ವಿರುದ್ಧ ಸಮರಕ್ಕೆ ಸಜ್ಜಾಗಿ ಎಂದು ಭಾರತೀಯ ಸೇನೆಗೆ ಭಾರತ ಸರ್ಕಾರ ಆದೇಶ ನೀಡಿತು. ಅದರಂತೆ ಭಾರತೀಯ ಸೇನೆ ದಿಟ್ಟ ಪ್ರತಿಕ್ರಿಯೆ ನೀಡಲು ಸಿದ್ಧವಾಯಿತು. ಪಾಕಿಸ್ತಾನ ಗಡಿಯೊಳಗಡೆ ನುಗ್ಗಿ ಶತ್ರುವಿಗೆ ಎದಿರೇಟು ನೀಡಲು ಶುರುಮಾಡಿತು.
ಅಧಿಕೃತ ಯುದ್ಧಕ್ಕೂ ಮೊದಲು ‘ಮುಜಾಹಿದ್’ ವೇಷವನ್ನು ತೊಟ್ಟು ಭಾರತೀಯ ಸೇನೆಯ ಸೈನಿಕರು ಪಾಕಿಸ್ತಾನದ ಒಳಗಡೆ ಪ್ರವೇಶ ಮಾಡಿದ್ದರು. ಯುದ್ಧ ಘೋಷಣೆ ಆಗುತ್ತಿದ್ದಂತೆ ಪಾಕಿಸ್ತಾನದ ಸೇನೆಗೆ ದೊಡ್ಡ ಪ್ರಮಾಣದಲ್ಲಿ ಹಾನಿ ಉಂಟು ಮಾಡಿದ್ದರು. ಭಾರತೀಯ ಸೇನೆಯ ಈ ಕಾರ್ಯತಂತ್ರದಿಂದ ಪಾಕಿಸ್ತಾನದ ಸೇನೆ ದಿಕ್ಕೆಟ್ಟಿತ್ತು.

ಯುದ್ಧದ ಸಂದರ್ಭದಲ್ಲಿ ಸಂಪೂರ್ಣವಾಗಿ ಕತ್ತಲು ಆವರಿಸಿತ್ತು. ಶತ್ರುವಿಗೆ ಯಾವುದೇ ಚಲನವಲನ ಕಾಣದಂತೆ ಸೇನಾ ವಾಹನಗಳ ಲೈಟ್ ಉಪಯೋಗವನ್ನು ನಿರ್ಬಂಧಿಸಲಾಗಿತ್ತು. ಹೀಗಾಗಿ ಕತ್ತಲಲ್ಲಿ ಕೆಲವೊಂದು ಅಪಘಾತಗಳು ನಡೆದು ಭಾರತೀಯ ಸೈನಿಕರಿಗೆ ಗಾಯಗಳು ಕೂಡ ಆಗಿದ್ದವು.
ಜೊತೆಗೆ, 1971ರ ಯುದ್ಧದ ಸಂದರ್ಭದಲ್ಲಿ ಈಗಿನಷ್ಟು ತಂತ್ರಜ್ಞಾನದ ನೆರವಿರಲಿಲ್ಲ. ಯುದ್ಧ ವಿಮಾನಗಳನ್ನು ಹೊಡೆದುರುಳಿಸುವುದಕ್ಕೆ ಸೈನಿಕರಿಗೆ ಆಧುನಿಕ ತಂತ್ರಜ್ಞಾನಕ್ಕಿಂತ ಹೆಚ್ಚಾಗಿ ನೈಪುಣ್ಯತೆಯ ಅಗತ್ಯತೆ ಇತ್ತು.
ಎತ್ತರದ ಪ್ರದೇಶದಲ್ಲಿ ಸೈನಿಕರು ಕಾವಲು ಕಾಯುತ್ತಿದ್ದರು. ಯುದ್ಧ ವಿಮಾನಗಳ ಪ್ರವೇಶ ಆಗುತ್ತಿದ್ದಂತೆ ನೆಲದಲ್ಲಿರುವ ಸೈನಿಕರಿಗೆ ವಿಶಿಷ್ಟ ಶಬ್ಧದ ಮೂಲಕ ಮಾಹಿತಿ ರವಾನೆ ಮಾಡುತ್ತಿದ್ದರು. ಕೂಡಲೇ ಜಾಗೃತರಾಗುತ್ತಿದ್ದ ಸೈನಿಕರು ಹೈಡ್ ಔಟ್ ಮೂಲಕ ರಕ್ಷಣೆ ಪಡೆಯುತ್ತಿದ್ದರು. ಅಲ್ಲದೆ ತಮ್ಮ ನೈಪುಣ್ಯತೆಯಿಂದ ಯುದ್ದ ವಿಮಾನಕ್ಕೆ ನೆಲದಿಂದ ದಾಳಿ ನಡೆಸಿ ಹೊಡೆದು ಉರುಳಿಸಬೇಕಿತ್ತು.
ಆ ಸಂದರ್ಭದಲ್ಲಿ ಭಾರತೀಯ ಸೇನೆ ಪಾಕಿಸ್ತಾನದ ಯಾವ ಪ್ರದೇಶದಿಂದ ದಾಳಿ ನಡೆಸಬಹುದು ಎಂದು ವಿವಿಧ ರೀತಿಯಲ್ಲಿ ಅಂದಾಜು ಮಾಡಿತ್ತು. ಆದರೆ ಭಾರತೀಯ ಸೇನೆ ನಿರೀಕ್ಷೆ ಮಾಡದ ಮರಳುಗಾಡು ಪ್ರದೇಶದಿಂದ ಪಾಕಿಸ್ತಾನಿಗಳು ಲಾಂಗೇವಾಲ ಗಡಿಯ ಮೂಲಕ ನುಸುಳಿ ಬಂದಿದ್ದರು. ದುರದೃಷ್ಟಕರ ಸಂಗತಿ ಎಂದರೆ, ಪಾಕಿಸ್ತಾನ ಸೇನೆಗೆ ಮದ್ದುಗುಂಡುಗಳ ಪೂರೈಕೆ ಹಾಗೂ ಇತರ ಸಲಕರಣೆಗಳ ಪೂರೈಕೆಯ ಕೊರತೆ ಇತ್ತು.
ಇದನ್ನು ಓದಿದ್ದೀರಾ?: ಶಿಮ್ಲಾ ಒಪ್ಪಂದದತ್ತ ಕಣ್ಣು ಹಾಯಿಸಬೇಕಿದೆ ಭಾರತ-ಪಾಕ್
ಹೀಗಿರುವಾಗಲೇ, ಭಾರತೀಯ ಸೇನೆ ಆ ಸ್ಥಳದಲ್ಲಿ ಉಪಸ್ಥಿತಿ ಇದ್ದು ಪಾಕ್ ಸೈನಿಕರಿಗೆ ಆಘಾತ ನೀಡಿತ್ತು. ಕಡಿಮೆ ಸಂಖ್ಯೆಯಲ್ಲಿ ಭಾರತೀಯ ಪಡೆಗಳು ಇದ್ದರೂ ಪಾಕಿಸ್ತಾನಿ ಸೇನೆಗೆ ತಕ್ಕ ಪ್ರತಿಕ್ರಿಯೆಯನ್ನು ಭಾರತೀಯ ಸೇನೆ ನೀಡಿತ್ತು. ನಂತರದಲ್ಲಿ ಭಾರತೀಯ ವಾಯುಪಡೆ ಪಾಕಿಸ್ತಾನದ ಸೈನಿಕರಿಗೆ ತಕ್ಕ ಪ್ರತ್ಯುತ್ತರ ನೀಡಿತ್ತು.
ಕೇವಲ 13 ದಿನಗಳ ಕಾಲ ಭಾರತ ಮತ್ತು ಪಾಕ್ ಯೋಧರ ನಡುವೆ ಸಮರ ನಡೆದಿತ್ತು. ಕೊನೆಗೂ ಧೀರ ಭಾರತೀಯ ಯೋಧರ ಶಕ್ತಿಯ ಮುಂದೆ ಪಾಕ್ ಸೇನೆ ಮಂಡಿಯೂರಿತ್ತು.
1971ರ ಡಿಸೆಂಬರ್ 16ರಂದು, ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಎ.ಎ. ಖಾನ್ ನಿಯಾಜಿ ಮತ್ತು 93 ಸಾವಿರ ಸೈನಿಕರು ಭಾರತೀಯ ಸೇನೆ ಮತ್ತು ಮುಕ್ತಿ ಬಹಿನಿ ಒಳಗೊಂಡ ಮಿತ್ರ ಪಡೆಗಳಿಗೆ ಬೇಷರತ್ತಾಗಿ ಶರಣಾಗಿದ್ದರು. ಯುದ್ಧದಲ್ಲಿ ಗೆಲುವು ಸಾಧಿಸುವ ಮೂಲಕ ಬಾಂಗ್ಲಾದೇಶ ಜನ್ಮ ತಳೆದಿತ್ತು. ಈ ಯುದ್ಧದ ಅಂತ್ಯದ ಬಳಿಕ ಪೂರ್ವ ಪಾಕಿಸ್ತಾನವನ್ನು ಬಾಂಗ್ಲಾದೇಶ ಎಂಬ ಪ್ರತ್ಯೇಕ ರಾಷ್ಟ್ರವನ್ನಾಗಿ ಮಾಡಲಾಯಿತು.
ಸದ್ಯಕ್ಕೆ ದೇಶ ಯುದ್ಧದ ಭಯ-ಆತಂಕಗಳಲ್ಲಿದೆ. ಅದರಲ್ಲೂ ಭಾರತ-ಪಾಕಿಸ್ತಾನಗಳ ನಡುವಿನ ಯುದ್ಧವೆಂದರೆ, ಅದನ್ನು ಎರಡೂ ದೇಶಗಳ ಜನ ಜಿದ್ದಾಜಿದ್ದಿನ ಕದನವೆಂದು ಪರಿಗಣಿಸುವುದಿದೆ. ಅದಕ್ಕೆ ಪರಂಪರಾಗತ ದ್ವೇಷವೂ ತಳಕು ಹಾಕಿಕೊಳ್ಳುತ್ತದೆ. ಜೊತೆಗೆ ಧರ್ಮ-ಸಂಸ್ಕೃತಿಗಳ ಭಾವನಾತ್ಮಕ ಬಂಧವೂ ಬೆಸೆದುಕೊಂಡಿದೆ.

ಹೀಗಾಗಿ ಭಾರತ-ಪಾಕ್ ಯುದ್ಧವೆಂದರೆ, ಸರಳ ಸಂಗತಿಯಲ್ಲ. ಪ್ರತಿಷ್ಠೆ, ಪರಂಪರೆ, ಪೌರುಷಗಳೆಲ್ಲ ತಳಕು ಹಾಕಿಕೊಳ್ಳುತ್ತವೆ. ದೇಶವನ್ನಾಳುವ ನಾಯಕ ತೆಗೆದುಕೊಳ್ಳುವ ನಿಲುವು, ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಇತಿಹಾಸದ ಪುಟಗಳಲ್ಲಿ ದಾಖಲಾಗುತ್ತದೆ. 1971ರ ಯುದ್ಧ- ಇತಿಹಾಸದ ಪುಟಗಳಲ್ಲಿ ದಾಖಲಾದ ಯುದ್ಧ. ಅದನ್ನು ದಕ್ಷತೆಯಿಂದ ನಿರ್ವಹಿಸಿದ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರನ್ನು ದೇಶದ ಜನತೆ ಇಂದು ನೆನಪು ಮಾಡಿಕೊಳ್ಳುತ್ತಿರುವುದು ಸೂಕ್ತವಾಗಿದೆ.
ಇಂದಿರಾ ನಾಯಕತ್ವವನ್ನು ನೆನೆಯಲು ಇನ್ನಷ್ಟು ಕಾರಣಗಳು- 1971ರ ಯುದ್ದದಲ್ಲಿ ನಮ್ಮ ಸೈನ್ಯ ಸಿಕ್ಕಿದ್ದು ಮಿತವಾದ ಸಂಪನ್ಮೂಲ. ಅದರಲ್ಲಿಯೇ ಅವರನ್ನು ಹುರಿದುಂಬಿಸಿದ್ದು. ಅಮೆರಿಕದ ಆಗಿನ ಅಧ್ಯಕ್ಷನ ಎಚ್ಚರಿಕೆಗೆ ಸೊಪ್ಪು ಹಾಕದೆ, ಲಾಹೋರ್‍ಗೆ ನುಗ್ಗಿ ಬಗ್ಗುಬಡಿದಿದ್ದು. ಪಾಕ್‌ಗೆ ಬೆಂಬಲಿಸುತ್ತಿದ್ದ ಆತನ ಮಾತುಗಳನ್ನು ಕಡೆಗಣಿಸಿ ಆತನಿಂದ ‘ಯೂ ಬಿಚ್’ ಎನಿಸಿಕೊಂಡರೂ, ದೇಶಕ್ಕಾಗಿ ರಷ್ಯಾದೊಂದಿಗೆ ಕೈ ಜೋಡಿಸಿ ಜಯ ಸಾಧಿಸಿದ್ದು. ಇದೆಲ್ಲವನ್ನು ಬಹಳ ಹತ್ತಿರದಿಂದ ಕಂಡ ಆಗಿನ ವಿರೋಧ ಪಕ್ಷದ ನಾಯಕ ವಾಜಪೇಯಿ ಇಂದಿರಾರನ್ನು ‘ದುರ್ಗಿ’ ಎಂದು ಅಭಿನಂದಿಸಿದ್ದು. ಸ್ವಾತಂತ್ರ್ಯ ಗಳಿಸಿ ಕೇವಲ 24 ವರ್ಷಗಳಲ್ಲಿ ಇನ್ನೊಂದು ರಾಷ್ಟ್ರದ ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲಿಸಿ ಗೆದ್ದಿದ್ದು, ಬಹುಶಃ ಜಗತ್ತಿನ ಇತಿಹಾಸದಲ್ಲಿ ಇದು ವಿರಳ.
ಹಾಗಾಗಿಯೇ ಇಂದಿರಾ ಗಾಂಧಿ ಅವರನ್ನು ಜನ ನೆನಪು ಮಾಡಿಕೊಳ್ಳುತ್ತಿದ್ದಾರೆ; ಪ್ರಸ್ತುತ ಪ್ರಧಾನಿ ಮೋದಿಯವರತ್ತ ಪ್ರಶ್ನೆಗಳ ಬಾಣ ಬಿಡುತ್ತಿದ್ದಾರೆ. ಉತ್ತರಿಸಬೇಕಾದ ಅನಿವಾರ್ಯತೆ ಈಗ ಮೋದಿಯವರದು.

ಲೇಖಕ, ಪತ್ರಕರ್ತ