- ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ತಿರುಗೇಟು ನೀಡಿದ ಎಚ್ಸಿಎಂ
- ಬಿಜೆಪಿಗೆ ಪೂರ್ಣಾವಧಿ ಸಿಎಂ ಎಂಬ ಪದ ಬಳಕೆಯ ನೈತಿಕತೆ ಇಲ್ಲ
ಅಧಿಕಾರಕ್ಕೆ ಬಂದರೆ ಪದೇ ಪದೆ ಮುಖ್ಯಮಂತ್ರಿಗಳನ್ನು ಬದಲಾಯಿಸುವ ಚಾಳಿ ಬಿಜೆಪಿ ಪಕ್ಷದ್ದು. ನಮ್ಮ ಪಕ್ಷದ್ದು ಆ ಜಾಯಮಾನವಲ್ಲ ಎಂದು ಸಮಾಜ ಕಲ್ಯಾಣ ಸಚಿವ ಎಚ್ ಸಿ ಮಹದೇವಪ್ಪ ಹೇಳಿಕೊಂಡಿದ್ದಾರೆ.
ಟ್ವೀಟರ್ ನಲ್ಲಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಹರಿಹಾಯ್ದ ಅವರು, ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಎಂದು ಘೋಷಣೆ ಮಾಡಲಿ ಎಂದಿದ್ದ ಪ್ರತಾಪ್ ಸಿಂಹ ಹೇಳಿಕೆಗೆ ಎಚ್ ಸಿ ಮಹದೇವಪ್ಪ ತಿರುಗೇಟು ನೀಡಿದರು.
ಅಧಿಕಾರಕ್ಕೆ ಬಂತೆಂದರೆ ಇಬ್ಬರು, ಮೂವರು ಸಿಎಂಗಳನ್ನು ಬದಲಿಸುವ ಚಾಳಿ ಬಿಜೆಪಿಯದ್ದು. ಸಿಎಂ ಬದಲಿಸುವ ಕೆಟ್ಟ ಚಾಳಿ ಇರುವ ಬಿಜೆಪಿಗೆ ಪೂರ್ಣಾವಧಿ ಸಿಎಂ ಎನ್ನುವ ಪದ ಬಳಕೆಯ ನೈತಿಕತೆ ಇಲ್ಲ ಎಂದು ಮಹದೇವಪ್ಪ ಹೇಳಿದರು.
ಈ ಸುದ್ದಿ ಓದಿದ್ದೀರಾ?: ಬೊಮ್ಮಾಯಿ ಅವರ ಧಮ್ಮು, ತಾಕತ್ತಿಗೆ ರಾಜ್ಯದ ಜನ ಈಗಾಗಲೇ ಉತ್ತರಿಸಿದ್ದಾರೆ: ಡಿಕೆ ಶಿವಕುಮಾರ್ ತಿರುಗೇಟು
ಪ್ರತಾಪ್ ಸಿಂಹ ಅನಗತ್ಯವಾಗಿ ಕಾಂಗ್ರೆಸ್ ಪಕ್ಷದ ಬೆನ್ನು ಕೆರೆಯುತ್ತಿದ್ದಾರೆ. ನಮ್ಮ ಪಕ್ಷದ ಮೇಲಿನ ಪ್ರೀತಿ ಬದಿಗಿಟ್ಟು ಬಿಜೆಪಿ ಪಕ್ಷಕ್ಕೆ ನಿಷ್ಠೆ ತೋರಲಿ ಎಂದ ಅವರು, ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಸಚಿವ ಸಂಪುಟ ರಚಿಸಿದೆ. ಆದರೆ ಸೋಲಿನಿಂದ ಕಂಗಾಲಾಗಿರುವ ಬಿಜೆಪಿಗೆ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತಿಲ್ಲ. ಇದು ಬಿಜೆಪಿಯ ದುರ್ಬಲತೆಯ ಸಂಕೇತ ಎಂದು ಲೇವಡಿ ಮಾಡಿದರು.
ಸಂಸದ ಪ್ರತಾಪ್ ಸಿಂಹ ಅಪ್ರಬುದ್ಧ ಮಾತುಗಳನ್ನಾಡುತ್ತಲೇ ಕಾಲ ಕಳೆಯುತ್ತಾರೆ. ಮೊದಲು ಅವರು ಕೆಲಸ ಮಾಡುವುದನ್ನು ರೂಢಿಸಿಕೊಳ್ಳಲಿ ಎಂದರು.